ಮಹಾಯುತಿ V/S ಮಹಾ ವಿಕಾಸ್ ಅಘಾಡಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ: ಮತದಾನ ಆರಂಭ
ಮಹಾರಾಷ್ಟ್ರ ವಿಧಾನಸಭೆಯ 288 ವಿಧಾನಸಭಾ ಸ್ಥಾನಗಳಿಗೆ ಬುಧವಾರ ಮತದಾನ ಆರಂಭವಾಗಿದೆ. ಬೆಳಗ್ಗೆ 7ರಿಂದ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೆ ನಡೆಯಲಿದೆ.;
ಮಹಾರಾಷ್ಟ್ರ ವಿಧಾನಸಭೆಯ 288 ವಿಧಾನಸಭಾ ಸ್ಥಾನಗಳಿಗೆ ಬುಧವಾರ (ಇಂದು) ಮತದಾನ ಆರಂಭವಾಗಿದೆ. ಬೆಳಗ್ಗೆ 7ರಿಂದ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೆ ನಡೆಯಲಿದೆ.
ಮಹಾರಾಷ್ಟ್ರದಲ್ಲಿ, ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ಅಧಿಕಾರವನ್ನು ಉಳಿಸಿಕೊಳ್ಳಲು ಹಾಗೂ ಮಹಾ ವಿಕಾಸ್ ಅಘಾಡಿ (ಎಂವಿಎ) ಸಂಯೋಜನೆಯು ಅಧಿಕಾರದತ್ತ ನಿರೀಕ್ಷೆಯಲ್ಲಿದೆ.
ಇತ್ತೀಚಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಹಾಯುತಿ ಅನುಭವಿಸಿದ ಭಾರೀ ನಷ್ಟವನ್ನು ಮತ್ತೆ ಭರಿಸಲು ಸಾಧ್ಯವೇ ಎಂಬುದನ್ನು ಈ ಚುನಾವಣೆ ನಿರ್ಧರಿಸುತ್ತದೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 48 ಸ್ಥಾನಗಳಲ್ಲಿ ಎಂವಿಎ 30 ಮತ್ತು ಮಹಾಯುತಿ ಕೇವಲ 17 ಸ್ಥಾನಗಳನ್ನು ಗೆದ್ದಿದೆ.
ಶಿವಸೇನೆ ಮತ್ತು ಎನ್‌ಸಿಪಿಯ ಪ್ರತಿಸ್ಪರ್ಧಿ ಬಣಗಳಿಗೆ ಇದು ವಾಸ್ತವಿಕವಾಗಿ ಮಾಡು ಇಲ್ಲವೇ ಮಡಿ ಚುನಾವಣೆಯಾಗಿದೆ. ಏಕೆಂದರೆ ಇದು ಎರಡು ಪ್ರಾದೇಶಿಕ ಶಕ್ತಿಗಳು ಬೇರ್ಪಟ್ಟ ನಂತರದ ಮೊದಲ ವಿಧಾನಸಭಾ ಚುನಾವಣೆಯಾಗಿದೆ. ಶರದ್ ಪವಾರ್, ಉದ್ಧವ್ ಠಾಕ್ರೆ, ಅಜಿತ್ ಪವಾರ್ ಮತ್ತು ಏಕನಾಥ್ ಶಿಂಧೆ ಅವರಂತಹ ಉನ್ನತ ನಾಯಕರ ರಾಜಕೀಯ ಭವಿಷ್ಯವನ್ನು ಚುನಾವಣಾ ಫಲಿತಾಂಶ ನಿರ್ಧರಿಸುತ್ತದೆ.
ಈ ಚುನಾವಣೆಗಳು ರಾಷ್ಟ್ರ ರಾಜಕಾರಣದ ಮೇಲೂ ಪ್ರಭಾವ ಬೀರಲಿದ್ದು, ಮಹಾಯುತಿಯ ವಿಜಯವು ಕೇಂದ್ರದ ಎನ್‌ಡಿಎ ಸರ್ಕಾರಕ್ಕೆ ಶಕ್ತಿ ತುಂಬುವ ಸಾಧ್ಯತೆಯಿದೆ.
ಮಹಾರಾಷ್ಟ್ರದಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಶೇ.6.61ರಷ್ಟು ಮತದಾನವಾಗಿದೆ. ಗಡ್ಚಿರೋಲಿಯಲ್ಲಿ ಅತಿ ಹೆಚ್ಚು 12.33% ಮತ್ತು ಉಸ್ಮಾನಾಬಾದ್‌ನಲ್ಲಿ 4.89% ಕಡಿಮೆ ಮತದಾನವಾಗಿದೆ.
ಮಹಾರಾಷ್ಟ್ರ ವಿಧಾನಸಭೆಯ ಎಲ್ಲ 288 ಕ್ಷೇತ್ರಗಳಿಗೆ ಮತದಾನ ಆರಂಭವಾಗಿದೆ. 4,140 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 2019ರ ರಾಜ್ಯ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಈ ಬಾರಿ ಅಭ್ಯರ್ಥಿಗಳ ಸಂಖ್ಯೆ ಶೇ.28ರಷ್ಟು ಹೆಚ್ಚಿದೆ. ಈ ವರ್ಷ 4,136 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರೆ, 2019 ರಲ್ಲಿ ಈ ಸಂಖ್ಯೆ 3,239 ಆಗಿತ್ತು. ಈ ಪೈಕಿ 2,086 ಅಭ್ಯರ್ಥಿಗಳು ಸ್ವತಂತ್ರ ಅಭ್ಯರ್ಥಿಗಳಾಗಿದ್ದಾರೆ. 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಈ ಬಂಡಾಯ ಅಭ್ಯರ್ಥಿಗಳು ಮಹಾಯುತಿ ಮತ್ತು ಎಂವಿಎ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ, ಡಿಸಿಎಂ ದೇವೇಂದ್ರ ಫಡ್ನವೀಸ್, ಅಜಿತ್ ಪವಾರ್, ನಾನಾ ಪಟೋಲೆ, ಪೃಥ್ವಿರಾಜ್ ಚವಾಣ್, ರಾಧಾಕೃಷ್ಣ ವಿಖೆ ಪಾಟೀಲ್, ಬಾಳಾ ಸಾಹೇಬ್ ಥೋರಟ್, ನಸೀಮ್ ಖಾನ್, ಆದಿತ್ಯ ಠಾಕ್ರೆ, ಅಮಿತ್ ಠಾಕ್ರೆ, ನವಾಬ್ ಮಲಿಕ್ ಮತ್ತು ಜೀಶನ್ ಸಿದ್ದಿಕಿ ಅವರಂತಹ ದಿಗ್ಗಜರು ಚುನಾವಣಾ ಕಣದಲ್ಲಿದ್ದಾರೆ. ನವೆಂಬರ್ 23 ರಂದು ಫಲಿತಾಂಶ ಬರಲಿದೆ.
ವಿವಿಐಪಿಗಳ ದಂಡು
ಅನೇಕ ವಿವಿಐಪಿಗಳು ಮತ್ತು ಕ್ರಿಕೆಟ್-ಬಾಲಿವುಡ್ ಸೆಲೆಬ್ರಿಟಿಗಳು ಸಹ ಮತ ಚಲಾಯಿಸಲು ಮತಗಟ್ಟೆಗೆ ಆಗಮಿಸಿದರು. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಮ್ಮ ಪತ್ನಿಯೊಂದಿಗೆ ಮುಂಬೈನ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಕೂಡ ಮತಗಟ್ಟೆಗೆ ಆಗಮಿಸಿ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.
ಮತ ಚಲಾಯಿಸಿದ ಬಳಿಕ ಮಾತನಾಡಿದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, “ನಾನು ಬಹಳ ಸಮಯದಿಂದ ಭಾರತದ ಚುನಾವಣಾ ಆಯೋಗದ ಮುಖವಾಗಿದ್ದೇನೆ. ಮತದಾನ ಮಾಡಿ ಎಂಬ ಸಂದೇಶವನ್ನು ನಾನು ನೀಡುತ್ತಿದ್ದೇನೆ. ಇದು ನಮ್ಮ ಜವಾಬ್ದಾರಿ. ಎಲ್ಲರೂ ಹೊರಗೆ ಬಂದು ಮತ ಚಲಾಯಿಸುವಂತೆ ನಾನು ಮನವಿ ಮಾಡುತ್ತೇನೆ ಎಂದು ಅವರು ತಿಳಿಸಿದರು.
ಹಕ್ಕು ಚಲಾಯಿಸಲು ಮತಗಟ್ಟೆಗೆ ಬಂದ ತಾರೆಯರ ದಂಡು
ತಾರೆಯರ ನಗರಿ ಮುಂಬೈನಲ್ಲಿ ಮತದಾನದ ದಿನವಾದ ಇಂದು ಬೆಳಗ್ಗೆಯಿಂದಲೇ ಹಲವು ತಾರೆಯರು ತಮ್ಮ ಹಕ್ಕು ಚಲಾಯಿಸಲು ಸೆಲೆಬ್ರಿಟಿಗಳು ಕೂಡ ಬೆಳಗ್ಗೆಯಿಂದಲೇ ಮತಗಟ್ಟೆಗೆ ಆಗಮಿಸುತ್ತಿದ್ದಾರೆ. ಅಕ್ಷಯ್ ಕುಮಾರ್-ಫರ್ಹಾನ್ ಅಖ್ತರ್ ಸೇರಿದಂತೆ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಮತದಾನ ಕೇಂದ್ರಗಳ ಹೊರಗೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಇವರಲ್ಲದೆ, ರಾಜ್‌ಕುಮಾರ್ ರಾವ್, ಕಬೀರ್ ಖಾನ್, ಜಾನ್ ಅಬ್ರಹಾಂ ಮತ್ತು ಸೋನು ಸೂದ್, ಜೋಯಾ ಅಖ್ತರ್ ಈಗಾಗಲೇ ಮತ ಚಲಾಯಿಸಿದ್ದಾರೆ.
4136 ಅಭ್ಯರ್ಥಿಗಳು ಕಣದಲ್ಲಿದ್ದಾರೆ
ಚುನಾವಣಾ ಆಯೋಗದ ಪ್ರಕಾರ, ಸ್ವತಂತ್ರ ಸೇರಿದಂತೆ ವಿವಿಧ ಪಕ್ಷಗಳಿಂದ ಒಟ್ಟು 4136 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 2201 ಅಭ್ಯರ್ಥಿಗಳ ಅಫಿಡವಿಟ್‌ಗಳನ್ನು ಪರಿಶೀಲಿಸಿದ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿಯನ್ನು ಸಿದ್ಧಪಡಿಸಿದೆ. ಈ ವರದಿ ಪ್ರಕಾರ ಸುಮಾರು 29 ಪ್ರತಿಶತ ಅಂದರೆ 629 ಅಭ್ಯರ್ಥಿಗಳು ಅಪರಾಧ ಹಿನ್ನೆಲೆಯುಳ್ಳವರು. ಈ ಪೈಕಿ 412 ಮಂದಿ ವಿರುದ್ಧ ಕೊಲೆ, ಅಪಹರಣ, ಅತ್ಯಾಚಾರದಂತಹ ಗಂಭೀರ ಪ್ರಕರಣಗಳು ದಾಖಲಾಗಿವೆ. 50 ಅಭ್ಯರ್ಥಿಗಳು ಮಹಿಳೆಯರಿಗೆ ಸಂಬಂಧಿಸಿದ ಅಪರಾಧಗಳ ಆರೋಪ ಹೊತ್ತಿದ್ದಾರೆ ಎಂದು ತಿಳಿದುಬಂದಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿ 149 ಸ್ಥಾನಗಳಲ್ಲಿ ಹೋರಾಡುತ್ತಿದೆ. ಶಿವಸೇನೆ 81 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ 59 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ವಿರೋಧ ಪಕ್ಷಗಳ ಮೈತ್ರಿಕೂಟದಲ್ಲಿ (ಭಾರತ ಮೈತ್ರಿಕೂಟ) ಕಾಂಗ್ರೆಸ್ 101 ಅಭ್ಯರ್ಥಿಗಳು, ಶಿವಸೇನೆ (ಯುಬಿಟಿ) 95 ಮತ್ತು ಎನ್‌ಸಿಪಿ (ಎಸ್‌ಪಿ) 86 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 50ಕ್ಕೂ ಹೆಚ್ಚು ಸ್ಥಾನಗಳಲ್ಲಿ ಶಿವಸೇನೆ ಅಭ್ಯರ್ಥಿಗಳಿಬ್ಬರು ಪರಸ್ಪರ ಎದುರಾಳಿಯಾಗಿದ್ದಾರೆ.