ಒಡಿಷಾದ 147 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷ 76 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ 56 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 12 ವಿಧಾನಸಭಾ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ನವೀನ್ ಪಟ್ನಾಯಕ್ ಅವರ ಬದಲು ಯಾರು ಎಂಬ ಪ್ರಶ್ನೆ ಸೃಷ್ಟಿಯಾಗಿದೆ.
ನವೀನ್ ಪಟ್ನಾಯಕ್ ಅವರು 2000ರ ಬಳಿಕ ಸತತ ನಾಲ್ಕು ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದ್ದರು ಈ ಫಲಿತಾಂಶ 2019 ರ ಅಸೆಂಬ್ಲಿ ಚುನಾವಣೆ ಫಲಿತಾಂಶಗಳಿಗೆ ವ್ಯತಿರಿಕ್ತವಾಗಿದೆ. 2019ರಲ್ಲಿ ಬಿಜೆಡಿ 112 ಮತ್ತು ಬಿಜೆಪಿ 23 ಸ್ಥಾನ ಗೆದ್ದಿತ್ತು.
ಒಡಿಶಾದಲ್ಲಿ ಗೆಲುವು ದಾಖಲಿಸುವುದಾಗಿ ಹೇಳಿಕೊಂಡಿದ್ದರೂ, ಬಿಜೆಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಬಿಗಿಪಟ್ಟು ಹಿಡಿದಿದೆ. ಮಣ್ಣಿನ ಮಗ ಅಥವಾ ಮಗಳು ಮಾತ್ರ ಮುಖ್ಯಮಂತ್ರಿಯಾಗುತ್ತಾರೆ ಎಂದು ಪಕ್ಷ ಬಾರಿ ಹೇಳಿಕೊಂಡಿದೆ. ಪಕ್ಷದ ಸಂಸದೀಯ ಸಮಿತಿ ಈ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ರಾಜ್ಯ ಘಟಕದ ಮುಖ್ಯಸ್ಥ ಮನಮೋಹನ್ ಸಮಲ್ ಹೇಳಿದ್ದರು.
21 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ 18, ಬಿಜೆಡಿ 2 ಹಾಗೂ ಮತ್ತು ಕಾಂಗ್ರೆಸ್ ಒಂದರಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಹಲವು ಅಭ್ಯರ್ಥಿಗಳಿದ್ದಾರೆ. ಅವರೆಂದರೆ.,
ಧರ್ಮೇಂದ್ರ ಪ್ರಧಾನ್: ಒಡಿಶಾದಲ್ಲಿ ಚುನಾವಣೆ ಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದರು. 2004 ರಲ್ಲಿ ಒಡಿಶಾದಲ್ಲಿ ಕೊನೆಯ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದ ಪ್ರಧಾನ್, ರಾಜ್ಯಸಭೆಯಲ್ಲಿ ಬಿಹಾರ ಮತ್ತು ಮಧ್ಯಪ್ರದೇಶವನ್ನು ಪ್ರತಿನಿಧಿಸಿ, 15 ವರ್ಷಗಳ ನಂತರ ಚುನಾವಣೆ ಕಣಕ್ಕೆ ಮರಳಿದ್ದಾರೆ. ಸಂಬಲ್‌ಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ.
ಬೈಜಯಂತ್ ಪಾಂಡಾ: ದೆಹಲಿ ರಾಜಕೀಯ ವಲಯದಲ್ಲಿ 'ಜಯ್ ಪಾಂಡ' ಎಂದು ಕರೆಯಲ್ಪಡುವ ಪಾಂಡಾ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ವಕ್ತಾರ. ಕೇಂದ್ರಪಾರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. 2019 ರಲ್ಲಿ ಬಿಜೆಡಿಯ ಅನುಭವ್ ಮೊಹಂತಿ ವಿರುದ್ಧ ಸೋತಿದ್ದಾರೆ.
ಜುಯಲ್ ಓರಮ್: ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ. ಮೂರನೇ ಬಾರಿಗೆ ಸುಂದರ್‌ಗಢ ಲೋಕಸಭೆ ಕ್ಷೇತ್ರದಿಂದ ಮರುಚುನಾವಣೆ ಬಯಸಿದ್ದಾರೆ. ಓರಂ ಅವರು 1998 ರಿಂದ ಈ ಸ್ಥಾನ ಗೆಲ್ಲುತ್ತಿದ್ದಾರೆ. 2009 ರಲ್ಲಿ ಕಾಂಗ್ರೆಸ್‌ನ ಹೇಮಾನಂದ ಬಿಸ್ವಾಲ್ ವಿರುದ್ಧ ಸೋತಿದ್ದ ಅವರು, 2014 ರಲ್ಲಿ ಗೆದ್ದರು.
ಅಪರಾಜಿತಾ ಸಾರಂಗಿ: ಬಿಹಾರದ ನಿವಾಸಿ. ಐಎಎಸ್ ಅಧಿಕಾರಿಯಾಗಿ 2009 ರಿಂದ 2013 ರ ನಡುವೆ ವಿವಿಧ ಇಲಾಖೆಗಳಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ, ಖ್ಯಾತಿ ಗಳಿಸಿದರು. ಶಾಲಾ ಶಿಕ್ಷಣ ಇಲಾಖೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. 2019 ರಲ್ಲಿ ಗೆಲುವು ಸಾಧಿಸಿದರು. ಭುವನೇಶ್ವರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಮನಮೋಹನ್ ಸಮಲ್: ಪಟ್ನಾಯಕ್ ಸರ್ಕಾರವನ್ನು ಕಿತ್ತೊಗೆಯಲು ಕಳೆದ ವರ್ಷ ಸಮಾಲ್ ಅವರನ್ನು ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಸಮಲ್ ಅವರು 2004 ರಲ್ಲಿ ಭದ್ರಕ್‌ನ ಧಮ್‌ನಗರ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದರು. ಬಿಜೆಡಿ-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾದರು. ಅವರು ಚಾಂದಬಾಲಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಸಿದ್ದಾಂತ್ ಮಹಾಪಾತ್ರ: ಇತ್ತೀಚೆಗೆ ಬಿಜೆಡಿಯಿಂದ ಬಿಜೆಪಿಗೆ ಜಿಗಿದಿದ್ದ ನಟ, ರಾಜಕಾರಣಿ. ದಿಗಪಹಂಡಿ ವಿಧಾನಸಭೆ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಬೆರ್ಹಾಂಪುರದಿಂದ ಎರಡು ಬಾರಿ ಬಿಜೆಡಿಯಿಂದ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ.