Hanuman Jayanti: ಹನುಮ ಜಯಂತಿ ಮೆರವಣಿಗೆ ವೇಳೆ ಘರ್ಷಣೆ, ಕಲ್ಲುತೂರಾಟ
ಘಟನೆಯಿಂದ ಆಕ್ರೋಶಗೊಂಡ ಹಿಂದೂ ಸಂಘಟನೆಗಳು, ರಸ್ತೆ ತಡೆ ನಡೆಸಿ, ನಗರದ ಕೊತ್ವಾಲಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಪೊಲೀಸ್ ಠಾಣೆ ಹೊರಗೆ ಘೋಷಣೆಗಳನ್ನೂ ಕೂಗಿದ್ದಾರೆ.;
ಹನುಮ ಜಯಂತಿ ವೇಳೆ ಗೊಂದಲ ಉಂಟಾಯಿತು.
ಹನುಮಾನ್ ಜಯಂತಿ(Hanuman Jayanti) ಮೆರವಣಿಗೆ ಮಾರ್ಗ ಹಾಗೂ ಧ್ವನಿವರ್ಧಕಗಳ ಬಳಕೆಗೆ ಸಂಬಂಧಿಸಿ ಶುರುವಾದ ಘರ್ಷಣೆಯು ಮಧ್ಯಪ್ರದೇಶದ ಗುನಾದಲ್ಲಿ ಗಲಭೆಯಾಗಿ ಮಾರ್ಪಾಟಾಗಿದೆ. ಎರಡು ಕೋಮುಗಳ ನಡುವೆ ಭಾರೀ ಘರ್ಷಣೆ, ಕಲ್ಲುತೂರಾಟ ನಡೆದಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಪಶ್ಚಿಮ ಬಂಗಾಳದಲ್ಲಿ ವಕ್ಫ್ ಕಾಯ್ದೆ ಪ್ರತಿಭಟನೆ ಹಿಂಸಾಚಾರಕ್ಕೆ ಕಾರಣವಾಗಿರುವಂತೆಯೇ ಮಧ್ಯಪ್ರದೇಶದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.
ಗುನಾದಲ್ಲಿ ಸ್ಥಳೀಯ ಬಿಜೆಪಿ ಕೌನ್ಸಿಲರ್ ಓಂ ಪ್ರಕಾಶ್ ಕುಶ್ವಾಹ ನೇತೃತ್ವದಲ್ಲಿ ಹನುಮ ಜಯಂತಿ ಮೆರವಣಿಗೆ ಸಾಗುತ್ತಿತ್ತು. ಶನಿವಾರ ರಾತ್ರಿ 8 ಗಂಟೆಯ ವೇಳೆಗೆ ಮೆರವಣಿಗೆಯು ಸ್ಥಳೀಯ ಮಸೀದಿ ಬಳಿ ಬಂದಾಗ, ಜೋರಾಗಿ ಡಿಜೆ ಮ್ಯೂಸಿಕ್ ಹಾಕಿರುವ ವಿಚಾರದಲ್ಲಿ ಗದ್ದಲ ಆರಂಭವಾಯಿತು. ಮಸೀದಿಯೊಳಗೆ ಇದ್ದವರು ಮತ್ತು ಮೆರವಣಿಗೆ ನಡೆಸುತ್ತಿದ್ದವರ ನಡುವೆ ಮಾತಿನ ಚಕಮಕಿ ಜೋರಾಯಿತು. ಇದೇ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಮಸೀದಿಯೊಳಗಿಂದ ಕಲ್ಲು ತೂರಾಟ ನಡೆಸಿದ್ದು, ಕೆಲವೇ ಕ್ಷಣಗಳಲ್ಲಿ ಎರಡೂ ಕಡೆಯಿಂದ ಪರಸ್ಪರ ಕಲ್ಲುತೂರಾಟ ಆರಂಭವಾಗಿ ಪರಿಸ್ಥಿತಿ ಕೈಮೀರಿ ಹೋಯಿತು. ಒಂದು ಹಂತದಲ್ಲಿ ಮಸೀದಿಯೊಳಗಿಂದ ವ್ಯಕ್ತಿಯೊಬ್ಬ ಚೂಪಾದ ಆಯುಧ ಹಿಡಿದು ಹೊರಬರಲು ಯತ್ನಿಸುತ್ತಿರುವುದು ಮತ್ತು ಆತನನ್ನು ಜತೆಗಿದ್ದವರು ತಡೆಯುತ್ತಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘರ್ಷಣೆಯ ವೇಳೆ ಬಿಜೆಪಿ ಕೌನ್ಸಿಲರ್ ಕುಶ್ವಾಹಾ ಅವರ 11 ವರ್ಷದ ಪುತ್ರನೂ ಗಾಯಗೊಂಡಿದ್ದಾನೆ. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಇದೇ ವೇಳೆ, ಮಸೀದಿಯ ಧರ್ಮಗುರು ಆತಿಷ್ ಫಾರೂಕ್ ಅವರು ಮಾತನಾಡಿ, ಹನುಮ ಜಯಂತಿಯ ಮೆರವಣಿಗೆಯಲ್ಲಿದ್ದವರೇ ಸುಖಾಸುಮ್ಮನೆ ಮಸೀದಿಯೊಳಗೆ ಇದ್ದವರನ್ನು ಪ್ರಚೋದಿಸಿದರು. ಅಲ್ಲದೇ, ಮೆರವಣಿಗೆಯಲ್ಲಿದ್ದವರೇ ಮೊದಲು ಕಲ್ಲುತೂರಾಟ ನಡೆಸಿದ್ದೇ ಹೊರತು ಮಸೀದಿಯಲ್ಲಿದ್ದವರಲ್ಲ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಎಸ್ಪಿ ಸಂಜೀವ್ ಕುಮಾರ್ ಸಿನ್ಹಾ ಅವರು ಸ್ಥಳಕ್ಕೆ ಆಗಮಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ಹಿಂದೂ ಸಂಘಟನೆಗಳು, ರಸ್ತೆ ತಡೆ ನಡೆಸಿ, ನಗರದ ಕೊತ್ವಾಲಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಪೊಲೀಸ್ ಠಾಣೆ ಹೊರಗೆ ಘೋಷಣೆಗಳನ್ನೂ ಕೂಗಿದ್ದಾರೆ.
ಘಟನೆ ಸಂಬಂಧ ಪ್ರಮುಖ ಆರೋಪಿ ವಿಕ್ಕಿ ಖಾನ್ ಸೇರಿದಂತೆ 9 ಮಂದಿಯನ್ನು ಬಂಧಿಸಲಾಗಿದೆ. ಇತರೆ ಆರೋಪಿಗಳ ಪತ್ತೆಯಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಸದ್ಯ ಪರಿಸ್ಥಿತಿ ಶಾಂತಿಯುತವಾಗಿದೆ. ಯಾವುದೇ ವದಂತಿಗಳಿಗೆ ಕಿವಿಗೊಡದಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.