ಪಟಾಕಿ ನಿಷೇಧ ರದ್ದು ಅಸಾಧ್ಯ; ಸುಪ್ರೀಂ ಕೋರ್ಟ್​

ಪ್ರತಿಯೊಬ್ಬರಿಗೂ ಗಾಳಿ ಶುದ್ಧೀಕರಣ ಯಂತ್ರವನ್ನು ಖರೀದಿಸುವ ಶಕ್ತಿಯಿಲ್ಲ. ರಸ್ತೆ ಬದಿಯಲ್ಲಿ ಕೆಲಸ ಮಾಡುವ ಜನರು ವಾಯು ಮಾಲಿನ್ಯದ ಪರಿಣಾಮಕ್ಕೆ ಒಳಗಾಗುತ್ತಾರೆ ಎಂಬುದನ್ನು ಕೋರ್ಟ್ ಗಮನಿಸಿದೆ.;

Update: 2025-04-03 15:11 GMT

ದೆಹಲಿ- ಎನ್‌ಸಿಆರ್ ಪ್ರದೇಶದಲ್ಲಿ ಪಟಾಕಿಗಳ ಮೇಲಿನ ನಿಷೇಧವನ್ನು ಸಡಿಲಿಸಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ. ಈ ನಿರ್ಧಾರವು ವಾಯು ಮಾಲಿನ್ಯದ ಗಂಭೀರ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ ಎಂದು ಕೋರ್ಟ್ ಹೇಳಿದೆ. ಈ ತೀರ್ಪು ದೆಹಲಿಯಲ್ಲಿ ಗಾಳಿಯ ಗುಣಮಟ್ಟವನ್ನು ಸುಧಾರಿಸುವ ಪ್ರಯತ್ನಗಳಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದೂ ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿಗಳಾದ ಎ. ಎಸ್. ಓಕಾ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠವು, 'ಪ್ರತಿಯೊಬ್ಬರಿಗೂ ಗಾಳಿ ಶುದ್ಧೀಕರಣ ಯಂತ್ರವನ್ನು ಖರೀದಿಸುವ ಶಕ್ತಿಯಿಲ್ಲ. ರಸ್ತೆ ಬದಿಯಲ್ಲಿ ಕೆಲಸ ಮಾಡುವ ಜನರು ಮಾಲಿನ್ಯದ ಪರಿಣಾಮಕ್ಕೆ ಒಳಗಾಗುತ್ತಾರೆ ಎಂಬುದನ್ನು ಕೋರ್ಟ್ ಗಮನಿಸಿದೆ. ಈ ಹಿನ್ನೆಲೆಯಲ್ಲಿ ಪಟಾಕಿ ನಿಷೇಧ ತುಂಬಾ ಅವಶ್ಯಕ' ಎಂದು ಅಭಿಪ್ರಾಯಪಟ್ಟಿತು.

ಪ್ರಕರಣದ ವಿಚಾರಣೆಯಲ್ಲಿ, "ಹಸಿರು ಪಟಾಕಿಗಳ" ಮಾಲಿನ್ಯ ಮಟ್ಟದ ಬಗ್ಗೆ ಸಂಪೂರ್ಣ ಮನವರಿಕೆಯಾಗದ ಹೊರತು ಹಿಂದಿನ ಆದೇಶಗಳನ್ನು ಪುನರ್​ಪರಿಶೀಲನೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿತು. ದೆಹಲಿಯಲ್ಲಿ ಪಟಾಕಿಗಳ ತಯಾರಿಕೆ, ಸಂಗ್ರಹಣೆ, ಮಾರಾಟ ಮತ್ತು ಬಳಕೆಯ ಮೇಲೆ ಈಗಾಗಲೇ ಜಾರಿಯಲ್ಲಿರುವ ಸಂಪೂರ್ಣ ನಿಷೇಧ ಮುಂದುವರಿಸಲು ಆದೇಶಿಸಲಾಗಿದೆ.

ಸರಕಾರವು ಈಗ ಎಲ್ಲಾ ರೀತಿಯ ಪಟಾಕಿಗಳ ಮೇಲೆ ಶಾಶ್ವತ ನಿಷೇಧ ವಿಧಿಸಿದೆ ಎಂದು ದೆಹಲಿ ಸರಕಾರವು ಕೋರ್ಟ್‌ಗೆ ತಿಳಿಸಿತು. ಆದರೆ, ಈ ನಿಷೇಧವು ಪರಿಣಾಮಕಾರಿಯಾಗಿ ಜಾರಿಗೊಳ್ಳಬೇಕಾದರೆ, ಎನ್‌ಸಿಆರ್ ಪ್ರದೇಶದ ಇತರ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಹರಿಯಾಣಗಳೂ ಸಹ ಇದೇ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೋರ್ಟ್ ಸೂಚಿಸಿದೆ. ಈಗಾಗಲೇ ರಾಜಸ್ಥಾನವು ತನ್ನ ಎನ್‌ಸಿಆರ್ ಪ್ರದೇಶಗಳಲ್ಲಿ ಪಟಾಕಿಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ಪಟಾಕಿ ವ್ಯಾಪಾರಿಗಳ ಪರ ವಕೀಲರು, ಈ ನಿಷೇಧದಿಂದ ತಮ್ಮ ಜೀವನೋಪಾಯಕ್ಕೆ ಧಕ್ಕೆಯಾಗುತ್ತದೆ ಎಂದು ವಾದಿಸಿದರು. ಆದರೆ, ಕೋರ್ಟ್ ಈ ವಾದವನ್ನು ತಿರಸ್ಕರಿಸಿತು. "ಉದ್ಯಮವು ಸಾರ್ವಜನಿಕ ಆರೋಗ್ಯಕ್ಕಿಂತ ಹೆಚ್ಚಿನದಲ್ಲ" ಎಂದು ನ್ಯಾಯಾಲಯ ಒತ್ತಿ ಹೇಳಿತು.

Tags:    

Similar News