ಪಶ್ಚಿಮ ಬಂಗಾಳದಲ್ಲಿ ಉದ್ಘಾಟನೆಗೊಂಡ ಜಗನ್ನಾಥ ದೇವಾಲಯ ವಿವಾದ ಸೃಷ್ಟಿಸಿದ್ದು ಯಾಕೆ? ಇಲ್ಲಿದೆ ವಿವರ

ಪಶ್ಚಿಮ ಬಂಗಾಳ ಸರ್ಕಾರವು ದೀಘಾದಲ್ಲಿ 250 ಕೋಟಿ ರೂಪಾಯಿ ವೆಚ್ಚದಲ್ಲಿ , 24 ಎಕರೆ ವಿಸ್ತೀರ್ಣದಲ್ಲಿ ಜಗನ್ನಾಥ ಧಾಮ ದೇವಾಲಯ ನಿರ್ಮಿಸಿದೆ. ಈ ದೇವಾಲಯವು ಪುರಿಯ 12ನೇ ಶತಮಾನದ ಜಗನ್ನಾಥ ದೇವಾಲಯದ ರಚನೆ ಹೊಂದಿದೆ.;

Update: 2025-05-01 01:20 GMT

ಪಶ್ಚಿಮ ಬಂಗಾಳದಲ್ಲಿ ನಿರ್ಮಾಣವಾಗಿರುವ ಜಗನ್ನಾಥ ದೇವಾಲಯ.

ಪಶ್ಚಿಮ ಬಂಗಾಳದ ಪೂರ್ವ ಮೇದಿನೀಪುರ ಜಿಲ್ಲೆಯ ದೀಘಾ ಕಡಲತೀರದ ಪಟ್ಟಣದಲ್ಲಿ ಒಡಿಶಾದ ಪುರಿಯ ಐತಿಹಾಸಿಕ ಜಗನ್ನಾಥ ದೇವಾಲಯದ ರೂಪದಲ್ಲೇ ನಿರ್ಮಿಸಲಾದ ಜಗನ್ನಾಥ ಧಾಮ ದೇವಾಲಯವು ಏಪ್ರಿಲ್ 30ರ ಅಕ್ಷಯ ತೃತೀಯದಂದು ಉದ್ಘಾಟನೆಗೊಂಡಿತು. ಆದರೆ, ಈ ದೇವಾಲಯದ ಉದ್ಘಾಟನೆಗೆ ಪುರಿಯ ಶ್ರೀ ಜಗನ್ನಾಥ ದೇವಾಲಯದ ಸೇವಕರಿಂದ (ಸರ್ವಿಟರ್ಸ್) ತೀವ್ರ ವಿರೋಧ ವ್ಯಕ್ತವಾಗಿದ್ದು ಸುದ್ದಿಗೆ ಗ್ರಾಸವಾಯಿತು.

ಪುರಿಯ ಜಗನ್ನಾಥ ದೇವಾಲಯದ ಸೇವಕರು ಪಶ್ಚಿಮ ಬಂಗಾಳದ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸದಂತೆ ತಮ್ಮ ಸದಸ್ಯರಿಗೆ ಎಚ್ಚರಿಕೆ ನೀಡಿದ್ದರು. ಈ ದೇವಾಲಯವನ್ನು ಪುರಿಯ ಶ್ರೀಮಂದಿರದ “ನಕಲು” ಎಂದು ಟೀಕಿಸಿದ್ದರು. ಈ ವಿವಾದವು ಧಾರ್ಮಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಚರ್ಚೆಗೆ ಕಾರಣವಾಗಿದೆ.

ವಿವಾದಕ್ಕೆ ಕಾರಣವೇನು? 

ಪಶ್ಚಿಮ ಬಂಗಾಳ ಸರ್ಕಾರವು ದೀಘಾದಲ್ಲಿ 250 ಕೋಟಿ ರೂಪಾಯಿ ವೆಚ್ಚದಲ್ಲಿ 24 ಎಕರೆ ವಿಸ್ತೀರ್ಣದಲ್ಲಿ ಜಗನ್ನಾಥ ಧಾಮ ದೇವಾಲಯವನ್ನು ನಿರ್ಮಿಸಿದೆ. ಈ ದೇವಾಲಯವು ಪುರಿಯ 12ನೇ ಶತಮಾನದ ಜಗನ್ನಾಥ ದೇವಾಲಯದ ರಚನೆ, ಕಳಿಂಗ ಸಾಮ್ರಾಜ್ಯದ ವಾಸ್ತುಶಿಲ್ಪ ಶೈಲಿ ಮತ್ತು ಧಾರ್ಮಿಕ ಆಚರಣೆಗಳನ್ನು ಅನುಕರಿಸುವ ಉದ್ದೇಶ ಹೊಂದಿದೆ. ದೇವಾಲಯವು ಭಗವಾನ್ ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ದೇವಿಯ ವಿಗ್ರಹಗಳನ್ನು ಹೊಂದಿದೆ. ಜೊತೆಗೆ ಲಕ್ಷ್ಮೀ ದೇವಿಗೆ ಪ್ರತ್ಯೇಕ ಗುಡಿ ಇದೆ. ಈ ಯೋಜನೆಯನ್ನು 2018ರಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದು, 2022ರಲ್ಲಿ ನಿರ್ಮಾಣ ಕಾರ್ಯ ಆರಂಭವಾಯಿತು. ಈ ದೇವಾಲಯವನ್ನು ಧಾರ್ಮಿಕ ಕೇಂದ್ರವಾಗಿರುವುದರ ಜೊತೆಗೆ ದೀಘಾವನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ಮಾಡುವ ಗುರಿಯನ್ನು ಅಲ್ಲಿನ ಸರ್ಕಾರ ಹೊಂದಿದೆ.

ಮಮತಾ ಬ್ಯಾನರ್ಜಿ ಏಪ್ರಿಲ್ 29ರಂದು ದೇವಾಲಯದ ಸ್ಥಳಕ್ಕೆ ಭೇಟಿ ನೀಡಿ, ಉದ್ಘಾಟನೆಯ ದಿನಾಂಕವನ್ನು ದೃಢಪಡಿಸಿತ್ತು. ಈ ಸಂದರ್ಭದಲ್ಲಿ ಅವರು 5 ಲಕ್ಷ ರೂಪಾಯಿಗಳ ವೈಯಕ್ತಿಕ ದೇಣಿಗೆಯನ್ನು ದೇವಾಲಯದ ಚಿನ್ನದ ಸೀಮೆ ಸಿಂಗಾರಕ್ಕಾಗಿ (ರಥಯಾತ್ರೆಯ ಸಂದರ್ಭದಲ್ಲಿ ರಥವನ್ನು ಸ್ವಚ್ಛಗೊಳಿಸುವ ಸಾಂಪ್ರದಾಯಿಕ ಸೀಮೆ) ಘೋಷಿಸಿದ್ದಾರೆ. ದೇವಾಲಯವು ರಾಜಸ್ಥಾನದ ಬಂಶಿ ಬೆಟ್ಟಗಳಿಂದ ತರಲಾದ ಗುಲಾಬಿ ಮರಳುಗಲ್ಲು ಮತ್ತು ವಿಯೆಟ್ನಾಂನಿಂದ ಆಮದು ಮಾಡಿಕೊಂಡ ಮಾರ್ಬಲ್‌ನಿಂದ ನಿರ್ಮಿತವಾಗಿದೆ. ಇದರ 65 ಮೀಟರ್ ಎತ್ತರದ ವಿಮಾನ (ಗೋಪುರ) ಮತ್ತು ಸಿಂಘದ್ವಾರ, ವ್ಯಾಘ್ರದ್ವಾರ, ಹಸ್ತಿದ್ವಾರ, ಅಶ್ವದ್ವಾರದಂತಹ ವಾಸ್ತುಶಿಲ್ಪದ ಅಂಶಗಳು ಪುರಿಯ ದೇವಾಲಯವನ್ನೇ ಹೋಲುತ್ತವೆ.

ಪುರಿಯ ಸೇವಕರಿಂದ ವಿರೋಧಕ್ಕೆ ಯಾಕೆ? 

ಪುರಿಯ ಶ್ರೀ ಜಗನ್ನಾಥ ದೇವಾಲಯದ ಸೇವಕರಾದ ಸುವಾರ್ ಮಹಾಸುವಾರ್ ನಿಜೋಗ್ (ಭೋಗ ತಯಾರಿಕೆಗೆ ಜವಾಬ್ದಾರರಾದವರು) ಮತ್ತು ಪುಷ್ಪಾಲಕ ನಿಜೋಗ್ (ದೇವತೆಗಳಿಗೆ ಅಲಂಕಾರ ಮಾಡುವವರು) ದೀಘಾದ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸದಂತೆ ತಮ್ಮ ಸದಸ್ಯರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಪುರಿಯ ಜಗನ್ನಾಥ ದೇವಾಲಯವು ಚಾರ್ ಧಾಮಗಳಲ್ಲಿ ಒಂದಾಗಿದ್ದು, ಶತಮಾನಗಳಿಂದಲೂ ತನ್ನ ವಿಶಿಷ್ಟ ಧಾರ್ಮಿಕ ಆಚರಣೆಗಳು ಮತ್ತು ಸಂಪ್ರದಾಯಗಳಿಗೆ ಹೆಸರುವಾಸಿಯಾಗಿದೆ. ಸೇವಕರ ಪ್ರಕಾರ, ದೀಘಾದ ದೇವಾಲಯವು ಪುರಿಯ ಆಚರಣೆಗಳನ್ನು ನಕಲು ಮಾಡುವುದರಿಂದ ಶ್ರೀಮಂದಿರದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯವು ಕುಸಿಯುತ್ತದೆ. ಅವರು ದೀಘಾದ ದೇವಾಲಯವನ್ನು “ಸಾಂಸ್ಕೃತಿಕ ಕೇಂದ್ರ” ಎಂದು ಕರೆದಿದ್ದು, ಇದು ಪುರಿಯ ಶ್ರೀಮಂದಿರದಂತೆ ಪವಿತ್ರ ದೇವಾಲಯವಾಗಿರಲು ಸಾಧ್ಯವಿಲ್ಲ ಎಂದು ವಾದಿಸಿದ್ದಾರೆ.

ಮಹಾಪ್ರಸಾದದ ಸಂರಕ್ಷಣೆ

ಪುರಿಯ ಶ್ರೀಮಂದಿರದಲ್ಲಿ ತಯಾರಿಸಲಾದ ಮಹಾಪ್ರಸಾದಗಳಾದ 'ಅಭಾದ' ಹಾಗೂ 'ಚಪ್ಪನ್​ ಭೋಗ್​' ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ, ಇದನ್ನು ಸುವಾರ್ ಮಹಾಸುವಾರ್ ನಿಜೋಗ್‌ನ ಸೇವಕರು ಪಾರಂಪರಿಕ ವಿಧಿಗಳಿಗೆ ಅನುಗುಣವಾಗಿ ತಯಾರಿಸುತ್ತಾರೆ. ದೀಘಾದ ದೇವಾಲಯದ ಉದ್ಘಾಟನೆಯ ಸಂದರ್ಭದಲ್ಲಿ ಈ ಮಹಾಪ್ರಸಾದ ತಯಾರಿಸಲು ಅಥವಾ ಮಾರಾಟ ಮಾಡಲು ಪುರಿಯ ಸೇವಕರನ್ನು ಆಹ್ವಾನಿಸಲಾಗಿದೆ ಎಂಬ ವರದಿಗಳಿಂದ ಸೇವಕರು ಕ್ರೋಧಗೊಂಡಿದ್ದರು. ಸುವಾರ್ ಮಹಾಸುವಾರ್ ನಿಜೋಗ್‌ನ ಅಧ್ಯಕ್ಷ ಪದ್ಮನಾಭ ಮಹಾಸುವಾರ್, “ನಾವು ಕೇವಲ ಅಡುಗೆಯವರು ಅಲ್ಲ, ಭಗವಾನ್ ಜಗನ್ನಾಥನ ಸೇವೆಗೆ ಮೀಸಲಾದ ಸೇವಕರು. ಇತರ ದೇವಾಲಯಗಳಲ್ಲಿ ವಾಣಿಜ್ಯ ಅಡುಗೆಯವರಂತೆ ಕೆಲಸ ಮಾಡಲು ನಮಗೆ ಅವಕಾಶವಿಲ್ಲ,” ಎಂದು ಹೇಳಿದ್ದಾರೆ. ದೀಘಾದಲ್ಲಿ ಭೋಗ ತಯಾರಿಸಿದ ಸೇವಕರನ್ನು ಪುರಿಯ ಶ್ರೀಮಂದಿರದಿಂದ ಶಾಶ್ವತವಾಗಿ ನಿಷೇಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಧಾರ್ಮಿಕ ಆಚರಣೆಗಳ ವಿರುದ್ಧ ಆಕ್ಷೇಪ

ಪುಷ್ಪಾಲಕ ನಿಜೋಗ್‌ನ ಕಾರ್ಯದರ್ಶಿ ಹರೇಕೃಷ್ಣ ಸಿಂಘಾರಿ ಮಾತನಾಡಿ, ದೀಘಾದ ದೇವಾಲಯದಲ್ಲಿ ಆರತಿ, ದೇವತೆಗಳ ಅಲಂಕಾರ ಮತ್ತು ಧ್ವಜಾರೋಹಣದಂತಹ ಆಚರಣೆಗಳಲ್ಲಿ ಭಾಗವಹಿಸದಂತೆ ತಮ್ಮ ಸದಸ್ಯರಿಗೆ ಎಚ್ಚರಿಕೆ ನೀಡಿರುವುದಾಗಿ ಹೇಳಿದ್ದಾರೆ. ಈ ಆಚರಣೆಗಳು ಪುರಿಯ ಶ್ರೀಮಂದಿರದ ವಿಶಿಷ್ಟ ಸಂಪ್ರದಾಯಗಳಾಗಿದ್ದು, ಇವುಗಳನ್ನು ಇತರೆಡೆ ನಕಲು ಮಾಡುವುದು ಪುರಿಯ ದೇವಾಲಯದ ಮೌಲ್ಯವನ್ನು ಕಡಿಮೆ ಮಾಡುತ್ತದೆ ಎಂದು ಅವರು ವಾದಿಸಿದ್ದಾರೆ. ಈ ಆದೇಶವನ್ನು ಉಲ್ಲಂಘಿಸಿದ ಸೇವಕರಿಗೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದ್ದಾರೆ.

ದಿಘಾದ ದೇವಾಲಯವನ್ನು “ಪುರಿಗೆ ಹೋಗುವ ಅಗತ್ಯವಿಲ್ಲ, ಜಗನ್ನಾಥ ಧಾಮ ಇಲ್ಲಿದೆ” ಮತ್ತು “ಜಗನ್ನಾಥ ಧಾಮ ಈಗ ದೀಘಾದಲ್ಲೂ ಇದೆ” ಎಂಬ ಘೋಷಣೆಗಳೊಂದಿಗೆ ಪ್ರಚಾರ ಮಾಡಲಾಗುತ್ತಿದೆ. ಈ ಘೋಷಣೆಗಳನ್ನು ಪುರಿಯ ಸೇವಕರು, ಮಂದಿರದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯಕ್ಕೆ ಅಪಮಾನ ಎಂದು ಹೇಳಿದ್ದಾರೆ. ಅವರ ಪ್ರಕಾರ, ಪುರಿಯ ಶ್ರೀಮಂದಿರವು ಅನನ್ಯವಾಗಿದ್ದು, ಯಾವುದೇ ಇತರ ದೇವಾಲಯವು ಇದರ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ.

ಹಿಂದೂಯೇತರರಿಗೆ ಪ್ರವೇಶ

ಪುರಿಯ ಸೇವಕರು ದೀಘಾದ ದೇವಾಲಯಕ್ಕೆ ಅಹಿಂದುಗಳ ಪ್ರವೇಶವನ್ನು ನಿರ್ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ, ಇದು ಪುರಿಯ ಶ್ರೀಮಂದಿರದ ಸಂಪ್ರದಾಯವಾಗಿದೆ. ಆದರೆ, ದೇವಾಲಯವನ್ನು ನಿರ್ಮಿಸಿರುವ ಪಶ್ಚಿಮ ಬಂಗಾಳದ ವಸತಿ ಮೂಲಸೌಕರ್ಯ ಅಭಿವೃದ್ಧಿ ನಿಗಮ (WBHIDCO) ಸರ್ಕಾರಿ ಸಂಸ್ಥೆಯಾಗಿದ್ದು, ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವಂತಿಲ್ಲ ಎಂಬ ಕಾನೂನು ತೊಡಕು ಇದೆ.

ಸುವಾರ್ ಮಹಾಸುವಾರ್ ನಿಜೋಗ್ ಮತ್ತು ಪುಷ್ಪಾಲಕ ನಿಜೋಗ್‌ನಿಂದ ದೀಘಾದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸದಂತೆ ಸೂಚನೆಗಳನ್ನು ಜಾರಿಗೊಳಿಸಲಾಗಿದೆ. ಈ ಸೂಚನೆಗಳನ್ನು ಪುರಿಯ ದೇವಾಲಯದ ಸುತ್ತಲೂ ಪೋಸ್ಟರ್‌ಗಳ ಮೂಲಕ ಪ್ರಕಟಿಸಲಾಗಿದೆ. ಭೋಗ ತಯಾರಿಕೆ, ಆರತಿ, ಅಲಂಕಾರ ಅಥವಾ ಧ್ವಜಾರೋಹಣದಂತಹ ಆಚರಣೆಗಳಲ್ಲಿ ಭಾಗವಹಿಸಿದ ಸೇವಕರನ್ನು ಪುರಿಯ ಶ್ರೀಮಂದಿರದಿಂದ ಶಾಶ್ವತವಾಗಿ ನಿಷೇಧಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಮಹಾಸುವಾರ್ ನಿಜೋಗ್, ದೀಘಾದಲ್ಲಿ ಮಹಾಪ್ರಸಾದದ ಹೆಸರಿನಲ್ಲಿ ಪ್ರಸಾದವನ್ನು ಮಾರಾಟ ಮಾಡಿದರೆ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ.

ಮಮತಾ ಬ್ಯಾನರ್ಜಿಯ ಸಮರ್ಥನೆ? 

ಮಮತಾ ಬ್ಯಾನರ್ಜಿಯವರು ದೀಘಾದ ದೇವಾಲಯವನ್ನು “ಪುರಿಯ ಜಗನ್ನಾಥ ದೇವಾಲಯದಂತೆ” ಎಂದು ವರ್ಣಿಸಿದ್ದಾರೆ, ಆದರೆ ಅದಕ್ಕೆ ಹೋಲಿಕೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ಪುರಿಯ ದೇವಾಲಯವನ್ನು ಶತಮಾನಗಳ ಹಿಂದೆ ಮಹಾನ್ ರಾಜರು ನಿರ್ಮಿಸಿದ್ದಾರೆ. ದೀಘಾದ ದೇವಾಲಯವು ಸರ್ಕಾರದ ಧನಸಹಾಯದಿಂದ ನಿರ್ಮಿತವಾಗಿದೆ,” ಎಂದು ಅವರು ಹೇಳಿದ್ದಾರೆ. ದೇವಾಲಯದ ದೈನಂದಿನ ಕಾರ್ಯಾಚರಣೆಯನ್ನು ಇಸ್ಕಾನ್ ಮತ್ತು ಸ್ಥಳೀಯ ಪುರೋಹಿತರಿಂದ ಕೂಡಿದ ಟ್ರಸ್ಟ್ ನಿರ್ವಹಿಸಲಿದೆ. ಟ್ರಸ್ಟ್‌ನಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ಅಧೀಕ್ಷಕ ಮತ್ತು ಇತರ ಅಧಿಕಾರಿಗಳನ್ನು ಸೇರಿಸಲಾಗಿದೆ.

ಈ ಯೋಜನೆಯು ರಾಜಕೀಯ ವಿವಾದಕ್ಕೂ ಕಾರಣವಾಗಿದೆ. ಬಿಜೆಪಿಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ದೀಘಾದ ದೇವಾಲಯವನ್ನು “ಸಾಂಸ್ಕೃತಿಕ ಕೇಂದ್ರ” ಎಂದು ಕರೆದು, ಇದನ್ನು ಜಗನ್ನಾಥ ದೇವಾಲಯವೆಂದು ಕರೆಯುವುದು ತಪ್ಪು ಎಂದು ಆರೋಪಿಸಿದ್ದಾರೆ. ಅವರು ದೇವಾಲಯದ ಉದ್ಘಾಟನೆಗೆ ಸಂಬಂಧಿಸಿದ ಆಮಂತ್ರಣ ಪತ್ರಿಕೆಯಲ್ಲಿ ಸ್ಪಷ್ಟತೆಯ ಕೊರತೆಯನ್ನು ಎತ್ತಿ ತೋರಿಸಿದ್ದಾರೆ. ಇದರ ಜೊತೆಗೆ, ದೇವಾಲಯದ ನಿರ್ವಹಣೆಯಲ್ಲಿ ಹಿಂದೂಯೇತರರ ನೇಮಕಾತಿಯ ಸಾಧ್ಯತೆಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ,

ದೀಘಾದ ದೇವಾಲಯದ ವೈಶಿಷ್ಟ್ಯಗಳು

ಕಳಿಂಗ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿತವಾದ ಈ ದೇವಾಲಯವು 65 ಮೀಟರ್ ಎತ್ತರದ ಗೋಪುರ ಹೊಂದಿದೆ. ಇದರ ಗರ್ಭಗುಡಿ, ಜಗಮೋಹನ (ಸಭಾಂಗಣ), ನಾಟ ಮಂದಿರ (ನೃತ್ಯ ಸಭಾಂಗಣ) ಮತ್ತು ಭೋಗ ಮಂಟಪ (ಭೋಗ ಸಮರ್ಪಣೆಯ ಸ್ಥಳ) ಪುರಿಯ ದೇವಾಲಯದಂತೆ ವಿನ್ಯಾಸಗೊಂಡಿವೆ. ರಾಜಸ್ಥಾನದ ಗುಲಾಬಿ ಬಣ್ಣದ ಮರಳುಗಲ್ಲು ಮತ್ತು ವಿಯೆಟ್ನಾಂನ ಮಾರ್ಬಲ್‌ನಿಂದ ನಿರ್ಮಾಣವಾಗಿದೆ. 800ಕ್ಕೂ ಅಧಿಕ ಕುಶಲಕರ್ಮಿಗಳು ಈ ಯೋಜನೆಯಲ್ಲಿ ಕೆಲಸ ಮಾಡಿದ್ದಾರೆ.

ದೇವಾಲಯದ ಸಂಕೀರ್ಣವು ಭಕ್ತರಿಗೆ ಮತ್ತು ವಿಐಪಿಗಳಿಗೆ ಪ್ರತ್ಯೇಕ ಪ್ರವೇಶ ದ್ವಾರಗಳು, ಭೋಗ ಶಾಲೆ, ತೋಟಗಳು, ಪಾರ್ಕಿಂಗ್ ಸ್ಥಳ, ಅತಿಥಿಗೃಹಗಳು, ಆಡಳಿತ ಕಟ್ಟಡ, ಪೊಲೀಸ್ ಠಾಣೆ ಮತ್ತು ಅಗ್ನಿಶಾಮಕ ದಳದ ಸೌಲಭ್ಯಗಳನ್ನು ಒಳಗೊಂಡಿದೆ. ದೀಘಾದಲ್ಲಿ 2025ರಿಂದ ವಾರ್ಷಿಕ ರಥಯಾತ್ರೆ ನಡೆಯಲಿದೆ.

Tags:    

Similar News