Election 2024: ನಿರುದ್ಯೋಗ, ಹಣದುಬ್ಬರ ಪ್ರಮುಖ ವಿಷಯ: ಸಿಎಸ್‌ಡಿಎಸ್‌ ಸಮೀಕ್ಷೆ

ಮಂದಿರ, ಮಸೀದಿ ಚುನಾವಣೆ ವಿಷಯವಲ್ಲ

Update: 2024-04-12 10:48 GMT

ಹೆಚ್ಚುತ್ತಿರುವ ಬೆಲೆಗಳು ಮತ್ತು ನಿರುದ್ಯೋಗ ಪ್ರಮುಖ ಕಾಳಜಿಯಾಗಿ ಹೊರಹೊಮ್ಮಿದೆ ಎಂದು ಅಭಿವೃದ್ಧಿಶೀಲ ಸಮಾಜಗಳ ಅಧ್ಯಯನ ಕೇಂದ್ರ (ಸಿಎಸ್‌ಡಿಎಸ್‌ ) ನಡೆಸಿದ ಚುನಾವಣೆ ಪೂರ್ವ ಸಮೀಕ್ಷೆ ಬಹಿರಂಗಪಡಿಸಿದೆ. 

ಪಟ್ಟಣ ಮತ್ತು ನಗರಗಳು ಸೇರಿದಂತೆ ಪ್ರತಿಕ್ರಿಯಿಸಿದ ವಿವಿಧ ಜನರಲ್ಲಿ ಶೇ.62ರಷ್ಟು ಜನರು ಉದ್ಯೋಗವನ್ನು ಕಾಯ್ದುಕೊಳ್ಳುವುದು ಹೆಚ್ಚು ಸವಾಲಿನ ಸಂಗತಿಯಾಗಿದೆ ಎಂದು ಹೇಳಿದ್ದಾರೆ. ಶೇ. 65 ಪುರುಷರು ಈ ಭಾವನೆ ಹಂಚಿಕೊಂಡಿದ್ದಾರೆ. ಆದರೆ, ಮಹಿಳೆಯರಲ್ಲಿ ಶೇ.59 ಮಂದಿ ಮಾತ್ರ ಇಂಥ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೇವಲ ಶೇ.12 ಮಂದಿ ಮಾತ್ರ ಉದ್ಯೋಗಾವಕಾಶ ಹೆಚ್ಚಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. 

ಉದ್ಯೋಗ ಲಭ್ಯತೆಯಲ್ಲಿನ ತೊಂದರೆಗಳಿಗೆ ಸಂಬಂಧಿಸಿದಂತೆ, ಶೇ.67 ಮುಸ್ಲಿಮರು, ಶೇ.63 ಇತರ ಹಿಂದುಳಿದ ವರ್ಗ(ಒಬಿಸಿ)ಗಳು ಮತ್ತು ಶೇ. 59 ರಷ್ಟು ಪರಿಶಿಷ್ಟ ಪಂಗಡ (ಎಸ್ಟಿ) ಇಂಥದ್ದೇ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರತಿಕ್ರಿಯಿಸಿದವ ಮೇಲ್ಜಾತಿಯವರಲ್ಲಿ ಶೇ.57 ಮಂದಿ ಉದ್ಯೋ ಗ ಗಳಿಸುವುದು ಕಷ್ಟ ಎಂದಿದ್ದು, ಕೇವಲ ಶೇ.17 ಜನ ಮಾತ್ರ ಉದ್ಯೋಗ ಸುಲಭವಾಗಿ ಸಿಗುತ್ತಿದೆ ಎಂದಿದ್ದಾರೆ. 

ಉದ್ಯೋಗಾವಕಾಶ ಕೊರತೆಯ ಹೊಣೆಗಾರಿಕೆ ಯಾರದ್ದು ಎಂಬ ಪ್ರಶ್ನೆಗೆ ಶೇ.21 ಮಂದಿ ಕೇಂದ್ರವನ್ನು, ಶೇ.17 ಮಂದಿ ರಾಜ್ಯ ಸರ್ಕಾರ ಹಾಗೂ ಶೇ.57ರಷ್ಟು ಜನ ಎರಡಕ್ಕೂ ಜವಾಬ್ದಾರಿ ಇದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಐಎಲ್‌ಒ ವರದಿ: ಸಿಎಸ್ಡಿಎಸ್- ಲೋಕನೀತಿ ಸಮೀಕ್ಷೆಯು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ(ಐಎಲ್‌ಒ) ವರದಿಯಂತೆಯೇ ಇದೆ. ಐಎಲ್‌ಒ ಪ್ರಕಾರ, ಭಾರತದ ನಿರುದ್ಯೋಗಿಗಳಲ್ಲಿ ಶೇ.80 ಕ್ಕಿಂತ ಹೆಚ್ಚು ಯುವಜನರಿದ್ದಾರೆ. ಒಟ್ಟು ನಿರುದ್ಯೋಗಿಗಳಲ್ಲಿ ಮಾಧ್ಯಮಿಕ ಶಿಕ್ಷಣ ಅಥವಾ ಹೆಚ್ಚಿನ ಯುವಜನರ ಪ್ರಮಾಣ 2000ರಲ್ಲಿದ್ದ ಶೇ.35.2 ರಿಂದ 2022 ರಲ್ಲಿ ಶೇ.65.7ಕ್ಕೆ ಏರಿದೆ ಎಂದು ವರದಿ ಹೇಳಿದೆ.

ಪದವೀದರರಲ್ಲಿ ಅತ್ಯಧಿಕ ನಿರುದ್ಯೋಗ ದಾಖಲಾಗಿದೆ; ವಿಶೇಷವಾಗಿ ಮಹಿಳೆಯರಲ್ಲಿ. 2022ರಲ್ಲಿ ಉದ್ಯೋಗ, ಶಿಕ್ಷಣ ಅಥವಾ ತರಬೇತಿ ಯಲ್ಲಿ ತೊಡಗಿಕೊಂಡಿರದ ಮಹಿಳೆಯರ ಪ್ರಮಾಣ(ಶೇ.9.8); ಇದು ಪುರುಷರಿಗೆ ಹೋಲಿಸಿದರೆ ಐದು ಪಟ್ಟು ಹೆಚ್ಚು(ಶೇ.48.4).

ಹಣದುಬ್ಬರದ ತೊಂದರೆ: ಹಣದುಬ್ಬರದ ಬಗ್ಗೆ ಪ್ರತಿಕ್ರಿಯಿಸಿದವರಲ್ಲಿ ಶೇ. 26 ಮಂದಿ ಕೇಂದ್ರವನ್ನು , ಶೇ.12 ಮಂದಿ ರಾಜ್ಯ ಮತ್ತು ಶೇ. 56 ಎರಡೂ ಕಾರಣವೆಂದು ಹೇಳಿದ್ದಾರೆ.

ಹೆಚ್ಚಿನ ಸಂಖ್ಯೆಯ ಮತದಾರರು ತಮ್ಮ ಹಣಕಾಸಿನ ಮೇಲೆ ತೀವ್ರ ಪರಿಣಾಮ ಉಂಟಾಗಿದೆ ಎಂದು ಹೇಳಿದರು. ಶೇ 71 ಜನರು ಸರಕುಗಳ ಬೆಲೆಯಲ್ಲಿ ಹೆಚ್ಚಳವನ್ನು ಗಮನಿಸಿದ್ದಾರೆ. ಹೆಚ್ಚುತ್ತಿರುವ ವೆಚ್ಚಗಳು ಆರ್ಥಿಕವಾಗಿ ಹಿಂದುಳಿದವರು (ಶೇ.76), ಮುಸ್ಲಿಮರು (ಶೇ.76) ಮತ್ತು ಪರಿಶಿಷ್ಟ ಜಾತಿಗಳು (ಶೇ.75) ಮೇಲೆ ವಿಪರಿಣಾಮ ಬೀರಿದೆ ಎಂದು ಸಮೀಕ್ಷೆ ಹೇಳಿದೆ.

ಜೀವನದ ಗುಣಮಟ್ಟ: ಕಳೆದ ಐದು ವರ್ಷಗಳಲ್ಲಿಜೀವನದ ಗುಣಮಟ್ಟ ಸುಧಾರಿಸಿದೆ ಎಂದು ಶೇ. 48 ಮಂದಿ ಹೇಳಿದ್ದಾರೆ; ಆದರೆ, ಶೇ.35 ಮಂದಿ ಕುಸಿದಿದೆ ಎಂದು ಹೇಳಿದ್ದಾರೆ. ಪ್ರತಿಕ್ರಿಯಿಸಿದವರಲ್ಲಿ ಕೇವಲ ಶೇ. 22 ಮಂದಿ ಮಾತ್ರ ಗಳಿಕೆಯಲ್ಲಿ ಹಣ ಉಳಿಸುತ್ತಿದ್ದೇವೆ ಎಂದಿದ್ದಾರೆ. ಶೇ.36 ಮಂದಿ ಅಗತ್ಯಗಳನ್ನು ಪೂರೈಸುವಷ್ಟು ಆದಾಯವಿದೆ ಎಂದಿದ್ದಾರೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ, ಶೇ.55 ಮಂದಿ ಕಳೆದ ಐದು ವರ್ಷಗಳಲ್ಲಿ ಭ್ರಷ್ಟಾಚಾರ ಹೆಚ್ಚಿದೆ ಎಂದಿದ್ದಾರೆ. ಇದಕ್ಕೆ ಕೇಂದ್ರ ಶೇ. 25 ಮತ್ತು ರಾಜ್ಯ ಶೇ.16ರಷ್ಟು ಕಾರಣ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

ಲೋಕನೀತಿ- ಸಿಎಸ್‌ಡಿಎಸ್‌ ಚುನಾವಣೆ ಪೂರ್ವ ಸಮೀಕ್ಷೆಯು 19 ರಾಜ್ಯಗಳಲ್ಲಿ ನಡೆದಿದ್ದು, 10,019 ವ್ಯಕ್ತಿಗಳಿಂದ ಪ್ರತಿಕ್ರಿಯೆ ಸಂಗ್ರಹಿಸಿದೆ. 100 ವಿಧಾನಸಭೆ ಕ್ಷೇತ್ರಗಳ 400 ಮತಗಟ್ಟೆಗಳಲ್ಲಿ ಸಮೀಕ್ಷೆ ನಡೆಸಲಾಗಿದೆ.

Tags:    

Similar News