'ಸಮಾಜವಾದಿ', 'ಜಾತ್ಯತೀತ' ಪದ ತೆಗೆದುಹಾಕಲುಆರ್‌ಎಸ್‌ಎಸ್ ನಿಯತಕಾಲಿಕೆ ಒತ್ತಾಯ

`ಸಮಾಜವಾದಿ' ಮತ್ತು 'ಜಾತ್ಯತೀತ' ಪದಗಳು ಭಾರತೀಯ ಮನೋಭಾವದ್ದಲ್ಲ, ಕಾರ್ಯವಿಧಾನದಲ್ಲಿ ಸಾಂವಿಧಾನಿಕವಲ್ಲ ಮತ್ತು ಉದ್ದೇಶದಲ್ಲಿ ಪ್ರಜಾಪ್ರಭುತ್ವದ್ದಲ್ಲ ಎಂದು ಆರ್‌ಎಸ್‌ಎಸ್‌ ನಿಯತಕಾಲಿಕ ಅಭಿಪ್ರಾಯಪಟ್ಟಿದೆ.;

Update: 2025-07-15 08:38 GMT

ಸಮಾಜವಾದವನ್ನು 'ಜಾಗತಿಕ ಕಾರ್ಯಸೂಚಿ' ಎಂದು ಲೇಖನದಲ್ಲಿ ತಿಳಿಸಲಾಗಿದೆ. 

ಭಾರತದ ಸಂವಿಧಾನ ಪೀಠಿಕೆಗೆ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸೇರಿಸಲಾದ 'ಸಮಾಜವಾದಿ' ಮತ್ತು 'ಜಾತ್ಯತೀತ' ಪದಗಳನ್ನು 'ಸೈದ್ಧಾಂತಿಕ ನೆಲಬಾಂಬ್‌ಗಳುʼ ಎಂದು ಕರೆದಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ(ಆರ್‌ಎಸ್‌ಎಸ್‌) ವಾರಪತ್ರಿಕೆಯೊಂದು ಆ ಪದಗಳನ್ನು ಸಂವಿಧಾನದಿಂದ ತೆಗೆದು ಹಾಕುವಂತೆ ಒತ್ತಾಯಿಸಿದೆ.

ಈ ಪದಗಳು 'ಧಾರ್ಮಿಕ ಮೌಲ್ಯಗಳನ್ನು ಬುಡಮೇಲು ಮಾಡಲು ಮತ್ತು 'ರಾಜಕೀಯ ಸಮಾಧಾನ'ಕ್ಕಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಪ್ರತಿಪಾದಿಸಿರುವ ಲೇಖನವು, ಅವುಗಳನ್ನು 'ರದ್ದುಗೊಳಿಸಿ' ಮೂಲ ಸಂವಿಧಾನವನ್ನು ಮರಳಿ ಪಡೆಯುವ ಸಮಯ ಬಂದಿದೆ ಎಂದು ಹೇಳಿದೆ.

ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಈ ಎರಡು ಪದಗಳು ಸಂವಿಧಾನದ ಪೀಠಿಕೆಯಲ್ಲಿ ಮುಂದುವರಿಯಬೇಕೇ ಎಂಬುದರ ಕುರಿತು ರಾಷ್ಟ್ರೀಯ ಚರ್ಚೆಗೆ ಕರೆ ನೀಡಿದ್ದ ಕೆಲವೇ ದಿನಗಳ ನಂತರ ಈ ಲೇಖನ ಪ್ರಕಟವಾಗಿದೆ. ಈ ಪದಗಳು ಎಂದಿಗೂ ಮೂಲ ಸಂವಿಧಾನದ ಭಾಗವಾಗಿರಲಿಲ್ಲ ಎಂದು ಹೊಸಬಾಳೆ ಅವರು ದೆಹಲಿಯಲ್ಲಿ ನಡೆದ ತುರ್ತು ಪರಿಸ್ಥಿತಿ ಕುರಿತ ಕಾರ್ಯಕ್ರಮದಲ್ಲಿ ಹೇಳಿದ್ದರು. 

ಲೇಖನದಲ್ಲಿ ಹೇಳಿರುವುದು ಏನು? 

ʻಆರ್ಗನೈಸರ್' ವೆಬ್‌ಸೈಟ್‌ನಲ್ಲಿ ಶನಿವಾರ ಪ್ರಕಟವಾದ ಡಾ. ನಿರಂಜನ್ ಬಿ ಪೂಜಾರ್ ಅವರ ಲೇಖನ `ಸಮಾಜವಾದಿ ಮತ್ತು ಜಾತ್ಯತೀತತೆಯನ್ನು ಮರುಪರಿಶೀಲಿಸುವುದು: ಭಾರತದ ಸಾಂವಿಧಾನಿಕ ಸಮಗ್ರತೆಯನ್ನು ಮರಳಿ ಪಡೆಯುವುದು' ಎಂಬ ಶೀರ್ಷಿಕೆಯ ಲೇಖನವು ಈ ಎರಡು ಪದಗಳ ಸೇರ್ಪಡೆಯನ್ನು ʻಸಾಂವಿಧಾನಿಕ ವಂಚನೆಯ ಕೃತ್ಯʼ ಎಂದು ಕರೆದಿದೆ.

ಈ ಪದಗಳು ಕೇವಲ ʻಸೌಂದರ್ಯವರ್ಧಕ ಸೇರ್ಪಡೆಗಳುʼ ಅಲ್ಲ, ಬದಲಿಗೆ ಭಾರತದ ನಾಗರಿಕತೆಯ ಗುರುತು ಮತ್ತು ಸಾಂವಿಧಾನಿಕ ಪ್ರಜಾಪ್ರಭುತ್ವದ ಚೈತನ್ಯಕ್ಕೆ ವಿರುದ್ಧವಾದ ʻಸೈದ್ಧಾಂತಿಕ ಹೇರಿಕೆʼ ಎಂದು ಲೇಖನದಲ್ಲಿ ತಿಳಿಸಲಾಗಿದೆ. 

ಸಾಂವಿಧಾನಿಕ ವಂಚನೆಯ ಕೃತ್ಯ

"ಯಾವುದೇ ಸಂವಿಧಾನ ಸಭೆಯು ಈ ವಾಕ್ಯವನ್ನು ಅನುಮೋದಿಸಿಲ್ಲ. ತುರ್ತು ಪರಿಸ್ಥಿತಿ ಸಮಯದಲ್ಲಿ ಸಂಸತ್ತು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ, ವಿರೋಧ ಪಕ್ಷದ ನಾಯಕರು ಜೈಲಿನಲ್ಲಿದ್ದಾಗ ಮತ್ತು ಮಾಧ್ಯಮಗಳ ಬಾಯಿ ಮುಚ್ಚಿಸಿದಾಗ 42 ನೇ ತಿದ್ದುಪಡಿ ಅಂಗೀಕರಿಸಲಾಯಿತು. ಇದು ಸಾಂವಿಧಾನಿಕ ವಂಚನೆಯ ಕೃತ್ಯವಾಗಿದ್ದು, ಯಾರೊಬ್ಬರ ಅರಿವಿಲ್ಲದಿದ್ದಾಗ ಅವರ ಇಚ್ಛೆಯನ್ನು ನಕಲಿ ಮಾಡಿದಂತೆ ಈ ಪದಗಳನ್ನು ಸೇರಿಸಲಾಗಿದೆʼʼ ಎಂದು ಲೇಖನದಲ್ಲಿ ವಿವರಿಸಲಾಗಿದೆ. 

"ಭಾರತವು ಸ್ಥಾಪಕ ಪಿತಾಮಹರು ಕಲ್ಪಿಸಿಕೊಂಡಂತೆ ಮೂಲ ಪೀಠಿಕೆಗೆ ಮರಳಬೇಕು. ತುರ್ತು ಪರಿಸ್ಥಿತಿಯ ಸಾಂವಿಧಾನಿಕ ಪಾಪವನ್ನು ರದ್ದುಗೊಳಿಸೋಣ ಮತ್ತು ಭಾರತದ ಜನರಿಗೆ ಪೀಠಿಕೆಯನ್ನು ಮರಳಿ ಪಡೆಯೋಣ" ಎಂದು ಡಾ. ನಿರಂಜನ್ ಬಿ ತಮ್ಮ ಲೇಖನದ ಪೀಠಿಕೆಯಲ್ಲಿ ತಿಳಿಸಿದ್ದಾರೆ.

ʻಸಮಾಜವಾದಿ' ಮತ್ತು 'ಜಾತ್ಯತೀತ' ಪದಗಳು ಭಾರತೀಯ ಮನೋಭಾವದ್ದಲ್ಲ, ಕಾರ್ಯವಿಧಾನದಲ್ಲಿ ಸಾಂವಿಧಾನಿಕವಲ್ಲ ಮತ್ತು ಉದ್ದೇಶದಲ್ಲಿ ಪ್ರಜಾಪ್ರಭುತ್ವದ್ದಲ್ಲ. ಅವು ಧಾರ್ಮಿಕ ಮೌಲ್ಯಗಳನ್ನು ಬುಡಮೇಲು ಮಾಡಲು, ರಾಜ್ಯ ಸಂಪರ್ಕವನ್ನು ಸಮರ್ಥಿಸಲು ಮತ್ತು ರಾಜಕೀಯ ಓಲೈಕೆಗಾಗಿ ವಿನ್ಯಾಸಗೊಳಿಸಲಾದ ಸೈದ್ಧಾಂತಿಕ ನೆಲಬಾಂಬ್‌ಗಳಾಗಿವೆ ಎಂದು ಪ್ರತಿಪಾದಿಸಲಾಗಿದೆ. 

ʻಸಾಂವಿಧಾನಿಕ ಶುದ್ಧೀಕರಣʼ ಅಗತ್ಯ

ʻಸಾಂವಿಧಾನಿಕ ಶುದ್ಧೀಕರಣʼ ಅಗತ್ಯ ಎಂದು ಪ್ರತಿಪಾದಿಸಿರುವ ಲೇಖನವು, 'ಸಮಾಜವಾದಿ' ಮತ್ತು 'ಜಾತ್ಯತೀತ' ಪದಗಳನ್ನು ತೆಗೆದುಹಾಕುವುದು ಸಿದ್ಧಾಂತದ ಬಗ್ಗೆ ಅಲ್ಲ, ಬದಲಿಗೆ ʻಸಾಂವಿಧಾನಿಕ ಪ್ರಾಮಾಣಿಕತೆʼ ಹಾಗೂ ರಾಷ್ಟ್ರೀಯ ಘನತೆ ಮರಳಿ ಪಡೆಯುವುದು ಮತ್ತು ರಾಜಕೀಯ ಬೂಟಾಟಿಕೆಯನ್ನು ಕೊನೆಗೊಳಿಸುವುದು. ನಾವು ನಿಜವಾಗಿಯೂ ಅಂಬೇಡ್ಕರ್ , ಪ್ರಜಾಪ್ರಭುತ್ವವನ್ನು ಗೌರವಿಸಿದರೆ ಈ ಪದಗಳನ್ನು ಬಳಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. 

"ನಮ್ಮದು ಸಮಾಜವಾದಿ, ಜಾತ್ಯತೀತ-ನಾಸ್ತಿಕ ದೇಶವಲ್ಲ. ಸ್ವರಾಜ್ಯ ಮತ್ತು ಆಧ್ಯಾತ್ಮಿಕ ಸ್ವಾಯತ್ತತೆಯಲ್ಲಿ ಬೇರೂರಿರುವ ಧಾರ್ಮಿಕ ನಾಗರಿಕತೆ. ನಮ್ಮ ಸಂವಿಧಾನದಲ್ಲಿ ಹಾಗೆ ಹೇಳಲು ನಮಗೆ ಧೈರ್ಯವಿರಲಿ"ಎಂದು ಅದು ಹೇಳಿದೆ.

"ಯುರೋಪ್‌ನಲ್ಲಿ ಧರ್ಮವನ್ನು ರಾಜ್ಯದಿಂದ ಬೇರ್ಪಡಿಸುವ ಬದಲು, ಭಾರತೀಯ ಜಾತ್ಯತೀತತೆಯು ಹಿಂದೂ ದೇವಾಲಯಗಳಲ್ಲಿ ರಾಜ್ಯದ ಹಸ್ತಕ್ಷೇಪ, ಧಾರ್ಮಿಕ ಶಿಕ್ಷಣದ ಮೇಲೆ ನಿಯಂತ್ರಣ ಮತ್ತು ಶಿಕ್ಷಣದಂತಹ ವಿಷಯಗಳಲ್ಲಿ ಹಿಂದೂಗಳಿಗೆ ಸಮಾನ ಹಕ್ಕುಗಳನ್ನು ನಿರಾಕರಿಸಲು ಕಾರಣವಾಗಿದೆ. ಅಲ್ಪಸಂಖ್ಯಾತರು ಹಸ್ತಕ್ಷೇಪವಿಲ್ಲದೆ ತಮ್ಮ ಸಂಸ್ಥೆಗಳನ್ನು ನಡೆಸುವುದರಿಂದ ಹಿಡಿದು ಉದ್ದೇಶಿತ ಸಬ್ಸಿಡಿಗಳನ್ನು ಪಡೆಯುವವರೆಗೆ ಪ್ರಶ್ನಾತೀತ ಸವಲತ್ತುಗಳನ್ನುಅನುಭವಿಸುತ್ತಿದ್ದಾರೆ ಎಂದು ಲೇಖನದಲ್ಲಿ ತಿಳಿಸಲಾಗಿದೆ. 

ಜಾತ್ಯತೀತತೆ ತಟಸ್ಥ ಪದವಲ್ಲ

"ಜಾತ್ಯತೀತತೆ ಎಂಬುದು ನಿಜವಾದ ಅರ್ಥದಲ್ಲಿ ತಟಸ್ಥ ಪದವಲ್ಲ. ಇದು ಯಹೂದಿ, ಪ್ರೊಟೆಸ್ಟಂಟ್ ಮತ್ತು ಜ್ಞಾನೋದಯದ ಬೇರುಗಳನ್ನು ಹೊಂದಿದೆ. ಇದನ್ನು ಯುರೋಪಿನಲ್ಲಿ ಕ್ಯಾಥೋಲಿಕ್ ಚರ್ಚ್‌ನ ಅಧಿಕಾರವನ್ನು ದುರ್ಬಲಗೊಳಿಸಲು ನಿರ್ದಿಷ್ಟವಾಗಿ ಅಭಿವೃದ್ಧಿಪಡಿಸಲಾಗಿದೆ. ಆದರೆ, ಭಾರತದಲ್ಲಿ ಹಿಂದುತ್ವ, ಅದರ ಧಾರ್ಮಿಕ ಸ್ವರೂಪ ಮತ್ತು ಸಮಗ್ರ ವಿಶ್ವ ದೃಷ್ಟಿಕೋನವನ್ನು ಅಪಖ್ಯಾತಿಗೊಳಿಸಲು ಇದನ್ನು ವ್ಯವಸ್ಥಿತವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಲೇಖನದಲ್ಲಿ ಆರೋಪಿಸಲಾಗಿದೆ. 

ಜಾತ್ಯತೀತ ಕಾರ್ಯಸೂಚಿ

ಸಮಾಜವಾದವನ್ನು ʻಜಾತ್ಯತೀತ ಕಾರ್ಯಸೂಚಿʼ ಎಂದು ಕರೆದಿರುವ ಲೇಖನವು ಅದು ಕೇವಲ ಆರ್ಥಿಕ ಮಾದರಿಯಲ್ಲ ಆದರೆ "ರಾಜಕೀಯ ಆಯುಧ" ಎಂದು ಹೇಳಿದೆ. ಇದು ವೈಯಕ್ತಿಕ ಉದ್ಯಮವನ್ನು ಕೊಲ್ಲುತ್ತದೆ, ಅಧಿಕಾರಶಾಹಿ ನಿಯಂತ್ರಣವನ್ನು ಉತ್ತೇಜಿಸುತ್ತದೆ ಮತ್ತು ನಾಗರಿಕರು ಸೃಷ್ಟಿಕರ್ತರಲ್ಲ, ಅವಲಂಬಿತರಾಗುವ ದಾದಿಯ ರಾಜ್ಯವನ್ನು ಬೆಳೆಸುತ್ತದೆ. ಸಮಾಜವಾದಿ' ಪದದ ಸೇರ್ಪಡೆಯು "ಸತತ ಸರ್ಕಾರಗಳು ಸಾರ್ವಜನಿಕ ಹಿತದ ಹೆಸರಿನಲ್ಲಿ ರಾಜ್ಯದ ಅತಿಕ್ರಮಣವನ್ನು ಸಮರ್ಥಿಸಲು, ಸಂಪನ್ಮೂಲಗಳನ್ನು ರಾಷ್ಟ್ರೀಕರಣಗೊಳಿಸಲು ಮತ್ತು ಖಾಸಗಿ ನಾವೀನ್ಯತೆಯನ್ನು ಉಸಿರುಗಟ್ಟಿಸಲು ಅವಕಾಶ ಮಾಡಿಕೊಟ್ಟಿದೆ. ಈ ಸಮಾಜವಾದವು ಅಸಮಾನತೆಯನ್ನು ಪರಿಹರಿಸುವ ಬದಲು ಹೆಚ್ಚಿಸಿದೆ ಎಂದು ಲೇಖನವು ವಾದಿಸಿದೆ.

"ಅರ್ಥಶಾಸ್ತ್ರಜ್ಞ ಬಿ ಆರ್ ಶೆಣೈ 1955 ರ ಆರಂಭದಲ್ಲಿ ಎಚ್ಚರಿಸಿದಂತೆ, ನೆಹರೂವಿಯನ್ ಸಮಾಜವಾದವು ಭಾರತವನ್ನು 'ಅಧಿಕಾರಶಾಹಿ ರಾಜ್ ಮತ್ತು ಆರ್ಥಿಕ ನಿಶ್ಚಲತೆಗೆ' ಕರೆದೊಯ್ಯುತ್ತದೆ ಎಂದು ತಿಳಿಸಿದ್ದರು. ಆದರೆ ದಶಕಗಳ ಬಳಿಕ ಅವರ ಮಾತು ನಿಜವಾಗಿದೆ ಎಂದು ಲೇಖನವು ಹಿಂದಿನ ಆರ್ಥಿಕ ನೀತಿಗಳನ್ನು ವಿಮರ್ಶಿಸಿದೆ. 1990 ರ ದಶಕದ ಆರಂಭದಲ್ಲಿ ಪರವಾನಗಿ-ಕೋಟ್ ರಾಜ್‌ನ ಕುಸಿತವು ಸಮಾಜವಾದಿ ನೀತಿಗಳ "ನೈತಿಕ ಮತ್ತು ಆರ್ಥಿಕ ದಿವಾಳಿತನವನ್ನು" ಬಹಿರಂಗಪಡಿಸಿತು ಎಂದು ಲೇಖನದಲ್ಲಿ ತಿಳಿಸಲಾಗಿದೆ. 

ಜುಲೈ 5 ರಂದು ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ಹಿಂದಿ ವಾರಪತ್ರಿಕೆ 'ಪಾಂಚಜನ್ಯ'ದಲ್ಲಿ ಪ್ರಕಟವಾದ ಸಂಪಾದಕೀಯದಲ್ಲಿ, ರಾಹುಲ್ ಗಾಂಧಿ ಕೆಲವು ವರ್ಷಗಳ ಹಿಂದೆ ತುರ್ತು ಪರಿಸ್ಥಿತಿ ಹೇರಿಕೆ ತಪ್ಪು ಎಂದು ಒಪ್ಪಿಕೊಂಡಿದ್ದರು ಎಂದು ಉಲ್ಲೇಖಿಸಲಾಗಿತ್ತು. ಆ ತಪ್ಪನ್ನು ಸರಿಪಡಿಸಲು ಕಾಂಗ್ರೆಸ್ ನಾಯಕರು ಮುಂದೆ ಬರಬೇಕು ಎಂದು ಸಂಪಾದಕೀಯ ಪ್ರತಿಪಾದಿಸಿತ್ತು.

ಕಾಂಗ್ರೆಸ್‌ಗೆ ಸವಾಲು

"ತುರ್ತು ಪರಿಸ್ಥಿತಿ ತಪ್ಪಾಗಿದ್ದರೆ, ಆ ಅವಧಿಯಲ್ಲಿ ಮಾಡಿದ ಸಾಂವಿಧಾನಿಕ ತಿದ್ದುಪಡಿಗಳು ಸಹ ಆ ತಪ್ಪಿನ ಪರಿಣಾಮವಾಗಿದೆ" ಎಂದು 'ಪಾಂಚಜನ್ಯ' ಸಂಪಾದಕ ಹಿತೇಶ್ ಶಂಕರ್ ಹೇಳಿದ್ದರು. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಈ ತಿದ್ದುಪಡಿಯನ್ನು ತಪ್ಪು ನಿರ್ಧಾರವೆಂದು ಪರಿಗಣಿಸಿದರೆ, ಅವರು ಸಂಸತ್ತಿನಲ್ಲಿ ಈ ತಿದ್ದುಪಡಿಯನ್ನು ಪರಿಶೀಲಿಸುವಂತೆ ಒತ್ತಾಯಿಸಬೇಕು. 'ಜಾತ್ಯತೀತ' ಮತ್ತು 'ಸಮಾಜವಾದಿ' ಪದಗಳನ್ನು ತೆಗೆದುಹಾಕಲು ಕ್ರಮ ತೆಗೆದುಕೊಳ್ಳಬೇಕುʼʼ ಎಂದು ಸವಾಲು ಹಾಕಿದ್ದರು. 

ಈ ವಿಷಯದಲ್ಲಿ ದೇಶವು ʻಹೊಸ ಚರ್ಚೆ, ಹೊಸ ಸಂಕಲ್ಪ ಮತ್ತು ಹೊಸ ಧೈರ್ಯʼ ದೊಂದಿಗೆ ಬರಬೇಕು ಪೀಠಿಕೆಯಲ್ಲಿರುವ (ಎರಡು ಪದಗಳು) ಚರ್ಚೆಯ ಜೊತೆಗೆ, ಪ್ರಕ್ರಿಯೆ ಮತ್ತು ಕಾನೂನುಬದ್ಧತೆಯ ಬಗ್ಗೆಯೂ ಚರ್ಚೆಗಳು ನಡೆಯಬೇಕು ಎಂದು ಶಂಕರ್‌ ಕರೆ ನೀಡಿದ್ದರು. 

Tags:    

Similar News