ತಿರುಪತಿ ದೇವಸ್ಥಾನದಲ್ಲಿರುವ ಹಿಂದೂಯೇತರ ಸಿಬ್ಬಂದಿಗೆ ಸ್ವಯಂ ನಿವೃತ್ತಿ ಪಡೆಯಲು ಸೂಚನೆ
ತಿರುಮಲದ ಅನ್ನಮಯ್ಯ ಭವನದಲ್ಲಿ ಅಧ್ಯಕ್ಷ ಬಿ.ಆರ್.ನಾಯ್ಡು ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಸಭೆ ನಡೆಯಿತು. ಲಡ್ಡು ಗುಣಮಟ್ಟ ಹೆಚ್ಚಳ, ರಾಜಕೀಯ ಹೇಳಿಕೆ ಬಂದ್, ದರ್ಶನದ ಸಮಯ ಕಡಿತ ಸೇರಿದಂತೆ ನಾನಾ ಸುಧಾರಣೆಗಳನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.;
ತಿರುಮಲ ತಿರುಪತಿ ದೇವಸ್ಥಾನಕ್ಕೆ (TTD) ಚಂದ್ರಬಾಬು ನಾಯ್ಡು (ಚಂದ್ರಬಭು Naidu) ಸರ್ಕಾರ ಹೊಸದಾಗಿ ನೇಮಕ ಮಾಡಿರುವ ಮಂಡಳಿಯು ಸೋಮವಾರ (ನವೆಂಬರ್ 18) ತನ್ನ ಮೊದಲ ಸಭೆ ನಡೆಸಿತು. ಈ ವೇಳೆ ಹಲವಾರು ಬದಲಾವಣೆಗಳು ಮಾಡುವ ನಿರ್ಧಾರ ತೆಗೆದುಕೊಂಡಿತು. ಪ್ರಮುಖವಾಗಿ ಹಿಂದೂಯೇತರ ಸಿಬ್ಬಂದಿಗೆ ಸ್ವಯಂ ನಿವೃತ್ತಿ ಪಡೆಯುವಂತೆ ಅಥವಾ ಬೇರೆ ಇಲಾಖೆಗಳಿಗೆ ವರ್ಗಾವಣೆ ಪಡೆಯುವಂತೆ ಸೂಚನೆ ನೀಡುವ ನಿರ್ಧಾರ ಕೈಗೊಂಡಿತು. ಅದೇ ರೀತಿ ತಿರುಮಲ ಬೆಟ್ಟದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ʼಮುಮ್ತಾಜ್ʼ ಹೋಟೆಲ್‌ಗೆ ಹಿಂದಿನ ಸರ್ಕಾರ ನೀಡಿದ್ದ 20 ಎಕರೆ ಜಮೀನು ವಾಪಸ್ ಪಡೆಯವಂತೆ ಮನವಿ ಸಲ್ಲಿಸುವ ನಿರ್ಣಯ ಕೈಗೊಂಡಿತು. ಲಡ್ಡು ಗುಣಮಟ್ಟ ಹೆಚ್ಚಳ, ದರ್ಶನದ ಸಮಯದಲ್ಲಿ ಕಡಿತ ಸೇರಿದಂತೆ ಹಲವು ವಿಚಾರಗಳು ಸಭೆಯಲ್ಲಿ ಚರ್ಚೆಯಾದವು.
ತಿರುಮಲದ ಅನ್ನಮಯ್ಯ ಭವನದಲ್ಲಿ ಅಧ್ಯಕ್ಷ ಬಿ.ಆರ್.ನಾಯ್ಡು ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಸಭೆ ನಡೆಯಿತು. ಹಿಂದಿನ ವೈಎಸ್‌ಆರ್‌ಪಿ ಸರ್ಕಾರದ ಅಡಿಯಲ್ಲಿದ್ದ ಮಂಡಳಿ ಅಂಗೀಕರಿಸಿದ ವಿವಾದಾತ್ಮಕ ನಿರ್ಣಯಗಳನ್ನು ರದ್ದುಗೊಳಿಸುವುದು ಸೇರಿದಂತೆ ಹಲವಾರು ಪ್ರಮುಖ ನಿರ್ಧಾರಗಳನ್ನು ನೂತನ ಮಂಡಳಿ ತೆಗೆದುಕೊಂಡಿದೆ.
ʼಮುಮ್ತಾಜ್ʼನಿಂದ ಹಿಂದೂಗಳ ಭಾವನೆಗಳಿಗೆ ಧಕ್ಕೆ
ಮುಮ್ತಾಜ್ ಹೋಟೆಲ್ ನಿರ್ಮಿಸಲು ಅಲಿಪಿರಿ ಬಳಿ 20 ಎಕರೆ ಭೂಮಿಯನ್ನು ಹಿಂದಿನ ವೈಎಸ್‌ಆರ್‌ಪಿ ಸರ್ಕಾರ ಮಂಜೂರು ಮಾಡಿತ್ತು. ಉದ್ದೇಶಿತ ಹೋಟೆಲ್‌ಗೆ ಭೂಮಿ ಮಂಜೂರು ಮಾಡಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದದ ಟಿಟಿಡಿ ಅಧ್ಯಕ್ಷ ನಾಯ್ಡು, ಭೂಮಿ ವಾಪಸ್ ಪಡೆಯುವಂತೆ ಸರ್ಕಾರಕ್ಕೆ ಮನವಿ ಮಾಡಿದರು.
"ತಿರುಪತಿಯ ಎಸ್‌ವಿ ಮೃಗಾಲಯದ ಬಳಿಯ 'ದೇವಲೋಕ' ಸ್ಥಳವನ್ನು ಅಭಿವೃದ್ಧಿಪಡಿಸುವ ದೂರದೃಷ್ಟಿಯೊಂದಿಗೆ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು 2019ಕ್ಕಿಂತ ಮೊದಲು ಪ್ರವಾಸೋದ್ಯಮ ಇಲಾಖೆಗೆ 20 ಎಕರೆ ಭೂಮಿ ಮಂಜೂರು ಮಾಡಿದ್ದರು. ಅಲ್ಲಿ ಈಗ 'ಮುಮ್ತಾಜ್' ಎಂಬ ಪಂಚತಾರಾ ಹೋಟೆಲ್ ನಿರ್ಮಿಸುವ ಯೋಜನೆ ಸಿದ್ಧಪಡಿಸಲಾಗಿದೆ. ಈ ಸ್ಥಳವು ತಿರುಮಲ ಬೆಟ್ಟಗಳಿಗೆ ಹೊಂದಿಕೊಂಡಿದೆ. ಇಂತಹ ಚಟುವಟಿಕೆಗಳು ಹಿಂದೂಗಳ ಭಾವನೆಗಳನ್ನು ನೋಯಿಸಬಹುದು. ಆ ಭೂಮಿಯನ್ನು ಟಿಟಿಡಿಗೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು" ಎಂದು ಟಿಟಿಡಿ ಅಧ್ಯಕ್ಷರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹೋಟೆಲ್ ಯೋಜನೆಯ ಬಗ್ಗೆ
ವೈಎಸ್ಆರ್‌ಪಿ ನೇತೃತ್ವದ ಆಂಧ್ರಪ್ರದೇಶ ಸರ್ಕಾರವು 2021ರಲ್ಲಿ ಸರ್ಕಾರಿ ಆದೇಶ ಹೊರಡಿಸಿ. 2020-2025 ಪ್ರವಾಸೋದ್ಯಮ ನೀತಿಯಡಿ ಐಷಾರಾಮಿ ಪ್ರವಾಸೋದ್ಯಮ ಯೋಜನೆಯನ್ನು ಅಭಿವೃದ್ಧಿಪಡಿಸುವುದಾಗಿ ಹೇಳಿತ್ತು.
ತಿರುಪತಿಯಲ್ಲಿ ಪ್ರವಾಸೋದ್ಯಮ ಮತ್ತು ಸ್ಥಳೀಯ ಉದ್ಯೋಗಕ್ಕೆ ಉತ್ತೇಜನ ನೀಡುವ ಗುರಿಯನ್ನು ಹೊಂದಿತ್ತು. ಆದೇಶದ ಪ್ರಕಾರ, ಒಬೆರಾಯ್ ಗ್ರೂಪ್‌ನ ಅಂಗಸಂಸ್ಥೆಯಾದ ಮುಮ್ತಾಜ್ ಹೋಟೆಲ್ಸ್ ಲಿಮಿಟೆಡ್‌ಗೆ ಭೂಮಿ ಮಂಜೂರು ಮಾಡಲಾಗಿದೆ. ಹೋಟೆಲ್‌ಗೆ ಸಬ್ಸಿಡಿಗಳು ಮತ್ತು ತೆರಿಗೆ ಪ್ರಯೋಜನಗಳನ್ನು ನೀಡಲಾಗಿದೆ.
20 ಎಕರೆ ಭೂಮಿಯಲ್ಲಿ 250 ಕೋಟಿ ರೂ.ಗಳ ಆರಂಭಿಕ ಹೂಡಿಕೆಯೊಂದಿಗೆ 100 ಐಷಾರಾಮಿ ವಿಲ್ಲಾಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಇದರಿಂದ 1,500 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಸರ್ಕಾರ ಹೇಳಿತ್ರತು. ಇಲಿ ಬಹು- ಪಾಕಪದ್ಧತಿ, ಉತ್ತಮ ಊಟದ ರೆಸ್ಟೋರೆಂಟ್‌ಗಳು , ಕಾನ್ಫರೆನ್ಸ್ ಮತ್ತು ಔತಣಕೂಟ ಸೌಲಭ್ಯಗಳನ್ನು ಕಾಫಿ ಶಾಪ್, ಬಾರ್ ಮತ್ತು ಲಾಂಜ್, ಸ್ಪಾ ಮತ್ತು ಫಿಟ್ನೆಸ್ ಕೇಂದ್ರ ಮತ್ತು ಈಜುಕೊಳದಂತಹ ಇತರ ಸೌಲಭ್ಯಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು.
ತೆರಿಗೆ ಪ್ರಯೋಜನಗಳು, ವಿದ್ಯುತ್ ಸಬ್ಸಿಡಿ
ಭೂಮಿಯನ್ನು 90 ವರ್ಷಗಳ ಕಾಲ ಗುತ್ತಿಗೆಗೆ ನೀಡುವುದು ಎಂದು ಆದೇಶದಲ್ಲಿ ಪ್ರಸ್ತಾಪಿಸಲಾಗಿದೆ. ಗುತ್ತಿಗೆ ವೆಚ್ಚವು ವರ್ಷಕ್ಕೆ ಭೂಮಿಯ ಅಧಿಕೃತ ಮೌಲ್ಯದ ಶೇಕಡಾ 1 ರಿಂದ ಪ್ರಾರಂಭವಾಗುತ್ತದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ಶೇಕಡಾ 5 ರಷ್ಟು ಹೆಚ್ಚಳವಾಗುತ್ತದೆ. ಭೂಮಿಯನ್ನು ವಾಣಿಜ್ಯ ಬಳಕೆಗೆ ಪರಿವರ್ತಿಸಲು ಯಾವುದೇ ಹೆಚ್ಚುವರಿ ಶುಲ್ಕವಿಲ್ಲ. ಗುತ್ತಿಗೆಗೆ ನೀಡುವಾಗ ಪಾವತಿಸಿದ ಮುದ್ರಾಂಕ ಶುಲ್ಕ ಸಂಪೂರ್ಣ ಮರುಪಾವತಿಯಾಗುತ್ತದೆ. ಅಲ್ಲದೆ, ಐದು ವರ್ಷಗಳವರೆಗೆ ಶೇಕಡಾ 100 ಜಿಎಸ್‌ಎ ಮರುಪಾವತಿ ಪಡೆಯುತ್ತದೆ
ವರ್ಷಕ್ಕೆ 18.25 ಲಕ್ಷ ಯೂನಿಟ್ ವರೆಗಿನ ವಿದ್ಯುತ್ ಶುಲ್ಕಕ್ಕೆ ಪ್ರತಿ ಯೂನಿಟ್ ಗೆ ಕೇವಲ 2 ರೂಪಾಯಿಳಗಾಗಿದ್ದು. ಐದು ವರ್ಷಗಳವರೆಗೆ ವಿದ್ಯುತ್ ಸಬ್ಸಿಡಿ ಪ್ರಸ್ತಾಪಿಸಲಾಗಿತ್ತು. ಈ ಯೋಜನೆಯನ್ನು ಕೈಗಾರಿಕೆ ಎಂದು ಗುರುತಿಸಿ ಹೆಚ್ಚಿನ ಪ್ರಯೋಜನದ ಘೋಷಿಸಲಾಗಿತ್ತು.
ಪ್ರಸ್ತಾವಿತ ಐಷಾರಾಮಿ ಹೋಟೆಲ್ ಬಗ್ಗೆ ಹಿಂದೆಯೂ ವಿರೋಧ ವ್ಯಕ್ತವಾಗಿತ್ತು. ಈ ರೀತಿಯ ಯೋಜನೆಯು ಧಾರ್ಮಿಕ ಭಾವನೆಗಳಿಗೆ ಮತ್ತು ಏಳು ಬೆಟ್ಟಗಳ ಪಾವಿತ್ರ್ಯಕ್ಕೆ ಧಕ್ಕೆ ತರುತ್ತದೆ ಎಂದು ಆಂಧ್ರಪ್ರದೇಶದ ಅನೇಕ ಧಾರ್ಮಿಕ ಗುಂಪುಗಳು ಹೇಳಿದ್ದವು.
ಹಿಂದೂಯೇತರ ಉದ್ಯೋಗಿಗಳಿಗೆ ವಿಆರ್‌ಎಸ್ ಪ್ರಸ್ತಾಪ
ಇನ್ನೊಂದು ಪ್ರಮುಖ ತೀರ್ಮಾನ ಎಂದರೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ತಿರುಪತಿ ದೇವಸ್ಥಾನದಲ್ಲಿ ಕೆಲಸ ಮಾಡುವ ಸ್ವಯಂ ನಿವೃತ್ತಿ ಪಡೆಯುವಂತೆ ಕೋರಿಕೊಳ್ಳುವುದು. ಇಲ್ಲದಿದ್ದರೆ ಅವರನ್ನು ಆಂಧ್ರಪ್ರದೇಶ ಸರ್ಕಾರದ ಇತರ ಇಲಾಖೆಗಳಿಗೆ ವರ್ಗಾವಣೆ ಮಾಡಲಾಗುತ್ತದೆ.
"ವಿಆರ್‌ಎಸ್ ತೆಗೆದುಕೊಳ್ಳಲು ಅಥವಾ ವರ್ಗಾವಣೆ ಮಾಡಲು ನಾವು ಹಿಂದೂಯೇತರ ಸಿಬ್ಬಂದಿಯನ್ನು ವಿನಂತಿಸುತ್ತೇವೆ" ಎಂದು ಟಿಟಿಡಿ ಅಧ್ಯಕ್ಷ ನಾಯ್ಡು ಮಾಧ್ಯಮಗಳ ಮುಂದೆ ಹೇಳಿದರು.
ಇತ್ತೀಚೆಗೆ ಟಿಟಿಡಿ ಅಧ್ಯಕ್ಷರಾದ ನಾಯ್ಡು ಮಾತನಾಡಿ "ಹಿಂದೂಯೇತರರನ್ನು ವೈಯಕ್ತಿಕವಾಗಿ ಭೇಟಿಯಾಗಿ ವಿಆರ್ಎಸ್ ತೆಗೆದುಕೊಳ್ಳುವಂತೆ ವಿನಂತಿಸುತ್ತೇನೆ. ಅವರಿಗೆ ಆಸಕ್ತಿ ಇಲ್ಲದಿದ್ದರೆ, ನಾವು ಕಂದಾಯ, ಪುರಸಭೆ ಅಥವಾ ಯಾವುದೇ ನಿಗಮದಂತಹ ಇತರ ಸರ್ಕಾರಿ ಇಲಾಖೆಗಳಿಗೆ ವರ್ಗಾವಣೆ ಮಾಡುತ್ತೇವೆ ಅಥವಾ ಡೆಪ್ಯುಟೇಶನ್ ನೀಡುತ್ತೇವೆ" ಎಂದು ಅವರು ಹೇಳಿದರು.
ದರ್ಶನದ ಸಮಯವನ್ನು ಕಡಿಮೆ ಮಾಡಲು ಎಐ ಬಳಕೆ
ವಿಶ್ವ ಪ್ರಸಿದ್ಧ ವೆಂಕಟೇಶ್ವರ ದೇವಾಲಯದಲ್ಲಿ ಬಾಲಾಜಿ ದರ್ಶನದ ಸಮಯ ಕಡಿಮೆ ಮಾಡಲು ಕೃತಕ ಬುದ್ಧಿಮತ್ತೆಯನ್ನು (ಎಐ) ಬಳಸಲು ಮಂಡಳಿ ನಿರ್ಧರಿಸಿದೆ. ಎಐ ಮತ್ತು ಇತರ ಸುಧಾರಿತ ತಂತ್ರಜ್ಞಾನಗಳನ್ನು ಬಳಸಿಕೊಂಡು ದರ್ಶನಕ್ಕಾಗಿ ಕಾಯುವ ಸಮಯವನ್ನು ಸುಮಾರು 30 ಗಂಟೆಗಳಿಂದ 2-3 ಗಂಟೆಗಳಿಗೆ ಇಳಿಸುವ ಬಗ್ಗೆ ಮಂಡಳಿ ಚರ್ಚಿಸಿದೆ.
ನಿರ್ದಿಷ್ಟ 'ದರ್ಶನ' ಸಮಯ ಪಡೆಯಲು ಭಕ್ತರು ತಮ್ಮ ಭೇಟಿಗೆ ಮುಂಚಿತವಾಗಿ ತಮ್ಮ ಛಾಯಾಚಿತ್ರಗಳನ್ನು ಸಲ್ಲಿಸಬೇಕು ಎಂಬ ಸಲಹೆಯೂ ಬಂದಿದೆ.
ದೇವಾಲಯದಲ್ಲಿ ರಾಜಕೀಯ ಹೇಳಿಕೆಗಳಿಲ್ಲ
ತಿರುಮಲದಲ್ಲಿ ಜನರು ರಾಜಕೀಯ ಹೇಳಿಕೆಗಳನ್ನು ನೀಡುವುದನ್ನು ನಿಷೇಧಿಸಲು ಮತ್ತು ಇದನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಟಿಟಿಡಿ ನಿರ್ಧರಿಸಿದೆ.
ತಿರುಮಲದಲ್ಲಿ ರಾಜಕೀಯ ಹೇಳಿಕೆಗಳಿಗೆ ಅವಕಾಶ ನೀಡದಿರಲು ಮತ್ತು ಅಂತಹ ಹೇಳಿಕೆಗಳನ್ನು ನೀಡುವವರು ಮತ್ತು ಅವುಗಳನ್ನು ಪ್ರಚಾರ ಮಾಡುವವರ ವಿರುದ್ಧ ಅಗತ್ಯವಿದ್ದರೆ ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಮಂಡಳಿಯ ಪ್ರಕಟಣೆ ತಿಳಿಸಿದೆ.
ಪ್ರವಾಸೋದ್ಯಮ ನಿಗಮಗಳಿಗೆ ದರ್ಶನ ಕೋಟಾ ಬಂದ್
ಶ್ರೀ ವೆಂಕಟೇಶ್ವರ ಆಲಯ ನಿರ್ಮಾಣಂ ಟ್ರಸ್ಟ್ (ಶ್ರೀವಾಣಿ) ಟಿಟಿಡಿ ಖಾತೆಯೊಂದಿಗೆ ವಿಲೀನಗೊಳಿಸಲು ಮತ್ತು ವಿವಿಧ ರಾಜ್ಯಗಳ ಪ್ರವಾಸೋದ್ಯಮ ನಿಗಮಗಳಿಗೆ ನೀಡಲಾಗುವ ದರ್ಶನ ಕೋಟಾವನ್ನು ನಿಲ್ಲಿಸಲು ಮಂಡಳಿ ನಿರ್ಧರಿಸಿದೆ.
ಸ್ಥಳೀಯರು ಪ್ರತಿ ತಿಂಗಳ ಮೊದಲ ಮಂಗಳವಾರ ದೇವರ ದರ್ಶನ ಸುಲಭವಾಗಿ ಪಡೆಯಲು ಸಾಧ್ಯವಿದೆ.
ಲಡ್ಡುಗಳಿಗೆ ಗುಣಮಟ್ಟದ ತುಪ್ಪ
ಇತ್ತೀಚೆಗೆ ವಿವಾದಕ್ಕೆ ಸಿಲುಕಿರುವ ತಿರುಪತಿ ಲಡ್ಡುಗಳ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನದಲ್ಲಿ, ಲಡ್ಡು ತಯಾರಿಸಲು 'ಗರಿಷ್ಠ ಗುಣಮಟ್ಟದ' ತುಪ್ಪ ಬಳಸಲು ಮಂಡಳಿ ನಿರ್ಧರಿಸಿದೆ.
ಇನ್ನು ಟಿಟಿಡಿಯ ಠೇವಣಿಗಳನ್ನು ಖಾಸಗಿ ಬ್ಯಾಂಕುಗಳಿಂದ ರಾಷ್ಟ್ರೀಕೃತ ಬ್ಯಾಂಕುಗಳಿಗೆ ವರ್ಗಾಯಿಸಲು ಮುಂದಿನ ಮಂಡಳಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಟಿಟಿಡಿ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ವಿಶಾಖ ಶಾರದಾ ಪೀಠಂ ಮಠದ ಗುತ್ತಿಗೆಯನ್ನು ರದ್ದುಗೊಳಿಸಲು ಮಂಡಳಿ ನಿರ್ಧರಿಸಿದೆ.