ಒಡಿಶಾ ಸಿಎಂ ಮೋಹನ್ ಚರಣ್ ಮಾಝಿ ಯಾರು?
ಮೋಹನ್ ಚರಣ್ ಮಾಝಿ ಅವರು ಉತ್ತಮ ಸಂಘಟನಾ ಕೌಶಲ ಹೊಂದಿರುವ, ಜನಪ್ರಿಯ ಬುಡಕಟ್ಟು ನಾಯಕ. ಶಾಸಕರಾಗಿ ನಾಲ್ಕು ಬಾರಿ ಆಯ್ಕೆಯಾಗಿರುವ ಅವರು ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ವಿರುದ್ಧ ಧ್ವನಿಯೆತ್ತಿದ್ದಾರೆ.;
ಬಿಜೆಪಿಯ ಬುಡಕಟ್ಟು ನಾಯಕ ಮತ್ತು ನಾಲ್ಕು ಬಾರಿ ಶಾಸಕರಾಗಿರುವ ಮೋಹನ್ ಚರಣ್ ಮಾಝಿ ಅವರು ಒಡಿಶಾದ ನೂತನ ಮುಖ್ಯಮಂತ್ರಿಯಾಗಿ ಬುಧವಾರ (ಜೂನ್ 12) ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಒಡಿಶಾ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಜನಾದೇಶ ಪಡೆದಿರುವ ಬಿಜೆಪಿ, ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದೆ. ವಿಧಾನಸಭೆಯ 147 ಸ್ಥಾನಗಳ ಪೈಕಿ ಬಿಜೆಪಿ 78 ಹಾಗೂ ಬಿಜೆಡಿ 51 ಸ್ಥಾನ ಗಳಿಸಿವೆ. ಇದರಿಂದ ಬಿಜೆಡಿ ಪಕ್ಷದ ಮುಖ್ಯಸ್ಥ ನವೀನ್ ಪಟ್ನಾಯಕ್ ಅವರ 24 ವರ್ಷಗಳ ಅಧಿಕಾರ ಕೊನೆಗೊಂಡಿದೆ.
ಮೂರನೇ ಬುಡಕಟ್ಟು ಸಿಎಂ: ಮೋಹನ್ ಚರಣ್ ಮಾಝಿ ಅವರು ಬಿಜೆಪಿಯ ಮೊದಲ ಬುಡಕಟ್ಟು ಮುಖ್ಯಮಂತ್ರಿ. ಈಮೊದಲು ಕಾಂಗ್ರೆಸ್‌ನ ಹೇಮಾನಂದ ಬಿಸ್ವಾಲ್ ಮತ್ತು ಗಿರಿಧರ್ ಗಮಾಂಗ್ ಬುಡಕಟ್ಟುಸಮುದಾಯದಿಂದ ಮುಖ್ಯಮಂತ್ರಿಯಾಗಿದ್ದರು.
ಜೂನ್ 11 ರಂದು ಭುವನೇಶ್ವರದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಅವಿರೋಧವಾಗಿ ಮಾಝಿ(52) ಅವರನ್ನು ನಾಯಕನಾಗಿ ಆಯ್ಕೆ ಮಾಡಿದರು. ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ಭೂಪೇಂದರ್ ಯಾದವ್ ವೀಕ್ಷಕರಾಗಿ ಸಭೆಯಲ್ಲಿ ಭಾಗವಹಿಸಿದ್ದರು.
ಜನಪ್ರಿಯ ಬುಡಕಟ್ಟು ನಾಯಕ: ಮಾಝಿ ಅವರು ಖನಿಜ ಸಮೃದ್ಧ ಕಿಯೋಂಜರ್ ಜಿಲ್ಲೆಯ ರಾಯ್ಕಲಾ ಗ್ರಾಮದ ಸಂತಾಲಿ ಬುಡಕಟ್ಟಿನವರು. ಕಾವಲುಗಾರನ ಮಗನಾದ ಅವರು ಆರ್‌ಎಸ್‌ಎಸ್ ನಡೆಸುತ್ತಿರುವ ಸರಸ್ವತಿ ಶಿಶು ವಿದ್ಯಾ ಮಂದಿರದಲ್ಲಿ ಶಿಕ್ಷಕರಾಗಿ ವೃತ್ತಿಜೀವನ ಪ್ರಾರಂಭಿಸಿದರು. ರಾಯ್ಕಳ ಪಂಚಾಯಿತಿಯ ಸರಪಂಚ ಆದ ನಂತರ ಅವರ ರಾಜಕೀಯ ಜೀವನ ಆರಂಭವಾಯಿತು. 2000 ರಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ ಅವರು, 2004ರಲ್ಲಿ ಮರು ಆಯ್ಕೆಯಾದರು. ಒಡಿಶಾದಲ್ಲಿ ಬಿಜೆಪಿ-ಬಿಜೆಡಿ ಮೈತ್ರಿ ಮುರಿದುಬಿದ್ದ ಕಾರಣ, 2009 ಮತ್ತು 2014 ರ ಚುನಾವಣೆಯಲ್ಲಿ ಸೋತರು. 2019 ರಲ್ಲಿ ವಿಧಾನಸಭೆಗೆ ಮರಳಿದರು. 2024 ರಲ್ಲಿ ನಾಲ್ಕನೇ ಬಾರಿಗೆ ಮರು ಆಯ್ಕೆಯಾಗಿದ್ದಾರೆ.
16ನೇ ಒಡಿಶಾ ವಿಧಾನಸಭೆಯಲ್ಲಿ ಬಿಜೆಪಿಯ ಮುಖ್ಯ ಸಚೇತಕರಾಗಿದ್ದ ಅವಧಿಯಲ್ಲಿ ಏಳು ಖಾಸಗಿ ಸದಸ್ಯರ ಮಸೂದೆಗಳನ್ನು ಮಂಡಿಸಿ ದ್ದರು. ಅದರಲ್ಲಿ ಒಡಿಶಾ ವಿಷಲ್ ಬ್ಲೋವರ್ಸ್ ಪ್ರೊಟೆಕ್ಷನ್ ಬಿಲ್ 2020 ಮುಖ್ಯವಾದುದು. 2022 ರಿಂದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರಾಗಿದ್ದಾರೆ.
ಭ್ರಷ್ಟಾಚಾರ, ಸ್ವಜನಪಕ್ಷಪಾತದ ವಿರುದ್ಧ ಧ್ವನಿ: 2023 ರಲ್ಲಿ ಸ್ಪೀಕರ್ ಅಂಗಳಕ್ಕೆ ಬೇಳೆಕಾಳು ಎಸೆದಿದ್ದರಿಂದ, ಅವರನ್ನು ವಿಧಾನಸಭೆಯಿಂದ ಅಮಾನತುಗೊಳಿಸಲಾಯಿತು. ರಾಜ್ಯದಲ್ಲಿ ಮಧ್ಯಾಹ್ನದ ಊಟ ಯೋಜನೆಗೆ ಬೇಳೆಕಾಳು ಖರೀದಿಯಲ್ಲಿ 700 ಕೋಟಿ ರೂ. ಹಗರಣ ನಡೆದಿದೆ ಎಂದು ಆರೋಪಿಸಿದ್ದರು. ದೇಶದ ಅತಿ ದೊಡ್ಡ ಕಬ್ಬಿಣದ ಅದಿರು ನಿಕ್ಷೇಪ ಹೊಂದಿರುವ ಕಿಯೋಂಜಾರ್ ಜಿಲ್ಲೆಯಲ್ಲಿನ ಗಣಿಗಾರಿಕೆ ಹಗರಣಗಳನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ದ್ದಾರೆ. ಜಿಲ್ಲಾ ಖನಿಜ ಪ್ರಾಧಿಕಾರದಲ್ಲಿ ಅಪಾರ ಹಣ ಬಳಕೆ ಆಗುತ್ತಿರುವುದನ್ನು ವಿರೋಧಿಸಿದ್ದರು. ಸ್ನಾತಕೋತ್ತರ ಪದವಿ ಜೊತೆ ಕಾನೂನು ಪದವಿ ಗಳಿಸಿರುವ ಅವರು, ವಿವಾದರಹಿತ ವ್ಯಕ್ತಿ. ಪ್ರಬಲ ಸಂಘಟಕ. ಆರ್‌ಎಸ್‌ಎಸ್ ನಿಕಟ ಸಂಪರ್ಕ ಹೊಂದಿದ್ದಾರೆ.