ವಿದೇಶಕ್ಕೆ ತೆರಳಲಿರುವ 7 ಸರ್ವಪಕ್ಷ ಸಂಸದೀಯ ನಿಯೋಗಗಳು ಪ್ರಕಟ; ಯಾರ್ಯಾರು ಇದ್ದಾರೆ? ಇಲ್ಲಿದೆ ಎಲ್ಲ ವಿವರ

ಸಚಿವರನ್ನೊಳಗೊಂಡ ಈ ನಿಯೋಗಗಳು ಒಟ್ಟು 51 ರಾಜಕೀಯ ನಾಯಕರನ್ನು ಒಳಗೊಂಡಿವೆ. ಇವರಲ್ಲಿ 31 ಮಂದಿ ಆಡಳಿತಾರೂಢ ಎನ್‌ಡಿಎ ಸದಸ್ಯರಾಗಿದ್ದರೆ, 20 ಮಂದಿ ಎನ್‌ಡಿಎಯೇತರ ಪಕ್ಷಗಳ ಪ್ರತಿನಿಧಿಗಳಾಗಿದ್ದಾರೆ.;

Update: 2025-05-19 11:09 GMT

'ಆಪರೇಷನ್ ಸಿಂದೂರ್' ಕಾರ್ಯಾಚರಣೆಯ ನಂತರದ ರಾಜತಾಂತ್ರಿಕ ಕಾರ್ಯತಂತ್ರದ ನಡೆಗಳ ಭಾಗವಾಗಿ, ಭಾರತವು ವಿವಿಧ ರಾಜಕೀಯ ಪಕ್ಷಗಳ ಸಂಸದರು, ಮಾಜಿ ಸಚಿವರು ಮತ್ತು ಮಾಜಿ ರಾಯಭಾರಿಗಳನ್ನು ಒಳಗೊಂಡ ಏಳು ಸರ್ವಪಕ್ಷೀಯ ನಿಯೋಗಗಳನ್ನು ವಿಶ್ವದ ಪ್ರಮುಖ ರಾಜಧಾನಿಗಳಿಗೆ ಕಳುಹಿಸಲು ಸಜ್ಜಾಗಿದೆ. ಮೇ 23ರಿಂದ ಪ್ರಯಾಣ ಆರಂಭಿಸಲಿರುವ ಈ ನಿಯೋಗಗಳು, ಭಯೋತ್ಪಾದನೆ, ನಿರ್ದಿಷ್ಟವಾಗಿ ಪಾಕಿಸ್ತಾನದಿಂದ ಬರುವ ಗಡಿಯಾಚೆಗಿನ ದಾಳಿಗಳ ವಿರುದ್ಧ ಭಾರತದ ದೃಢ ಮತ್ತು ಒಗ್ಗಟ್ಟಿನ ಸಂದೇಶವನ್ನು ಜಾಗತಿಕ ಮಟ್ಟಕ್ಕೆ ತಲುಪಿಸಲಿವೆ. ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಇದರ ಸಮನ್ವಯತೆಯ ನೇತೃತ್ವ ವಹಿಸಿಕೊಂಡಿದ್ದಾರೆ.

ಈ ಏಳು ನಿಯೋಗಗಳು ಒಟ್ಟು 32 ದೇಶಗಳು ಮತ್ತು ಬೆಲ್ಜಿಯಂನ ಬ್ರಸೆಲ್ಸ್‌ನಲ್ಲಿರುವ ಯುರೋಪಿಯನ್ ಯೂನಿಯನ್ ಪ್ರಧಾನ ಕಚೇರಿ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಲಿವೆ. "ಸರ್ವಪಕ್ಷೀಯ ನಿಯೋಗಗಳು ಭಯೋತ್ಪಾದನೆಯ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳ ವಿರುದ್ಧ ಭಾರತದ ರಾಷ್ಟ್ರೀಯ ಒಮ್ಮತ ಮತ್ತು ದೃಢ ನಿಲುವನ್ನು ಪ್ರಸ್ತಾಪಿಸಲಿವೆ. ಭಯೋತ್ಪಾದನೆ ವಿರುದ್ಧ ದೇಶದ ಶೂನ್ಯ ಸಹಿಷ್ಣುತೆಯ ಕಠಿಣ ಸಂದೇಶವನ್ನು ವಿಶ್ವಕ್ಕೆ ತಲುಪಿಸಲಿವೆ," ಎಂದು ಸಂಸದೀಯ ವ್ಯವಹಾರಗಳ ಸಚಿವಾಲಯದ ಪತ್ರಿಕಾ ಪ್ರಕಟಣೆ ತಿಳಿಸಿದೆ. ಈ ನಿಯೋಗಗಳ ಸದಸ್ಯರ ಪೂರ್ಣ ಪಟ್ಟಿ ಮತ್ತು ಭೇಟಿ ನೀಡುವ ದೇಶಗಳ ವಿವರಗಳನ್ನು ಕೇಂದ್ರ ಸಚಿವ ಕಿರಣ್ ರಿಜಿಜು ಬಿಡುಗಡೆ ಮಾಡಿದ್ದಾರೆ.

ನಿಯೋಗಗಳ ಸಂಯೋಜನೆ

ವಿವಿಧ ಪಕ್ಷಗಳ ಸಂಸದರು, ಖ್ಯಾತ ರಾಜತಾಂತ್ರಿಕರು ಮತ್ತು ಮಾಜಿ ಸಚಿವರನ್ನೊಳಗೊಂಡ ಈ ನಿಯೋಗಗಳು ಒಟ್ಟು 51 ರಾಜಕೀಯ ನಾಯಕರನ್ನು ಒಳಗೊಂಡಿವೆ. ಇವರಲ್ಲಿ 31 ಮಂದಿ ಆಡಳಿತಾರೂಢ ಎನ್‌ಡಿಎ ಸದಸ್ಯರಾಗಿದ್ದರೆ, 20 ಮಂದಿ ಎನ್‌ಡಿಎಯೇತರ ಪಕ್ಷಗಳ ಪ್ರತಿನಿಧಿಗಳಾಗಿದ್ದಾರೆ. ಪ್ರತಿ ನಿಯೋಗಕ್ಕೆ ಒಬ್ಬರು ನೇತೃತ್ವ ವಹಿಸಲಿದ್ದಾರೆ. ಪ್ರತಿಯೊಂದು ತಂಡವು ಸುಮಾರು 7 ರಿಂದ 8 ಸದಸ್ಯರನ್ನು ಹೊಂದಿದ್ದು, ತಲಾ ನಾಲ್ಕರಿಂದ ಐದು ದೇಶಗಳಿಗೆ ಭೇಟಿ ನೀಡಲಿದೆ. ಈ ಪ್ರವಾಸ ಸುಮಾರು 10 ದಿನಗಳ ಕಾಲ ನಡೆಯಲಿದೆ. ಸಂಸದರ ಈ ತಂಡಗಳು ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್, ಯುಎಇ, ದಕ್ಷಿಣ ಆಫ್ರಿಕಾ ಮತ್ತು ಜಪಾನ್ ಸೇರಿದಂತೆ ವಿಶ್ವದ ಹಲವು ಪ್ರಮುಖ ರಾಜಧಾನಿಗಳಿಗೆ ಭೇಟಿ ನೀಡಲಿವೆ.

ನಿಯೋಗಗಳ ನಾಯಕರು ಮತ್ತು ತೆರಳಲಿರುವ ದೇಶಗಳು

ನಿಯೋಗ 1

ಇದನ್ನು ಬಿಜೆಪಿ ಸಂಸದ ಬೈಜಯಂತ್ ಜಯ್ ಪಾಂಡಾ ಮುನ್ನಡೆಸಲಿದ್ದಾರೆ ಮತ್ತು ಸೌದಿ ಅರೇಬಿಯಾ, ಕುವೈತ್, ಬಹ್ರೇನ್ ಮತ್ತು ಅಲ್ಜೀರಿಯಾಗಳಿಗೆ ಭೇಟಿ ನೀಡಲಿದ್ದಾರೆ. ಈ ಸರ್ವಪಕ್ಷೀಯ ನಿಯೋಗದ ಇತರ ಸದಸ್ಯರು

ಬಿಜೆಪಿ ಸಂಸದ ನಿಶಿಕಾಂತ್ ದುಬೆ

ಬಿಜೆಪಿ ಸಂಸದ ಫಾಂಗ್‌ನಾನ್ ಕೊನ್ಯಾಕ್

ಬಿಜೆಪಿ ಸಂಸದೆ ರೇಖಾ ಶರ್ಮಾ

ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ

ಸತ್ನಾಮ್ ಸಿಂಗ್ ಸಂಧು

ಗುಲಾಮ್ ನಬಿ ಆಜಾದ್

ರಾಯಭಾರಿ ಹರ್ಷ್ ಶ್ರಿಂಗ್ಲಾ

ನಿಯೋಗ 2

ಇದನ್ನು ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಮುನ್ನಡೆಸಲಿದ್ದಾರೆ. ಅವರು ಯುಕೆ, ಫ್ರಾನ್ಸ್, ಜರ್ಮನಿ, ಯುರೋಪಿಯನ್ ಯೂನಿಯನ್​, ಇಟಲಿ, ಡೆನ್ಮಾರ್ಕ್‌ಗೆ ಭೇಟಿ ನೀಡಲಿದ್ದಾರೆ. ಎರಡನೇ ಸರ್ವಪಕ್ಷೀಯ ನಿಯೋಗದ ಸದಸ್ಯರು:

ಬಿಜೆಪಿ ಸಂಸದೆ ಡಾ. ದಗ್ಗುಬಾಟಿ ಪುರಂದೇಶ್ವರಿ

ಶಿವಸೇನಾ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ

ಗುಲಾಮ್ ಅಲಿ ಖತಾನಾ

ಕಾಂಗ್ರೆಸ್ ಸಂಸದ ಅಮರ್ ಸಿಂಗ್

ಬಿಜೆಪಿ ಸಂಸದ ಸಮೀಕ್ ಭಟ್ಟಾಚಾರ್ಯ

ಎಂಜೆ ಅಕ್ಬರ್

ರಾಯಭಾರಿ ಪಂಕಜ್ ಸರನ್

ನಿಯೋಗ 3

ಮೂರನೇ ಸರ್ವಪಕ್ಷೀಯ ನಿಯೋಗವನ್ನು ಜೆಡಿಯು ಸಂಸದ ಸಂಜಯ್ ಕುಮಾರ್ ಝಾ ಮುನ್ನಡೆಸಲಿದ್ದಾರೆ. ಇವರು ಇಂಡೋನೇಷ್ಯಾ, ಮಲೇಷ್ಯಾ, ದಕ್ಷಿಣ ಕೊರಿಯಾ, ಜಪಾನ್, ಸಿಂಗಪುರಕ್ಕೆ ಭೇಟಿ ನೀಡಲಿದ್ದಾರೆ. ನಿಯೋಗದ ಸದಸ್ಯರು:

ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ

ತೃಮಮೂಲ ಕಾಂಗ್ರೆಸ್​ ಸಂಸದ ಯೂಸುಫ್ ಪಠಾಣ್

ಬಿಜೆಪಿ ಸಂಸದ ಬ್ರಿಜ್ ಲಾಲ್

ಸಿಪಿಐ(ಎಂ) ಸಂಸದ ಜಾನ್ ಬ್ರಿಟಾಸ್

ಬಿಜೆಪಿ ಸಂಸದ ಪ್ರದಾನ್ ಬರುವಾ

ಬಿಜೆಪಿ ಸಂಸದ ಹೇಮಂಗ್ ಜೋಶಿ

ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್

ರಾಯಭಾರಿ ಮೋಹನ್ ಕುಮಾರ್

ನಿಯೋಗ 4

ನಾಲ್ಕನೇ ಸರ್ವಪಕ್ಷೀಯ ನಿಯೋಗವನ್ನು ಶಿವಸೇನಾ ಸಂಸದ ಶ್ರೀಕಾಂತ್ ಶಿಂದೆ ಮುನ್ನಡೆಸಲಿದ್ದಾರೆ ಮತ್ತು ಯುಎಇ, ಲೈಬೀರಿಯಾ, ಕಾಂಗೋ, ಸಿಯೆರಾ ಲಿಯೋನ್‌ಗೆ ಭೇಟಿ ನೀಡಲಿದ್ದಾರೆ. ನಿಯೋಗದ ಸದಸ್ಯರು:

ಬಿಜೆಪಿ ಸಂಸದೆ ಬಾನ್ಸುರಿ ಸ್ವರಾಜ್

ಐಯುಎಂಎಲ್ ಸಂಸದ ಇಟಿ ಮೊಹಮ್ಮದ್ ಬಶೀರ್

ಬಿಜೆಪಿ ಸಂಸದ ಅತುಲ್ ಗಾರ್ಗ್

ಬಿಜೆಡಿ ಸಂಸದ ಸಸ್ಮಿತ್ ಪಾತ್ರ

ಬಿಜೆಪಿ ಸಂಸದ ಮನನ್ ಕುಮಾರ್ ಮಿಶ್ರಾ

ಎಸ್‌ಎಸ್ ಅಹ್ಲುವಾಲಿಯಾ

ರಾಯಭಾರಿ ಸುಜನ್ ಚಿನಾಯ್

ನಿಯೋಗ 5

ಈ ನಿಯೋಗವನ್ನು ಪ್ರಮುಖ ಕಾಂಗ್ರೆಸ್ ನಾಯಕ ಶಶಿ ತರೂರ್ ಮುನ್ನಡೆಸಲಿದ್ದಾರೆ ಮತ್ತು ಯುಎಸ್‌ಎ, ಪನಾಮ, ಗಯಾನಾ, ಬ್ರೆಜಿಲ್, ಕೊಲಂಬಿಯಾಗಳಿಗೆ ಭೇಟಿ ನೀಡಲಿದ್ದಾರೆ. ನಿಯೋಗದ ಸದಸ್ಯರು:

ಎಲ್‌ಜೆಪಿ (ರಾಮ್ ವಿಲಾಸ್) ಸಂಸದೆ ಶಾಂಭವಿ

ಜೆಎಂಎಂ ಸಂಸದ ಸರ್ಫರಾಜ್ ಅಹ್ಮದ್

ಟಿಡಿಪಿ ಸಂಸದ ಜಿಎಂ ಹರೀಶ್ ಬಾಲಯೋಗಿ

ಬಿಜೆಪಿ ಸಂಸದ ಶಶಾಂಕ್ ಮಣಿ ತ್ರಿಪಾಠಿ

ಬಿಜೆಪಿ ಸಂಸದ ಭುವನೇಶ್ವರ ಕಲಿತಾ

ಶಿವಸೇನಾ ಸಂಸದ ಮಿಲಿಂದ್ ಮುರಳಿ ದೇವರಾ

ರಾಯಭಾರಿ ತರಂಜಿತ್ ಸಿಂಗ್ ಸಂಧು

ಬಿಜೆಪಿ ಸಂಸದ ತೇಜಸ್ವಿ ಸೂರ್ಯ

ನಿಯೋಗ 6

ಆರನೇ ಸರ್ವಪಕ್ಷೀಯ ನಿಯೋಗವನ್ನು ಡಿಎಂಕೆ ಸಂಸದ ಕನಿಮೊಳಿ ಕರುಣಾನಿಧಿ ಮುನ್ನಡೆಸಲಿದ್ದಾರೆ. ಇವರೆಲ್ಲರೂ ಸ್ಪೇನ್, ಗ್ರೀಸ್, ಸ್ಲೊವೇನಿಯಾ, ಲಾಟ್ವಿಯಾ, ರಷ್ಯಾಗಳಿಗೆ ಭೇಟಿ ನೀಡಲಿದ್ದಾರೆ. ನಿಯೋಗದ ಸದಸ್ಯರು:

ಸಮಾಜವಾದಿ ಪಕ್ಷದ ಸಂಸದ ರಾಜೀವ್ ರಾಯ್​

ನ್ಯಾಷನಲ್ ಕಾನ್ಫರೆನ್ಸ್ ಸಂಸದ ಮಿಯಾನ್ ಅಲ್ತಾಫ್ ಅಹ್ಮದ್

ಬಿಜೆಪಿ ಸಂಸದ ಬ್ರಿಜೇಶ್ ಚೌಟಾ

ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಸಂಸದ ಪ್ರೇಮ್ ಚಂದ್ ಗುಪ್ತಾ

ಆಮ್ ಆದ್ಮಿ ಪಾರ್ಟಿ (ಎಎಪಿ) ಸಂಸದ ಅಶೋಕ್ ಕುಮಾರ್ ಮಿತ್ತಲ್

ರಾಯಭಾರಿ ಮಂಜೀವ್ ಎಸ್ ಪುರಿ

ರಾಯಭಾರಿ ಜಾವೇದ್ ಅಶ್ರಫ್

ನಿಯೋಗ 7

ಏಳನೇ ಸರ್ವಪಕ್ಷೀಯ ನಿಯೋಗವನ್ನು ಎನ್‌ಸಿಪಿ (ಎಸ್‌ಸಿಪಿ) ಸಂಸದ ಸುಪ್ರಿಯಾ ಸುಳೆ ಮುನ್ನಡೆಸಲಿದ್ದಾರೆ ಮತ್ತು ಈಜಿಪ್ಟ್, ಕತಾರ್, ಇಥಿಯೋಪಿಯಾ, ದಕ್ಷಿಣ ಆಫ್ರಿಕಾಗಳಿಗೆ ಭೇಟಿ ನೀಡಲಿದ್ದಾರೆ. ನಿಯೋಗದ ಸದಸ್ಯರು:

ಬಿಜೆಪಿ ಸಂಸದ ರಾಜೀವ್ ಪ್ರತಾಪ್ ರೂಡಿ

ಎಎಪಿ ಸಂಸದ ವಿಕ್ರಮ್‌ಜೀತ್ ಸಿಂಗ್ ಸಹನಿ

ಕಾಂಗ್ರೆಸ್ ಸಂಸದ ಮನೀಶ್ ತಿವಾರಿ

ಬಿಜೆಪಿ ಸಂಸದ ಅನುರಾಗ್ ಸಿಂಗ್ ಠಾಕೂರ್

ಟಿಡಿಪಿ ಸಂಸದ ಲವು ಶ್ರೀ ಕೃಷ್ಣ ದೇವರಾಯಲು

ಕಾಂಗ್ರೆಸ್‌ನ ಆನಂದ್ ಶರ್ಮಾ

ಬಿಜೆಪಿಯ ವಿ ಮುರಳೀಧರನ್

ರಾಯಭಾರಿ ಸೈಯದ್ ಅಕ್ಬರುದ್ದೀನ್​

ಏಕತೆಯ ಪ್ರದರ್ಶನ

ವಿವಿಧ ರಾಜಕೀಯ ಪಕ್ಷಗಳ ಸದಸ್ಯರನ್ನು ಒಳಗೊಂಡ ಈ ನಿಯೋಗಗಳ ರಚನೆಯು ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯದಲ್ಲಿ ಅಪರೂಪದ ದ್ವಿಪಕ್ಷೀಯ ಸಹಕಾರವನ್ನು ಪ್ರದರ್ಶಿಸುತ್ತದೆ. ಕಾಶ್ಮೀರ ಮತ್ತು ಗಡಿಯಾಚೆಗಿನ ಭಯೋತ್ಪಾದನೆ ಕುರಿತು ಭಾರತದ ನಿಲುವನ್ನು ಮಂಡಿಸಲು ಕೈಗೊಂಡಿರುವ ಈ ಉಪಕ್ರಮವು ಇದುವರೆಗಿನ ಭಾರತದ ಸಂಸದೀಯ ರಾಜತಾಂತ್ರಿಕ ಇತಿಹಾಸದಲ್ಲಿ ಹೊಸದು ಪರಿಗಣಿಸಲಾಗಿದೆ. ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, "ಪ್ರಮುಖ ಸಂದರ್ಭಗಳಲ್ಲಿ ಭಾರತವು ಒಗ್ಗಟ್ಟಾಗಿ ನಿಲ್ಲುತ್ತದೆ. ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯ ನಮ್ಮ ಸಾಮೂಹಿಕ ಸಂದೇಶವನ್ನು ತಲುಪಿಸಲು ಈ ಏಳು ಸರ್ವಪಕ್ಷೀಯ ನಿಯೋಗಗಳು ಪ್ರಮುಖ ಸಹಭಾಗಿ ರಾಷ್ಟ್ರಗಳಿಗೆ ಭೇಟಿ ನೀಡುತ್ತಿವೆ. ಇದು ರಾಜಕೀಯ ಮತ್ತು ಭಿನ್ನಾಭಿಪ್ರಾಯಗಳನ್ನು ಮೀರಿದ ರಾಷ್ಟ್ರೀಯ ಏಕತೆಯ ಪ್ರಬಲ ಪ್ರತಿಬಿಂಬ" ಎಂದು ಹೇಳಿದ್ದಾರೆ.

ಆಪರೇಷನ್ ಸಿಂದೂರ್

ಮೇ 7ರಂದು ಪ್ರಾರಂಭವಾದ 'ಆಪರೇಷನ್ ಸಿಂದೂರ್', ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ (26 ನಾಗರಿಕರು ಸಾವು) ಭಾರತದ ಕಾರ್ಯತಂತ್ರದ ಪ್ರತಿಕ್ರಿಯೆಯಾಗಿದೆ. ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ನಿಖರವಾದ ವೈಮಾನಿಕ ದಾಳಿಗಳನ್ನು ನಡೆಸಿ, ಲಷ್ಕರ್-ಎ-ತೊಯ್ಬಾ, ಜೈಷ್-ಎ-ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್ನಂತಹ ಸಂಘಟನೆಗಳ 100 ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿತ್ತು. ನಂತರ, ಪಾಕಿಸ್ತಾನವು ಗಡಿಯಾಚೆ ಶೆಲ್ ದಾಳಿ ಮತ್ತು ಡ್ರೋನ್ ದಾಳಿ ನಡೆಸಲು ಪ್ರಯತ್ನಿಸುವ ಮೂಲಕ ಸಂಘರ್ಷವನ್ನು ಹೆಚ್ಚಿಸಲು ಯತ್ನಿಸಿತು, ಇದಕ್ಕೆ ಪ್ರತಿಕಾರವಾಗಿ ಭಾರತವು ಪಾಕಿಸ್ತಾನದ ರಾಡಾರ್ ಸ್ಟೇಷನ್‌ಗಳು, ವಾಯುನೆಲೆಗಳು ಮತ್ತು ಸೇನಾ ನೆಲೆಗಳ ಮೇಲೆ ದಾಳಿ ನಡೆಸಿತು. ಈ ಉದ್ವಿಗ್ನತೆಯ ನಂತರ ಭಾರತ ಈ ರಾಜತಾಂತ್ರಿಕ ಹೆಜ್ಜೆ ಇಟ್ಟಿದೆ. 

Tags:    

Similar News