ರೈತರ ಕುಂದುಕೊರತೆ ಪರಿಹರಿಸಲು ಶೀಘ್ರವೇ ಸಮಿತಿ ರಚನೆ: ಸುಪ್ರೀಂ
ರೈತರಿಗೆ ಸಂಬಂಧಿಸಿದ ತಾತ್ಕಾಲಿಕ ಸಮಸ್ಯೆಗಳನ್ನು ಸಮಿತಿಗೆ ನೀಡುವಂತೆ ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳಿಗೆ ಸೂಚಿಸಿದ ಸುಪ್ರೀಂ ಕೋರ್ಟ್, ವಿಚಾರಣೆಯನ್ನು ಸೆಪ್ಟೆಂಬರ್ 2ಕ್ಕೆ ಮುಂದೂಡಿದೆ.;
ರೈತರ ಕುಂದುಕೊರತೆಗಳನ್ನು ಸೌಹಾರ್ದಯುತವಾಗಿ ಪರಿಹರಿಸಲು ಶೀಘ್ರದಲ್ಲೇ ಬಹು ಸದಸ್ಯರ ಸಮಿತಿಯನ್ನು ರಚಿಸುವುದಾಗಿ ಸುಪ್ರೀಂ ಕೋರ್ಟ್ ಗುರುವಾರ ಭರವಸೆ ನೀಡಿದೆ.
ಪಂಜಾಬ್ ಮತ್ತು ಹರಿಯಾಣದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಳವಡಿಸಿರುವ ಬ್ಯಾರಿಕೇಡ್‌ಗಳನ್ನು ತೆಗೆದುಹಾಕುವ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಈ ಭರವಸೆ ನೀಡಿದೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ದೀಪಂಕರ್ ದತ್ತಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠ, ರೈತರಿಗೆ ಸಂಬಂಧಿಸಿದ ತಾತ್ಕಾಲಿಕ ಸಮಸ್ಯೆಗಳನ್ನು ಸಮಿತಿಗೆ ನೀಡುವಂತೆ ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳನ್ನು ಕೇಳಿದೆ. ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 2 ರಂದು ನಿಗದಿಪಡಿಸಿದೆ.
ಸುಪ್ರೀಂ ಕೋರ್ಟ್‌ನ ಆಗಸ್ಟ್ 12 ರ ಆದೇಶವನ್ನು ಮನ್ನಿಸಿ ನಿರ್ಬಂಧಿಸಿದ ಹೆದ್ದಾರಿಯನ್ನು ಭಾಗಶಃ ತೆರೆಯಲು ರೈತರು ಒಪ್ಪಿಕೊಂಡಿದ್ದಾರೆ ಎಂದು ಪಂಜಾಬ್ ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಿತು.
ಪ್ರತಿಭಟನಾನಿರತ ರೈತರೊಂದಿಗೆ ಮಾತುಕತೆ ನಡೆಸಲು ಹಾಗೂ ಟ್ರ್ಯಾಕ್ಟರ್ ಮತ್ತು ಟ್ರಾಲಿಗಳನ್ನು ಹೆದ್ದಾರಿಯಿಂದ ತೆಗೆಯುವಂತೆ ಮನ ವೊಲಿಸಬೇಕೆಂದು ಪಂಜಾಬ್ ಮತ್ತು ಹರಿಯಾಣ ಸರ್ಕಾರವನ್ನು ನ್ಯಾಯಾಲಯ ಕೇಳಿಕೊಂಡಿತು.
ಫೆಬ್ರವರಿ 13 ರಿಂದ ಶಂಭು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಮನವೊಲಿಸಿ, ರಸ್ತೆಯಿಂದ ಟ್ರ್ಯಾಕ್ಟರ್ ಮತ್ತು ಟ್ರಾಲಿಗಳನ್ನು ತೆಗೆದುಹಾಕುವಂತೆ ರೈತರ ಮನವೊಲಿಸಬೇಕು. ಹೆದ್ದಾರಿಗಳು ಪಾರ್ಕಿಂಗ್ ಸ್ಥಳವಲ್ಲ ಎಂದು ಆಗಸ್ಟ್ 12 ರಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಬ್ಯಾರಿಕೇಡ್‌ಗಳನ್ನು ಒಂದು ವಾರದೊಳಗೆ ತೆಗೆದುಹಾಕಬೇಕೆಂಬ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಹರಿಯಾಣ ಸರ್ಕಾರ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ವಿಚಾರಣೆ ನಡೆಸುತ್ತಿದೆ.