ನಕಲಿ ಎನ್‌ಸಿಸಿ ಶಿಬಿರ| 13 ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ; 11 ಮಂದಿ ಬಂಧನ

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ ನಕಲಿ ಎನ್‌ಸಿಸಿ ಶಿಬಿರದಲ್ಲಿ ತಮಿಳು ರಾಷ್ಟ್ರೀಯವಾದಿ ಪಕ್ಷವಾದ ನಾಮ್ ತಮಿಳರ್ ಕಚ್ಚಿ (ಎನ್‌ಟಿಕೆ) ಯ ಪದಾಧಿಕಾರಿಯಾದ ಶಿವರಾಮನ್‌ ಸೇರಿದಂತೆ 11 ಮಂದಿ 13 ವರ್ಷದ ಬಾಲಕಿ ಮೇಲೆ ಲೈಂಗಿಕ ಕಿರುಕುಳ ಮತ್ತು 12 ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Update: 2024-08-19 07:54 GMT

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ ನಕಲಿ ಎನ್‌ಸಿಸಿ ಶಿಬಿರದಲ್ಲಿ 13 ವರ್ಷದ ಬಾಲಕಿ ಮೇಲೆ ಲೈಂಗಿಕ ಕಿರುಕುಳ ಮತ್ತು 12 ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಪೊಲೀಸರು 11 ಜನರನ್ನು ಬಂಧಿಸಿದ್ದಾರೆ.

ಪ್ರಮುಖ ಆರೋಪಿ ಶಿವರಾಮನ್(28), ನಕಲಿ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ಶಿಬಿರದ ಸಂಘಟಕ. ಬಂಧಿತರಲ್ಲಿ ಶಾಲೆಯ ಪ್ರತಿನಿಧಿ ಐ. ಸ್ಯಾಮ್ಸನ್ ವೆಸ್ಲಿ, ಪ್ರಾಂಶುಪಾಲ ಎ. ಸತೀಶ್ ಕುಮಾರ್, ಇಬ್ಬರು ಶಿಕ್ಷಕರು ಮತ್ತು ಆರು ಮಂದಿ ಸೇರಿದ್ದಾರೆ. ಆಗಸ್ಟ್ 5-9 ರ ಅವಧಿಯಲ್ಲಿ ಶಾಲೆ ಆವರಣದಲ್ಲಿ ಲೈಂಗಿಕ ಅಪರಾಧಗಳು ನಡೆದಿವೆ. 

ತಮಿಳು ರಾಷ್ಟ್ರೀಯವಾದಿ ಪಕ್ಷವಾದ ನಾಮ್ ತಮಿಳರ್ ಕಚ್ಚಿ (ಎನ್‌ಟಿಕೆ) ಯ ಪದಾಧಿಕಾರಿಯಾದ ಶಿವರಾಮನ್ , ಎನ್‌ಸಿಸಿ ಶಿಬಿರವನ್ನು ನಡೆಸುವುದಾಗಿ ಶಾಲೆಯ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಶಾಲೆಯಲ್ಲಿ ಎನ್‌ಸಿಸಿ ಘಟಕ ಇರಲಿಲ್ಲ; ಶಿಬಿರ ಆಯೋಜಿಸುವ ಮೂಲಕ ಎನ್‌ ಸಿಸಿ ಘಟಕ ಪಡೆಯುವ ಅರ್ಹತೆ ಸಿಗುತ್ತದೆ ಎಂದು ಶಿವರಾಮನ್ ಹೇಳಿದ್ದ. 

ಸಂಘಟಕನ ಹಿನ್ನೆಲೆ ಪರಿಶೀಲನೆ ಮಾಡದ ಶಾಲೆ: ಶಾಲೆ ತನ್ನ ಆವರಣದಲ್ಲಿ ಶಿಬಿರ ನಡೆಸಲು ಅನುಮತಿ ನೀಡುವ ಮೊದಲು, ಹಿನ್ನೆಲೆ ಪರಿಶೀಲನೆ ಮಾಡಿರಲಿಲ್ಲ ಎಂದು ಆರೋಪಿಸಲಾಗಿದೆ. ಮೂರು ದಿನಗಳ ಶಿಬಿರದಲ್ಲಿ 17 ಬಾಲಕಿಯರು ಸೇರಿದಂತೆ 41 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಾಲೆಯ ಮೊದಲ ಮಹಡಿಯಲ್ಲಿ ಬಾಲಕಿಯರಿಗೆ ಹಾಗೂ ನೆಲ ಮಹಡಿಯಲ್ಲಿ ಬಾಲಕರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಶಿಬಿರದ ಮೇಲ್ವಿಚಾರಣೆಗೆ ಶಾಲೆ ಯಾವುದೇ ಶಿಕ್ಷಕರನ್ನು ನಿಯೋಜಿಸಿರಲಿಲ್ಲ. 

ʻಖಾಸಗಿ ಶಾಲೆ ಆಡಳಿತ ಎನ್‌ಸಿಸಿ ಕಾರ್ಯಕ್ರಮ ನಡೆಸಲು ಅಗತ್ಯ ಅನುಮತಿ ಪಡೆದಿಲ್ಲ. ಶಿಬಿರ ನಡೆಸಲು ತನಗೆ ಅಧಿಕಾರವಿದೆ ಎಂದು ಹೇಳಿದ ಶಿವರಾಮನ್‌ ಅವರ ಮಾತು ನಂಬಿದರು,ʼ ಎಂದು ಕೃಷ್ಣಗಿರಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಪಿ. ತಂಗದುರೈ ಅವರು ತಿಳಿಸಿದರು. 

ಆಮಿಷವೊಡ್ಡಿ ಸಭಾಂಗಣದಿಂದ ಹೊರಗೆ ಕರೆದೊಯ್ದು, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಬಾಲಕಿಯರು ಆರೋಪಿಸಿದ್ದಾರೆ.

ದೂರು ನಿರ್ಲಕ್ಷಿಸಿದ ಪ್ರಾಂಶುಪಾಲ: ಲೈಂಗಿಕ ದೌರ್ಜನ್ಯಕ್ಕೊಳಗಾದ ಬಾಲಕಿ(13) ಶಿಬಿರದ ನಂತರ ಆಗಸ್ಟ್ 9 ರಂದು ಪ್ರಾಂಶುಪಾಲರಿಗೆ ದೂರು ನೀಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ಆದರೆ, ಸತೀಶ್‌ಕುಮಾರ್‌ ವಿಷಯವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ʻಶಾಲಾಡಳಿತ ದೂರಿನ ವಿಚಾರಣೆ ನಡೆಸಲಿಲ್ಲ ಮತ್ತು ವಿಷಯ ಮುಚ್ಚಿಡಲು ನಿರ್ಧರಿಸಿತು. ಬಾಲಕಿಯ ಪೋಷಕರಿಂದ ದೂರು ಸ್ವೀಕರಿಸಿದ ನಂತರ ಪ್ರಕರಣ ದಾಖಲಿಸಿ, ತನಿಖೆ ಪ್ರಾರಂಭಿಸಿದ್ದೇವೆ,ʼ ಎಂದು ತಂಗದುರೈ ಹೇಳಿದರು.

ಪರಾರಿಯಾಗಿದ್ದ ಶಿವರಾಮನ್‌ನನ್ನು  ಸೋಮವಾರ (ಆಗಸ್ಟ್ 19) ಬಂಧಿಸಲಾಗಿದೆ. ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಮತ್ತು ಬಿಎನ್‌ಎಸ್ ಕಾಯಿದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.



Tags:    

Similar News