ಕೇರಳ: ತೀವ್ರಗೊಂಡ ನೈಋತ್ಯ ಮುಂಗಾರು

Update: 2024-06-01 12:04 GMT
ತಿರುವನಂತಪುರಂ ವಿಮಾನ ನಿಲ್ದಾಣವನ್ನು ಮುಸುಕಿರುವ ದಟ್ಟ ಮೋಡಗಳು

ತಿರುವನಂತಪುರಂ, ಜೂನ್ 1- ಕೇರಳದಲ್ಲಿ 2 ದಿನ ಹಿಂದೆ ಪ್ರಾರಂಭಗೊಂಡ ನೈಋತ್ಯ ಮುಂಗಾರು ತೀವ್ರಗೊಂಡಿದ್ದು, ದಕ್ಷಿಣ ಮತ್ತು ಮಧ್ಯ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಭೂಕುಸಿತ ಸಂಭವಿಸಿದೆ. 

ಹಲವು ಗಂಟೆಗಳ ಕಾಲ ನಿರಂತರ ಮಳೆಯಿಂದ ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳ ಎತ್ತರ ಪ್ರದೇಶಗಳಲ್ಲಿ ಅಪಾರ ಉಂಟಾಗಿದೆ. ತ್ರಿಶೂರ್ ಜಿಲ್ಲೆಯ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. ಭಾರತೀಯ ಹವಾಮಾನ ಇಲಾಖೆಯು ತ್ರಿಶೂರ್‌ನ ಮಧ್ಯ ಜಿಲ್ಲೆ, ಉತ್ತರ ಜಿಲ್ಲೆಗಳಾದ ಮಲಪ್ಪುರಂ ಮತ್ತು ಕೋಯಿಕ್ಕೋಡ್ ನ್ನು ರೆಡ್ ಅಲರ್ಟ್‌ನಲ್ಲಿ ಇರಿಸಿದೆ. ಇಡುಕ್ಕಿ, ಪಾಲಕ್ಕಾಡ್ ಮತ್ತು ವಯನಾಡಿನಲ್ಲಿ ಆರೆಂಜ್ ಅಲರ್ಟ್ ಹಾಗೂ ಆರು ಜಿಲ್ಲೆ ಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ.

ರೆಡ್ ಅಲರ್ಟ್ 24 ಗಂಟೆಗಳಲ್ಲಿ 20 ಸೆಂಮೀ ಗಿಂತ ಭಾರಿ ಮಳೆ, ಆರೆಂಜ್ ಅಲರ್ಟ್ 11 ರಿಂದ 20 ಸೆಂಮೀ ಅಧಿಕ ಮಳೆ ಹಾಗೂ ಹಳದಿ ಎಚ್ಚರಿಕೆ ಎಂದರೆ 6 ರಿಂದ 11 ಸೆಂಮೀ ನಡುವಿನ ಮಳೆಗೆ ನೀಡುವ ಸೂಚನೆ.

ಇಡುಕ್ಕಿಯ ಒಳಭಾಗದಲ್ಲಿರುವ ಪೂಚಪ್ರಾ ಮತ್ತು ಕೊಲಪ್ರ ಪ್ರದೇಶಗಳಲ್ಲಿ ಭೂಕುಸಿತ ಮತ್ತು ಮರಗಳು ನೆಲಕ್ಕುರುಳಿರುವ ಘಟನೆಗಳು ವರದಿಯಾಗಿವೆ. ಆದರೆ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಗುಡ್ಡದಿಂದ ಬೃಹತ್‌ ಬಂಡೆ ಗಳು ಉರುಳಿ, ಬೆಳೆ ಹಾನಿ ಮತ್ತು ಸ್ಥಳೀಯ ಕುಟುಂಬಗಳು ಬಳಸುತ್ತಿದ್ದ ಸಣ್ಣ ರಸ್ತೆಗಳು ಹಾಳಾಗಿವೆ.

ಗುಡ್ಡಗಾಡು ಪ್ರದೇಶದಲ್ಲಿದ್ದ ಮನೆ ಮೇಲೆ ಬಂಡೆಗಳು ಉರುಳಿ, ನಿವಾಸಿಗಳು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.

ತೋಡುಪುಳ-ಪುಲಿಯನ್‌ಮಲ ರಾಜ್ಯ ಹೆದ್ದಾರಿಯಲ್ಲಿ ಮಣ್ಣು ಕುಸಿತದ ಭೀತಿಯಿಂದ ಸಂಚಾರ ನಿರ್ಬಂಧಿಸಲಾಗಿದೆ. ಇಡುಕ್ಕಿಯ ಮಲಂಕರ ಅಣೆಕಟ್ಟಿನ ಐದು ಬಾಗಿಲು ತೆರೆದಿದ್ದು, ತೊಡುಪುಳ ಮತ್ತು ಮುವಾಟ್ಟುಪುಳ ನದಿಗಳ ದಡದಲ್ಲಿ ವಾಸಿಸುವವರು ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಕೊಟ್ಟಾಯಂ ಜಿಲ್ಲೆಯ ವಿವಿಧೆಡೆ ಮಳೆಯಾಗುತ್ತಿದ್ದು, ಮೀನಾಚಲ ಮತ್ತು ಮಣಿಮಾಲಾ ನದಿಗಳ ಸಮೀಪ ವಾಸಿಸುವವರು ಜಾಗರೂಕರಾಗಿ ರಲು ಸೂಚಿಸಲಾಗಿದೆ. ಕೊಟ್ಟಾಯಂನ ಹಲವು ಭಾಗಗಳು ಶುಕ್ರವಾರ ಸಂಜೆಯಿಂದ ಸುರಿಯುತ್ತಿರುವ ಮಳೆಯಿಂದ ಜಲಾವೃತಗೊಂಡಿದ್ದು, ಸಂಚಾರ ಅಸ್ತವ್ಯಸ್ತ ವಾಗಿದೆ. ಶುಕ್ರವಾರ ರಾತ್ರಿ ವಡವತ್ತೂರ್ ಪ್ರದೇಶದಲ್ಲಿ 100 ಮಿಮೀ ಹಾಗೂ ಕೊಟ್ಟಾಯಂ ನಗರ ಪ್ರದೇಶಗಳಲ್ಲಿ 99 ಮಿಮೀ ಮಳೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಕೊಚ್ಚಿಯಲ್ಲಿ ಸಾಧಾರಣ ಮಳೆಯಾಗಿದೆ. ಆದರೆ, ಎರ್ನಾಕುಲಂನ ಅಲುವಾ ಪ್ರದೇಶದಲ್ಲಿ ಮೇ 31ರ ರಾತ್ರಿಯಿಂದ ಭಾರಿ ಮಳೆಯಾಗಿದೆ. ಮಧ್ಯ ಜಿಲ್ಲೆ ತ್ರಿಶೂರ್‌ನಲ್ಲಿ ಶನಿವಾರ ಬೆಳಗ್ಗೆಯಿಂದ ಭಾರೀ ಮಳೆಯಾಗುತ್ತಿದೆ. ಜನರು ಬಸ್‌ ಮತ್ತು ರೈಲು ನಿಲ್ದಾಣಗಳಲ್ಲಿ ಸಿಲುಕಿಕೊಂಡಿದ್ದಾರೆ.

ತ್ರಿಶೂರ್‌ನಲ್ಲಿ 40 ಕಿಮೀ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ತಗ್ಗು ಪ್ರದೇಶಗಳು ಮತ್ತು ನದಿ ದಡಗಳಲ್ಲಿ ಪ್ರವಾಹದ ಸಾಧ್ಯತೆಯಿದೆ. ಅನಿವಾರ್ಯವಲ್ಲದ ಚಲನವಲನ ಕೂಡದು ಮತ್ತು ಜನರು ಸುರಕ್ಷಿತ ಸ್ಥಳಗಳಲ್ಲಿ ಉಳಿಯಬೇಕು ಎಂದು ಹೇಳಿದೆ.

ನೈಋತ್ಯ ಮುಂಗಾರು ಮೇ 30 ರಂದು ಕೇರಳ ಮತ್ತು ಈಶಾನ್ಯ ರಾಜ್ಯಗಳನ್ನು ಪ್ರವೇಶಿಸಿತು. ಹವಾಮಾನ ವಿಜ್ಞಾನಿಗಳ ಪ್ರಕಾರ, ರೆಮಲ್ ಚಂಡಮಾರುತವು ಮುಂಗಾರು ಹರಿವನ್ನು ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಮೂಲಕ ಬಂಗಾಳ ಕೊಲ್ಲಿಗೆ ಎಳೆದಿದೆ. ಇದು ಈಶಾನ್ಯ ರಾಜ್ಯ ಮತ್ತು ಕೇರಳದಲ್ಲಿ ಮಳೆಗೆ ಒಂದು ಕಾರಣ ಆಗಿರಬಹುದು. 

Tags:    

Similar News