ತ್ರಿವಳಿ ತಲಾಖ್ ʻಮದುವೆ ವ್ಯವಸ್ಥೆಗೆ ಮಾರಕ': ಸುಪ್ರೀಂಗೆ ಕೇಂದ್ರ ಹೇಳಿಕೆ
ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ನಿಷೇಧಿಸಿದ ಬಳಿಕವೂ ಆಚರಣೆ ನಿಲ್ಲದ ಕಾರಣ ಮುಸ್ಲಿಂ ಮಹಿಳೆಯರ (ವಿವಾಹದ ಮೇಲಿನ ಹಕ್ಕುಗಳ ರಕ್ಷಣೆ) ಕಾಯ್ದೆ 2019 ಅನ್ನು ಜಾರಿಗೊಳಿಸಲಾಗಿದೆ ಎಂದು ಕೇಂದ್ರವು ನ್ಯಾಯಾಲಯಕ್ಕೆ ತಿಳಿಸಿದೆ;
ತ್ರಿವಳಿ ತಲಾಖ್ ಮದುವೆಯೆಂಬ ಸಾಮಾಜಿಕ ಸಂಸ್ಥೆಗೆ ʻಮಾರಕʼ ಮತ್ತು ಮಹಿಳೆಯರನ್ನು ʻಅತ್ಯಂತ ಕರುಣಾಜನಕʼ ಸ್ಥಿತಿಯಲ್ಲಿ ಇಡುತ್ತದೆ ಎಂದು ಕೇಂದ್ರ ಸರ್ಕಾರವು ಸುಪ್ರೀ ಕೋರ್ಟ್ ಗೆ ಸೋಮವಾರ ಹೇಳಿದೆ. ತ್ರಿವಳಿ ತಲಾಖನ್ನು ಅಪರಾಧ ಎನ್ನುವ 2019 ರ ಕಾನೂನನ್ನು ಕೇಂದ್ರ ಸಮರ್ಥಿಸಿಕೊಳ್ಳುತ್ತಿದೆ.
ಮುಸ್ಲಿಂ ಮಹಿಳೆಯರ (ವಿವಾಹ ಹಕ್ಕುಗಳ ರಕ್ಷಣೆ) ಕಾಯಿದೆ 2019ನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳಿಗೆ ಪ್ರತಿಯಾಗಿ ಸಲ್ಲಿಸಿದ ಪ್ರಮಾಣಪತ್ರದಲ್ಲಿ, 2017 ರಲ್ಲಿ ಸುಪ್ರೀಂ ಕೋರ್ಟ್ ಈ ಪದ್ಧತಿಯನ್ನು ರದ್ದುಗೊಳಿಸಿದ್ದರೂ, ನಿಷೇಧದಿಂದ ಸಮುದಾಯದ ಸದಸ್ಯರಲ್ಲಿ ವಿಚ್ಛೇದನಗಳ ಸಂಖ್ಯೆ ಕಡಿಮೆಯಾಗಿಲ್ಲ ಎಂದು ಹೇಳಿದೆ.
ʻತ್ರಿವಳಿ ತಲಾಖ್‌ನ ಬಲಿಪಶುಗಳಿಗೆ ಪೊಲೀಸರನ್ನು ಸಂಪರ್ಕಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಕಾನೂನಿನಲ್ಲಿ ದಂಡನಾತ್ಮಕ ನಿಬಂಧನೆಗಳ ಇಲ್ಲದ ಕಾರಣ ಪತಿ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಾಗದೆ ಪೊಲೀಸರು ಅಸಹಾಯಕರಾಗಿದ್ದಾರೆ. ಇದನ್ನು ತಡೆಗಟ್ಟಲು ಕಠಿಣ (ಕಾನೂನು) ನಿಬಂಧನೆಗಳ ತುರ್ತು ಅಗತ್ಯವಿದೆ,ʼ ಎಂದು ಹೇಳಿದೆ.
ʻತ್ರಿವಳಿ ತಲಾಖ್‌ನಿಂದ ವಿಚ್ಛೇದನ ಪಡೆಯುತ್ತಿರುವ ವಿವಾಹಿತ ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು ಸಂಸತ್ತು ದೋಷರಹಿತ ಕಾಯಿದೆಯನ್ನು ಜಾರಿಗೊಳಿಸಿದೆ,ʼ ಎಂದು ಪ್ರಮಾಣಪತ್ರ ಹೇಳಿದೆ.
ಲಿಂಗ ಸಮಾನತೆ: ʻವಿವಾಹಿತ ಮುಸ್ಲಿಂ ಮಹಿಳೆಯರ ಲಿಂಗ ನ್ಯಾಯ ಮತ್ತು ಲಿಂಗ ಸಮಾನತೆಯಂಥ ದೊಡ್ಡ ಸಾಂವಿಧಾನಿಕ ಗುರಿಗಳನ್ನು ಕಾಯಿದೆ ಖಾತ್ರಿಪಡಿಸುತ್ತದೆ ಮತ್ತು ಅವರ ಮೂಲಭೂತ ಹಕ್ಕುಗಳಾದ ತಾರತಮ್ಯರಹಿತತೆ ಮತ್ತು ಸಬಲೀಕರಣಕ್ಕೆ ಸಹಾಯ ಮಾಡುತ್ತದೆ,ʼ ಎಂದು ಹೇಳಿದೆ.
22 ಆಗಸ್ಟ್ 2017 ರಂದು ಸುಪ್ರೀಂ ಕೋರ್ಟ್ ತಕ್ಷಣದ ತ್ರಿವಳಿ ತಲಾಖ್ (ತಲಾಕ್-ಎ-ಬಿದ್ದಾ) ಅಸಂವಿಧಾನಿಕ ಎಂದು ಘೋಷಿಸಿತು. ಆಗಸ್ಟ್ 23, 2019 ರಂದು ಮುಸ್ಲಿಂ ಮಹಿಳೆಯರ (ವಿವಾಹದ ಮೇಲಿನ ಹಕ್ಕುಗಳ ರಕ್ಷಣೆ) ಕಾಯಿದೆ 2019 ರ ಸಿಂಧುತ್ವವನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿತು.
ಕಾನೂನಿನ ಉಲ್ಲಂಘನೆಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಕಾನೂನಿನ ವಿರುದ್ಧ ಅರ್ಜಿ: ಮುಸ್ಲಿಂ ಸಂಘಟನೆಗಳಾದ ಜಮಿಯತ್ ಉಲಮಾ-ಐ-ಹಿಂದ್ ಮತ್ತು ಸಮಸ್ತ ಕೇರಳ ಜಮಿಯತುಲ್ ಉಲೇಮಾ, ಕಾನೂನನ್ನು ʻಅಸಂವಿಧಾನಿಕʼ ಎಂದು ಘೋಷಿಸಲು ನ್ಯಾಯಾಲಯವನ್ನು ಒತ್ತಾಯಿಸಿವೆ. ಜಮಿಯತುಲ್ ತನ್ನ ಅರ್ಜಿಯಲ್ಲಿ ʻಒಂದು ನಿರ್ದಿಷ್ಟ ಧರ್ಮದಲ್ಲಿ ವಿಚ್ಛೇದನದ ವಿಧಾನವನ್ನು ಅಪರಾಧೀಕರಿಸುವುದು ಹಾಗೂ ಇತರ ಧರ್ಮಗಳಲ್ಲಿ ವಿವಾಹ ಮತ್ತು ವಿಚ್ಛೇದನದ ವಿಷಯವನ್ನು ನಾಗರಿಕ ಕಾನೂನಿನ ವ್ಯಾಪ್ತಿಯಲ್ಲಿ ಇರಿಸುವುದು ತಾರತಮ್ಯಕ್ಕೆ ಕಾರಣವಾಗುತ್ತದೆ. ಇದು ವಿಧಿ 15 ರ ಆಶಯಕ್ಕೆ ಅನುಗುಣವಾಗಿಲ್ಲ,ʼ ಎಂದು ಹೇಳಿದೆ.