ಮಹಾರಾಷ್ಟ್ರ: ಥಾಣೆ ಬಳಿ ಚಲಿಸುವ ರೈಲಿನಿಂದ ಬಿದ್ದು ಮೂವರು ದುರ್ಮರಣ , ಹಲವರಿಗೆ ಗಂಭೀರ ಗಾಯ
ರೈಲಿನಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದರಿಂದ ಕೆಲವೊಬ್ಬರು ಆಯತಪ್ಪಿ ಬಿದ್ದಿದ್ದಾರೆ. ಆ ಸಮಯದಲ್ಲೇ ಪಕ್ಕದ ಹಳಿಯ ಮೇಲೆ ಎಕ್ಸ್ಪ್ರೆಸ್ ರೈಲು ಸಂಚರಿಸಿದ್ದು ಈ ವೇಳೆ ಮೂವರು ಪ್ರಯಾಣಿಕರು ಮೃತಪಟ್ಟಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.;
ಸಾಂದರ್ಭಿಕ ಚಿತ್ರ
ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ ಹೃದಯವಿದ್ರಾವಕ ಘಟನೆಯಲ್ಲಿ, ಜನದಟ್ಟಣೆಯಿಂದ ಕೂಡಿದ್ದ ಸ್ಥಳೀಯ ರೈಲಿನಿಂದ ಬಿದ್ದು ಕನಿಷ್ಠ ಮೂವರು ಪ್ರಯಾಣಿಕರು ಮೃತಪಟ್ಟಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದುರ್ಘಟನೆ ಮುಂಬೈ ಉಪನಗರ ರೈಲು ಮಾರ್ಗದ ಮುಂಬ್ರಾ ನಿಲ್ದಾಣದ ಬಳಿ ನಡೆದಿದೆ.
ಸೋಮವಾರ ಬೆಳಿಗ್ಗೆ ಸುಮಾರು 9:30ರ ಸುಮಾರಿಗೆ ಘಟನೆ ನಡೆದಿರುವ ಬಗ್ಗೆ ರೈಲು ಹಳಿ ಕಾವಲುಗಾರನಿಂದ ನಿಯಂತ್ರಣ ಕೊಠಡಿಗೆ ಮಾಹಿತಿ ಲಭ್ಯವಾಗಿದೆ ಎಂದು ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸ್ವಪ್ನಿಲ್ ನೀಲಾ ತಿಳಿಸಿದ್ದಾರೆ. ಥಾಣೆ ಜಿಆರ್ಪಿ (ಗವರ್ನಮೆಂಟ್ ರೈಲ್ವೆ ಪೊಲೀಸ್) ಯ ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಅರ್ಚನಾ ದುಸಾನೆ ಅವರು ಕೂಡಲೇ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಪರಿಶೀಲಿಸಿದ್ದಾರೆ.
ಮುಂಬ್ರಾ ಮತ್ತು ದಿವಾ ನಿಲ್ದಾಣಗಳ ನಡುವಿನ ಫಾಸ್ಟ್ ಲೈನ್ನಲ್ಲಿ ಈ ಘಟನೆ ಸಂಭವಿಸಿದೆ. ರೈಲಿನಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದ ಕಾರಣ, ಕೆಲವರು ರೈಲಿನ ಬಾಗಿಲುಗಳ ಬಳಿ ನಿಂತುಕೊಂಡು ಪ್ರಯಾಣಿಸುತ್ತಿದ್ದರು. ಈ ವೇಳೆ, ರೈಲು ಚಲಿಸುತ್ತಿರುವಾಗ ನಿಯಂತ್ರಣ ತಪ್ಪಿ ಆಯತಪ್ಪಿ ಹಳಿಯ ಮೇಲೆ ಬಿದ್ದಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಇದೇ ಸಮಯದಲ್ಲಿ ಪಕ್ಕದ ಹಳಿಯ ಮೇಲೆ ವೇಗವಾಗಿ ಸಂಚರಿಸುತ್ತಿದ್ದ ಎಕ್ಸ್ಪ್ರೆಸ್ ರೈಲಿಗೆ ಸಿಲುಕಿ ಕನಿಷ್ಠ ಮೂವರು ಪ್ರಯಾಣಿಕರು ಸಾವನ್ನಪ್ಪಿರುವ ಸಾಧ್ಯತೆಯಿದೆ ಎಂದು ದುಸಾನೆ ತಿಳಿಸಿದ್ದಾರೆ.
ದುರಂತದಲ್ಲಿ ಹಳಿಗಳ ನಡುವೆ ಕನಿಷ್ಠ ಆರು ಪ್ರಯಾಣಿಕರು ಗಾಯಗೊಂಡಿರುವುದು ವರದಿಯಾಗಿದೆ. ತೀವ್ರವಾಗಿ ಗಾಯಗೊಂಡವರನ್ನು ಸ್ಥಳೀಯರ ಮತ್ತು ರೈಲ್ವೆ ಅಧಿಕಾರಿಗಳ ನೆರವಿನೊಂದಿಗೆ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಗೊಂಡವರ ಆರೋಗ್ಯ ಸ್ಥಿತಿ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಪ್ರಾಣ ಕಳೆದುಕೊಂಡವರ ಗುರುತು ಇನ್ನೂ ಪತ್ತೆಯಾಗಿಲ್ಲ.
ಥಾಣೆ ರೈಲು ನಿಲ್ದಾಣದ ವ್ಯವಸ್ಥಾಪಕರು ಮಾತನಾಡಿ, "ಪ್ರಯಾಣಿಕರು ಯಾವ ರೈಲಿನಿಂದ ಬಿದ್ದರು ಮತ್ತು ಅಪಘಾತಕ್ಕೆ ನಿಖರ ಕಾರಣ ಏನು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ," ಎಂದು ಹೇಳಿದ್ದಾರೆ.
ಮುಂಬೈನ ಉಪನಗರ ರೈಲುಗಳು ಪ್ರತಿದಿನ ಲಕ್ಷಾಂತರ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತವೆ. ಇವುಗಳಲ್ಲಿ ಜನದಟ್ಟಣೆ ಸಾಮಾನ್ಯವಾಗಿದ್ದರೂ, ಚಲಿಸುವ ರೈಲುಗಳಿಂದ ಪ್ರಯಾಣಿಕರು ಬಿದ್ದು ಮೃತಪಡುವ ಘಟನೆಗಳು ಆಗಾಗ ವರದಿಯಾಗುತ್ತಿವೆ. ಈ ಘಟನೆ ಮತ್ತೊಮ್ಮೆ ರೈಲು ಸುರಕ್ಷತೆ, ವಿಶೇಷವಾಗಿ ಜನದಟ್ಟಣೆಯನ್ನು ನಿಭಾಯಿಸುವ ಸಾಮರ್ಥ್ಯ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಲ್ಲಿನ ಸವಾಲುಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.