ಉತ್ತರಪ್ರದೇಶ| ಬಿಎಸ್ಪಿ ಶೂನ್ಯ ಸಾಧನೆ: ಹೆಚ್ಚುವರಿ 16 ಸ್ಥಾನ ಗಳಿಕೆಗೆ ಇಂಡಿಯಾ ಒಕ್ಕೂಟಕ್ಕೆ ಅಡ್ಡಗಾಲು
ಬಿಎಸ್‌ಪಿ ಮತಗಳನ್ನು ಕಟಾವು ಮಾಡದೆ ಇದ್ದರೆ, ಇಂಡಿಯ ಒಕ್ಕೂಟ ಉತ್ತರಪ್ರದೇಶದಲ್ಲಿ 59 ಸ್ಥಾನ ಗಳಿಸು ತ್ತಿತ್ತು. ಎನ್‌ಡಿಎ ಒಟ್ಟು ಬಲ 277ಕ್ಕೆ ಕುಸಿಯುತ್ತಿತ್ತು.;
2024 ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಮಾಯಾವತಿಯವರ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಶೂನ್ಯ ಸಂಪಾದನೆ ಮಾಡಿತು. ಆದರೆ, ಇಂಡಿಯ ಒಕ್ಕೂಟದ ಮತಗಳನ್ನು ಕತ್ತರಿಸುವ ಮೂಲಕ, ಬಿಜೆಪಿಗೆ ಕನಿಷ್ಠ 16 ಸ್ಥಾನ ಗೆಲ್ಲಲು ನೆರವಾಯಿತು. 16 ಸ್ಥಾನಗಳಲ್ಲಿ ಬಿಎಸ್‌ಪಿ, ಬಿಜೆಪಿ ಅಥವಾ ಅದರ ಮಿತ್ರ ಪಕ್ಷಗಳ ಅಭ್ಯರ್ಥಿಗಳ ಗೆಲುವಿನ ಅಂತರಕ್ಕಿಂತ ಹೆಚ್ಚು ಮತ ಗಳಿಸಿತು.
ಏನಾಯಿತು?: ಯುಪಿಯ 80 ಸ್ಥಾನಗಳಲ್ಲಿ ಇಂಡಿಯ ಒಕ್ಕೂಟ 43 ಸ್ಥಾನ ಗೆದ್ದುಕೊಂಡಿತು(ಎಸ್ಪಿ 37 ಮತ್ತು ಕಾಂಗ್ರೆಸ್ 6). ಎನ್‌ಡಿಎ 36 ಹಾಗೂ ಬಿಜೆಪಿ 33 ಸ್ಥಾನ ಗಳಿಸಿತು. ಬಿಎಸ್‌ಪಿ ಮತಗಳನ್ನು ಕಟಾವು ಮಾಡದೆ ಇದ್ದಿದ್ದರೆ, ಇಂಡಿಯ ಒಕ್ಕೂಟ 59 ಸ್ಥಾನ ಗಳಿಸುತ್ತಿತ್ತು. ಎನ್‌ಡಿ ಎ ಬಲ 277 ಕ್ಕೆ ಮತ್ತು ಬಿಜೆಪಿ ಬಲ 226 ಕ್ಕೆ ಇಳಿಯುತ್ತಿತ್ತು. ಬಿಜೆಪಿ ಕೇವಲ 19 ಸ್ಥಾನ ಮಾತ್ರ ಪಡೆದಿದೆ. 2019 ರಲ್ಲಿಅದರ ಬಲ 62 ಆಗಿತ್ತು.
16 ಸ್ಥಾನಗಳ ನಷ್ಟ: ಅಕ್ಬರ್‌ಪುರ್, ಆಲಿಗಢ್, ಅಮ್ರೋಹಾ, ಬನ್ಸ್‌ಗಾಂವ್, ಭದೋಹಿ, ಬಿಜ್ನೋರ್, ಡಿಯೋರಿಯಾ, ಫರೂಕಾಬಾದ್, ಫತೇಪುರ್ ಸಿಕ್ರಿ, ಹರ್ದೋಯಿ, ಮೀರತ್, ಮಿರ್ಜಾಪುರ್, ಮಿಶ್ರಿಖ್, ಫುಲ್‌ಪುರ್, ಶಹಜಾನ್‌ಪುರ್ ಮತ್ತು ಉನ್ನಾ ಷಹಜಾನ್‌ಪುರ್ ಬಿಎಸ್‌ಪಿ ಸ್ಪರ್ಧೆಯಿಂದ ಇಂಡಿಯ ಒಕ್ಕೂಟ ಕಳೆದುಕೊಂಡ 16 ಸ್ಥಾನಗಳು. ಇದರಲ್ಲಿ ಬಿಜೆಪಿ 14 ಹಾಗೂ ಮಿತ್ರಪಕ್ಷಗಳಾದ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಬಿಜ್ನೋರ್ ಕ್ಷೇತ್ರದಲ್ಲಿ ಮತ್ತು ಅಪ್ನಾ ದಳ (ಸೋನಿಲಾಲ್) ಮಿರ್ಜಾಪುರದಲ್ಲಿ ಗೆದ್ದವು. ಬಿಜ್ನೋರಿನಲ್ಲಿ ಬಿಎಸ್ಪಿ ಅಭ್ಯರ್ಥಿ ವಿಜೇಂದರ್ ಸಿಂಗ್ ಅತಿ ಹೆಚ್ಚು ಮತ ಪಡೆದಿದ್ದಾರೆ( 2,18,986); ಆರ್‌ಎಲ್‌ಡಿ 37,508 ಮತಗಳಿಂದ ಸಮಾಜವಾದಿ ಪಕ್ಷವನ್ನು ಸೋಲಿಸಿತು.
ಮಿರ್ಜಾಪುರದಲ್ಲಿ ಬಿಎಸ್‌ಪಿ ಅಭ್ಯರ್ಥಿ ಮನೀಶ್ ಕುಮಾರ್ 1,44,446 ಮತ ಪಡೆದಿದ್ದು, ಗೆದ್ದ ಬಿಜೆಪಿಯ ಅನುಪ್ರಿಯಾ ಪಟೇಲ್ ಎಸ್‌ಪಿ ಅಭ್ಯರ್ಥಿಯನ್ನು 37,810 ಮತಗಳಿಂದ ಸೋಲಿಸಿದರು. ಶಹಜಹಾನ್‌ಪುರದಲ್ಲಿ ಬಿಜೆಪಿಯ ಅರುಣ್ ಕುಮಾರ್ ಸಾಗರ್ 55,379 ಮತಗಳಿಂದ ಜಯ ಗಳಿಸಿದ್ದು, ಬಿಎಸ್‌ಪಿಯ ದೊಡ್ ರಾಮ್ ವರ್ಮಾ 91,710 ಮತ ಪಡೆದರು. ಫರೂಕಾಬಾದ್‌ನಲ್ಲಿ ಬಿಜೆಪಿ ಅಭ್ಯರ್ಥಿ ಮುಖೇಶ್ ರಜಪೂತ್ ಎಸ್‌ಪಿ ಅಭ್ಯರ್ಥಿ ಡಾ.ನವಲ್ ಕಿಶೋರ್ ಶಾಕ್ಯಾ ವಿರುದ್ಧ ಕೇವಲ 2,678 ಮತಗಳ ಅಂತರದಿಂದ ಜಯಗಳಿಸಿದರು. ಬಿಎಸ್‌ಪಿ ಅಭ್ಯರ್ಥಿ ಕ್ರಾಂತಿ ಪಾಂಡೆ ಪಡೆದ ಮತಗಳು 45,390.
ಟಿಎಂಸಿ ಪ್ರಯತ್ನ: ಉತ್ತರಪ್ರದೇಶದಲ್ಲಿ ಇಂಡಿಯಾ ಒಕ್ಕೂಟದ ಭಾಗವಾದ ಟಿಎಂಸಿ, ಭದೋಹಿ ಸ್ಥಾನಕ್ಕೆ ಸ್ಪರ್ಧಿಸಿತ್ತು. ಮಧ್ಯಪ್ರದೇಶ ದಲ್ಲಿ ಕಾಂಗ್ರೆಸ್ ಗೆ ನೀಡಿದ ಸ್ಥಾನಕ್ಕೆ ಬದಲಾಗಿ ಟಿಎಂಸಿಗೆ ಸಮಾಜವಾದಿ ಪಕ್ಷ ಈ ಸ್ಥಾನ ನೀಡಿತ್ತು. ಟಿಎಂಸಿ ಅಭ್ಯರ್ಥಿಯನ್ನು ಬಿಜೆಪಿ ಅಭ್ಯರ್ಥಿ ಕೇವಲ 44,072 ಮತಗಳ ಅಂತರದಿಂದ ಸೋಲಿಸಿದರು. ಟಿಎಂಸಿ ಅಭ್ಯರ್ಥಿ 4.2 ಲಕ್ಷ ಹಾಗೂ ಬಿಎಸ್‌ಪಿ ಅಭ್ಯರ್ಥಿ 1.6 ಲಕ್ಷ ಮತ ಪಡೆದರು.
ಮಾಯಾವತಿ ಏನು ಮಾಡಬಹುದು?: ಮಾಯಾವತಿಯವರ ವೋಟ್ ಬ್ಯಾಂಕ್ ಆದ ಜಾಟವ್ ಮತದಾರರು ಮಾತ್ರವಲ್ಲದೆ, ಜಾಟವ್ ಅಲ್ಲದವರು ಕೂಡ ಬಿಎಸ್‌ಪಿ ತೊರೆಯುತ್ತಿದ್ದಾರೆ. ರಾಜ್ಯದಲ್ಲಿ ಅವರು ಸ್ಥಿರವಾದ ಕುಸಿತ ಅನುಭವಿಸುತ್ತಿದ್ದರೂ, ಸ್ವಲ್ಪ ಹಾನಿಯುಂಟು ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂಬುದನ್ನು ಈ ಅಂಕಿಅಂಶಗಳು ತೋರಿಸಿವೆ.
2014- 2024ರ ಅವಧಿಯಲ್ಲಿ ಬಿಎಸ್‌ಪಿ ಮತ ಗಳಿಕೆ ಪ್ರಮಾಣ ಶೇ.10.38ರಷ್ಟು ಕುಸಿದಿದೆ. 2014ರಲ್ಲಿ ಶೇ.19.77 ಹಾಗೂ 2019ರಲ್ಲಿ ಶೇ.19.42ರಷ್ಟು ಮತ ಪಡೆದಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ ಎಸ್‌ಪಿ ಜೊತೆ ಕೈಜೋಡಿಸಿ, 10 ಹಾಗೂ ಎಸ್ಪಿ 5 ಸ್ಥಾನ ಗೆದ್ದಿತ್ತು. 2014ರ ಲೋಕಸಭೆ ಚುನಾವಣೆಯಲ್ಲಿ ಬಿಎಸ್‌ಪಿ ಒಂದೇ ಒಂದು ಸ್ಥಾನವನ್ನೂ ಗೆದ್ದಿರಲಿಲ್ಲ.
2017 ರ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‌ಪಿ 403 ಸ್ಥಾನಗಳಲ್ಲಿ ಕೇವಲ 19 ಸ್ಥಾನ ಗಳಿಸಿತು. 2012 ರ ಚುನಾವಣೆಯಲ್ಲಿ80 ಸ್ಥಾನ ಗಳಿಸಿತ್ತು. 2022 ರ ಅಸೆಂಬ್ಲಿ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನಕ್ಕೆ ಇಳಿಯಿತು. ಮತಗಳಿಕೆ ಪ್ರಮಾಣ ಶೇ.12.88ಕ್ಕೆ ಕುಸಿಯಿತು.