ಸಿಎಎ ಅನುಷ್ಠಾನಕ್ಕೆ ತಡೆ ಕೋರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ
ನಾವು ಇದನ್ನು ಮಂಗಳವಾರ ಆಲಿಸುತ್ತೇವೆ. 190ಕ್ಕೂ ಅಧಿಕ ಪ್ರಕರಣಗಳಿವೆ. ಅವೆಲ್ಲವನ್ನು ಆಲಿಸುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.;
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಅಧಿಸೂಚನೆ ನಿಯಮಗಳ ಅನುಷ್ಠಾನಕ್ಕೆ ತಡೆ ನೀಡುವಂತೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದೀಗ ಈ ಅರ್ಜಿಗಳನ್ನು ಆಲಿಸಲು ಸುಪ್ರೀಂ ಕೋರ್ಟ್ ಶುಕ್ರವಾರ (ಮಾರ್ಚ್ 15) ಸಮ್ಮತಿಸಿದೆ.
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಪರ ಪ್ರಕರಣವನ್ನು ಕೈಗೆತ್ತಿಕೊಂಡ ಹಿರಿಯ ವಕೀಲ ಕಪಿಲ್ ಸಿಬಲ್ ಅವರ ಸಲ್ಲಿಕೆಗಳನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಹೀಗೆ ಹೇಳಿದೆ.
ವಲಸಿಗ ಹಿಂದೂಗಳಿಗೆ ಒಮ್ಮೆ ಪೌರತ್ವವನ್ನು ನೀಡಿದರೆ ಅದನ್ನು ಹಿಂಪಡೆಯಲಾಗುವುದಿಲ್ಲ ಈ ಸಮಸ್ಯೆಗಳ ಆರಂಭಿಸಕ ವಿಚಾರಣೆಯ ಅಗತ್ಯವಿದೆ ಎಂದು ಐಯುಎಮ್‌ಎಲ್ ವಾದಿಸಿತು.
"ನಾವು ಇದನ್ನು ಮಂಗಳವಾರ ಆಲಿಸುತ್ತೇವೆ. 190ಕ್ಕೂ ಅಧಿಕ ಪ್ರಕರಣಗಳಿವೆ. ಅವೆಲ್ಲವನ್ನು ಆಲಿಸುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.
ಕೇಂದ್ರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, 237 ಅರ್ಜಿಗಳಿದ್ದು, ಬಾಕಿ ಉಳಿದಿರುವ ಅರ್ಜಿಗಳಲ್ಲಿ ನಿಯಮಗಳ ಅನುಷ್ಠಾನದ ವಿರುದ್ಧ ನಾಲ್ಕು ಮಧ್ಯಂತರ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಹೇಳಿದರು.
ಬಲವಂತದ ಕ್ರಮ
ಡಿಸೆಂಬರ್ 31, 2014 ರ ಮೊದಲು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದ ದಾಖಲೆರಹಿತ ಮುಸ್ಲಿಮೇತರ ವಲಸಿಗರಿಗೆ ಪೌರತ್ವವನ್ನು ನೀಡುವ ವಿವಾದಾತ್ಮಕ ಶಾಸನವನ್ನು ಸಂಸತ್ತು ನಾಲ್ಕು ವರ್ಷಗಳ ಹಿಂದೆ ಅಂಗೀಕರಿಸಿತ್ತು. ಇಧೀಗ ಈ ಕಾಯಿದೆಯನ್ನು ಜಾರಿಗೊಳಿದ್ದು, ಇದರ ಅನುಷ್ಠಾನಕ್ಕೆ ತಡೆ ನೀಡುವಂತೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಅರ್ಜಿ ಸಲ್ಲಿಸಿತ್ತು.
ಪೌರತ್ವ ಕಾನೂನನ್ನು ಪ್ರಶ್ನಿಸಿರುವ ಅರ್ಜಿದಾರರಲ್ಲಿ ಒಬ್ಬರಾದ ಐಯುಎಂಎಲ್ ಸಲ್ಲಿಸಿದ ರಿಟ್ ಅರ್ಜಿಗಳ ತೀರ್ಪು, ಬಾಕಿ ಉಳಿದಿರುವ ಮುಸ್ಲಿಂ ಸಮುದಾಯಕ್ಕೆ ಸೇರಿದ ಜನರ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಂತೆ ನೋಡಿಕೊಳ್ಳಲು ನ್ಯಾಯಾಲಯದ ನಿರ್ದೇಶನವನ್ನು ಕೋರಿದೆ.