ತಿರುಪತಿ ದೇವಸ್ಥಾನ | ಟಿಟಿಡಿ ಅಧ್ಯಕ್ಷರ ಸ್ಥಾನಕ್ಕೆ ಅಭ್ಯರ್ಥಿ ಹುಡುಕಾಟ; ದಲಿತ ಮುಖಂಡರಿಗೆ ಸಿಗುವುದೇ ಅವಕಾಶ?

ಕಾಪು, ರೆಡ್ಡಿ, ಕ್ಷತ್ರಿಯ ಮತ್ತು ಹಿಂದುಳಿದ (ಬಿಸಿ) ಸಮುದಾಯದವರು ಈ ಹುದ್ದೆಯನ್ನು ಅಲಂಕರಿಸಿದ್ದಾರೆ. ಹೀಗಾಗಿ, ಈ ಬಾರಿ ಟಿಟಿಡಿ ಅಧ್ಯಕ್ಷರ ಸ್ಥಾನ ಕಮ್ಮ ಅಥವಾ ದಲಿತ ಸಮುದಾಯಕ್ಕೆ ಹೋಗಬಹುದು ಎಂದು ಊಹಿಸಲಾಗಿದೆ.

Update: 2024-07-03 07:54 GMT
ತಿರುಮಲ ದೇವಸ್ಥಾನವು ಪ್ರತಿನಿತ್ಯ ದೇಶದೆಲ್ಲೆಡೆಯ ಮತ್ತು ವಿದೇಶಗಳ ಸುಮಾರು 70,000 ಯಾತ್ರಿಕರನ್ನು ಆಕರ್ಷಿಸುತ್ತದೆ

ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ತಿರುಪತಿ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಸೇರಿ ದಂತೆ ವಿವಿಧ ದೇವಸ್ಥಾನಗಳನ್ನು ನಿರ್ವಹಿಸುತ್ತಿರುವ ಸ್ವತಂತ್ರ ಟ್ರಸ್ಟ್ ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ)ಗೆ ಹೊಸ ಅಧ್ಯಕ್ಷರನ್ನು ಹುಡುಕುತ್ತಿದ್ದಾರೆ.

ಈ ಪ್ರತಿಷ್ಟಿತ ಹುದ್ದೆಯ ರೇಸ್‌ನಲ್ಲಿ ಅನೇಕ ಆಕಾಂಕ್ಷಿಗಳಿದ್ದಾರೆ. ನಾಯ್ಡು ಸರ್ಕಾರವನ್ನು ಬೆಂಬಲಿಸುತ್ತಿರುವ ಜನಸೇನೆ ಮತ್ತು ಬಿಜೆಪಿ ಉಲ್ಲೇಖಿಸಿದ ಹೆಸರುಗಳು ಕೂಡ ಪರಿಗಣನೆಯಲ್ಲಿವೆ ಎಂದು ಅಧಿಕೃತ ಮೂಲಗಳು ದ ಫೆಡರಲ್‌ಗೆ ತಿಳಿಸಿವೆ. 

ಭೂಮನ ರಾಜೀನಾಮೆ: ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ ಸೋತ ನಂತರ ಭೂಮನ ಕರುಣಾಕರ್ ರೆಡ್ಡಿ ಅವರು ಟಿಟಿಡಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಜಗನ್ ಅಧಿಕಾರ ಕಳೆದುಕೊಂಡ ನಂತರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಮೊದಲ ವ್ಯಕ್ತಿ ಭೂಮನ. ತಿರುಪತಿಯ ಶಾಸಕರಾಗಿದ್ದ ಅವರನ್ನು ಕಳೆದ ಆಗಸ್ಟ್‌ನಲ್ಲಿ ವೈಎಸ್‌ಆರ್‌ಸಿಪಿ ಸರ್ಕಾರ ಟಿಟಿಡಿ ಅಧ್ಯಕ್ಷ ಸ್ಥಾನಕ್ಕೆ ನೇಮಿಸಿತ್ತು. ಚುನಾವಣೆ ಫಲಿತಾಂಶ ಘೋಷಣೆಯಾಗುವ ಮುನ್ನವೇ ಜೂನ್ 4ರಂದು ಅವರು ರಾಜೀನಾಮೆ ಸಲ್ಲಿಸಿದರು. 

ಗಣಪತಿ ರಾಜು ಮುಂಚೂಣಿಯಲ್ಲಿ?: ಗಜಪತಿ ರಾಜು ಅವರನ್ನು ಟಿಟಿಡಿ ಮುಖ್ಯಸ್ಥ ಸ್ಥಾನಕ್ಕೆ ನೇಮಿಸಲು ನಾಯ್ಡು ಒಲವು ತೋರಿದ್ದಾರೆ ಎಂದು ಮೂಲಗಳು ಹೇಳಿವೆ. ಏಳು ಬಾರಿ ಶಾಸಕರಾಗಿರುವ ರಾಜು ಅವರು ಆಂಧ್ರಪ್ರದೇಶ ಸರ್ಕಾರದಲ್ಲಿ ಸಚಿವರಾಗಿ ಹಲವು ಖಾತೆಗಳನ್ನು ನಿರ್ವಹಿಸಿದ್ದು, ಮಿಸ್ಟರ್‌ ಕ್ಲೀನ್‌ ಇಮೇಜ್ ಹೊಂದಿದ್ದಾರೆ. 

ಹಿರಿಯ ಟಿಡಿಪಿ ನಾಯಕರಾದ ಅವರು ವಿಜಯನಗರದಿಂದ ಸಂಸದರಾಗಿ ಆಯ್ಕೆಯಾಗಿದ್ದರು ಮತ್ತು ಕೇಂದ್ರದ ಎನ್‌ಡಿಎ ಸರ್ಕಾರದಲ್ಲಿ ನಾಗರಿಕ ವಿಮಾನಯಾನ ಸಚಿವರಾಗಿದ್ದರು. ಎನ್ಡಿಎ ಆಂಧ್ರಪ್ರದೇಶಕ್ಕೆ ವಿಶೇಷ ವರ್ಗದ ಸ್ಥಾನಮಾನವನ್ನು ನಿರಾಕರಿಸಿದ್ದರಿಂದ, ಟಿಡಿಪಿ ಮೈತ್ರಿಯನ್ನು ತೊರೆದಾಗ ಅವರು 2018 ರಲ್ಲಿ ರಾಜೀನಾಮೆ ನೀಡಿದರು.

ಈ ವರ್ಷ ಗಜಪತಿ ರಾಜು ಅವರು ಆರೋಗ್ಯದ ಕಾರಣ ನೀಡಿ ಚುನಾವಣೆಯಿಂದ ಹೊರಗುಳಿದಿದ್ದರು. ಅವರ ಪುತ್ರಿ ಅದಿತಿ ವಿಜಯಲಕ್ಷ್ಮಿ ಸ್ಪರ್ಧಿಸಿ, 60,609 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಜಾತಿ ಸಮೀಕರಣ: ಶಾಸಕ ರಘುರಾಮ ಕೃಷ್ಣಂ ರಾಜು, ಚಲನಚಿತ್ರ ನಟ ಮತ್ತು ನಿರ್ಮಾಪಕ ಕೊನಿಡೇಲ ನಾಗಬಾಬು ರೇಸ್‌ನಲ್ಲಿದ್ದಾರೆ ಎಂದು ತಿಳಿದುಬಂದಿದೆ. ಕಮ್ಮ ಮತ್ತು ದಲಿತರು ಈವರೆಗೆ ಟಿಟಿಡಿಯಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿಲ್ಲ ಎಂದು ಟಿಟಿಡಿ ಮೂಲಗಳು ಹೇಳುತ್ತವೆ. ಹೊಸ ಅಧ್ಯಕ್ಷರ ಆಯ್ಕೆಯಲ್ಲಿ ಜಾತಿ ಪಾತ್ರ ವಹಿಸುವುದೇ ಎಂಬುದು ಸ್ಪಷ್ಟವಾಗಿಲ್ಲ.

ತಿರುಪತಿಯ ಜನಸೇನಾ ಪಕ್ಷದ ಶಾಸಕ ಅರಣಿ ಶ್ರೀನಿವಾಸುಲು ಬಲಿಜ (ಕಾಪು) ಸಮುದಾಯಕ್ಕೆ ಸೇರಿದವರು. ಜಾತಿಯಿಂದಾಗಿ ಅವರನ್ನು ಪರಿ ಗಣಿಸದೆ ಇರಬಹುದು. ಕಾಪು, ರೆಡ್ಡಿ, ಕ್ಷತ್ರಿಯ ಮತ್ತು ಹಿಂದುಳಿದ (ಬಿಸಿ) ಸಮುದಾಯದವರು ಈ ಹುದ್ದೆಯನ್ನು ಅಲಂಕರಿಸಿದ್ದಾರೆ. ಹೀಗಾಗಿ, ಈ ಬಾರಿ ಟಿಟಿಡಿ ಅಧ್ಯಕ್ಷರ ಸ್ಥಾನ ಕಮ್ಮ ಅಥವಾ ದಲಿತ ಸಮುದಾಯಕ್ಕೆ ಹೋಗಬಹುದು ಎಂದು ಊಹಿಸಲಾಗಿದೆ.

ಶ್ರೀಮಂತ ದೇವಾಲಯ: ತಿರುಪತಿ ದೇವಸ್ಥಾನದ ಆದಾಯ ಹೆಚ್ಚಿದ್ದು, ಅದು ವಿಶ್ವದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. 5,100 ಕೋಟಿ ರೂ. ಅಂದಾಜು ಬಜೆಟ್‌ನೊಂದಿಗೆ ಟ್ರಸ್ಟ್ ಸಾಮಾಜಿಕ, ಧಾರ್ಮಿಕ, ವೈದ್ಯಕೀಯ, ಸಾಹಿತ್ಯಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ತಿರುಪತಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, ಸುಮಾರು 16,000 ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ. ಟ್ರಸ್ಟ್‌ ಪುರಾತನ ದೇವಾಲಯಗಳ ನವೀಕರಣವಲ್ಲದೆ, ಆರ್ಥಿಕ ತೊಂದರೆ ಇರುವ ದೇವಾಲಯಕ್ಕೆ ನೆರವು ನೀಡುತ್ತದೆ.

ಪ್ರತಿಷ್ಠಿತ ಹುದ್ದೆ: ಟಿಟಿಡಿ ಅಧ್ಯಕ್ಷ ಸ್ಥಾನವು ಆಂಧ್ರಪ್ರದೇಶದಲ್ಲಿ ಮಾತ್ರವಲ್ಲದೆ, ಬೇರೆಡೆಯೂ ಪ್ರತಿಷ್ಟಿತ ಸ್ಥಾನವಾಗಿದೆ. ದೇಶಾದ್ಯಂತ ಮತ್ತು ವಿದೇಶಗಳಿಂದ ತಿರುಮಲಕ್ಕೆ ಭೇಟಿ ನೀಡುವ ಪ್ರಮುಖರು ಮೊದಲು ಟಿಟಿಡಿ ಮುಖ್ಯಸ್ಥರನ್ನು ಭೇಟಿಯಾಗುತ್ತಾರೆ. ಚಂದ್ರಬಾಬು ನಾಯ್ಡು ಏಳು ಬೆಟ್ಟಗಳ ಒಡೆಯನ ಕಟ್ಟಾ ಭಕ್ತ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಕುಟುಂಬ ಸಮೇತ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು.

ಆಂಧ್ರಪ್ರದೇಶದ ಆಡಳಿತದ ಶುದ್ಧೀಕರಣವು ತಿರುಮಲದಿಂದ ಪ್ರಾರಂಭವಾಗುತ್ತದೆ ಎಂದು ಘೋಷಿಸಲಾಗಿತ್ತು.


(ಲೇಖನ ಮೂಲತಃ ದ ಫೆಡರಲ್ ಆಂಧ್ರಪ್ರದೇಶದಲ್ಲಿ ಪ್ರಕಟವಾಗಿತ್ತು)

Tags:    

Similar News