ಅರುಂಧತಿ ರಾಯ್ ಮೇಲಿನ ಯುಎಪಿಎ ಹಿಂಪಡೆಯಲು ಆಗ್ರಹ

ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯದಲ್ಲಿದೆ ಎಂದು 200 ಶಿಕ್ಷಣ ತಜ್ಞರು, ಸಾಮಾಜಿಕ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದು, ಬಹಿರಂಗ ಪತ್ರ ಬರೆದಿದ್ದಾರೆ.;

Update: 2024-06-24 14:19 GMT

ಬೂಕರ್ ಪ್ರಶಸ್ತಿ ವಿಜೇತೆ ಅರುಂಧತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಭಾರತ ಸರ್ಕಾರ ಅನುಮತಿ ನೀಡಬಾರದು ಎಂದು ಒತ್ತಾಯಿಸಿ,

200 ಶಿಕ್ಷಣ ತಜ್ಞರು, ಹೋರಾಟಗಾರರು ಮತ್ತು ಪತ್ರಕರ್ತರು ಬಹಿರಂಗ ಪತ್ರ ಬರೆದಿದ್ದಾರೆ. 

ಯಾವುದೇ ವಿಷಯದ ಬಗ್ಗೆ ಮುಕ್ತ ಮತ್ತು ನಿರ್ಭೀತಿಯಿಂದ ಅಭಿಪ್ರಾಯ ವ್ಯಕ್ತಪಡಿಸುವ ನಮ್ಮ ಮೂಲಭೂತ ಹಕ್ಕಿನ ಉಲ್ಲಂಘನೆ ಆಗಬಾರದು ಎಂದು ಪತ್ರದಲ್ಲಿ ತಿಳಿಸಲಾಗಿದೆ. 

ಕಳೆದ ವಾರ ದೆಹಲಿ ಎಲ್‌ಜಿ ವಿನಯ್ ಕುಮಾರ್ ಸಕ್ಸೇನಾ ಅವರು ರಾಯ್ ಮತ್ತು ಹುಸೇನ್ ವಿರುದ್ಧ ಅಕ್ರಮ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ, ಯುಎಪಿಎ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಿದ್ದರು. ಈ ಕಾಯಿದೆಯಡಿ ಜಾಮೀನು ಪಡೆಯುವುದು ಕಠಿಣ. 

2010ರಲ್ಲಿ ದೆಹಲಿಯಲ್ಲಿ ನಡೆದ 'ಆಜಾದಿ: ದಿ ಓನ್ಲಿ ವೇ' ಎಂಬ ಸಮ್ಮೇಳನದಲ್ಲಿ ಭಾಷಣ ಮಾಡಿದ್ದ ರಾಯ್, ಕಾಶ್ಮೀರದ ವಿವಾದಿತ ಪ್ರದೇಶವು ಎಂದಿಗೂ ʻಭಾರತದ ಅವಿಭಾಜ್ಯ ಅಂಗʼ ಆಗಿರಲಿಲ್ಲ ಎಂದು ಹೇಳಿದ್ದರು ಎಂದು ದೂರು ನೀಡಲಾಗಿತ್ತು.

ಶೇಖ್‌ ಶೌಕತ್‌ ಹುಸೇನ್ ಅಕಡೆಮಿಕ್‌, ಲೇಖಕ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ಮತ್ತು ಅರುಂಧತಿ ರಾಯ್ ಪ್ರಸಿದ್ಧ ಲೇಖಕಿ.ಯುಎಪಿಎ ಅಡಿಯಲ್ಲಿ ರಾಯ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಮಂಜೂರು ನೀಡಿದ ಸುದ್ದಿಗೆ ಜಗತ್ತಿನಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

ಬಹಿರಂಗ ಪತ್ರದಲ್ಲಿ ಏನಿದೆ?: ರೊಮಿಲಾ ಥಾಪರ್, ತುಷಾರ್ ಗಾಂಧಿ, ನಂದಿನಿ ಸುಂದರ್, ಯೋಗೇಂದ್ರ ಯಾದವ್, ವಿದ್ಯಾರ್ಥಿಗಳು, ಪತ್ರಕರ್ತರು, ಪರಿಸರವಾದಿಗಳು, ವಕೀಲರು ಮತ್ತು ಇತರರು ಸಹಿ ಮಾಡಿರುವ ಬಹಿರಂಗ ಪತ್ರದಲ್ಲಿ, ʻ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದಾಗ ಹಾಗೂ ಸಾರ್ವಜನಿಕ ಶಾಂತಿ-ಸುವ್ಯವಸ್ಥೆಗೆ ಧಕ್ಕೆ ತಂದಾಗ ಮಾತ್ರ ದೇಶದ್ರೋಹ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಸೆಮಿನಾರ್‌ನಲ್ಲಿ ರಾಯ್ ನೀಡಿದ ಹೇಳಿಕೆಯನ್ನು ಹಿಂಸಾಚಾರಕ್ಕೆ ಪ್ರಚೋದನೆ ಎಂದು ಪರಿಗಣಿಸಲಾಗುವುದಿಲ್ಲ, ಅವರ ಹೇಳಿಕೆಯಿಂದ ಯಾವುದೇ ಹಿಂಸಾಚಾರ ಸಂಭವಿಸಿಲ್ಲ,ʼ ಎಂದು ಬರೆದಿದ್ದಾರೆ.

ʻಸರ್ಕಾರದ ವಿರುದ್ಧ ದನಿ ಎತ್ತದಂತೆ ಇತರ ಬುದ್ಧಿಜೀವಿಗಳು ಮತ್ತು ಕಾರ್ಯಕರ್ತರಿಗೆ ಎಚ್ಚರಿಕೆ ಕಳುಹಿಸಲು ರಾಯ್ ಅವರನ್ನು ಗುರಿಯಾಗಿಸಿಕೊಳ್ಳಲಾಗಿದೆ,ʼ ಎಂದು ತಜ್ಞರು ಹೇಳಿದ್ದಾರೆ. 

Tags:    

Similar News