Guarantee Schemes|ಟೀಕಿಸಿದ ಪ್ರಧಾನಿ ಮುಂದೆ ಲೆಕ್ಕವಿರಿಸಿದ ಸುರ್ಜೇವಾಲಾ; ಬಿಜೆಪಿ ಆಡಳಿತದ ರಾಜ್ಯಗಳ ಸಾಧನೆಗೆ ಸವಾಲು
ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಖಾತರಿ ಯೋಜನೆಗಳ ಮೂಲಕ ಕನ್ನಡಿಗರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕ ₹ 52,000 ಕೋಟಿಗಳಷ್ಟು ಹಣವನ್ನು ವರ್ಗಾಯಿಸುತ್ತಿದೆ. ಯಾವುದೇ ಒಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದನ್ನು ಸಾಧಿಸಿದೆಯೇ? ಎಂದು ಸುರ್ಜೇವಾಲಾ ಪ್ರಶ್ನಿಸಿದ್ದಾರೆ.;
ಕರ್ನಾಟಕದ ಗ್ಯಾರಂಟಿ ಯೋಜನೆಗಳು ಸುಳ್ಳು ಭರವಸೆಗಳು ಎಂದು ಟೀಕಿಸಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಲೆಕ್ಕದೊಂದಿಗೆ ಪ್ರಧಾನಿ ಮೋದಿ ಅವರಿಗೆ ತಿರುಗೇಟು ನೀಡಿದ್ದಾರೆ.
ಸಾರ್ವಜನಿಕ ಜೀವನದಲ್ಲಿ ಪ್ರಧಾನಿ ಹುದ್ದೆಯ ಅಧಿಕಾರ ಅತ್ಯುನ್ನತವಾದದು. ಅದು ಆ ಹುದ್ದೆಯ ಗಂಭೀರ ಬಾಧ್ಯತೆ ಸೂಚಿಸುತ್ತದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರನ್ನು ನಿರಂತರವಾಗಿ ಎದುರಿಸುವ ಬಯಕೆ ಪ್ರಧಾನಿಗೆ ಇರುವುದು ಅರ್ಥವಾಗುತ್ತಿದೆ. ಆದರೆ, ಯಾರೂ ಕೂಡ ನಿರ್ವಿವಾದವಾದ ಸಂಗತಿಗಳನ್ನು ಮರೆಮಾಚಬಾರದು ಎಂದು ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಪೋಸ್ಟ್ ಮಾಡಿದ್ದಾರೆ.
ಕರ್ನಾಟಕದಲ್ಲಿ ಜಾರಿಗೆ ತಂದಿರುವ ʼಸಾರ್ವಜನಿಕ ಕಲ್ಯಾಣ ಖಾತರಿಗಳುʼ ದಿಗ್ಭ್ರಮೆಗೊಳಿಸಿವೆ. ಇಂತಹ ಯೋಜನೆಗಳನ್ನು ಪ್ರಧಾನಿ ಶ್ಲಾಘಿಸಬೇಕು ಎಂದಿದ್ದಾರೆ.
ಗ್ಯಾರಂಟಿ ಯೋಜನೆಗಳ ಕರ್ನಾಟಕ ಮಾದರಿಯು ಸಹಾನುಭೂತಿ ಮತ್ತು ಒಳಗೊಳ್ಳುವಿಕೆಯೊಂದಿಗೆ ಜವಾಬ್ದಾರಿಯುತ ಆಡಳಿತದ ಒಂದು ಅಧ್ಯಯನದಂತಿದೆ. ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಈ ಯೋಜನೆಗಳಲ್ಲಿ ಶೇ 50 ರಷ್ಟು ಜಾರಿಗೆ ತಂದಿರಬಹುದು ಎಂದು ಭಾವಿಸುತ್ತೇನೆ ಎಂದು ಹೇಳಿದ್ದು, ಫಲಾನುಭವಿಗಳಿಗೆ ತಲುಪಿಸಿರುವ ಗ್ಯಾರಂಟಿ ಯೋಜನೆಗಳ ಲೆಕ್ಕವನ್ನು ಪ್ರಧಾನಿ ಮುಂದೆ ಇಟ್ಟಿದ್ದಾರೆ.
1. ಗೃಹ ಲಕ್ಷ್ಮಿ ಯೋಜನೆಯಡಿ ಕಾಂಗ್ರೆಸ್ ಸರ್ಕಾರವು 1.21 ಕೋಟಿ ಕನ್ನಡಿಗ ತಾಯಂದಿರು ಮತ್ತು ಸಹೋದರಿಯರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕ ₹25,407 ಕೋಟಿ ರೂ. ವರ್ಗಾಯಿಸುತ್ತಿದೆ.
2. ಅನ್ನಭಾಗ್ಯ ಯೋಜನೆಯಡಿ ವಾರ್ಷಿಕ ₹8,433 ಕೋಟಿ ರೂ.ಗಳನ್ನು 4.08 ಕೋಟಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುತ್ತಿದೆ. ಆದರೆ, ಕರ್ನಾಟಕ ಸರ್ಕಾರಕ್ಕೆ ಅಕ್ಕಿ ಮಾರಾಟ ಮಾಡಲು ಎಫ್‌ಸಿಐ ನಿರಾಕರಿಸಿದೆ ಎಂಬುದು ಗಮನಾರ್ಹ ಸಂಗತಿ ಎಂದು ಪ್ರಧಾನಿ ಗಮನ ಸೆಳೆದಿದ್ದಾರೆ.
3. ಗೃಹ ಜ್ಯೋತಿ ಯೋಜನೆಯಡಿ 1.60 ಕೋಟಿ ಮನೆಗಳಿಗೆ 200 ಯುನಿಟ್ ನಂತೆ ವಾರ್ಷಿಕವಾಗಿ ₹ 9,455 ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ.
4. ಮಹಿಳೆಯರಿಗೆ ಉಚಿತ ಪ್ರಯಾಣದ ಖಾತರಿ ಒದಗಿಸುವ ಶಕ್ತಿ ಯೋಜನೆಯಡಿ 303 ಕೋಟಿಗೂ ಹೆಚ್ಚು ಬಸ್ ಟ್ರಿಪ್‌ಗಳೊಂದಿಗೆ ಸರ್ಕಾರ ರಚನೆಯಾದಾಗಿನಿಂದ ಇಲ್ಲಿಯವರೆಗೆ ₹ 7,310 ಕೋಟಿ ವ್ಯಯಿಸಲಾಗಿದೆ.
5.ಯುವನಿಧಿ ಯೋಜನೆಯಡಿ 1,82,000 ಪದವೀಧರರು ಮತ್ತು ಡಿಪ್ಲೊಮಾ ಪದವೀಧರರಿಗೆ ಎರಡು ವರ್ಷಗಳ ಅವಧಿಗೆ ತಿಂಗಳಿಗೆ ₹3,000 ಹಾಗೂ ₹1,500 ದಂತೆ ಪೋತ್ಸಾಹಧನ ನೀಡಲಾಗುತ್ತಿದೆ ಎಂದು ವಿವರಿಸಿದ್ದಾರೆ.
ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಖಾತರಿ ಯೋಜನೆಗಳ ಮೂಲಕ ಕನ್ನಡಿಗರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕ ₹ 52,000 ಕೋಟಿಗಳಷ್ಟು ಹಣವನ್ನು ವರ್ಗಾಯಿಸುತ್ತಿದೆ. ಯಾವುದೇ ಒಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದನ್ನು ಸಾಧಿಸಿದೆಯೇ? ಎಂದು ಪ್ರಶ್ನಿಸಿರುವ ಅವರು, ಜನರ ಕಲ್ಯಾಣ ಎಂದರೆ ಕರ್ನಾಟಕದ ಗ್ಯಾರಂಟಿ ಯೋಜನಗಳ ಮಾದರಿ ಎಂದು ಹೇಳಿದ್ದಾರೆ. ಖಾತರಿ ಯೋಜನೆಗಳ ಜೊತೆಗೆ ಅಭಿವೃದ್ಧಿಗಾಗಿ ₹ 52,903 ಕೋಟಿ ಖರ್ಚು ಮಾಡಿದೆ. ಇದು ನಿಜವಾದ ಜನಸೇವೆ, ಇದು ನಿಜವಾದ ಜನರ ಕಲ್ಯಾಣ, ಸರ್ಕಾರಗಳು ನಿಜವಾಗಿಯೂ ಹೀಗೆಯೇ ಕಾರ್ಯನಿರ್ವಹಿಸಬೇಕು, ಇದು ಕಾಂಗ್ರೆಸ್ ಎಂದು ಪೋಸ್ಟ್ ನಲ್ಲಿ ತಿಳಿಸಿದ್ದಾರೆ.