YouTube: ಲೈಕ್ ಸಿಗಲೆಂದು ತಪ್ಪು ಮಾಹಿತಿ ನೀಡುವ ವಿಡಿಯೊ ಮಾಡಿದರೆ ನಿಷೇಧ: ಯೂಟ್ಯೂಬ್ ಎಚ್ಚರಿಕೆ
YouTube:ನಿಯಮವು ಆರಂಭದದಲ್ಲಿ ʼಬ್ರೇಕಿಂಗ್ ನ್ಯೂಸ್ʼ ಗಳನ್ನು ನಿಯಂತ್ರಿಸಲಿದೆ. ಕೆರಳಿಸುವಂಥ ಶೀರ್ಷಿಕೆ ಹಾಕಿ ಸಂಬಂಧವಿಲ್ಲದ ವಿಷಯವನ್ನು ಪ್ರಸ್ತುತಪಡಿಸಿದರೆ ಅದಕ್ಕೂ ಕಡಿವಾಣ ಬೀಳಲಿದೆ.;
ತಪ್ಪು ಮಾಹಿತಿಗಳನ್ನು ಕೊಡುವ, ಟೈಟಲ್‌ನಲ್ಲಿ ಒಂದು ಸಂಗತಿಯನ್ನು ಹೇಳಿ ವಿಡಿಯೊದಲ್ಲಿ ಅದರ ಕುರಿತಾಗಿ ಮಾಹಿತಿಯೇ ನೀಡದೇ ವೀಕ್ಷಕರಿಗೆ ನಿರಾಸೆ ಮೂಡಿಸುವ ಕಂಟೆಂಟ್ ಕ್ರಿಯೇಟರ್‌ಗಳಿಗೆ ಯೂಟ್ಯೂಬ್ ಒಡೆತನ ಗೂಗಲ್ ಎಚ್ಚರಿಕೆ ನೀಡಿದೆ. ದಾರಿತಪ್ಪಿಸುವ ಥಮ್‌ನೇಲ್ ಮತ್ತು ಟೈಟಲ್‌ಗಳನ್ನು ನಿಗ್ರಹಿಸಲು ಯೂಟ್ಯೂಬ್ ನಿಯಮಗಳನ್ನು ಬಿಗಿಗೊಳಿಸಲಾಗುವುದು ಎಂದಿದೆ. ನಿಯಮಗಳನ್ನು ಪೂರೈಸಲು ವಿಫಲವಾಗುವ "ಅತಿರೇಕದ ಕ್ಲಿಕ್‌ಬೈಟ್ಸ್ʼ ಗಳ ವಿರುದ್ಧ ಕ್ರಮ ನಿಶ್ಚಿತ ಎಂದಿದೆ.
ನಿಯಮವು ಆರಂಭದಲ್ಲಿ ಅನಗತ್ಯ ʼಬ್ರೇಕಿಂಗ್ ನ್ಯೂಸ್ʼ ಗಳನ್ನು ನಿಯಂತ್ರಿಸಲಿದೆ. ಕೆರಳಿಸುವಂಥ ಶೀರ್ಷಿಕೆ ಹಾಕಿ ಸಂಬಂಧವಿಲ್ಲದ ವಿಷಯವನ್ನು ಪ್ರಸ್ತುತಪಡಿಸಿದರೆ ಅದಕ್ಕೂ ಕಡಿವಾಣ ಬೀಳಲಿದೆ. ಉದಾಹರಣೆಗೆ, ವೀಕ್ಷಕರನ್ನು ಆಕರ್ಷಿಸಲು "ಅಧಿಕಾರದಿಂದ ಕೆಳಗಿಳಿದ ಪ್ರಧಾನಿ" ಎಂಬ ಮೋಸದ ಥಮ್‌ನೇಲ್ ಹಾಕಿದರೆ ಗೂಗಲ್ ಕೆಂಗಣ್ಣಿಗೆ ಗುರಿಯಾಗುವುದು ಖಚಿತ.
ಮುಂಬರುವ ತಿಂಗಳುಗಳಲ್ಲಿ ಜಾರಿ
ಹೊಸ ಮಾರ್ಗಸೂಚಿಗಳನ್ನು ಪಾಲಿಸದ ಕಂಟೆಂಟ್‌ಗಳನ್ನು ಯಾವುದೇ ಸೂಚನೆ ಅಥವಾ ಸ್ಟ್ರೈಕ್ ತೋರಿಸದೇ ತೆಗೆದು ಹಾಕಲು ಯೂಟ್ಯೂಬ್ ಯೋಜನೆ ರೂಪಿಸಿದೆ. ಈ ಮೂಲಕ ಕಂಟೆಂಟ್ ಕ್ರಿಯೇಟರ್‌ಗಳಿಗೆ ಹೊಸ ನಿಯಮಕ್ಕೆ ಮೊದಲೇ ಹೊಂದಿಕೊಳ್ಳುವಂತೆ ಕೋರಿಕೊಂಡಿದೆ. ಮುಂದುವರಿದು, ಸದ್ಯಕ್ಕೆ ಹೊಸದಾಗಿ ಅಪ್ಲೋಡ್ ಆಗುವ ವಿಡಿಯೋಗಳ ಮೇಲಷ್ಟೇ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಅಪ್ಲೋಡ್ ಆಗಿರುವ ವಿಡಿಯೋಗಳ ಮೇಲಲ್ಲಎಂದಿದೆ.
ತಪ್ಪು ಶೀರ್ಷಿಕೆಗಳು ವೀಕ್ಷಕರನ್ನು ಮೋಸ ಮಾಡಬಹುದು, ನಿರಾಶೆಗೊಳಿಸಬಹುದು ಅಥವಾ ದಾರಿ ತಪ್ಪಿಸಬಹುದು. ವೀಕ್ಷಕರು ಪ್ರಮುಖ ಅಥವಾ ಸಮಯೋಚಿತ ಮಾಹಿತಿಗಾಗಿ ಯೂಟ್ಯೂಬ್‌ಗೆ ಬರುವಾಗ ಇವೆಲ್ಲರೂ ಅಡಚಣೆ ಉಂಟು ಮಾಡುತ್ತಿದೆ. ಹೀಗಾಗಿ ನಿಯಮ ಬಿಗಿಗೊಳಿಸುತ್ತೇವೆ ಎಂದು ಗೂಗಲ್ ಇಂಡಿಯಾ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದೆ.
ಉದಾಹರಣೆ, ʼಅನಿರೀಕ್ಷಿತ ರಾಜಕೀಯ ಬೆಳವಣಿಗೆʼ ಎಂದು ಥಮ್‌ನೇಲ್ ನೀಡಿ ಆ ವಿಡಿಯೊದಲ್ಲಿ ಯಾವುದೇ ರಾಜಕೀಯ ವರ್ತಮಾನವನ್ನು ಚರ್ಚೆ ಮಾಡದೇ ಹೋದರೆ ಅದು ನಿಯಮದ ಉಲ್ಲಂಘನೆ. ಅದೇ ರೀತಿ ʼಪ್ರಮುಖ ರಾಜಕೀಯ ಸುದ್ದಿಗಳುʼ ಎಂದು ಬರೆದು ಬೇರೆ ಯಾವುದೋ ಸಮಾಚಾರವನ್ನು ಹೇಳಲು ಪ್ರಯತ್ನಿಸಿದರೇ ಅದು ಕೂಡ ತಪ್ಪು ಎಂದು ಗೂಗಲ್ ಹೇಳಿದೆ. ವಿಡಿಯೊದ ಆಕರ್ಷಣೆಗೆ ನೀಡುವ ಥಮ್‌ನೇಲ್ ಹಾಗೂ ಅದರಲ್ಲಿರುವ ಕಂಟೆಂಟ್ ನಡುವೆ ಸಂಬಂಧವೇ ಇಲ್ಲದಿದ್ದರೆ ವಿಡಿಯೊ ಡಿಲೀಟ್ ಆಗುವುದು ಖಚಿತ.
ಸುದ್ದಿ ಅಥವಾ ಪ್ರಸ್ತುತ ಘಟನೆಗಳನ್ನು ಹೇಗೆ ವರ್ಗೀಕರಿಸಲಾಗುತ್ತದೆ ಎಂದು ಕಂಪನಿ ನಿರ್ದಿಷ್ಟಪಡಿಸಿಲ್ಲ. ಹೊಸ ನಿಯಮ ರಾಜಕೀಯ ಮತ್ತು ಸರ್ಕಾರದ ಸುತ್ತೊಲೆಗಳನ್ನು ಹೊರತುಪಡಿಸಿ ಕ್ರೀಡೆಯಂತಹ ವಿಶಾಲ ವ್ಯಾಪ್ತಿಯ ಕ್ಷೇತ್ರಗಳಿಗೆ ಅನ್ವಯವಾಗುತ್ತದೆಯೇ ಎಂಬುದನ್ನೂ ಹೇಳಿಲ್ಲ. ಥಮ್‌ನೇಲ್, ಟೈಟಲ್ ಮತ್ತು ವಿಡಿಯೊ ಕಂಟೆಂಟ್ ನಡುವಿನ ದೋಷ ಪತ್ತೆ ಮಾದರಿಯನ್ನೂ ವಿವರಿಸಲಾಗಿಲ್ಲ.
ಯೂಟ್ಯೂಬ್ ಪ್ಲಾಟ್‌ಫಾರ್ಮ್‌ನಲ್ಲಿ ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಲಾಗುವ ವಿಡಿಯೊಗಳ ನಿಯಂತ್ರಣಕ್ಕೂ ಕ್ರಮ ಕೈಗೊಂಡಿದೆ. ಅದಕ್ಕಾಗಿ ಕ್ರಿಯೇಟಿವ್ ಆರ್ಟಿಸ್ಟ್ಸ್ ಏಜೆನ್ಸಿ (CAA) ಜತೆ ಪಾಲುದಾರಿಕೆ ಮಾಡಿಕೊಳ್ಳಲಾಗಿದೆ. ಈ ಸಹಭಾಗಿತ್ವವು ಪ್ರಭಾವಿ ವ್ಯಕ್ತಿಗಳಿಗೆ ತಮ್ಮನ್ನೇ ಹೋಲುವ ಕೃತಕ ಬುದ್ಧಿಮತ್ತೆ ರಚಿಸಿದ ಕಂಟೆಂಟ್ ಗುರುತಿಸಲು ಮತ್ತು ನಿರ್ವಹಿಸಲು ನೆರವಾಗುತ್ತದೆ.