UNION BUDGET 2024: ಶಿಕ್ಷಣ, ಉದ್ಯೋಗ ಮತ್ತು ಕೌಶಲಕ್ಕೆ 1.48 ಲಕ್ಷ ಕೋಟಿ ರೂ.
ದೇಶಿ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣಕ್ಕೆ 10 ಲಕ್ಷ ರೂ.ವರೆಗಿನ ಸಾಲಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ನೆರವು ಘೋಷಿಸಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಒಟ್ಟು 2 ಲಕ್ಷ ಕೋಟಿ ರೂ. ಅನುದಾನ ನೀಡಲಾಗಿದೆ.;
ಉದ್ಯೋಗ, ಶಿಕ್ಷಣ ಮತ್ತು ಕೌಶಲಗಳನ್ನು ಸುಗಮಗೊಳಿಸಲು ಮುಂದಿನ ಐದು ವರ್ಷಗಳಲ್ಲಿ 4.1 ಕೋಟಿ ಯುವಕರಿಗೆ ಐದು ಯೋಜನೆಗಳ ಪ್ರಧಾನ ಮಂತ್ರಿಗಳ ಪ್ಯಾಕೇಜಿಗೆ 1.48 ಲಕ್ಷ ಕೋಟಿ ರೂ. ಅನುದಾನವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳ ವಾರ ಘೋಷಿಸಿದ್ದಾರೆ.
ʻಈ ವರ್ಷ ನಾವು ಶಿಕ್ಷಣ, ಉದ್ಯೋಗ ಮತ್ತು ಕೌಶಲಕ್ಕಾಗಿ 1.48 ಲಕ್ಷ ಕೋಟಿ ರೂ. ಒದಗಿಸಿದ್ದೇವೆ,ʼ ಎಂದು ಸಚಿವೆ ಹೇಳಿದರು.ಈ ನಿಧಿಯು ಶೈಕ್ಷಣಿಕ ಮೂಲಸೌಕರ್ಯದ ಸುಧಾರಣೆ, ಉದ್ಯೋಗಾವಕಾಶ ಸೃಷ್ಟಿ ಮತ್ತು ದೇಶಾದ್ಯಂತ ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹೆಚ್ಚಿಸುವುದೆಂದು ನಿರೀಕ್ಷಿಸಲಾಗಿದೆ. ಈ ವಲಯಕ್ಕೆ ಕೇಂದ್ರದ ಹಣ 2 ಲಕ್ಷ ಕೋಟಿ ರೂ.; ಈ ಪೈಕಿ 1.48 ಲಕ್ಷ ಕೋಟಿ ರೂ.ಗಳನ್ನು ಶಿಕ್ಷಣ, ಉದ್ಯೋಗ ಮತ್ತು ಕೌಶಲಕ್ಕಾಗಿ ವಿನಿಯೋಗಿಸಲಾಗುತ್ತದೆ.
ವಾರ್ಷಿಕ 25,000 ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿರುವ ಮಾದರಿ ಕೌಶಲ ಸಾಲ ಯೋಜನೆಯನ್ನು ಪರಿಷ್ಕರಿಸಲು ಪ್ರಸ್ತಾಪಿಸಲಾಗಿದೆ; ಇದು ಈಗ 7.5 ಲಕ್ಷ ರೂ.ವರೆಗೆ ಸಾಲಕ್ಕೆ ಅನುಮತಿ ನೀಡುತ್ತದೆ. ದೇಶಿ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣಕ್ಕೆ 10 ಲಕ್ಷ ರೂ.ವರೆಗಿನ ಸಾಲಕ್ಕಾಗಿ ಇ-ವೋಚರ್‌ಗಳನ್ನು ವಿತರಿಸುವುದಾಗಿ ಅವರು ಘೋಷಿಸಿದರು. ಇದು ಪ್ರತಿ ವರ್ಷ ಒಂದು ಲಕ್ಷ ವಿದ್ಯಾರ್ಥಿಗಳಿಗೆ ನೆರವಾಗಲಿದೆ. ಸಾಲದ ಮೇಲೆ ಶೇ. 3 ವಾರ್ಷಿಕ ಬಡ್ಡಿ ರಿಯಾಯಿತಿ ಇರುತ್ತದೆ. ಮುಂದಿನ ಐದು ವರ್ಷದಲ್ಲಿ 20 ಲಕ್ಷ ಯುವಕರಿಗೆ ತರಬೇತಿ ನೀಡುವ ಉದ್ದೇಶದಿಂದ ಕೇಂದ್ರ ಪ್ರಾಯೋಜಿತ ಹೊಸ ಯೋಜನೆಯನ್ನು ಸರ್ಕಾರ ಅನಾವರಣಗೊಳಿಸಿದೆ.
1,000 ಐಟಿಐಗಳು ಮೇಲ್ದರ್ಜೆಗೆ: ಕೌಶಲ ಉಪಕ್ರಮಗಳನ್ನು ಹೆಚ್ಚಿಸಲು 1,000 ಐಟಿಐಗಳನ್ನು ನವೀಕರಿಸಲಾಗುತ್ತದೆ; ಕೋರ್ಸ್ ವಿಷಯ ಮತ್ತು ವಿನ್ಯಾಸವನ್ನು ಕೈಗಾರಿಕೆಗಳ ಅಗತ್ಯಗಳಿಗೆ ಅನುಗುಣವಾಗಿ ಹೊಂದಿಸಲಾಗುತ್ತದೆ. ಹೊಸ ಕೇಂದ್ರ ಪ್ರಾಯೋಜಿತ ಕೌಶಲ ಯೋಜನೆಯು ರಾಜ್ಯಗಳು ಮತ್ತು ಉದ್ಯಮದ ಸಹಯೋಗದೊಂದಿಗೆ ಐದು ವರ್ಷಗಳಲ್ಲಿ 20 ಲಕ್ಷ ಯುವಕರಿಗೆ ತರಬೇತಿ ನೀಡಲಿದೆ ಎಂದು ಸೀತಾರಾಮನ್ ಹೇಳಿದರು.
ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸುವ 30 ಲಕ್ಷ ಯುವಕರಿಗೆ ಒಂದು ತಿಂಗಳ ಭವಿಷ್ಯ ನಿಧಿ ಕೊಡುಗೆಯನ್ನು ನೀಡುವ ಮೂಲಕ ಸರ್ಕಾರ ಪ್ರೋತ್ಸಾಹಿಸುತ್ತದೆ. ಒಂದು ಕೋಟಿ ಯುವಜನರಿಗೆ 5000 ರೂ.ಇಂಟರ್ನ್‌ಶಿಪ್ ಹಾಗೂ ಒಮ್ಮೆ 6,000 ರೂ. ನೀಡಲಾಗುತ್ತದೆ. ಕಂಪನಿಗಳು ಈ ಮೊತ್ತವನ್ನು ತಮ್ಮ ಸಿಎಸ್ಆರ್ ನಿಧಿಯಿಂದ ಭರಿಸುತ್ತವೆ. ಅಲ್ಲದೆ, ಉದ್ಯೋಗದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸ ಲು, ಉದ್ಯೋಗಿ ಮಹಿಳಾ ಹಾಸ್ಟೆಲ್‌ಗಳನ್ನು ಸ್ಥಾಪಿಸಲಾಗುವುದು. ಈಗಾಗಲೇ ಜಾರಿಯಲ್ಲಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಎಂ ನರೇಗಾ), ಪ್ರತಿ ಮನೆಯ ಕನಿಷ್ಠ ಒಬ್ಬ ಸದಸ್ಯರಿಗೆ ನಿರ್ದಿಷ್ಟ ಆರ್ಥಿಕ ವರ್ಷದಲ್ಲಿ 100 ದಿನಗಳ ಕೂಲಿ ಉದ್ಯೋಗ ಒದಗಿಸುವ ಗುರಿಯನ್ನು ಹೊಂದಿದೆ.
2023 ರ ಕೇಂದ್ರ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ 1,12,898.97 ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು. ಇದು ಶಿಕ್ಷಣಕ್ಕೆ ಇದುವರೆಗೆ ನೀಡಲಾದ ಅತಿ ಹೆಚ್ಚು ಮೊತ್ತ. ಇದರಲ್ಲಿ ಶಾಲಾ ಶಿಕ್ಷಣ ಇಲಾಖೆಗೆ 68,804.85 ಕೋಟಿ ರೂ., ಉನ್ನತ ಶಿಕ್ಷಣ ಇಲಾಖೆಗೆ 44,094.62 ಕೋಟಿ ರೂ. ನಿಗದಿಪಡಿಸಲಾಗಿದೆ. 2024 ರ ಮಧ್ಯಂತರ ಬಜೆಟ್ ಭಾಷಣದಲ್ಲಿ ಸೀತಾರಾಮನ್ ಅವರು ಇನ್ನಷ್ಟು ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಮತ್ತು ಈ ಉಪಕ್ರಮವನ್ನು ಮೇಲ್ವಿಚಾರಣೆ ಮಾಡಲು ಸಮಿತಿಯನ್ನು ರಚಿಸಿದರು. ಅಂಗನವಾಡಿ ಕೇಂದ್ರಗಳ ಉನ್ನತೀಕರಣದ ಯೋಜನೆಗಳನ್ನೂ ಅವರು ಪ್ರಸ್ತಾಪಿಸಿದ್ದರು.