ಎನ್‌ಡಿಎ ಅಧಿಕಾರಕ್ಕೆ ಬಂದರೆ ಕೃಷಿ ಸಚಿವನಾಗಬೇಕು ಎಂದುಕೊಂಡಿದ್ದೇನೆ: ಎಚ್‌ಡಿಕೆ

ಚುನಾವಣೋತ್ತರ ಮೈತ್ರಿ ಮುಂದುವರಿಕೆಯು ಬಿಜೆಪಿ ತಮ್ಮ ಪಕ್ಷಕ್ಕೆ ನೀಡುವ ಸ್ಥಾನಮಾನವನ್ನು ಅವಲಂಬಿಸಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Update: 2024-04-05 14:12 GMT

ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬಂದರೆ, ಕೃಷಿ ಸಚಿನಾಗಬೇಕು ಎಂದುಕೊಂಡಿದ್ದೇನೆ ಎಂದು ಜೆಡಿಎಸ್‌ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. 

ಗುರುವಾರ ಮಂಡ್ಯದಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿ, ಚುನಾವಣೋತ್ತರ ಮೈತ್ರಿ ಮುಂದುವರಿಕೆಯು ಬಿಜೆಪಿ ತಮ್ಮ ಪಕ್ಷಕ್ಕೆ ನೀಡುವ ಸ್ಥಾನಮಾನವನ್ನು ಅವಲಂಬಿಸಿದೆ ಎಂದು ಹೇಳಿದ್ದಾರೆ.

ʻನಾವು ಎನ್‌ಡಿಎ ಭಾಗವಾಗುವುದು ಭವಿಷ್ಯದಲ್ಲಿ ಅವರು ನಮ್ಮ ಪಕ್ಷದ ನಾಯಕರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿದೆ. ನಾವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ ಮತ್ತು ಬಿಜೆಪಿಯೊಂದಿಗೆ ದೀರ್ಘಕಾಲದ ಸಂಬಂಧವನ್ನು ಬಯಸುತ್ತೇವೆ. ಆದರೆ, ಅಂತಿಮವಾಗಿ ಬಿಜೆಪಿಯಿಂದ ನಮಗೆ ಎಷ್ಟು ಗೌರವ ಸಿಗುತ್ತದೆ ಎಂಬುದರ ಆಧಾರದ ಮೇಲೆ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆʼ ಎಂದರು.

ಕಳೆದ ಸೆಪ್ಟೆಂಬರ್‌ನಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ನೇತೃತ್ವದ ಜೆಡಿಎಸ್‌, ಬಿಜೆಪಿ ನೇತೃತ್ವದ ಎನ್‌ಡಿಎ ಜೊತೆ ಮೈತ್ರಿ ಮಾಡಿಕೊಂಡಿತ್ತು. ಸೀಟು ಹಂಚಿಕೆ ಒಪ್ಪಂದದ ಭಾಗವಾಗಿ, ರಾಜ್ಯದ 28 ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಮೂರು ಕ್ಷೇತ್ರ (ಮಂಡ್ಯ, ಹಾಸನ ಮತ್ತು ಕೋಲಾರ)ದಲ್ಲಿ ಜೆಡಿಎಸ್ ಸ್ಪರ್ಧಿಸಲಿದೆ.

ಕೃಷಿ ಖಾತೆಯ ಮಹತ್ವಾಕಾಂಕ್ಷೆ

ʻಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶ್ವಾಸವಿದ್ದು, ಕೇಂದ್ರದಲ್ಲಿ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬಂದರೆ ಕೃಷಿ ಸಚಿವರಾಗಲು ಬಯಸುತ್ತೇನೆʼ ಎಂದು ಹೇಳಿದರು.

‘ನನ್ನನ್ನು ಕೇಂದ್ರ ಸಚಿವರನ್ನಾಗಿ ನೋಡಬೇಕು ಎನ್ನುವುದು ಕೇವಲ ಮಂಡ್ಯದ ಜನರ ಆಕಾಂಕ್ಷೆ ಮಾತ್ರವಲ್ಲ; ನನ್ನ ಬಿಜೆಪಿ ಗೆಳೆಯರೂ ಕೂಡ ನಾನು ಸಚಿವರಾದರೆ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂದು ಭಾವಿಸಿದ್ದಾರೆ. ನಾನು ಕೃಷಿ ಹಿನ್ನೆಲೆಯಿಂದ ಬಂದಿದ್ದೇನೆ ಮತ್ತು ಅವಕಾಶ ಕೊಟ್ಟರೆ ಕೃಷಿ ಸಚಿವನಾಗಿ ಸರ್ಕಾರಕ್ಕೆ ಒಳ್ಳೆಯ ಹೆಸರು ತಂದುಕೊಡುತ್ತೇನೆʼ ಎಂದರು.

ʻನಾವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದು ಕರ್ನಾಟಕದ ಉತ್ತಮ ಭವಿಷ್ಯಕ್ಕಾಗಿ ಹೋರಾಡಲು. ನಮ್ಮ ರಾಜಕೀಯ ಉಳಿವಿಗಾಗಿ ಅಲ್ಲ. ಮೈತ್ರಿ ಬಿಜೆಪಿ ಮತ್ತು ಜೆಡಿಎಸ್ ಎರಡಕ್ಕೂ ಪ್ರಯೋಜನಕಾರಿಯಾಗಲಿದೆ. ನಮ್ಮ ನಡುವಿನ ಮತ ವಿಭಜನೆಯ ಲಾಭವನ್ನು ಕಾಂಗ್ರೆಸ್ ಪಡೆದುಕೊಂಡಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಡಿದ ತಪ್ಪನ್ನು ಅರಿತುಕೊಂಡಿದ್ದೇವೆ. ಒಟ್ಟಾಗಿ ಕಾಂಗ್ರೆಸ್ ವಿರುದ್ಧ ಹೋರಾಡಲು ನಿರ್ಧರಿಸಿದ್ದೇವೆʼ ಎಂದು ಹೇಳಿದರು.

'ಬಿಜೆಪಿ ಸಹಜ ಮಿತ್ರ'

ʻಜೆಡಿಎಸ್‌ನ ಸಹಜ ಮಿತ್ರ ಪಕ್ಷ ಬಿಜೆಪಿಯೇ ಹೊರತು ಕಾಂಗ್ರೆಸ್ ಅಲ್ಲ. ಕಳೆದ 50 ವರ್ಷಗಳಿಂದ ನಮ್ಮ ಪಕ್ಷ ಕಾಂಗ್ರೆಸ್‌ ವಿರುದ್ಧ ಹೋರಾಡುತ್ತಿದೆ. ಬಿಜೆಪಿಯೊಂದಿಗೆ ನಮ್ಮ ಕೊನೆಯ ಮೈತ್ರಿ (ಜನವರಿ 2006 ರಿಂದ 20 ತಿಂಗಳು) ಉತ್ತಮವಾಗಿತ್ತು. ಕೆಲವು ತಪ್ಪು ತಿಳಿವಳಿಕೆ ಮತ್ತು ಕೆಲವು ಕಿಡಿಗೇಡಿಗಳ ದುಷ್ಕೃತ್ಯಗಳಿಂದ ನಾವು ದೂರವಾಗಬೇಕಾಯಿತುʼ ಎಂದು ಹೇಳಿದರು.

ʻಎರಡೂ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಈಗ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ನಡುವೆ ಸಾಕಷ್ಟು ಸಕಾರಾತ್ಮಕ ಶಕ್ತಿ ಮತ್ತು ಸಮನ್ವಯತೆ ಇದೆ. ಹಾಗಾಗಿ ಎನ್‌ಡಿಎ ಮೈತ್ರಿಕೂಟ ರಾಜ್ಯದ 28 ಕ್ಷೇತ್ರಗಳಲ್ಲೂ ಗೆಲ್ಲಲಿದೆʼ ಎಂದು ಹೇಳಿದರು.

ʻಕಾಂಗ್ರೆಸ್ ತನ್ನ ಖಾತ್ರಿ ಯೋಜನೆಗಳಿಂದ ರಾಜ್ಯದ ಆರ್ಥಿಕತೆ ಅಸ್ತವ್ಯಸ್ತಗೊಂಡಿದೆ. ಸರ್ಕಾರದ ಬಳಿ ಬಂಡವಾಳ ಹೂಡಿಕೆಗೆ ಅಥವಾ ಅಭಿವೃದ್ಧಿಗೆ ಹಣವಿಲ್ಲ. ಹಣಕಾಸಿನ ನಿರ್ವಹಣೆಯಲ್ಲಿ ವಿಫಲರಾದ ಅವರು ಈಗ ಜಿಎಸ್‌ಟಿ ಮತ್ತು ಇತರ ಅನುದಾನ ನೀಡಿಲ್ಲ ಎಂದು ಕೇಂದ್ರದತ್ತ ಬೆರಳು ತೋರಿಸುತ್ತಿದ್ದಾರೆ,ʼ ಎಂದು ಆರೋಪಿಸಿದರು.

Tags:    

Similar News