ಸುಪ್ರಿಂ ಕೋರ್ಟ್​ ಐತಿಹಾಸಿಕ ತೀರ್ಪು; ವಿಧೇಯಕಗಳಿಗೆ 3 ತಿಂಗಳೊಳಗೆ ರಾಷ್ಟ್ರಪತಿ ಅಂಕಿತ ಕಡ್ಡಾಯ

ಸಂವಿಧಾನ 201 ವಿಧಿಯಡಿ, ರಾಜ್ಯಪಾಲರು, ರಾಷ್ಟ್ರಪತಿಗಳ ಪರಿಶೀಲನೆಗೆಂದು ಇಟ್ಟಿರುವ ವಿಧೇಯಕಗಳಿಗೆ ಅಂಕಿತ ನೀಡುವ ಅಥವಾ ನಿರಾಕರಿಸುವ ಎರಡು ಆಯ್ಕೆಗಳಿವೆ. ಆದರೆ, ತೀರ್ಮಾನ ತೆಗೆದುಕೊಳ್ಳುವ ಅವಧಿ ಕುರಿತು ಉಲ್ಲೇಖಿಸಿರಲಿಲ್ಲ.;

Update: 2025-04-12 06:40 GMT

ಸುಪ್ರೀಂ ಕೋರ್ಟ್ ಶುಕ್ರವಾರ (ಏಪ್ರಿಲ್ 11, 2025) ಒಂದು ಐತಿಹಾಸಿಕ ತೀರ್ಪೊಂದನ್ನು ಪ್ರಕಟಿಸಿದ್ದು, ರಾಜ್ಯಪಾಲರು ಕಳುಹಿಸುವ ವಿಧೇಯಕಗಳಿಗೆ ಮೂರು ತಿಂಗಳೊಳಗೆ ಅಂಕಿತ ಹಾಕುವಂತೆ ಆದೇಶಿಸಿದೆ. ಈ ತೀರ್ಪು ಸಂವಿಧಾನದ ಆರ್ಟಿಕಲ್ 201ರಡಿಯಲ್ಲಿ ರಾಷ್ಟ್ರಪತಿಗಳ ಅಂಕಿತಕ್ಕೆ ಯಾವುದೇ ಕಾಲಮಿತಿ ಇಲ್ಲದೆ ಇರುವ ಸ್ಥಿತಿಯನ್ನು ಬದಲಾಯಿಸುತ್ತದೆ. ಇದು ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಯನ್ನು ತರುವ ತೀರ್ಪಾಗಿದೆ ಎಂದು ಇಂಡಿಯನ್​ ಎಕ್ಸ್​​ಪ್ರೆಸ್​ ವರದಿ ಮಾಡಿದೆ.

ಈ ತೀರ್ಪನ್ನು ಸುಪ್ರೀಂ ಕೋರ್ಟ್​​ನ ವಿಭಾಗೀಯ ಪೀಠ (ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲ ಮತ್ತು ಆರ್. ಮಹಾದೇವನ್) ಪ್ರಕಟಿಸಿದೆ. ತಮಿಳುನಾಡಿನ ರಾಜ್ಯಪಾಲ್​ ಎನ್​ ರವಿ ಅವರು ತಮಿಳುನಾಡು ಸರ್ಕಾರ ಕಳುಹಿಸಿರುವ ವಿಧೇಯಕಗಳಿಗೆ ಅಂಕಿತ ಹಾಕದೇ ಇರುವ ಪ್ರಕರಣವನ್ನು ವಿಲೇವಾರಿ ಮಾಡುವ ಸಂದರ್ಭದಲ್ಲಿ ರಾಷ್ಟ್ರಪತಿಗಳಿಗೂ ಕಾಲಮಿತಿಯನ್ನು ಪ್ರಕಟಿಸಿದೆ.

ರಾಜ್ಯಪಾಲರು ಕಳುಹಿಸುವ ವಿಧೇಯಕಗಳಿಗೆ ರಾಷ್ಟ್ರಪತಿಗಳು ಅವುಗಳನ್ನು ಸ್ವೀಕರಿಸಿದ ದಿನಾಂಕದಿಂದ 3 ತಿಂಗಳ ಒಳಗೆ ಅಂಕಿತ ಹಾಕಬೇಕು. ಈ ಅವಧಿಗಿಂತ ಹೆಚ್ಚು ತಡವಾದರೆ, ಆ ತಡೆಗೆ ಸೂಕ್ತ ಕಾರಣಗಳನ್ನು ದಾಖಲಿಸಿ ಮತ್ತು ಸಂಬಂಧಿಸಿದ ರಾಜ್ಯಕ್ಕೆ ಮಾಹಿತಿ ನೀಡಬೇಕು ಎಂದಿದೆ.

ಇದರಿಂದಾಗಿ ವಿಧೇಯಕಗಳ ಮೇಲೆ "ಪಾಕೆಟ್ ವೀಟೋ" (ಅನಿಶ್ಚಿತ ತಡೆ) ಅಥವಾ "ಅಬ್ಸಲ್ಯೂಟ್ ವೀಟೋ" (ನಿರಾಕರಣೆ) ಅಧಿಕಾರವನ್ನು ಉಪಯೋಗಿಸುವ ಸಾಧ್ಯತೆಯನ್ನು ಇಲ್ಲವಾಗಿಸುತ್ತದೆ.

ಸಂವಿಧಾನದ ಏನು ಹೇಳುತ್ತದೆ?

ಸಂವಿಧಾನ 201 ವಿಧಿಯಡಿ, ರಾಜ್ಯಪಾಲರು, ರಾಷ್ಟ್ರಪತಿಗಳ ಪರಿಶೀಲನೆಗೆಂದು ಇಟ್ಟಿರುವ ವಿಧೇಯಕಗಳಿಗೆ ಅಂಕಿತ ನೀಡುವ ಅಥವಾ ನಿರಾಕರಿಸುವ ಎರಡು ಆಯ್ಕೆಗಳಿವೆ. ಆದರೆ, ತೀರ್ಮಾನ ತೆಗೆದುಕೊಳ್ಳುವ ಅವಧಿ ಕುರಿತು ಉಲ್ಲೇಖಿಸಿರಲಿಲ್ಲ. ಸರ್ಕಾರಿಯಾ ಮತ್ತು ಪಂಚಿ ಆಯೋಗಗಳು ಈ ಸಮಸ್ಯೆಯನ್ನು ಗುರುತಿಸಿ, ಆರ್ಟಿಕಲ್ 201ರಡಿಯಲ್ಲಿ ಸ್ಪಷ್ಟ ಕಾಲಮಿತಿ ನಿಗದಿ ಮಾಡುವ ಅಗತ್ಯವನ್ನು ಶಿಫಾರಸು ಮಾಡಿದ್ದವು. ಹೀಗಾಗಿ ಪ್ರಸ್ತುತ ಸುಪ್ರೀಂ ಕೊಟ್ಟಿರುವ ತೀರ್ಪು ಆ ಶಿಫಾರಸುಗಳಿಗೆ ನ್ಯಾಯ ಸಲ್ಲಿಸಿದಂತಾಗುತ್ತದೆ ಮತ್ತು ರಾಜ್ಯ-ಕೇಂದ್ರ ಸರ್ಕಾರಗಳ ಸಮನ್ವಯ ಸುಧಾರಿಸುತ್ತದೆ.

ರಾಜ್ಯ ಸರ್ಕಾರದ ಅಧಿಕಾರ

ರಾಜ್ಯಪಾಲರು ಪರಿಶೀಲನೆಗೆ ಇಟ್ಟಿರುವ ವಿಧೇಯಕಗಳಿಗೆ ರಾಷ್ಟ್ರಪತಿಗಳು ಅನುಮತಿ ನೀಡಲು ನಿರಾಕರಿಸಿದರೆ, ಅದನ್ನು ಕೋರ್ಟ್​ನಲ್ಲಿ ಪ್ರಶ್ನಿಸಲು ಅವಕಾಶ ದೊರಕಿದೆ. ಇದರಿಂದ ರಾಜ್ಯ ಸರ್ಕಾರಗಳಿಗೆ ತಮ್ಮ ಶಾಸಕಾಂಗದ ತೀರ್ಮಾನಗಳನ್ನು ಉಳಿಸಿಕೊಳ್ಳುವ ಅವಕಾಶ ಲಭಿಸುತ್ತದೆ.

ಪರಿಣಾಮವೇನು

ಈ ತೀರ್ಪು ರಾಜ್ಯ ಸರ್ಕಾರಗಳಿಗೆ ಹೆಚ್ಚು ನೆರವು ನೀಡಲಿದ್ದು, ರಾಜ್ಯಪಾಲರು ತಮ್ಮ ಮೇಲೆ ಚಲಾಯಿಸುವ ಅಧಿಕಾರಕ್ಕೆ ಮಿತಿ ಹೇರಲು ಸಾಧ್ಯವಿದೆ. ಅದೇ ರೀತಿ ಒಕ್ಕೂಟ ವ್ಯವಸ್ಥೆಯಲ್ಲಿ ಸಮತೋಲನ ಕಾಪಾಡುವಲ್ಲಿ ಮಹತ್ವದ ಪಾತ್ರವಹಿಸಲಿದೆ.   

Tags:    

Similar News