ಹೈಕೋರ್ಟ್ ಜಡ್ಜ್ ಮನೆಯಲ್ಲಿ ನೋಟುಗಳ ರಾಶಿ: ವಿಡಿಯೋ ವೈರಲ್
ನನ್ನ ವಿರುದ್ಧ ಹೊರಡಿಸಲಾಗಿರುವ ಆರೋಪಗಳು ಆಧಾರರಹಿತವಾದವು. ನನ್ನ ಮನೆಯಲ್ಲಿನ ನಗದು ನನ್ನದು ಎಂಬುದು ಕೇವಲ ಊಹಾಪೋಹ ಎಂದು ಜಡ್ಜ್ ವರ್ಮಾ ಹೇಳಿದ್ದಾರೆ.;
ಜಡ್ಜ್ ಮನೆಯಲ್ಲಿ ಪತ್ತೆಯಾದ ನಗದು.
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದಲ್ಲಿ ನಗದು ನೋಟುಗಳ ಕಂತುಗಳು ಸಿಕ್ಕಿರುವ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ನ್ಯಾಯಮೂರ್ತಿ ವರ್ಮಾ ಅವರ ಮನೆಯಿಂದ ಪತ್ತೆಯಾಗಿರುವ ನೋಟುಗಳ ವಿಡಿಯೋ ಮತ್ತು ಚಿತ್ರಗಳನ್ನು ಸ್ವತಃ ಸುಪ್ರೀಂ ಕೋರ್ಟ್ ತನ್ನ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದ್ದು, ಇದು ಪ್ರಕರಣಕ್ಕೆ ಗಂಭೀರತೆ ನೀಡಿದೆ.
ವೀಡಿಯೋದಲ್ಲಿ ವರ್ಮಾ ಅವರ ಮನೆಯಲ್ಲಿ ಕಂತೆಕಂತೆ ನೋಟುಗಳು ಪತ್ತೆಯಾಗಿರುವ ದೃಶ್ಯಗಳು ದಾಖಲಾಗಿವೆ. ಇದರೊಂದಿಗೆ, ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಅವರು ಈ ಪ್ರಕರಣದ ಕುರಿತು 25 ಪುಟಗಳ ತನಿಖಾ ವರದಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದು, ವಿಡಿಯೋ ಹಾಗೂ ಫೋಟೋಗಳೂ ಜೊತೆಯಾಗಿ ಪ್ರಸ್ತುತವಾಗಿವೆ. ಇವುಗಳನ್ನು ಸುಪ್ರೀಂ ಕೋರ್ಟ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ತಿರುಗೇಟು ನೀಡಿದ ನ್ಯಾಯಮೂರ್ತಿ ವರ್ಮಾ
ವಿದ್ಯಮಾನ ಆರೋಪಗಳನ್ನು ತಳ್ಳಿಹಾಕಿರುವ ನ್ಯಾಯಮೂರ್ತಿ ಯಶವಂತ್ ವರ್ಮಾ, “ನನ್ನ ವಿರುದ್ಧ ಹೊರಡಿಸಲಾಗಿರುವ ಆರೋಪಗಳು ಆಧಾರರಹಿತವಾದವು. ನನ್ನ ಮನೆಯಲ್ಲಿನ ನಗದು ನನ್ನದು ಎಂಬುದು ಕೇವಲ ಊಹಾಪೋಹ. ಹೈಕೋರ್ಟ್ ನ್ಯಾಯಮೂರ್ತಿಯಾಗಿ ಒಂದು ದಶಕಕ್ಕಿಂತ ಹೆಚ್ಚು ಕಾಲ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದೇನೆ. ಈ ಘಟನೆ ನನ್ನ ಖ್ಯಾತಿಗೆ ಭಾರಿ ಧಕ್ಕೆ ತಂದಿದೆ. ನನ್ನನ್ನು ಸಮರ್ಥಿಸಿಕೊಳ್ಳಲು ಈಗ ಯಾವುದೇ ಮಾರ್ಗವಿಲ್ಲ,” ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ನ್ಯಾಯಾಂಗ ಸೇವೆಯಲ್ಲಿ ತಮ್ಮ ವಿರುದ್ಧ ಯಾವುದೇ ದೂರುಗಳು ದಾಖಲಾಗಿಲ್ಲ ಎಂಬುದನ್ನು ಪರಿಶೀಲಿಸಬೇಕು ಎಂದು ನ್ಯಾಯಮೂರ್ತಿ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ. “ನಾನು ನ್ಯಾ. ವ್ಯವಸ್ಥೆಯಲ್ಲಿ ಗೌರವಪಾತ್ರ ಸ್ಥಾನದಲ್ಲಿದ್ದೇನೆ. ನನ್ನ ಪ್ರಾಮಾಣಿಕತೆ ಹಾಗೂ ನ್ಯಾಯಮೂರ್ತಿಯಾಗಿ ನನ್ನ ಕರ್ತವ್ಯ ಪಾಲನೆಯ ಪರಿಶುದ್ಧತೆಯ ಕುರಿತು ತನಿಖೆ ನಡೆಸಿ,” ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.