ವಕ್ಫ್ ತಿದ್ದುಪಡಿ ಮಸೂದೆ | ಪರಿಶೀಲನೆಗೆ ಜೆಪಿಸಿ ರಚನೆ: ಓಂ ಬಿರ್ಲಾ

Update: 2024-08-08 12:24 GMT

ವಕ್ಫ್ ತಿದ್ದುಪಡಿ ಮಸೂದೆ 2024 ರ ಹೆಚ್ಚಿನ ಪರಿಶೀಲನೆಗೆ ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯನ್ನು ರಚಿಸಲಾಗುತ್ತದೆ ಮತ್ತು ಎಲ್ಲಾ ರಾಜಕೀಯ ಪಕ್ಷಗಳ ನಾಯಕರೊಂದಿಗೆ ಸಮಾಲೋಚನೆ ನಡೆಸಲಾಗುತ್ತದೆ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.

ಮಸೂದೆಯನ್ನು ಲೋಕಸಭೆಯಲ್ಲಿ ಗುರುವಾರ ಧ್ವನಿಮತದ ಮೂಲಕ ಮಂಡಿಸಲಾಯಿತು. ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಬುಧವಾರ ಮಸೂದೆಯನ್ನು ಮಂಡಿಸಲು ಪ್ರಯತ್ನಿಸಿದಾಗ, ವಿರೋಧ ಪಕ್ಷದ ಸಂಸದರು ತಡೆಯಲು ಪ್ರಯತ್ನಿಸಿದರು. ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ ಮಸೂದೆಯನ್ನು ವಿರೋಧಿಸಿ, ಇದು ಭಾರತೀಯ ಸಂವಿಧಾನದ 26 ನೇ ವಿಧಿಯ ಉಲ್ಲಂಘನೆ ಎಂದು ಹೇಳಿದರು. 

ವಕ್ಫ್ ಕೌನ್ಸಿಲ್‌ನ ಸದಸ್ಯರಾಗಿ ಮುಸ್ಲಿಮೇತರರಿಗೆ ಅವಕಾಶ ನೀಡುವ ನಿಯಮವನ್ನು ಸರ್ಕಾರ ತಂದಿದೆ. ರಾಮಮಂದಿರ ಟ್ರಸ್ಟ್‌ನಲ್ಲಿ ಹಿಂದೂಯೇತರರನ್ನು ಸರ್ಕಾರ ಸಹಿಸಿಕೊಳ್ಳುತ್ತದೆಯೇ ಎಂದು ವೇಣುಗೋಪಾಲ್ ಪ್ರಶ್ನಿಸಿದರು.

ಮತದಾರರ ಧ್ರುವೀಕರಣ ಉದ್ದೇಶ: ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮತ ದಾರರನ್ನು ಧ್ರುವೀಕರಿಸುವ ಉದ್ಧೇಶದಿಂದ ಸರ್ಕಾರ ಈ ಹಂತದಲ್ಲಿ ಮಸೂದೆಯನ್ನು ತಂದಿದೆ. ಈ ಮಸೂದೆ ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ದಾಳಿ. ರಾಜ್ಯಗಳ ಜೊತೆಗೆ ಸಮಾಲೋಚನೆ ನಡೆಸದೆ ಇರುವುದರಿಂದ ಒಕ್ಕೂಟದ ಮೇಲಿನ ದಾಳಿ ಎಂದು ಟೀಕಿಸಿದರು.-

ಮಸೂದೆಯ ನಿಬಂಧನೆಗಳು ಪ್ರತಿಯೊಂದು ಮುಸ್ಲಿಂ/ವಕ್ಫ್ ಆಸ್ತಿಯ ಮೇಲೆ ಮಾಲೀಕತ್ವದ ವಿವಾದಗಳನ್ನು ಸೃಷ್ಟಿಸುತ್ತದೆ ಮತ್ತು ತಿದ್ದುಪಡಿಯ ಹಿಂದಿನ ಉದ್ದೇಶವು ಉತ್ತಮವಾಗಿಲ್ಲ ಎಂದು ವೇಣುಗೋಪಾಲ್ ಹೇಳಿದರು.

ಮುಸ್ಲಿಮರನ್ನು ಪ್ರತ್ಯೇಕಿಸುವ ಪ್ರಯತ್ನ: ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಮಸೀದಿಯ ಧರ್ಮಗುರು ಹಾಗೂ ರಾಂಪುರದ ಸಮಾಜವಾದಿ ಪಕ್ಷದ ಸಂಸದ ಮೊಹಿಬುಲ್ಲಾ ಕೂಡ ಮಸೂದೆಯನ್ನು ವಿರೋಧಿಸಿದರು. ʻಮಸೂದೆಯು ಸಂವಿಧಾನದ 26 ನೇ ವಿಧಿ ಮತ್ತು ಇತರ ಧರ್ಮಗಳ ಆಸ್ತಿಯನ್ನು ನಿಯಂತ್ರಿಸುವ ಇಂಥದ್ದೇ ಕಾನೂನುಗಳಿಗೆ ವಿರುದ್ಧವಾಗಿದೆ,ʼ ಎಂದು ಹೇಳಿದರು.

ʻಹಿಂದುಗಳು, ಸಿಖ್ಖರು ಅಥವಾ ಕ್ರಿಶ್ಚಿಯನ್ನರ ಧಾರ್ಮಿಕ ಆಸ್ತಿಗಳನ್ನು ನಿಯಂತ್ರಿಸುವ ಕಾನೂನುಗಳು ಬೇರೆ ಧರ್ಮದ ಸದಸ್ಯರು ತಮ್ಮ ಟ್ರಸ್ಟ್‌ನ ಭಾಗವಾಗಿರಲು ಅನುಮತಿಸುವುದಿಲ್ಲ.ಆದರೆ, ಮುಸ್ಲಿಮರನ್ನು ಪ್ರತ್ಯೇಕಿಸಲಾಗುತ್ತಿದೆ,ʼ ಎಂದು ಹೇಳಿದರು. 

ಟಿಎಂಸಿ ವಿರೋಧ: ಟಿಎಂಸಿ ಸಂಸದ ಸುದೀಪ್ ಬಂಡೋಪಾಧ್ಯಾಯ ಮಸೂದೆಯನ್ನು ವಿರೋಧಿಸಿ ಮಾತನಾಡಿ,ʻ ಮಸೂದೆ ಸಂವಿಧಾನದ 14, 25 ಮತ್ತು 26 ನೇ ಪರಿಚ್ಛೇದ ಮತ್ತು ಏಳನೇ ಪರಿಶಿಷ್ಟದ ಉಲ್ಲಂಘನೆಯಾಗಿದೆ. ಸಂವಿಧಾನ ವಿರೋಧಿ, ಒಕ್ಕೂಟ ತತ್ವದ ವಿರೋಧಿ ಮತ್ತು ವಿಭಜನೆ ನೀತಿ,ʼ ಎಂದು ಹೇಳಿದರು.


Tags:    

Similar News