Vijayawada floods| ಆಹಾರ, ನೀರು, ಹಾಲಿಗೆ ಜನರ ಪರದಾಟ; ಸರ್ಕಾರದ ನಿರ್ಲಕ್ಷ್ಯ ದೂರು

ವಿಜಯವಾಡದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಮತ್ತು ಹಲವು ಭಾಗಗಳಲ್ಲಿ 24 ಗಂಟೆಗಳಿಗೂ ಹೆಚ್ಚು ಕಾಲ ವಿದ್ಯುತ್ ಕಡಿತದಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.;

Update: 2024-09-02 12:30 GMT
ವಿಜಯವಾಡದ ಪ್ರವಾಹ ಪೀಡಿತ ಪ್ರದೇಶದಲ್ಲಿ ಸಿಲುಕಿರುವ ಕುಟುಂಬವೊಂದು ಮನೆ ಚಾವಣಿ ಮೇಲೆ ಸ್ಥಳಾಂತರಕ್ಕೆ ಕಾಯುತ್ತಿದ್ದಾರೆ.

ಪ್ರವಾಹದಿಂದ ಹಾನಿಗೀಡಾಗಿರುವ ವಿಜಯವಾಡದಲ್ಲಿ ಜನರು ಹಾಲು ಮತ್ತು ಆಹಾರದ ಪೊಟ್ಟಣಗಳಿಗೆ ಪರದಾಡಿದರು. ಜನರ ಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ದೂರಿದರು. 

ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆಯಿಂದ ವಾಣಿಜ್ಯ ನಗರದ ಬಹುತೇಕ ಪ್ರದೇಶಗಳು ಜಲಾವೃತವಾಗಿವೆ. ಅಜಿತ್ ಸಿಂಗ್ ನಗರ, ನಂದಮೂರಿ ನಗರ, ಆಂಧ್ರಪ್ರಭ ಕಾಲೊನಿ, ಎಲ್‌ಬಿಎಸ್ ನಗರ, ವಾಂಬೆ ಕಾಲೊನಿ ಮತ್ತು ಅಯೋಧ್ಯಾ ನಗರಗಳಲ್ಲದೆ, ಮಧುರಾ ನಗರ, ರಾಮಕೃಷ್ಣಪುರಂ, ಹೊಸ/ಹಳೆ ರಾಜರಾಜೇಶ್ವರಿ ಪೇಟೆ, ಪಿಪುಲಾ ರಸ್ತೆ, ಪಾಯಕಪುರಂ, ಶಾಂತಿ ನಗರ, ಪ್ರಶಾಂತಿ ನಗರ, ಜಕ್ಕಂಪುಡಿ ಮತ್ತು ಪತ್ತಪಾಡು, ನೈನಾವರಂ, ಚಿಟ್ಟಿನಗರ, ಹಾಲು ಪ್ರಾಜೆಕ್ಟ್‌ ಪ್ರದೇಶ, ಸೇತುವೆ ಪೇಟೆ ಮತ್ತಿತರ ಕಡೆಗಳಲ್ಲೂ ಇದೇ ಪರಿಸ್ಥಿತಿ ಇತ್ತು. 

ಸಿಎಂಗೆ ದೂರು: ಅಜಿತ್ ಸಿಂಗ್ ನಗರದಲ್ಲಿ ಎರಡು ದಿನಗಳಿಂದ ಕುಡಿಯುವ ನೀರಿಲ್ಲದೆ ಜನರು ಪರದಾಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರಿಗೆ ಅಳಲು ತೋಡಿಕೊಳ್ಳುತ್ತಿರುವುದನ್ನು ‌ಸ್ಥಳೀಯ ಸುದ್ದಿವಾಹಿನಿ ಪ್ರಸಾರ ಮಾಡಿದೆ. 

ತಮ್ಮ ರಕ್ಷಣೆಗೆ ಯಾವುದೇ ದೋಣಿ ಬರಲಿಲ್ಲ ಹಾಗೂ ಸೊಂಡದುದ್ದ ನೀರಿನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ತಮ್ಮ ಕಷ್ಟವನ್ನು ಅರ್ಥ ಮಾಡಿಕೊಳ್ಳಬೇಕೆಂದು ಪ್ರವಾಹ ಪೀಡಿತ ಪ್ರದೇಶಗಳಿಗೆ ಮೂರನೇ ಬಾರಿ ದೋಣಿಯಲ್ಲಿ ಭೇಟಿ ನೀಡಿದ್ದ ನಾಯ್ಡು ಅವರಿಗೆ ಬೇಡಿಕೊಂಡರೂ, ಪ್ರಯೋಜನ ಆಗಲಿಲ್ಲ ಎಂದು ಆಕೆ ದೂರಿದರು.

ʻನಮ್ಮ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. ನೀರು, ಊಟ ಇಲ್ಲ. ಮನೆಗಳು ಮೊದಲ ಮಹಡಿಯವರೆಗೂ ಮುಳುಗಿದೆ,ʼ ಎಂದು ಪ್ರವಾಹ ಸಂತ್ರಸ್ತರು ನಾಯ್ಡು ಅವರಿಗೆ ದೂರು ನೀಡಿದ್ದಾರೆ.

ಜನರು ನೀರಿನಲ್ಲೇ ಮಕ್ಕಳನ್ನು ಹೆಗಲ ಮೇಲೆ ಹೊತ್ತುಕೊಂಡು ಸುರಕ್ಷಿತ ಸ್ಥಳಕ್ಕೆ ಹೋಗುತ್ತಿರುವುದು, ಹಿರಿಯರೊಬ್ಬರನ್ನು ಇಬ್ಬರು ಬೇರೆಡೆಗೆ ಸಾಗಿಸುತ್ತಿರುವುದು, ಹಗ್ಗವನ್ನು ಬಳಸಿ ಸಹಾಯ ಮಾಡುತ್ತಿರುವುದು ಕಂಡುಬಂದಿದೆ. ಕೆಲವರು ಮೂಲಭೂತ ಅವಶ್ಯ ವಸ್ತುಗಳನ್ನು ಹಿಡಿದು ನೀರಿನಲ್ಲಿ ಸಾಗಿದರು. ಹಾಲು ಹಾಗೂ ಆಹಾರದ ಪೊಟ್ಟಣಗಳಿಗಾಗಿ ಪ್ರವಾಹ ಪೀಡಿತ ಸ್ಥಳಗಳಲ್ಲಿ ಭಾರಿ ಸರತಿ ಸಾಲು ಕಂಡುಬಂದಿತು.

ʻನಾನು ಆಹಾರ ಪ್ಯಾಕೆಟ್‌ಗೆ ಈಜಿಕೊಂಡು ಬಂದೆ. ಆದರೆ, ನನಗೆ ಒಂದು ಪೊಟ್ಟಣ ಕೂಡ ಸಿಗಲಿಲ್ಲ,ʼ ಎಂದು ಸ್ಥಳೀಯ ಸುದ್ದಿ ವಾಹಿನಿಗೆ ವ್ಯಕ್ತಿಯೊಬ್ಬರು ಹೇಳಿದ್ದು, ಪ್ರವಾಹದಲ್ಲಿ ಸಿಲುಕಿಕೊಂಡ ಜನರ ಬಳಿಗೆ ಯಾರೂ ಬರಲಿಲ್ಲ ಎಂದು ಮತ್ತೊಬ್ಬರು ದೂರಿದರು.

ಸರ್ಕಾರದಿಂದ ಸಹಾಯವಿಲ್ಲ: ಭಾನುವಾರ ಬೆಳಗ್ಗೆಯಿಂದ ಹಾಲು ಇಲ್ಲ ಎಂದು ಪ್ರವಾಹ ಸಂತ್ರಸ್ತರು ದೂರಿದರು; ಸರ್ಕಾರದಿಂದ ಯಾವುದೇ ಸಹಾಯ ಬಂದಿಲ್ಲ ಎಂದು ಆರೋಪಿಸಿದರು. 

ʻಈ ವೇಗದ ದೋಣಿಗಳು ಮತ್ತು ಎನ್‌ಡಿಆರ್‌ಎಫ್ ತಂಡಗಳು ಸುಮ್ಮನೆ ತಿರುಗಾಡುತ್ತಿವೆ. ನಾವು ಈಜಿಕೊಂಡು ಬಂದಿದ್ದೇವೆ. ಕೆಲವರು ಖಾಸಗಿ ಬೋಟ್‌ಗಳನ್ನು ಬಳಸಿ ಜನರಿಗೆ ನೆರವಾಗುತ್ತಿದ್ದಾರೆ. ಸರ್ಕಾರದಿಂದ ಏನೂ ಸಿಗುತ್ತಿಲ್ಲ,ʼ ಎಂದು ಆರೋಪಿಸಿದರು.  ಮಧುಮೇಹ ರೋಗಿಗಳಿಗೆ ಯಾವುದೇ ಆಹಾರ ಸರಬರಾಜು ಮಾಡುತ್ತಿಲ್ಲ. ಸಿಎಂ ಭೇಟಿ ನೀಡಿದಾಗ ಅವರ ರಕ್ಷಣೆಗೆ 100 ಜನ ಬೇಕಾಗುತ್ತಾರೆ . ಸಿಎಂ ಭೇಟಿ ನೀಡುವ ಅಗತ್ಯ ಏನಿದೆ? ಎಂದು ಪ್ರಶ್ನಿಸಿದರು.

ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

3 ದಿನಗಳಿಂದ ಧಾರಾಕಾರ ಮಳೆ: ವಿಜಯವಾಡದಲ್ಲಿ ಕಳೆದ ಮೂರು ದಿನದಿಂದ ಸುರಿಯುತ್ತಿರುವ ಧಾರಾಕಾರ ಮಳೆ ಮತ್ತು ಹಲವು ಭಾಗಗಳಲ್ಲಿ 24 ಗಂಟೆಗಳಿಗೂ ಹೆಚ್ಚು ಕಾಲ ವಿದ್ಯುತ್ ಕಡಿತದಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇಂಟರ್‌ನೆಟ್ ಮತ್ತು ಮೊಬೈಲ್ ಸಂಪರ್ಕ ಕಡಿತಗೊಂಡಿದ್ದು, ಟ್ರಾಫಿಕ್ ಜಾಮ್‌ನಿಂದ ಹೈದರಾಬಾದ್‌ಗೆ ಸಂಪರ್ಕ ಲಭ್ಯವಾಗಿಲ್ಲ.

ʻಮಳೆ ಪುನರಾರಂಭವಾಗಿದೆ. ನೀರಿನ ಮಟ್ಟ ಕಡಿಮೆಯಾಗುವವರೆಗೆ ವಿದ್ಯುತ್ ಸಂಪರ್ಕ ಸ್ಥಾಪಿಸಲಾಗುವುದಿಲ್ಲ ಎಂಬ ಆತಂಕವಿದೆ,ʼ ಎಂದು ಅಜಿತ್ ಸಿಂಗ್ ನಗರದ ನಿವಾಸಿ ಎಂ. ಸೈಲಜಾ ಸೋಮವಾರ ತಿಳಿಸಿದರು.

ಅಜಿತ್ ಸಿಂಗ್ ನಗರ ಅತ್ಯಂತ ಹೆಚ್ಚು ಪೀಡಿತ ಪ್ರದೇಶಗಳಲ್ಲಿ ಒಂದಾಗಿದೆ.

ವಿದ್ಯುತ್ ಇಲ್ಲ: ಫ್ಯಾನ್ ಮತ್ತು ಹವಾನಿಯಂತ್ರಣ ಕೆಲಸ ಮಾಡದ ಕಾರಣ ಜನ ರಾತ್ರಿಯಿಡೀ ಮಲಗಲು ಸಾಧ್ಯವಾಗಲಿಲ್ಲ. ಅನೇಕ ಓವರ್‌ ಹೆಡ್ ಟ್ಯಾಂಕ್‌ಗಳು ಖಾಲಿಯಾಗಿದ್ದು, ವಿದ್ಯುತ್ ಮರುಸ್ಥಾಪಿಸದಿದ್ದರೆ ನೀರು ಪಂಪ್ ಮಾಡಲು ಸಾಧ್ಯವಿಲ್ಲ. ಕುಡಿಯುವ ನೀರಿನ ಲಭ್ಯತೆಯೂ ಕ್ಷೀಣಿಸುತ್ತಿದೆ. ಜನರ ಮೊಬೈಲ್ ಫೋನ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. 

ಹೈದರಾಬಾದ್-ವಿಜಯವಾಡ ರಾಷ್ಟ್ರೀಯ ಹೆದ್ದಾರೆ  65 ಜಲಾವೃತಗೊಂಡಿದೆ. ಆಂಧ್ರಪ್ರದೇಶದ ಚಿಲ್ಲಕಲ್ಲು ಮತ್ತು ನಂದಿಗಾಮ ಬಳಿ ಹೆದ್ದಾರಿ ನೀರಿನಲ್ಲಿ ಮುಳುಗಿದ್ದು, ಹೈದರಾಬಾದ್‌ನಿಂದ ವಿಜಯವಾಡ ಅಥವಾ ಖಮ್ಮಂಗೆ ಹೋಗುವವರು ಪರ್ಯಾಯ ಮಾರ್ಗ ಬಳಸುವಂತೆ ಪೊಲೀಸರು ಸೋಮವಾರ (ಸೆಪ್ಟೆಂಬರ್ 2) ಸೂಚಿಸಿದ್ದಾರೆ. ಖಮ್ಮಂ ಮತ್ತು ಸೂರ್ಯಪೇಟ್ ನಡುವಿನ ರಸ್ತೆಯನ್ನೂ ಮುಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Similar News