ಲಡಾಖ್‌ಗೆ ರಾಜ್ಯ ಸ್ಥಾನಮಾನಕ್ಕಾಗಿ ಹೋರಾಟ ಹಿಂಸಾರೂಪಕ್ಕೆ: 30ಕ್ಕೂ ಹೆಚ್ಚು ಮಂದಿಗೆ ಗಾಯ

ಪ್ರತಿಭಟನಾಕಾರರು ಬಿಜೆಪಿ ಕಚೇರಿ ಮತ್ತು ಕೆಲ ವಾಹನಗಳನ್ನು ಜಖಂಗೊಳಿಸಿದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಬೇಕಾಯಿತು.

Update: 2025-09-24 14:28 GMT

ಲಡಾಖ್

Click the Play button to listen to article

ಲಡಾಖ್‌ಗೆ ಪ್ರತ್ಯೇಕ ರಾಜ್ಯ ಸ್ಥಾನಮಾನ ಮತ್ತು ಸಂವಿಧಾನದ 6ನೇ ಅನುಸೂಚಿ ಅನ್ವಯಿಸಬೇಕೆಂದು ಆಗ್ರಹಿಸಿ, ಲೇಹ್ ಅಪೆಕ್ಸ್ ಬಾಡಿ (LAB) ಸೆಪ್ಟೆಂಬರ್ 24ರಂದು ಕರೆ ನೀಡಿದ್ದ ಬಂದ್ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ನಡೆದ ತೀವ್ರ ಘರ್ಷಣೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಶಾಂತಿಯುತವಾಗಿ ನಡೆಯುತ್ತಿದ್ದ ಈ ಹೋರಾಟ, ಬುಧವಾರ ತೀವ್ರ ಸ್ವರೂಪ ಪಡೆದುಕೊಂಡಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಬೇಕಾಯಿತು. ಈ ವೇಳೆ, ಪ್ರತಿಭಟನಾಕಾರರು ಬಿಜೆಪಿ ಕಚೇರಿ ಮತ್ತು ಕೆಲವು ವಾಹನಗಳಿಗೆ ಹಾನಿ ಮಾಡಿದ್ದಾರೆ ಎಂದು ವರದಿಯಾಗಿದೆ. ಘಟನೆಯ ನಂತರ, ಲೇಹ್ ಜಿಲ್ಲೆಯಲ್ಲಿ ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆಯ ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಐವರಿಗಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಲಾಗಿದೆ.

ಹಿಂಸಾಚಾರಕ್ಕೆ ಕಾರಣವೇನು?

ಹವಾಮಾನ ಹೋರಾಟಗಾರ ಸೋನಮ್ ವಾಂಗ್‌ಚುಕ್ ನೇತೃತ್ವದಲ್ಲಿ 15 ಯುವಕರು 35 ದಿನಗಳ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಮಂಗಳವಾರ ಸಂಜೆ ಉಪವಾಸ ನಿರತ ಇಬ್ಬರ ಆರೋಗ್ಯ ಹದಗೆಟ್ಟಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈ ಘಟನೆಯಿಂದ ಆಕ್ರೋಶಗೊಂಡ ಲೇಹ್ ಅಪೆಕ್ಸ್ ಬಾಡಿಯ ಯುವ ಘಟಕವು ಬಂದ್‌ಗೆ ಕರೆ ನೀಡಿತ್ತು.

ಪ್ರತಿಭಟನಾಕಾರರ ಬೇಡಿಕೆಗಳೇನು?

2019ರಲ್ಲಿ ಲಡಾಖ್‌ಗೆ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ನೀಡಿದ ನಂತರ, ಇಲ್ಲಿ ಭ್ರಷ್ಟಾಚಾರ ಮತ್ತು ದುರಾಡಳಿತ ಹೆಚ್ಚಾಗಿದೆ. ಭೂ ಮಾಲೀಕತ್ವ ಮತ್ತು ಸ್ಥಳೀಯ ಉದ್ಯೋಗಗಳಲ್ಲಿ ಜನರ ಹಕ್ಕುಗಳನ್ನು ಕಸಿಯಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಲಡಾಖ್‌ಗೆ ಸಂಪೂರ್ಣ ರಾಜ್ಯ ಸ್ಥಾನಮಾನ ನೀಡಿ, ಅದರ ವಿಶಿಷ್ಟ ಸಂಸ್ಕೃತಿ ಮತ್ತು ಬುಡಕಟ್ಟು ಹಕ್ಕುಗಳನ್ನು ರಕ್ಷಿಸಲು ಸಂವಿಧಾನದ 6ನೇ ಅನುಸೂಚಿಯನ್ನು ಜಾರಿಗೊಳಿಸಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿದೆ.

ಈ ಬಗ್ಗೆ ಕೇಂದ್ರ ಸರ್ಕಾರವು ಅಕ್ಟೋಬರ್ 6ರಂದು ಮಾತುಕತೆ ನಡೆಸುವುದಾಗಿ ಭರವಸೆ ನೀಡಿತ್ತು. ಆದರೆ, ಅದಕ್ಕೂ ಮೊದಲೇ ಮಾತುಕತೆ ನಡೆಸಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. ಈ ಮಾತುಕತೆಯಲ್ಲಿ ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ ಕೂಡ ಭಾಗವಹಿಸಲಿದೆ.

ಶಾಂತಿಗೆ ಮನವಿ ಮಾಡಿದ ಸೋನಮ್ ವಾಂಗ್‌ಚುಕ್

ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ, ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್‌ಚುಕ್ ಅವರು ತಮ್ಮ 15 ದಿನಗಳ ಉಪವಾಸವನ್ನು ಮೊಟಕುಗೊಳಿಸಿ, ಸಾಮಾಜಿಕ ಜಾಲತಾಣದ ಮೂಲಕ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಈ ಘಟನೆಯು, 1989ರಲ್ಲಿ ಲಡಾಖ್ ಅನ್ನು ಜಮ್ಮು ಮತ್ತು ಕಾಶ್ಮೀರದಿಂದ ಬೇರ್ಪಡಿಸಿದಾಗ ನಡೆದ ಹಿಂಸಾಚಾರವನ್ನು ನೆನಪಿಸಿದೆ. ಅಂದಿನ ಪೊಲೀಸ್ ಫೈರಿಂಗ್‌ನಲ್ಲಿ ಮೂವರು ಸಾವನ್ನಪ್ಪಿದ್ದರು, ಆ ಘಟನೆಯು ಲಡಾಖ್ ಸ್ವಾಯತ್ತ ಪರ್ವತ ಅಭಿವೃದ್ಧಿ ಮಂಡಳಿ ರಚನೆಗೆ ಕಾರಣವಾಗಿತ್ತು. 

Tags:    

Similar News