ಕೇಜ್ರಿವಾಲ್ ಸಹಾಯಕನ ವಿರುದ್ಧ ದೂರು ನೀಡಿದ್ದರಿಂದ ಬಿಜೆಪಿ ಏಜೆಂಟ್ ಎಂಬ ಹಣೆಪಟ್ಟಿ: ಮಲಿವಾಲ್
ʻಹಲ್ಲೆ ಬಗ್ಗೆ ದೂರು ದಾಖಲಿಸಬೇಡಿ. ಬಿಭವ್ ವಿರುದ್ಧ ಕೇಜ್ರಿವಾಲ್ ಅವರು ಖಂಡಿತವಾಗಿಯೂ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಪಕ್ಷ ಹೇಳಿತ್ತುʼ ಎಂದು ರಾಜ್ಯಸಭೆ ಸದಸ್ಯೆ ಸ್ವಾತಿ ಮಲಿವಾಲ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ʻದೂರು ನೀಡಿದರೆ ಪಕ್ಷ ನಿಮಗೆ ಬಿಜೆಪಿ ಏಜೆಂಟ್ ಎಂಬ ಹಣೆಪಟ್ಟಿ ಹಚ್ಚುತ್ತದೆ ಮತ್ತು ಯಾರೂ ನಿಮ್ಮೊಂದಿಗೆ ನಿಲ್ಲುವುದಿಲ್ಲ ಎಂದು ಹೇಳಿದ್ದರು. ಆರೋಪ ಮಾಡಿದಾಗ ಆರಂಭದಲ್ಲಿ ಪಕ್ಷ ತನ್ನನ್ನು ಬೆಂಬಲಿಸಿತ್ತು. ಆದರೆ, ಆನಂತರ ದೆಹಲಿಯಲ್ಲಿ ಲೋಕಸಭೆ ಚುನಾವಣೆಗೆ ಮುನ್ನ ಕೇಜ್ರಿವಾಲ್ ಅವರನ್ನು ಸಿಕ್ಕಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿತು. ಘಟನೆ ನಂತರ ಎಎಪಿ ಸಂಸದ ಸಂಜಯ್ ಸಿಂಗ್ ತಮ್ಮನ್ನು ಮನೆಯಲ್ಲಿ ಭೇಟಿಯಾದರು. ಕೇಜ್ರಿವಾಲ್ ತಮ್ಮ ಸಹಾಯಕನ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎಂದು ಭರವಸೆ ನೀಡಿದರು. ಮರುದಿನ ಪತ್ರಿಕಾಗೋಷ್ಠಿ ನಡೆಸಿ, ಸ್ವಾತಿ ಈ ದೇಶದ ಮಹಿಳೆಯರ ಧ್ವನಿಯಾಗಿದ್ದಾರೆ ಮತ್ತು ಅವರ ಮೇಲೆ ಹಲ್ಲೆ ನಡೆದಿದೆ,ʼ ಎಂದು ಹೇಳಿದ್ದರು.
ಆದರೆ, ಲಖ್ನೋಗೆ ಕೇಜ್ರಿವಾಲ್ ಅವರು ಬಿಭವ್ ಜೊತೆಗೆ ತೆರಳಿ, ಅಖಿಲೇಶ್ ಯಾದವ್ ಒಟ್ಟಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ದೂರು ನೀಡಿದರೆ ಇಡೀ ಪಕ್ಷ ನಿಮ್ಮನ್ನು ಪ್ರತ್ಯೇಕಿಸುತ್ತದೆ ಎಂದು ಹೇಳಲಾಯಿತು.
ಪ್ರತಿದಿನ ಚಾರಿತ್ರ್ಯ ಹತ್ಯೆ: ʻದೂರು ದಾಖಲಿಸಿದ ದಿನ ನನ್ನ ಮನಸ್ಸಿಗೆ ಬಂದದ್ದು ನನ್ನ ಬಳಿಗೆ ಬರುವ ಲಕ್ಷಾಂತರ ಹುಡುಗಿಯರು. ನಾನು ಅವರಿಗೆ ಧೈರ್ಯ ತುಂಬುತ್ತಿದ್ದೆ ಮತ್ತು ಏನೇ ಆಗಲಿ, ನೀವು ಹೋರಾಡಬೇಕು. ಇಡೀ ಜಗತ್ತು ನಿಮ್ಮ ವಿರುದ್ಧ ನಿಂತರೂ ನೀವು ಹೋರಾಡಬೇಕು ಎಂದು ಹೇಳುತ್ತಿದ್ದೆ. ಇದು ಕ್ರಿಮಿನಲ್ ಕೇಸ್ ಆಗಿರುವುದರಿಂದ, ಔಪಚಾರಿಕ ದೂರು ದಾಖಲಿಸಬೇಕು. ಇದು ಪಕ್ಷ ತಳ್ಳಿ ಹಾಕಬಹುದಾದ ಪ್ರಕರಣವಲ್ಲ. ಆದ್ದರಿಂದ ದೂರು ನೀಡಿದ್ದೇನೆ,ʼ ಎಂದು ದೆಹಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಹೇಳಿದರು.
ʻದೂರು ದಾಖಲಿಸಿದ ನಂತರ ಅಲ್ಲೋಕಲ್ಲೋಲ ಉಂಟಾಯಿತು. ಇಡೀ ಪಕ್ಷ ತಮ್ಮ ವಿರುದ್ಧ ನಿಂತಿತು ಮತ್ತು ಪ್ರತಿದಿನ ಪತ್ರಿಕಾಗೋಷ್ಠಿ ನಡೆಸಲಾಯಿತು. ಪ್ರತಿದಿನ ನನ್ನ ಚಾರಿತ್ರ್ಯ ಹರಣ ಮಾಡಲಾಗುತ್ತಿದೆ. ನಾನು ಬಿಜೆಪಿಯ ಏಜೆಂಟ್ ಎಂದು ಹೇಳುತ್ತಿದ್ದಾರೆ,ʼ ಎಂದು ಹೇಳಿದರು.
ಮುಕ್ತ ಮತ್ತು ನ್ಯಾಯಬದ್ಧ ಪೊಲೀಸ್ ತನಿಖೆಯನ್ನು ಬೆಂಬಲಿಸುತ್ತೇನೆ ಎಂಬ ಕೇಜ್ರಿವಾಲ್ ಹೇಳಿಕೆಗೆ ಪ್ರತಿಕ್ರಿಯಿಸಿ, ʻಅವರು ನ್ಯಾಯಾಲಯ ದ ಹೊರಗೆ ವಿಚಾರಣೆ ನಡೆಸಿದರು ಮತ್ತು ನಾನು ತಪ್ಪಿತಸ್ಥೆ ಎಂದು ಹೇಳಿದರು. ಪಕ್ಷ ನನ್ನನ್ನು ಅಪರಾಧಿ ಎಂದು ನಿರ್ಣಯಿಸಲು ಪ್ರಯತ್ನಿ ಸುತ್ತಿದೆ. ಹೀಗಾಗಿ, ಮುಕ್ತ ಮತ್ತು ನ್ಯಾಯಸಮ್ಮತ ತನಿಖೆ ನಡೆಯಬೇಕು ಎಂದು ಅವರು ಹೇಗೆ ಹೇಳುತ್ತಾರೆ?,ʼ ಎಂದು ಪ್ರಶ್ನಿಸಿ ದರು.
ಅತಿಶಿ ಆರೋಪಕ್ಕೆ ಪ್ರತಿಕ್ರಿಯೆ: ಸ್ವಾತಿ ಅವರನ್ನು 2016ರ ಭ್ರಷ್ಟಾಚಾರ ಪ್ರಕರಣದಲ್ಲಿ ಬಿಜೆಪಿ ಬ್ಲ್ಯಾಕ್‌ಮೇಲ್ ಮಾಡುತ್ತಿದೆ. ಮುಖ್ಯ ಮಂತ್ರಿ ವಿರುದ್ಧದ ಪಿತೂರಿಯ ಭಾಗವಾಗಲು ಒತ್ತಾಯಿಸಲಾಗುತ್ತಿದೆ ಎಂಬ ದೆಹಲಿ ಸಚಿವ ಅತಿಶಿ ಆರೋಪಕ್ಕೆ ಪ್ರತಿಕ್ರಿಯಿಸಿ, ʻ2016ರಲ್ಲಿ ನನ್ನ ವಿರುದ್ಧ ದಾಖಲಾದ ಪ್ರಕರಣ ಸುಳ್ಳು ಪ್ರಕರಣ. 2017 ರಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಪ್ರಕರಣದಲ್ಲಿ ನನ್ನನ್ನು ಬಂಧಿಸಿಲ್ಲ ಮತ್ತು ಆರೋಪಪಟ್ಟಿ ಸಲ್ಲಿಸಿರುವುದರಿಂದ ಎಂದಿಗೂ ಬಂಧಿಸಲಾಗುವುದಿಲ್ಲ. ಒಂದೂವರೆ ವರ್ಷಗಳ ಹಿಂದೆ ಹೈಕೋರ್ಟ್ ಈ ಪ್ರಕರಣಕ್ಕೆ ತಡೆ ನೀಡಿದೆ. ಯಾವುದೇ ವಹಿವಾಟು ನಡೆಯದೆ ಇರುವುದರಿಂದ, ಭ್ರಷ್ಟಾಚಾರ ನಡೆಯುವುದು ಹೇಗೆ? ಹೈಕೋರ್ಟ್ ಈಗಾಗಲೇ ತಡೆ ನೀಡಿರುವ ಈ ಪ್ರಕರಣದಲ್ಲಿ ನಾನು ಹೆದರಬೇಕೇ?,ʼ ಎಂದು ಪ್ರಶ್ನಿಸಿದರು.