ಭಾನುವಾರವೂ ಕೆಲಸ ಮಾಡಿ: ಎಲ್& ಟಿ ಮುಖ್ಯಸ್ಥರ ಹೇಳಿಕೆಗೆ ದೀಪಿಕಾ, ಜ್ವಾಲಾಗುಟ್ಟ ಕಿಡಿ
ತಮ್ಮ ಉದ್ಯೋಗಿಗಳನ್ನು ಉದ್ದೇಶಿಸಿ ಎಲ್ ಆಂಡ್ ಟಿ ಮುಖ್ಯಸ್ಥ ಎಸ್.ಎನ್.ಸುಬ್ರಹ್ಮಣ್ಯನ್ ಅವರು ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಅಲ್ಲಿ ಅವರು ‘ನಿಮ್ಮಿಂದ ಭಾನುವಾರವೂ ಕೆಲಸ ಮಾಡಿಸಬೇಕು ಎಂಬ ಯೋಚನೆ ನನಗಿದೆ ಎಂದಿದ್ದಾರೆ.;
ಭಾನುವಾರ ರಜೆಯೂ ತೆಗೆದುಕೊಳ್ಳಬಾರದು ಹಾಗೂ ವಾರಕ್ಕೆ 90 ದಿನ ಕೆಲಸ ಮಾಡಬೇಕು ಎಂದು ಎಲ್&ಟಿ ಮುಖ್ಯ ಎಸ್. ಎನ್ ಸುಬ್ರಹ್ಮಣ್ಯ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದರ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಟೀಕೆಗಳು ವ್ಯಕ್ತವಾಗಿವೆ. ಪ್ರಮುಖವಾಗಿ ನಟಿ ದೀಪಿಕಾ ಪಡುಕೋಣೆ ಹಾಗೂ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಲ್ಲಿ ಅವರು ಹೆಚ್ಚು ಕೆಲಸ ಮಾಡಬೇಕು ಎಂಬ ಹೇಳಿಕೆಗಿಂತಲೂ ʼʼಹೆಂಡತಿ ಮುಖ ಎಷ್ಟು ನೋಡಿಕೊಂಡು ಇರುತ್ತೀರಿʼʼ ಎಂಬ ವ್ಯಂಗ್ಯವನ್ನು ಕಟ್ಟಿ ಮುರಿದಂತೆ ಖಂಡಿಸಿದ್ದಾರೆ.
ಎಲ್ ಆಂಡ್ ಟಿ ಮುಖ್ಯಸ್ಥ ಎಸ್.ಎನ್.ಸುಬ್ರಹ್ಮಣ್ಯನ್ ಅವರು ಈ ಹೇಳಿಕೆ ನೀಡಿದವರು. “ಮನೆಯಲ್ಲಿ ಎಷ್ಟು ಹೊತ್ತು ಪತ್ನಿಯ ಮುಖ ನೋಡಿಕೊಂಡು ಕೂರುತ್ತೀರಿ. ವಾರದಲ್ಲಿ 90 ಗಂಟೆ ಕೆಲಸ ಮಾಡಿ, ಭಾನುವಾರವೂ ದುಡಿಯಿರಿ” ಎಂದು ಅವರು ಹೇಳಿಕೆ ನೀಡಿದ್ದರು. ದೀಪಿಕಾ ಪಡುಕೋಣೆ, ಜ್ವಾಲಾ ಗುಟ್ಟಾ ಜತೆಗೆ ಹರ್ಷ್ ಗೋಯೆಂಕಾ ಸೇರಿದಂತೆ ಹಲವು ಸೆಲೆಬ್ರಿಟಿಗಳು ಸುಬ್ರಹ್ಮಣ್ಯನ್ ವಿರುದ್ಧ ಧ್ವನಿಯೆತ್ತಿದ್ದಾರೆ.
ಎಲ್&ಟಿ ಮುಖ್ಯಸ್ಥರ ಹೇಳಿಕೆ “ಸ್ತ್ರೀದ್ವೇಷಿ” ಎಂದಿರುವ ಜ್ವಾಲಾ ಗುಟ್ಟಾ, “ ಮಾನಸಿಕ ಆರೋಗ್ಯ ಮತ್ತು ವಿಶ್ರಾಂತಿಯನ್ನು ಗಂಭೀರವಾಗಿ ಪರಿಗಣಿಸದೇ ಇರುವುದನ್ನು ನೋಡಿದರೆ ಬೇಸರವಾಗುತ್ತದೆ. ಸುಬ್ರಹ್ಮಣ್ಯನ್ ಹೇಳಿಕೆಯಂತೂ ಸ್ತ್ರೀ ದ್ವೇಷದಿಂದ ಕೂಡಿದೆ. ಅಷ್ಟಕ್ಕೂ, ಅವರು ತಮ್ಮ ಪತ್ನಿಯ ಮುಖವನ್ನು ಏಕೆ ನೋಡಬಾರದು?” ಎಂದು ಪ್ರಶ್ನಿಸಿದ್ದಾರೆ.
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಬೇಸರ
ಇನ್ ಸ್ಟಾಗ್ರಾಂ ಖಾತೆಯಲ್ಲಿ ಸುಬ್ರಹ್ಮಣ್ಯನ್ ವಿರುದ್ಧ ಕಿಡಿಕಾರಿರುವ ನಟಿ ದೀಪಿಕಾ ಪಡುಕೋಣೆ, ‘ಇಷ್ಟು ಪ್ರಮುಖ ಹುದ್ದೆಯಲ್ಲಿರುವ ವ್ಯಕ್ತಿಗಳು ಇಂಥ ಹೇಳಿಕೆ ನೀಡುತ್ತಿರುವುದು ನಿಜಕ್ಕೂ ಆಘಾತಕಾರಿ’ ಎಂದಿದ್ದಾರೆ.
ದೀಪಿಕಾ ಪಡುಕೋಣೆ ಹೇಳಿಕೆಯ ಬೆನ್ನಲ್ಲೇ ಉದ್ಯಮಿ ಹಾಗೂ ಆರ್ ಪಿಜಿ ಗ್ರೂಪ್ ಮುಖ್ಯಸ್ಥ ಹರ್ಷ್ ಗೋಯೆಂಕಾ ಅವರೂ ಸುಬ್ರಹ್ಮಣ್ಯನ್ ಅಭಿಪ್ರಾಯವನ್ನು ವಿರೋಧಿಸಿದ್ದಾರೆ. “ಸ್ಮಾರ್ಟ್ ಆಗಿ ಕೆಲಸ ಮಾಡಬೇಕೇ ಹೊರತು, ಗುಲಾಮರಾಗಿ ಅಲ್ಲ” ಎಂದು ಟ್ವೀಟ್ ಮಾಡಿದ್ದಾರೆ. “ವಾರಕ್ಕೆ 90 ದಿನ ಕೆಲಸವೇ? ಹಾಗಿದ್ದರೆ ಇನ್ನು Sunday ಯನ್ನು Sun-duty ಎಂದು ಬದಲಾಯಿಸಬಹುದಲ್ಲವೇ? ನಾನು ನಂಬುವುದು ಶ್ರಮವಹಿಸಿ, ಸ್ಮಾರ್ಟ್ ಆಗಿ ಕೆಲಸ ಮಾಡುವುದನ್ನು ಮಾತ್ರ. ಉದ್ಯೋಗ-ಜೀವನ ಸಮತೋಲನ ಅತ್ಯವಶ್ಯಕ ಎಂದು ಗೋಯೆಂಕಾ ಬರೆದುಕೊಂಡಿದ್ದಾರೆ.
ಏನಿದು ವಿವಾದ?
ತಮ್ಮ ಉದ್ಯೋಗಿಗಳನ್ನು ಉದ್ದೇಶಿಸಿ ಎಲ್ ಆಂಡ್ ಟಿ ಮುಖ್ಯಸ್ಥ ಎಸ್.ಎನ್.ಸುಬ್ರಹ್ಮಣ್ಯನ್ ಅವರು ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಅಲ್ಲಿ ಅವರು ‘ನಿಮ್ಮಿಂದ ಭಾನುವಾರವೂ ಕೆಲಸ ಮಾಡಿಸಬೇಕು ಎಂಬ ಯೋಚನೆ ನನಗಿದೆ. ಆದರೆ ಅದು ಸಾಧ್ಯವಾಗುತ್ತಿಲ್ಲ ಎಂಬ ಬೇಸರವೂ ಇದೆ. ನಾನಂತೂ ಭಾನುವಾರವೂ ಕೆಲಸ ಮಾಡುತ್ತಿದ್ದೇನೆ. ನಿಮ್ಮಿಂದಲೂ ಕೆಲಸ ಮಾಡಿಸಲು ಸಾಧ್ಯವಾದರೆ ನಾನು ಹೆಚ್ಚು ಸಂತೋಷ ಪಡುತ್ತೇನೆ ಎಂದು ಹೇಳಿದ್ದಾರೆ. ಮುಂದುವರಿದ ಅವರು ಎಷ್ಟು ಹೊತ್ತು ಹೆಂಡತಿಯ ಮುಖವನ್ನೇ ನೋಡುತ್ತಾ ಕುಳಿತಿರಲು ಸಾಧ್ಯ. ಕಚೇರಿಗೆ ಬಂದು ಕೆಲಸ ಮಾಡಿ ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿ’ ಎಂದು ಹೇಳಿದ್ದರು ಸುಬ್ರಹ್ಮಣ್ಯನ್ ಹೇಳಿಕೆಗೆ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗತೊಡಗಿವೆ.