ಆರ್‌ಜೆಡಿಯಿಂದ ಉಚ್ಚಾಟನೆಗೊಂಡ ತೇಜ್ ಪ್ರತಾಪ್ ಯಾದವ್ ಮಹುವಾ ಕ್ಷೇತ್ರದಿಂದ ಸ್ವತಂತ್ರ ಸ್ಪರ್ಧೆ

ಪ್ರಸ್ತುತ ಸಮಷ್ಟಿಪುರ ಜಿಲ್ಲೆಯ ಹಸನ್‌ಪುರ್ ಕ್ಷೇತ್ರದ ಶಾಸಕರಾಗಿರುವ ಅವರು, ಈ ನಿರ್ಧಾರದ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.;

Update: 2025-07-27 06:04 GMT

ಇತ್ತೀಚೆಗೆ ತಮ್ಮ ತಂದೆ ಮತ್ತು ಆರ್‌ಜೆಡಿ ಸಂಸ್ಥಾಪಕ ಲಾಲು ಪ್ರಸಾದ್ ಯಾದವ್ ಅವರಿಂದ ಪಕ್ಷದಿಂದ ಉಚ್ಚಾಟನೆಗೊಂಡಿರುವ ಬಿಹಾರದ ಮಾಜಿ ಸಚಿವ ತೇಜ್ ಪ್ರತಾಪ್ ಯಾದವ್, ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ವೈಶಾಲಿ ಜಿಲ್ಲೆಯ ಮಹುವಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಪ್ರಸ್ತುತ ಸಮಷ್ಟಿಪುರ  ಜಿಲ್ಲೆಯ ಹಸನ್‌ಪುರ್ ಕ್ಷೇತ್ರದ ಶಾಸಕರಾಗಿರುವ ಅವರು, ಈ ನಿರ್ಧಾರದ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.

ಶನಿವಾರ ಸಂಜೆ ತಮ್ಮ ಪಾಟ್ನಾ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಹೌದು, ಈ ಬಾರಿ ನಾನು ಮಹುವಾ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ನನ್ನ ಈ ನಿರ್ಧಾರದಿಂದ ನನ್ನ ವಿರೋಧಿಗಳಿಗೆ ಈಗಲೇ ಚಡಪಡಿಕೆ ಶುರುವಾಗಿರಬೇಕು," ಎಂದು ಹೇಳಿದರು. "ನನಗೆ ಜನರ ಬೆಂಬಲವಿದೆ. 'ಟೀಮ್ ತೇಜ್ ಪ್ರತಾಪ್ ಯಾದವ್' ಎಂಬ ಸಾಮಾಜಿಕ ಮಾಧ್ಯಮ ವೇದಿಕೆಯ ಮೂಲಕ ದೊಡ್ಡ ಸಂಖ್ಯೆಯ ಜನರು ನನ್ನೊಂದಿಗೆ ಸಂಪರ್ಕ ಹೊಂದಿದ್ದಾರೆ," ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಿತೀಶ್ ಕುಮಾರ್ ಮತ್ತೆ ಸಿಎಂ ಆಗಲ್ಲ

ಇದೇ ವೇಳೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕುರಿತು ಭವಿಷ್ಯ ನುಡಿದ ಅವರು, "ಈ ಚುನಾವಣೆಯ ನಂತರ 'ಚಾಚಾ' (ನಿತೀಶ್) ಅವರು ಮುಖ್ಯಮಂತ್ರಿಯಾಗಿ ಉಳಿಯುವುದಿಲ್ಲ ಎಂಬ ವಿಶ್ವಾಸ ನನಗಿದೆ. ಯುವಕರು, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಮಾತನಾಡುವವರು ಸರ್ಕಾರ ರಚಿಸಿದರೆ, ತೇಜ್ ಪ್ರತಾಪ್ ಯಾದವ್ ಅವರ ಬೆಂಬಲಕ್ಕೆ ನಿಲ್ಲುತ್ತಾರೆ," ಎಂದು ಸ್ಪಷ್ಟಪಡಿಸಿದರು.

ಆರು ವರ್ಷಗಳ ಕಾಲ ಉಚ್ಚಾಟನೆ

ಮಹಿಳೆಯೊಬ್ಬರೊಂದಿಗೆ "ಸಂಬಂಧದಲ್ಲಿದ್ದೇನೆ" ಎಂದು ಸಾಮಾಜಿಕ ಮಾಧ್ಯಮದಲ್ಲಿ ಒಪ್ಪಿಕೊಂಡ ಒಂದು ದಿನದ ನಂತರ, ಮೇ 25 ರಂದು ತೇಜ್ ಪ್ರತಾಪ್ ಅವರನ್ನು ಅವರ ತಂದೆ ಲಾಲು ಪ್ರಸಾದ್ ಯಾದವ್ ಅವರು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದ್ದರು. ನಂತರ ತೇಜ್ ಪ್ರತಾಪ್ ಅವರು ತಮ್ಮ ಫೇಸ್‌ಬುಕ್ ಪುಟವನ್ನು "ಹ್ಯಾಕ್" ಮಾಡಲಾಗಿದೆ ಎಂದು ಹೇಳಿ ಪೋಸ್ಟ್ ಅನ್ನು ಅಳಿಸಿದ್ದರು.

ಪಕ್ಷದಿಂದ ಉಚ್ಚಾಟನೆಯಾದ ಕೆಲವೇ ದಿನಗಳಲ್ಲಿ, ತಮ್ಮ ಮತ್ತು ತಮ್ಮ ಕಿರಿಯ ಸಹೋದರ ತೇಜಸ್ವಿ ಯಾದವ್ ನಡುವೆ ಒಡಕು ಮೂಡಿಸಲು "ಷಡ್ಯಂತ್ರ" ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದರು. ತೇಜಸ್ವಿ ಯಾದವ್ ಅವರ ನಾಯಕತ್ವದಲ್ಲಿ ಆರ್‌ಜೆಡಿ ಮುಂಬರುವ ಚುನಾವಣೆಯನ್ನು ಎದುರಿಸಲಿರುವ ಸಂದರ್ಭದಲ್ಲಿ ಈ ಬೆಳವಣಿಗೆಗಳು ನಡೆದಿವೆ.

Tags:    

Similar News