ಸುಪ್ರೀಂ ಕೋರ್ಟಿಗೆ ಇಬ್ಬರು ನ್ಯಾಯಾಧೀಶರ ನೇಮಕ

ಸುಪ್ರೀಂ ಕೋರ್ಟ್‌ ಕೊಲಿಜಿಯಂ ಈ ಇಬ್ಬರು ನ್ಯಾಯಮೂರ್ತಿಗಳ ಪದೋನ್ನತಿಗೆ ಶಿಫಾರಸು ಮಾಡಿತ್ತು.;

Update: 2024-07-16 10:51 GMT

ನ್ಯಾಯಮೂರ್ತಿ ಎನ್. ಕೋಟೀಶ್ವರ್ ಸಿಂಗ್ ಮತ್ತು ನ್ಯಾ. ಆರ್. ಮಹದೇವನ್ ಅವರು ಸುಪ್ರೀಂ ಕೋರ್ಟಿನ ಇಬ್ಬರು ಹೊಸ ನ್ಯಾಯಾಧೀಶರಾಗಿ ಮಂಗಳವಾರ (ಜುಲೈ 16) ನೇಮಕಗೊಂಡಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಬ್ಬರ ಹೆಸರನ್ನು ಅಂತಿಮಗೊಳಿಸಿದ ಬಳಿಕ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಇಬ್ಬರ ಹೆಸರನ್ನು ಘೋಷಿಸಿದರು. ಇದರೊಂದಿಗೆ ಸುಪ್ರೀಂ ಕೋರ್ಟ್ ಮು.ನ್ಯಾ.ಚಂದ್ರಚೂಡ್ ಸೇರಿದಂತೆ 34 ನ್ಯಾಯಾಧೀಶರನ್ನು ಹೊಂದಿದೆ. ಎಸ್‌ಸಿ ಕೊಲಿಜಿಯಂ ಈ ಇಬ್ಬರು ನ್ಯಾಯಮೂರ್ತಿಗಳ ಪದೋನ್ನತಿಗೆ ಶಿಫಾರಸು ಮಾಡಿತ್ತು. 

ನ್ಯಾ.ಎನ್. ಕೋಟೀಶ್ವರ್ ಸಿಂಗ್: ಮಣಿಪುರದಿಂದ ಸುಪ್ರೀಂ ಕೋರ್ಟ್‌ಗೆ ನೇಮಕಗೊಂಡ ಮೊದಲ ನ್ಯಾಯಾಧೀಶರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನ್ಯಾ.ಕೋಟೀಶ್ವರ್‌ ಸಿಂಗ್‌, ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಮಣಿಪುರದ ಮೊದಲ ಅಡ್ವೊಕೇಟ್ ಜನರಲ್ ಎನ್.ಇಬೊಟೊಂಬಿ ಸಿಂಗ್ ಅವರ ಪುತ್ರರಾದ ನ್ಯಾ.ಕೋಟೀಶ್ವರ್ ಅವರು ನ್ಯಾಯಾಧೀಶರಾಗುವ ಮೊದಲು ಮಣಿಪುರದ ಅಡ್ವೊಕೇಟ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು.

ದೆಹಲಿ ವಿಶ್ವವಿದ್ಯಾನಿಲಯದ ಕಿರೋರಿ ಮಲ್ ಕಾಲೇಜು ಮತ್ತು ಕ್ಯಾಂಪಸ್ ಕಾನೂನು ಕೇಂದ್ರದಲ್ಲಿ ಅಧ್ಯಯನ ಮಾಡಿರುವ ಅವರು, 1986 ರಲ್ಲಿ ವಕೀಲ ವೃತ್ತಿ ಆರಂಭಿಸಿದರು. ಗುವಾಹಟಿ ಮತ್ತು ಮಣಿಪುರದ ಹೈಕೋರ್ಟ್‌ಗಳಲ್ಲಿ ಕೆಲಸ ಮಾಡಿದ್ದಾರೆ. 

ನ್ಯಾ.ಆರ್. ಮಹದೇವನ್: ನ್ಯಾ.ಮಹದೇವನ್ ಪ್ರಸ್ತುತ ಮದ್ರಾಸ್ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. ಚೆನ್ನೈ ಮೂಲದ ಅವರು ಮದ್ರಾಸ್ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪೂರೈಸಿದ್ದಾರೆ. ತಮಿಳುನಾಡು ಸರ್ಕಾರದ ಹೆಚ್ಚುವರಿ ಸರ್ಕಾರಿ ವಕೀಲ (ತೆರಿಗೆಗಳು), ಕೇಂದ್ರ ಸರ್ಕಾರದ ಹೆಚ್ಚುವರಿ ಸ್ಥಾಯಿ ಸಲಹೆಗಾರ ಮತ್ತು ಮದ್ರಾಸ್ ಹೈಕೋರ್ಟ್‌ನಲ್ಲಿ ಭಾರತ ಸರ್ಕಾರದ ಹಿರಿಯ ಪ್ಯಾನಲ್ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ. ವಕೀಲರಾಗಿ 9,000 ಕ್ಕೂ ಹೆಚ್ಚು ಪ್ರಕರಣಗಳನ್ನು ನಿರ್ವಹಿಸಿರುವ ಅವರು, 2013 ರಲ್ಲಿ ಮದ್ರಾಸ್ ಹೈಕೋರ್ಟ್‌ನ ನ್ಯಾಯಾಧೀಶರಾದರು.

Tags:    

Similar News