ಮತಕ್ಕಾಗಿ ತಮಿಳು ವಿರೋಧ ಮಾತು ನಿಲ್ಲಿಸಿ: ಸ್ಟಾಲಿನ್
ಪ್ರಧಾನಿ ದ್ವೇಷದ ಭಾಷಣಗಳಿಂದ ಜನಗಳ ನಡುವೆ ದ್ವೇಷ ಮತ್ತು ರಾಜ್ಯಗಳ ನಡುವೆ ವೈರತ್ವವನ್ನು ಸೃಷ್ಟಿಸುತ್ತಿದ್ದಾರೆ.
ಚೆನ್ನೈ, ಮೇ 21- ಒಡಿಶಾದಲ್ಲಿರುವ ಜಗನ್ನಾಥನ ಖಜಾನೆಯ ನಾಪತ್ತೆಯಾದ ಕೀಗಳು ತಮಿಳುನಾಡಿಗೆ ಹೋಗಿವೆ ಎಂಬ ಪ್ರಧಾನಿ ಹೇಳಿಕೆಗೆ ಆಡಳಿತಾರೂಢ ಡಿಎಂಕೆ ಅಧ್ಯಕ್ಷ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮಂಗಳವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸೋಮವಾರ ಒಡಿಶಾದಲ್ಲಿ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಪ್ರಧಾನಿ, ʻಪುರಿ ಜಗನ್ನಾಥನ ದೇವಾಲಯ ಕೂಡ ಈ ಸರ್ಕಾರದ ಕೈಯಲ್ಲಿ ಸುರಕ್ಷಿತವಾಗಿಲ್ಲ. ಕಳೆದ 6 ವರ್ಷದಿಂದ ಭಗವಂತನ ಕೀಲಿಕೈಗಳು ಕಳೆದುಹೋಗಿವೆ. ಕೀ ತಮಿಳುನಾಡಿಗೆ ಹೋಗಿದೆ,ʼ ಎಂದು ಹೇಳಿಕೆ ನೀಡಿದ್ದರು. ʻಖಜಾನೆಯ ಕೀಲಿಕೈ ಕುರಿತ ನ್ಯಾಯಾಂಗ ಆಯೋಗದ ವರದಿಯನ್ನು ಬಿಜೆಡಿ ಏಕೆ ಪ್ರಕಟಿಸಿಲ್ಲ ಎಂಬುದನ್ನು ಒಡಿಶಾ ತಿಳಿಯಲು ಬಯಸುತ್ತದೆ. ಪ್ರಕರಣದಲ್ಲಿ ಬಿಜೆಡಿಯ ಪಾತ್ರ ಶಂಕಿತವಾಗಿದೆ. ಬಿಜೆಪಿ ಸರ್ಕಾರ ಜೂನ್ 10 ರಂದು ಅಧಿಕಾರಕ್ಕೆ ಬಂದ ನಂತರ ವರದಿಯನ್ನು ಬಹಿರಂಗಗೊಳಿಸಲಿದೆ,ʼ ಎಂದು ಮೋದಿ ಹೇಳಿದ್ದರು.
ʻಪ್ರಧಾನಿ ತಮಿಳರ ವಿರುದ್ಧ ಇಂತಹ ಅವಹೇಳನಕಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಅವರು ಮತಕ್ಕಾಗಿ ತಮಿಳರನ್ನು ಕೆಣಕುತ್ತಿದ್ದಾರೆ,ʼ ಎಂದು ಸ್ಟಾಲಿನ್ ದೂರಿದರು. ʻಪ್ರಧಾನಿ ದ್ವೇಷದ ಭಾಷಣಗಳಿಂದ ಜನಗಳ ನಡುವೆ ದ್ವೇಷ ಮತ್ತು ರಾಜ್ಯಗಳ ನಡುವೆ ವೈರತ್ವವನ್ನು ಸೃಷ್ಟಿಸುತ್ತಿದ್ದಾರೆ. ಹೇಳಿಕೆಯು ಕೋಟ್ಯಂತರ ಜನರಿಂದ ಪೂಜಿಸಲ್ಪಡುವ ಭಗವಾನ್ ಜಗನ್ನಾಥನನ್ನು ಅವಮಾನಿಸುವಂತಿದೆ. ಜೊತೆಗೆ ಒಡಿಶಾ ರಾಜ್ಯದೊಂದಿಗೆ ಉತ್ತಮ ಸಂಬಂಧ ಮತ್ತು ಸ್ನೇಹವನ್ನು ಹೊಂದಿರುವ ತಮಿಳುನಾಡಿನ ಜನರನ್ನು ಅವಮಾನಿಸುತ್ತದೆ,ʼ ಎಂದು ಹೇಳಿದರು.
ʻತಮಿಳುನಾಡಿನ ಜನರನ್ನು ದೇವಸ್ಥಾನದ ಸಂಪತ್ತನ್ನು ಕದ್ದ ಕಳ್ಳರು ಎಂದು ಪ್ರಧಾನಿ ಅವಹೇಳನ ಮಾಡಬಹುದೇ? ಇದು ತಮಿಳುನಾಡಿಗೆ ಅವಮಾನ ಮಾಡಿದಂತಲ್ಲವೇ? ತಮಿಳರ ಬಗ್ಗೆ ಇಷ್ಟು ದ್ವೇಷ ಏಕೆ?,ʼ ಎಂದು ಸಿಎಂ ಪ್ರಶ್ನಿಸಿದರು.
ʻತಮಿಳುನಾಡಿನಲ್ಲಿ ತಮಿಳು ಭಾಷೆ ಮತ್ತು ಜನರನ್ನು ಹೊಗಳುವ ಪ್ರಧಾನಿ, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಒಡಿಶಾದಂತಹ ರಾಜ್ಯಗಳಲ್ಲಿ ತೆಗಳುತ್ತಾರೆ. ಅವರ ದ್ವಂದ್ವ ನೀತಿಯನ್ನು ಜನರು ಅರ್ಥಮಾಡಿಕೊಳ್ಳುತ್ತಾರೆ. ವೋಟಿಗಾಗಿ ತಮಿಳುನಾಡು ಮತ್ತು ತಮಿಳರನ್ನು ನಿಂದಿಸುವುದನ್ನು ಪ್ರಧಾನಿ ನಿಲ್ಲಿಸಬೇಕು,ʼ ಎಂದು ಸ್ಟಾಲಿನ್ ಹೇಳಿದರು.