Wayanad Landslide| ʼದ ಫೆಡರಲ್‌ʼ ಪ್ರತ್ಯಕ್ಷ ವರದಿ: ಕೊಚ್ಚಿಹೋದ ಬದುಕಿನ ಎದುರು ಕಣ್ಣೀರಿನ ಉಬ್ಬರ

ಭೂಮಿಯೇ ಬಾಯ್ದೆರೆದು ಬದುಕನ್ನು ಆಪೋಷನ ತೆಗೆದುಕೊಂಡು ಭೀಕರ ದೃಶ್ಯಾವಳಿಗಳ ಮುಂದೆ ನೆರೆದಿದ್ದ ಗ್ರಾಮಸ್ಥರು, ಪ್ರಕೃತಿ ಹೊರತುಪಡಿಸಿ ಬೇರೆ ಯಾರನ್ನೂ ದೂಷಿಸಲು ಸಾಧ್ಯವಾಗದೆ, ಆಘಾತಕ್ಕೊಳಗಾಗಿದ್ದರು. ಅಲ್ಲಿ ಕೇವಲ ಮನೆಗಳು ಮಾತ್ರವಲ್ಲ; ಕುಟುಂಬಗಳೇ ಛಿದ್ರಗೊಂಡಿದ್ದವು, ಭೀಕರ ದುರಂತದಲ್ಲಿ ಬದುಕಿಳಿದ ನೂರಾರು ಮಂದಿಯನ್ನು ಹತ್ತಿರದ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿತ್ತು.

Update: 2024-07-31 08:33 GMT
ಕೇರಳದ ವಯನಾಡ್ ಜಿಲ್ಲೆಯ ಗುಡ್ಡಗಾಡು ಗ್ರಾಮದಲ್ಲಿ ಮಂಗಳವಾರ (ಜುಲೈ 30) ಭೂಕುಸಿತ ಸಂಭವಿಸಿದ ನಂತರ ಸಂತ್ರಸ್ತ ಜನರನ್ನು ತಲುಪಲು ರಕ್ಷಣಾ ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ

ಮಂಗಳವಾರ ತಡರಾತ್ರಿಯ ಸಮಯ. ಕಿರಿದಾದ ಮತ್ತು ಕಿತ್ತು ಅಸ್ತವ್ಯಸ್ಥವಾದ ರಸ್ತೆಗಳಲ್ಲಿ ಹಿಟಾಚಿ ಕ್ರೇನ್‌ಗಳು, ಅಗೆಯುವ ಯಂತ್ರಗಳು, ಬುಲ್ಡೋಜರ್‌ಗಳು, ಡಂಪ್ ಟ್ರಕ್‌ಗಳು, ಬ್ಯಾಕ್‌ಹೋಗಳು, ಆಂಬ್ಯುಲೆನ್ಸ್‌ಗಳು, ಎಟಿವಿಗಳು ಮತ್ತು ಅಗ್ನಿಶಾಮಕ ಟ್ರಕ್‌ಗಳು ಕೇರಳದ ವಯನಾಡು ಜಿಲ್ಲೆಯ ಬೆಟ್ಟಗಳ ಮೇಲಿರುವ ಚೋರಲ್ಮಲಾದಿಂದ ಮೆಪ್ಪಾಡಿ ಪಟ್ಟಣದ ಕಡೆಗೆ ಇರುವೆಯಂತೆ ಸಾಲುಗಟ್ಟಿದ್ದವು.

ಮುಂಜಾನೆಯಿಂದಲೇ ರಕ್ಷಣಾ ಕಾರ್ಯ ಆರಂಭಿಸಿದ್ದ ಪೊಲೀಸರು, ಅರೆಸೇನಾ ಪಡೆಗಳು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸಂಜೆಯ ಹೊತ್ತಿಗೆ ವಿಶ್ರಾಂತಿಗೆ ಮುಂದಾಗಿದ್ದರು. ಭಾರೀ ಮಳೆ, ಕರಾಳ ರಾತ್ರಿ ಮತ್ತು ದಟ್ಟ ಕಾರ್ಮೋಡಗಳು ಆಕಾಶವನ್ನು ಆವರಿಸಿದ್ದರಿಂದ, ಇನ್ನಷ್ಟು ತೀವ್ರ ಮಳೆಯ ಆತಂಕ ಎದುರಾಗಿತ್ತು. ಆ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ರಕ್ಷಣಾ ಕಾರ್ಯಾಚರಣೆಗೆ ರಾತ್ರಿ ವಿರಾಮ ಘೋಷಿಸಿತ್ತು. 

ಆಘಾತಗೊಂಡ ಗ್ರಾಮಸ್ಥರು

ಭೂಮಿಯೇ ಬಾಯ್ದೆರೆದು ಬದುಕನ್ನು ಆಪೋಷನ ತೆಗೆದುಕೊಂಡು ಭೀಕರ ದೃಶ್ಯಾವಳಿಗಳ ಮುಂದೆ ನೆರೆದಿದ್ದ ಗ್ರಾಮಸ್ಥರು, ಪ್ರಕೃತಿ ಹೊರತುಪಡಿಸಿ ಬೇರೆ ಯಾರನ್ನೂ ದೂಷಿಸಲು ಸಾಧ್ಯವಾಗದೆ, ಆಘಾತಕ್ಕೊಳಗಾಗಿದ್ದರು. ಅಲ್ಲಿ ಕೇವಲ ಮನೆಗಳು ಮಾತ್ರವಲ್ಲ; ಕುಟುಂಬಗಳೇ ಛಿದ್ರಗೊಂಡಿದ್ದವು, ಭೀಕರ ದುರಂತದಲ್ಲಿ ಬದುಕಿಳಿದ ನೂರಾರು ಮಂದಿಯನ್ನು ಹತ್ತಿರದ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿತ್ತು. ಎಷ್ಟೋ ಮಂದಿ ಕಲ್ಲು-ಮಣ್ಣು-ನೀರಿನ ದಾಳಿಗೆ ಜೀವ ಬಿಟ್ಟಿದ್ದರು, ಮತ್ತೆಷ್ಟೋ ಮಂದಿ ಸುಳಿವೇ ಇರದಂತೆ ಕಾಣೆಯಾಗಿದ್ದರು. ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಸೇರಿದಂತೆ ಎಲ್ಲರೂ ರಕ್ಷಣಾ ಕಾರ್ಯಾಚರಣೆ ಯಲ್ಲಿ ತೊಡಗಿಕೊಂಡಿದ್ದರೂ, ಅವರೆಲ್ಲರ ಎದೆಯಲ್ಲಿ ದುಃಖ ಮತ್ತು ನೋವು ಮಡುಗಟ್ಟಿತ್ತು, ತಲೆ ಮೇಲಿನ ದಟ್ಟ ಕಾರ್ಮೋಡಂತೆಯೇ.

ಇದು ʼದ ಫೆಡರಲ್‌ ಕರ್ನಾಟಕʼ ಸಾಕ್ಷಾತ್‌ ಕಂಡ ವಯನಾಡು ಜಿಲ್ಲೆ ವೈತಿರಿ ತಾಲೂಕಿನ ಚೋರಲ್ಮಲಾ ಮತ್ತು ಮುಂಡಕ್ಕೈ ಪ್ರದೇಶ ಸರಣಿ ಭೂಕುಸಿತ ಸಂಭವಿಸಿದ ದೃಶ್ಯಾವಳಿ.

ಸೇತುವೆ ಕುಸಿತವು ಸಣ್ಣ ನದಿ (ಮುಂಡಕ್ಕೈ)ಯ ಇನ್ನೊಂದು ತೀರವನ್ನು ಸಂಪೂರ್ಣ ಹೊರಜಗತ್ತಿನ ಸಂಪರ್ಕ ಕಡಿದುಕೊಂಡ ದ್ವೀಪವಾಗಿಸಿತ್ತು. ಮಂಗಳವಾರ (ಜು.30) ಮುಂಜಾನೆ ಸುಮಾರು 200 ಮನೆಗಳ ಸುಮಾರು 500 ಜನರನ್ನು ಆಚೆ ಬದಿಯಿಂದ ಸಂಪೂರ್ಣ ಪ್ರತ್ಯೇಕಿಸಿತ್ತು.

ಮತ್ತೆ ಭೂಕುಸಿತ ಸಂಭವಿಸುವ ಭೀತಿಯಿಂದ ರಕ್ಷಣಾ ಕಾರ್ಯಾಚರಣೆ ಸಿಬ್ಬಂದಿ, ಮಂಗಳವಾರ ತಡ ಸಂಜೆ ಸುಮಾರು 12 ಕಿಮೀ ದೂರದ ಮೆಪ್ಪಾಡಿ ಮತ್ತು 17 ಕಿಮೀ ದೂರದ ಕಲ್ಪೆಟ್ಟಾ ಕಡೆಗೆ ತೆರಳಿದರು.

ಕೇರಳ ಅಗ್ನಿಶಾಮಕ ದಳದ ಸಿಬ್ಬಂದಿ ಬಿನಯ್ ಕುಟ್ಟಿಕಣ್ಣನ್, ʻಕೇರಳ ರಾಜ್ಯ ವಿಪತ್ತು ನಿರ್ವಹಣಾ ಘಟಕದ ಸಲಹೆಯಂತೆ, ಮಳೆ ಮತ್ತು ಹೆಚ್ಚಿನ ಭೂಕುಸಿತದ ಭಯದಿಂದ ರಾತ್ರಿ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಕೇಳಿಕೊಂಡಿದೆ,ʼ ಎಂದು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು. ʻಭೂಕುಸಿತದ ಅವಶೇಷಗಳಿಂದ ಸುಮಾರು 20 ಮೃತದೇಹಗಳನ್ನು ಹೊರತೆಗೆದ ನೂರಾರು ರಕ್ಷಣಾ ಸಿಬ್ಬಂದಿಗಳಲ್ಲಿ ತಾನೂ ಒಬ್ಬʼ ಎಂದು ಅವರು ಕಣ್ಣೀರು ಹಾಕಿದರು.

ಗಾಯಾಳುಗಳಿಗೆ ವೈದ್ಯಕೀಯ ನೆರವು

ಖಾಸಗಿ ಆಸ್ಪತ್ರೆಯ ಆಂಬ್ಯುಲೆನ್ಸ್ ಚಾಲಕ ಪ್ರಕಾಶನ್, ʻಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಕೊಂಡೊಯ್ಯಲಾಯಿತು. ರಕ್ಷಣಾ ತಂಡಗಳು ರಕ್ಷಿಸಿದ ನೂರಾರು ಪುರುಷರು, ಮಹಿಳೆಯರು ಮತ್ತು ಮಕ್ಕಳು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವು ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ,ʼ ಎಂದು ವಿವರಿಸಿದರು.

ʻಈ ಭೀಕರ ಘಟನೆಯಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನನಗೆ ಗೊತ್ತಿರುವ ಅನೇಕ ಜನರು ಸಾವನ್ನಪ್ಪಿದ್ದಾರೆ,ʼ ಎಂದು ಸಣ್ಣ ಅಂಗಡಿ ನಡೆಸಿಕೊಂಡಿರುವ ಸ್ಥಳೀಯ ನಿವಾಸಿ ಮೊಹಮ್ಮದ್ ಇಸಾಕ್ ಹೇಳಿದರು. "ಸೋಮವಾರ ತಾನೆ ತಮ್ಮ ಅಂಗಡಿಯ ಕಟ್ಟೆ ಮೇಲೆ ಕುಳಿತ ತಮ್ಮೊಂದಿಗೆ ಮಾತನಾಡಿ ಹೋದವರು, ಮಂಗಳವಾರ ಬೆಳಿಗ್ಗೆ ಜೀವಂತ ಇರಲೇ ಇಲ್ಲ,.. ಇಂತಹ ಆಘಾತವನ್ನು ಎಂದೂ ಊಹಿಸಿರಲಿಲ್ಲ.. ಎಂದೂ ಮರೆಲಾಗದು" ಎಂದು ಕಣ್ಣೀರಾದರು.

ಮುಂಡಕ್ಕೈ ದ್ವೀಪವಾಯ್ತು

ಸೇತುವೆ ಕುಸಿತದಿಂದ ಮುಂಡಕ್ಕೈ ಗ್ರಾಮದ ಸುಮಾರು 215 ಮನೆಗಳ 400 ಕ್ಕೂ ಹೆಚ್ಚು ನಿವಾಸಿಗಳು ಹೊರ ಜಗತ್ತಿನ ಸಂಪರ್ಕ ಕಡಿದುಕೊಂಡಿದ್ದಾರೆ ಎಂದು ರಕ್ಷಣಾ ಕಾರ್ಯಾಚರಣೆ ನಿರ್ವಹಿಸುತ್ತಿರುವ ವೈತಿರಿ ತಾಲೂಕಿನ ತಹಶೀಲ್ದಾರ್ ಸಾಜಿ ಪೌಲೋಸ್ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ʻಅವರೆಲ್ಲಾ ದುರಂತದಲ್ಲಿ ಸತ್ತುಹೋಗಿದ್ದಾರೆ ಎಂದು ನಾನು ಹೇಳುವುದಿಲ್ಲ; ಆದರೆ, ಕಾಣೆಯಾಗಿದ್ದಾರೆ. ಚೋರಲ್ಮಲಾ ಪ್ರದೇಶದಲ್ಲಿ ಸುಮಾರು 60 ಜನರು ಕಾಣೆಯಾಗಿದ್ದು, ಕೆಸರಿನಲ್ಲಿ ಮುಳುಗಿ ಹೋಗಿದ್ದಾರೆ" ಎಂದು ಆತಂಕ ವ್ಯಕ್ತವಾಗಿದೆ. ʼ66 ಮನೆಗಳಲ್ಲಿ 191 ಜನ ಕಾಣೆಯಾಗಿದ್ದಾರೆʼ ಎಂದು ಅವರು ಹೇಳಿದರು. 

ʻಮುಂಡಕ್ಕೈ ಗ್ರಾಮವು ಬಹುತೇಕ ದ್ವೀಪವಾಗಿದೆ. ಸುಮಾರು 200 ಮನೆಗಳು ಅಪಾಯದಲ್ಲಿವೆ ಮತ್ತು ಆ ಮನೆಗಳ ನಿವಾಸಿಗಳು ಇನ್ನೂ ಸಂಪರ್ಕಕ್ಕೆ ಸಿಕ್ಕಿಲ್ಲʼ ಎಂದು ಹೇಳಿದರು.

ಸೇನೆಯಿಂದ ತಾತ್ಕಾಲಿಕ ಸೇತುವೆ

ರಕ್ಷಣಾ ಕಾರ್ಯಾಚರಣೆಯಲ್ಲಿ ಸೇನಾ ಸಿಬ್ಬಂದಿ ಇನ್ನೂ ಸ್ಥಳದಲ್ಲಿದ್ದು, ಚೋರಲ್ಮಲಾದಿಂದ ಮುಂಡಕ್ಕೈ ತಲುಪಲು ತಾತ್ಕಾಲಿಕ ಸೇತುವೆಯನ್ನು ನಿರ್ಮಿಸುತ್ತಿದ್ದಾರೆ ಎಂದು ಅವರು ಮಳೆ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ʻಮಳೆ ನಿಂತರೆ ಹೆಚ್ಚು ಜನರನ್ನು ರಕ್ಷಿಸಬಹುದು. ಆದರೆ, ಸೇನೆಯ ಅಧಿಕಾರಿಗಳು ಹೆಲಿಕಾಪ್ಟರ್‌ಗಳೊಂದಿಗೆ ಹಳ್ಳಿಗಳ ಮನೆಗಳು ಮತ್ತು ನಿವಾಸಿಗಳನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ,ʼ ಎಂದು ಪೌಲೋಸ್ ಹೇಳಿದರು.

ʻಈ ಘಟನೆ ಜೀವನದಲ್ಲಿ ಅಳಿಸಲಾಗದ ಆಘಾತದ ಗುರುತು ಉಳಿಸಿದೆ; ನಮ್ಮ ಪ್ರೀತಿಪಾತ್ರರನ್ನು ಬಲಿ ತೆಗೆದುಕೊಂಡು, ನಮ್ಮ ಮನೆಗಳ ಜೀವಂತಿಕೆಯನ್ನೇ ನುಂಗಿಹಾಕಿದೆ. ಬಲಿಪಶುಗಳಲ್ಲಿ ಒಬ್ಬ ಸಂಬಂಧಿಯಾಗಿ ನಾನು ದುಃಖ, ಕೋಪ ಹಾಗೂ ಗಾಢವಾದ ನೋವಿನೊಂದಿಗೆ ದಿಕ್ಕೆಟ್ಟಿದ್ದೇನೆ. ಈ ದುರಂತ ನಮ್ಮ ಕುಟುಂಬಗಳನ್ನು ಛಿದ್ರಗೊಳಿಸಿದೆ; ಮಾತ್ರವಲ್ಲ, ವಯನಾಡ್‌ನಂತಹ ದುರ್ಬಲ ಪ್ರದೇಶಗಳಲ್ಲಿ ವಾಸಿಸುವವರ ಸುರಕ್ಷತೆ ಮತ್ತು ಭವಿಷ್ಯದ ಬಗ್ಗೆ ಗಂಭೀರ ಕಾಳಜಿಯನ್ನು ತೋರಬೇಕಾದ ಅನಿವಾರ್ಯತೆಯನ್ನು ಹುಟ್ಟುಹಾಕಿದೆ,ʼ ಎಂದು ಮೂಸಾ ಕುಂಚಿ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಅನಾಹುತ ತಡೆಗೆ ಮುಂಜಾಗ್ರತಾ ಕ್ರಮ ಅಗತ್ಯ

ಈ ಭೂಕುಸಿತ ದುರಂತ, ಈ ಪ್ರದೇಶದಲ್ಲಿ ವಿಪತ್ತು ನಿರ್ವಹಣೆ ಮತ್ತು ಮುಂಜಾಗ್ರತೆಯ ಅಗತ್ಯವನ್ನು ಎತ್ತಿ ತೋರಿಸಿದೆ ಎಂದು ಅಬ್ದುಲ್ ರಜಾಕ್ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ʻಇಂತಹ ಅನಾಹುತಗಳು ಸಂಭವಿಸಿದ ಬಳಿಕ ಅವುಗಳಿಗೆ ಪ್ರತಿಕ್ರಿಯಿಸುವುದಷ್ಟೇ ಸಾಕಾಗುವುದಿಲ್ಲ; ಅಂತಹ ದುರಂತಗಳು ಸಂಭವಿಸದಂತೆ ತಡೆಗಟ್ಟಲು ಪೂರ್ವಭಾವಿ ಕ್ರಮಗಳು ಬೇಕಾಗುತ್ತವೆ. ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳು ಭೂಕುಸಿತ ಸಂಭವನೀಯ ಪ್ರದೇಶಗಳ ನಿವಾಸಿಗಳ ಸುರಕ್ಷತೆಗೆ ಆದ್ಯತೆ ನೀಡಬೇಕು. ಸಮರ್ಪಕ ಒಳಚರಂಡಿ ವ್ಯವಸ್ಥೆಗಳನ್ನು ಖಾತ್ರಿಗೊಳಿಸಬೇಕು, ಸೂಕ್ಷ್ಮ ಪ್ರದೇಶಗಳಲ್ಲಿ ನಿರ್ಮಾಣ ಚಟುವಟಿಕೆಗಳಿಗೆ ಕಟ್ಟುನಿಟ್ಟು ನಿಯಮ ಜಾರಿ ಖಾತ್ರಿಗೊಳಿಸಬೇಕು ಮತ್ತು ಪರಿಸರ ಮತ್ತು ನದಿಗಳ ಸಂರಕ್ಷಣೆಯ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೊಳಿಸಬೇಕು ಮತ್ತು ಮಣ್ಣಿನ ಸವೆತ ತಡೆಗಟ್ಟುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವ ನೈಸರ್ಗಿಕ ಸಸ್ಯವರ್ಗವನ್ನು ಸಂರಕ್ಷಿಸಬೇಕು, ಇದೆಲ್ಲವನ್ನೂ ಮಾಡದೇ ಹೋದರೆ ನಮಗೆ ಉಳಿಗಾಲವಿಲ್ಲ ಎಂಬುದನ್ನು ಈ ದುರಂತ ಸಾಬೀತುಮಾಡಿದೆʼ ಎಂದು ಹೇಳಿದರು. 

ʻವಯನಾಡಿನ ಭೂಕುಸಿತ ನಮ್ಮ ಅಸ್ತಿತ್ವ ಎಷ್ಟು ದುರ್ಬಲವಾದುದು ಎಂಬುದರ ನಿದರ್ಶನವಾಗಿದೆ ಮತ್ತು ನಮ್ಮ ಸಮುದಾಯಗಳನ್ನು ರಕ್ಷಿಸಲು ಸಮಗ್ರ ಕ್ರಮಗಳ ತುರ್ತು ಅಗತ್ಯವನ್ನು ನೆನಪಿಸುತ್ತದೆ. ಈ ಅಪಾರ ದುಃಖ ಮತ್ತು ಅಗಲಿಕೆಯ ನೋವನ್ನು ಹಾದುಹೋಗುವಾಗ ನಾವು ಸುರಕ್ಷಿತವಾದ ಮತ್ತು ಭದ್ರ ಭವಿಷ್ಯಕ್ಕಾಗಿ ನಾವು ಶ್ರಮಿಸೋಣ. ಕಳೆದುಕೊಂಡ ನಮ್ಮ ಪ್ರೀತಿಪಾತ್ರರ ನೆನಪುಗಳು ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತವೆ ಮತ್ತು ಅವರ ಸ್ಮರಣೆಯಲ್ಲಿ ನಾವು ಬದಲಾವಣೆಗೆ ಒತ್ತಾಯಿಸಬೇಕು. ಇಂಥ ದುರಂತ ಮತ್ತೆ ಸಂಭವಿಸದಂತೆ ನೋಡಿಕೊಳ್ಳಬೇಕು,ʼ ಎಂದು ರಜಾಕ್ ಮಾರ್ಮಿಕ ಮಾತುಗಳು ಆಡಿದರು.

Tags:    

Similar News