Hema panel fallout| ವುಮೆನ್ ಇನ್ ಸಿನಿಮಾ ಕಲೆಕ್ಟಿವ್‌ ಸದಸ್ಯರಿಂದ ಸಿಎಂ ಭೇಟಿ

ಹೇಮಾ ಸಮಿತಿಯ ವರದಿ ಬಗ್ಗೆ ಸರ್ಕಾರ ನಿಷ್ಕ್ರಿಯತೆಯನ್ನು ಕೇರಳ ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಒಂದು ದಿನದ ನಂತರ, ಡಬ್ಲ್ಯುಸಿಸಿ ಸದಸ್ಯರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ್ದಾರೆ.;

Update: 2024-09-11 11:03 GMT

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ವುಮೆನ್ ಇನ್ ಸಿನಿಮಾ ಕಲೆಕ್ಟಿವ್ (ಡಬ್ಲ್ಯುಸಿಸಿ) ಪ್ರತಿನಿಧಿಗಳು ಬುಧವಾರ ಭೇಟಿ ಮಾಡಿ ಚರ್ಚೆ ನಡೆಸಿದರು.

ನ್ಯಾ. ಹೇಮಾ ಕಮಿಟಿ ವರದಿ ಕುರಿತು ಯಾವುದೇ ಕ್ರಮ ತೆಗೆದುಕೊಳ್ಳದೆ ವರ್ಷಾನುಗಟ್ಟಲೆ ನಿಷ್ಕ್ರಿಯವಾಗಿದ್ದಕ್ಕೆ ಸರ್ಕಾರವನ್ನು ಕೇರಳ ಹೈಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿತ್ತು. ನ್ಯಾ. ಕೆ. ಹೇಮಾ ಸಮಿತಿಯ ವರದಿಯು ಚಲನಚಿತ್ರೋದ್ಯಮದಲ್ಲಿ ಮಹಿಳೆಯರ ಶೋಷಣೆ ಮತ್ತು ದುರ್ವರ್ತನೆ ಆರೋಪದ ಮೇಲೆ ಬೆಳಕು ಚೆಲ್ಲುತ್ತದೆ. 

ಖ್ಯಾತ ನಟಿಯರಾದ ರೇವತಿ ಮತ್ತು ರೀಮಾ ಕಲ್ಲಿಂಗಲ್, ಚಿತ್ರಕಥೆಗಾರ್ತಿ ದೀದಿ ದಾಮೋದರನ್ ಮತ್ತು ಸಂಪಾದಕಿ ಬೀನಾ ಪಾಲ್ ವೇಣುಗೋಪಾಲ್ ಅವರು ತಿರುವನಂತಪುರಂನಲ್ಲಿರುವ ಸೆಕ್ರೆಟರಿಯೇಟ್‌ನಲ್ಲಿ ಸಿಎಂ ಅವರನ್ನು ಭೇಟಿಯಾಗಿದ್ದರು. 

ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೀಮಾ ಕಲ್ಲಿಂಗಲ್, ಉದ್ಯಮದಲ್ಲಿರುವ ಎಲ್ಲಾ ಪಾಲುದಾರರನ್ನು ಒಟ್ಟಿಗೆ ತರಲು ನಾವು ಬಯಸುತ್ತೇವೆ ಎಂದರು. ಆದರೆ, ಅವರು ಇಲ್ಲವೇ ಡಬ್ಲ್ಯುಸಿಸಿ ಇತರ ಸದಸ್ಯರು ಸಿಎಂ ಭೇಟಿ ಕುರಿತು ವಿವರ ಹಂಚಿಕೊಳ್ಳಲಿಲ್ಲ. 

ನ್ಯಾಯಮೂರ್ತಿಗಳಾದ ಎ.ಕೆ.ಜಯಶಂಕರನ್ ನಂಬಿಯಾರ್ ಮತ್ತು ಸಿ.ಎಸ್.ಸುಧಾ ಅವರಿದ್ದ ವಿಶೇಷ ವಿಭಾಗೀಯ ಪೀಠವು ಸರ್ಕಾರ ನಾಲ್ಕು ವರ್ಷಗಳ ಹಿಂದೆ ವರದಿಯನ್ನು ಪಡೆದಿದ್ದು,ಆ ತಕ್ಷಣವೇ ಪ್ರತಿಕ್ರಿಯಿಸಬೇಕಿತ್ತು; ಸಂಪೂರ್ಣ ವರದಿಯನ್ನು ವಿಶೇಷ ತನಿಖಾ ತಂಡಕ್ಕೆ ಒಪ್ಪಿಸ ಬೇಕು ಎಂದು ಮಂಗಳವಾರ ನಿರ್ದೇಶನ ನೀಡಿತ್ತು.

Tags:    

Similar News