ಮಕ್ಕಳ ಅಶ್ಲೀಲ ಚಿತ್ರಗಳ ವೀಕ್ಷಣೆ, ಡೌನ್‌ಲೋಡ್ ಅಪರಾಧ: ಸುಪ್ರೀಂಕೋರ್ಟ್‌

ಮಕ್ಕಳ ಅಶ್ಲೀಲ ಚಿತ್ರಗಳ ಡೌನ್‌ಲೋಡ್, ವೀಕ್ಷಣೆ ಅಪರಾಧವಲ್ಲ ಎಂಬ ಮದ್ರಾಸ್ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.

Update: 2024-09-23 07:10 GMT

ಮಕ್ಕಳ ಅಶ್ಲೀಲ ಚಿತ್ರಗಳ ವೀಕ್ಷಣೆ ಮತ್ತು ಡೌನ್‌ಲೋಡ್ ಮಾಡುವುದು ಪೋಕ್ಸೊ ಹಾಗೂ ಐಟಿ ಕಾನೂನಿನ ಪ್ರಕಾರ ಅಪರಾಧ ಎಂದು ಸುಪ್ರೀಂ ಕೋರ್ಟ್ ಸೋಮವಾರ (ಸೆ.23) ಹೇಳಿದೆ. 

ಮಕ್ಕಳ ಅಶ್ಲೀಲ ಚಿತ್ರಗಳ ಡೌನ್‌ಲೋಡ್ ಮಾಡುವಿಕೆ ಮತ್ತು ವೀಕ್ಷಣೆ ಅಪರಾಧವಲ್ಲ ಎಂಬ ಮದ್ರಾಸ್ ಹೈಕೋರ್ಟ್ ಆದೇಶವನ್ನು ತಳ್ಳಿಹಾಕಿರುವ ಸುಪ್ರೀಂ ಕೋರ್ಟ್, ಮಕ್ಕಳ ಅಶ್ಲೀಲ ಚಿತ್ರಗಳು ಮತ್ತು ಅದರ ಕಾನೂನು ಪರಿಣಾಮಗಳ ಕುರಿತು ನ್ಯಾಯಾಲಯ ಮಾರ್ಗಸೂಚಿಗಳನ್ನು ರೂಪಿಸಿದೆ. 

ಮದ್ರಾಸ್ ಹೈಕೋರ್ಟಿನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮು.ನ್ಯಾ.ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠ ಈ ತೀರ್ಪು ನೀಡಿದೆ. 

ತನ್ನ ಮೊಬೈಲ್ ಫೋನ್‌ನಲ್ಲಿ ಮಕ್ಕಳಿರುವ ಅಶ್ಲೀಲ ವಿಷಯವನ್ನು ಡೌನ್‌ಲೋಡ್ ಮಾಡಿದ ಆರೋಪದ ಮೇಲೆ 28 ವರ್ಷದ ವ್ಯಕ್ತಿ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ಹೈಕೋರ್ಟ್ ಜನವರಿ 11 ರಂದು ರದ್ದುಗೊಳಿಸಿತ್ತು.

ʻಇತ್ತೀಚೆಗೆ ಮಕ್ಕಳು ಅಶ್ಲೀಲ ಚಿತ್ರಗಳನ್ನು ನೋಡುವ ಗಂಭೀರ ಸಮಸ್ಯೆಯಿಂದ ತೊಳಲುತ್ತಿದ್ದಾರೆ. ಅವರನ್ನು ಶಿಕ್ಷಿಸುವ ಬದಲು ಸಮಾಜ ಅವರಿಗೆ ಶಿಕ್ಷಣ ನೀಡುವ ಪ್ರಬುದ್ಧತೆ ಬೆಳೆಸಬೇಕು,ʼ ಎಂದು ಹೈಕೋರ್ಟ್ ಹೇಳಿತ್ತು.

ಫರೀದಾಬಾದ್ ಮೂಲದ ಎನ್‌ಜಿಒ ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ ಅಲಯನ್ಸ್ ಮತ್ತು ನವದೆಹಲಿ ಮೂಲದ ಬಚ್‌ಪನ್ ಬಚಾವೋ ಆಂದೋಲನ ಪರ ವಕೀಲ ಎಚ್‌.ಎಸ್. ಫೂಲ್ಕಾ ಅವರ ʻಹೈಕೋರ್ಟ್ ತೀರ್ಪು ಕಾನೂನಿಗೆ ವಿರುದ್ಧವಾಗಿದೆʼ ಎಂದ ಸಲ್ಲಿಕೆಯನ್ನು ಸುಪ್ರೀಂ ಕೋರ್ಟ್ ಮನ್ನಿಸಿತು. 

Tags:    

Similar News