Wayanad by-election| ಪ್ರಿಯಾಂಕಾಗೆ ದಾಖಲೆ ಅಂತರದಿಂದ ಗೆಲುವು-ಕಾಂಗ್ರೆಸ್

Update: 2024-09-25 09:19 GMT

ವಯನಾಡ್: ರಾಹುಲ್ ಗಾಂಧಿ ಅವರಿಂದ ತೆರವಾದ ವಯನಾಡ್ ಲೋಕಸಭೆ ಕ್ಷೇತ್ರದಲ್ಲಿ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ದಾಖಲೆ ಅಂತರದಿಂದ ಗೆಲ್ಲುತ್ತಾರೆ ಎಂದು ಕೇರಳದ ಕಾಂಗ್ರೆಸ್ ಬುಧವಾರ ವಿಶ್ವಾಸ ವ್ಯಕ್ತಪಡಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಈ ಕ್ಷೇತ್ರದಲ್ಲಿ ತಮ್ಮ ಪಕ್ಷ ಗೆಲುವು ಸಾಧಿಸುವ ವಿಶ್ವಾಸವಿದೆ. ಪಕ್ಷದ ನಾಯಕತ್ವ ಮತ್ತು ಕಾರ್ಯಕರ್ತರು ಚುನಾವಣೆಗೆ ಸಿದ್ಧತೆ ಆರಂಭಿಸಿದ್ದಾರೆ. ಆದರೆ, ವಯನಾಡಿನಲ್ಲಿ ವಿನಾಶಕಾರಿ ಭೂಕುಸಿತ ಸಂಭವಿಸಿರುವುದರಿಂದ, ಅಂತಹ ಪ್ರದೇಶಗಳಲ್ಲಿ ಪಕ್ಷ ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮ ನಡೆಸುವುದಿಲ್ಲ ಎಂದು ಹೇಳಿದರು. 

ಚುನಾವಣೆ ಘೋಷಣೆಯಾದ ಬಳಿಕ ಕಾಂಗ್ರೆಸ್ ಮತ್ತು ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಕಾರ್ಯಕರ್ತರು ವಿವಿಧ ಕಾರ್ಯ ಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಕಾನೂನಿನ ಪ್ರಕಾರ, ಆರು ತಿಂಗಳೊಳಗೆ ಉಪಚುನಾವಣೆ ನಡೆಸಬೇಕಿದ್ದು, ಗಡುವು ನವೆಂಬರ್‌ನಲ್ಲಿ ಕೊನೆಗೊಳ್ಳಲಿದೆ. ಹಾಗಾಗಿ ನಾವು ಚುನಾವಣೆಗೆ ಸಿದ್ಧರಿದ್ದೇವೆ ಎಂದರು. 

ಪ್ರಶ್ನೆಯೊಂದಕ್ಕೆ ಉತ್ತರಿಸಿ, ಕ್ಷೇತ್ರದಲ್ಲಿ ಪ್ರಚಾರದಲ್ಲಿ ಪಾಲ್ಗೊಂಡಿರುವಾಗ ಅವರು ಬೇರೆ ರಾಜ್ಯಗಳಿಗೂ ಭೇಟಿ ನೀಡಬೇಕಾಗಬಹುದು ಎಂದು ಹೇಳಿದರು. 

ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರವನ್ನು ಉಳಿಸಿಕೊಳ್ಳಲಿದ್ದು, ಪ್ರಿಯಾಂಕಾ ಅವರು ವಯನಾಡ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಜೂನ್‌ನಲ್ಲಿ ಹೇಳಿದ್ದರು.

ಜೂನ್ 4 ರಂದು ಲೋಕಸಭೆ ಫಲಿತಾಂಶ ಪ್ರಕಟಗೊಂಡ ಬಳಿಕ 14 ದಿನಗಳಲ್ಲಿ ರಾಹುಲ್‌ ಅವರು ಒಂದು ಕ್ಷೇತ್ರವನ್ನು ಬಿಟ್ಟುಕೊಡಬೇಕಿತ್ತು. 

Tags:    

Similar News