Tirupati Laddu Row | ತಿರುಪತಿ ಲಡ್ಡು ಕಲಬೆರೆಕೆ ಪ್ರಕರಣ: ಎಸ್‌ಐಟಿ ತನಿಖೆ ಆರಂಭ
ತನಿಖೆ ಪ್ರಾರಂಭವಾಗಿದೆ ಎಂದು ಆಂಧ್ರಪ್ರದೇಶದ ಹಿರಿಯ ಐಪಿಎಸ್ ಅಧಿಕಾರಿ ಮತ್ತು ಎಸ್ಐಟಿ ಸದಸ್ಯ ಸರ್ವಶ್ರೇಷ್ಠ ತ್ರಿಪಾಠಿ ಮಾಹಿತಿ ನೀಡಿದ್ದಾರೆ.;
ಹಿಂದಿನ ವೈಎಸ್‌ಆರ್‌ಪಿ ಆಡಳಿತದ ಅವಧಿಯಲ್ಲಿ ತಿರುಮಲ ಬೆಟ್ಟದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಲಡ್ಡು ಪ್ರಸಾದವನ್ನು ಕಲಬೆರಕೆ ಮಾಡಲಾಗಿದೆ ಎಂಬ ಆರೋಪದ ಕುರಿತ ತನಿಖೆಯನ್ನು ಐವರು ಸದಸ್ಯರ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆ ಆರಂಭಿಸಿದೆ. ಇದೀಗ ತನಿಖೆ ಆರಂಭಗೊಂಡಿದೆ ಎಂದು ಆಂಧ್ರಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ತಿರುಪತಿ ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬು ಬಳಸಲಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಸ್ವತಂತ್ರ ಎಸ್ಐಟಿ ರಚಿಸಲು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಸಿಬಿಐ ಈ ತಿಂಗಳ ಆರಂಭದಲ್ಲಿ ಐದು ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿತ್ತು. ಕೇಂದ್ರ ಏಜೆನ್ಸಿಯ ಇಬ್ಬರು, ಆಂಧ್ರಪ್ರದೇಶ ಪೊಲೀಸರ ಇಬ್ಬರು ಮತ್ತು ಎಫ್ಎಸ್ಎಸ್ಎಐನ ಒಬ್ಬರು ಈ ತಂಡದಲ್ಲಿದ್ದಾರೆ.
ತನಿಖೆ ಪ್ರಾರಂಭವಾಗಿದೆ" ಎಂದು ಆಂಧ್ರಪ್ರದೇಶದ ಹಿರಿಯ ಐಪಿಎಸ್ ಅಧಿಕಾರಿ ಮತ್ತು ಎಸ್ಐಟಿ ಸದಸ್ಯ ಸರ್ವಶ್ರೇಷ್ಠ ತ್ರಿಪಾಠಿ ಮಾಹಿತಿ ನೀಡಿದ್ದಾರೆ. ಎಸ್ಐಟಿ ಇಲ್ಲಿ ಕಚೇರಿ ಸ್ಥಾಪಿಸಿದೆ ಮತ್ತು ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ ಎಂದು ಬೆಳವಣಿಗೆಗೆ ಹತ್ತಿರದ ಮೂಲಗಳು ತಿಳಿಸಿವೆ.
ತನಿಖೆಯ ಭಾಗವಾಗಿ, ಹಿಂದಿನ ಆಡಳಿತದ ಅವಧಿಯಲ್ಲಿ ತುಪ್ಪ ಸಂಗ್ರಹಣೆ ಕುರಿತ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ದಾಖಲೆಗಳು ಮತ್ತು ತುಪ್ಪದ ಗುಣಮಟ್ಟ ಪರಿಶೀಲನೆ ಮತ್ತು ಸರಕು ಸ್ವೀಕರಿಸುವ ಪ್ರಕ್ರಿಯೆಯನ್ನು ಎಸ್ಐಟಿ ಪರಿಶೀಲಿಸಿದೆ ಎಂದು ಅವರು ಹೇಳಿದರು.
ತಿರುಪತಿ ಪೂರ್ವ ಪೊಲೀಸ್ ಠಾಣೆಯಲ್ಲಿ ರಾಜ್ಯ ಸರ್ಕಾರ ದಾಖಲಿಸಿದ ಎಫ್ಐಆರ್ ಆಧಾರದ ಮೇಲೆ ಎಸ್ಐಟಿ ತನಿಖೆ ನಡೆಯಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಹಿಂದೆ ತಿಳಿಸಿದ್ದರು.
ಎಸ್‌ಐಟಿ ತನಿಖೆಗೆ ಆದೇಶ
ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಮತ್ತು ವೈಎಸ್ಆರ್‌ಪಿ ರಾಜ್ಯಸಭಾ ಸಂಸದ ವೈ.ವಿ.ಸುಬ್ಬಾ ರೆಡ್ಡಿ ಸಲ್ಲಿಸಿದ್ದದ ಅರ್ಜಿಗಳನ್ನು ಆಲಿಸಿದ ಸುಪ್ರೀಂ ಕೋರ್ಟ್ ಅಕ್ಟೋಬರ್ 4ರಂದು ತನಿಖೆಗೆ ಆದೇಶ ನೀಡಿತ್ತು.
ಆಂಧ್ರಪ್ರದೇಶದಲ್ಲಿ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಹಿಂದಿನ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬು ಬಳಸಲಾಗುತ್ತಿತ್ತು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಸೆಪ್ಟೆಂಬರ್‌ನಲ್ಲಿ ಆರೋಪಿಸಿದ್ದರು.
ನಾಯ್ಡು ಅವರ ಆರೋಪಗಳಿಗೆ ಪ್ರತಿಕ್ರಿಯಿಸಿದ ವೈಎಸ್ಆರ್ ಕಾಂಗ್ರೆಸ್ ಪಕ್ಷ, ರಾಜಕೀಯ ಲಾಭಕ್ಕಾಗಿ ಅವರು "ಘೋರ ಆರೋಪಗಳಲ್ಲಿ" ತೊಡಗಿದ್ದಾರೆ ಎಂದಿತ್ತು. ಆದರೆ ರಾಜ್ಯದ ಆಡಳಿತಾರೂಢ ತೆಲುಗು ದೇಶಂ ಪಕ್ಷವು ತನ್ನ ಹೇಳಿಕೆಯನ್ನು ಬೆಂಬಲಿಸಲು ಪ್ರಯೋಗಾಲಯ ವರದಿಯನ್ನು ಪ್ರಸಾರ ಮಾಡಿದೆ. ಪಿಟಿಐ