Shivaji statue collapse| ಥಾಣೆ ಜಿಲ್ಲೆಯಲ್ಲಿ ಗುತ್ತಿಗೆದಾರ-ಶಿಲ್ಪಿ ಬಂಧನ

Update: 2024-09-05 09:58 GMT
ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಮಾಲ್ವಾನ್‌ನಲ್ಲಿರುವ ರಾಜ್‌ಕೋಟ್ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 35 ಅಡಿ ಪ್ರತಿಮೆ ಕುಸಿದಿತ್ತು

ಮುಂಬೈ: ರಾಜ್‌ಕೋಟ್ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಪತನಕ್ಕೆ ಸಂಬಂಧಿಸಿದಂತೆ ಶಿಲ್ಪಿ-ಗುತ್ತಿಗೆದಾರ ಜಯದೀಪ್ ಆಪ್ಟೆ ಅವರನ್ನು ಥಾಣೆ ಜಿಲ್ಲೆಯ ಕಲ್ಯಾಣ್‌ ನಲ್ಲಿ ಬುಧವಾರ ರಾತ್ರಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಪ್ರತಿಮೆ ಉದ್ಘಾಟನೆಯಾದ ಒಂಬತ್ತು ತಿಂಗಳ ನಂತರ ಆಗಸ್ಟ್ 26 ರಂದು ಕುಸಿದು ಬಿದ್ದಿದ್ದು, ಸಿಂಧುದುರ್ಗ ಪೊಲೀಸರು ಆಪ್ಟೆ(24) ಪತ್ತೆಗೆ ಏಳು ತಂಡಗಳನ್ನು ರಚಿಸಿದ್ದರು. ಮಾಲ್ವಾನ್ ಪೊಲೀಸರು ಆಪ್ಟೆ ಮತ್ತು ರಚನಾತ್ಮಕ ಸಲಹೆಗಾರ ಚೇತನ್ ಪಾಟೀಲ್ ವಿರುದ್ಧ ನಿರ್ಲಕ್ಷ್ಯ ಮತ್ತು ಇತರ ಅಪರಾಧಗಳಿಗಾಗಿ ಪ್ರಕರಣ ದಾಖಲಿಸಿದ್ದರು. ಪಾಟೀಲ್ ಅವರನ್ನು ಕಳೆದ ವಾರ ಕೊಲ್ಲಾಪುರದಲ್ಲಿ ಬಂಧಿಸಲಾಗಿತ್ತು. 

ಬಿಜೆಪಿ ನಾಯಕ ಪ್ರವೀಣ್ ದಾರೇಕರ್ ಪ್ರತಿಕ್ರಿಯಿಸಿದ್ದು, ʻನಮ್ಮ ಸರ್ಕಾರವನ್ನು ಟೀಕಿಸುವವರು ಈಗ ಬಾಯಿ ಮುಚ್ಚಿಕೊಳ್ಳಬೇಕು, ಪೊಲೀಸರು ಅವರನ್ನು ಬಂಧಿಸಲು ಸ್ವಲ್ಪ ಸಮಯ ತೆಗೆದುಕೊಂಡರು ನಿಜ,ʼ ಎಂದರು. 

ಶಿವಸೇನಾ (ಯುಬಿಟಿ) ನಾಯಕಿ ಸುಶ್ಮಾ ಅಂಧಾರೆ, ʻಆಪ್ಟೆ ಬಂಧನಕ್ಕೆ ರಾಜ್ಯ ಸರ್ಕಾರವು ಯಾವುದೇ ಕ್ರೆಡಿಟ್ ಪಡೆಯಲು ಪ್ರಯತ್ನಿಸಬಾರದು. ಏಕೆಂದರೆ, ಅದು ಸರ್ಕಾರದ ಕರ್ತವ್ಯ. ಅವರು ಯಾವುದೇ ಭೂಗತ ಡಾನ್ ಅಲ್ಲ,ʼ ಎಂದಿದ್ದಾರೆ. 

ಐವರು ಸದಸ್ಯರ ಜಂಟಿ ತಾಂತ್ರಿಕ ಸಮಿತಿಯು ಮಾಲ್ವಾನ್‌ನಲ್ಲಿರುವ ಕೋಟೆಗೆ ಭೇಟಿ ನೀಡಿ ಸ್ಥಳವನ್ನು ಪರಿಶೀಲಿಸಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರತಿಮೆಗೆ ಬಳಸಿದ ಸಾಮಗ್ರಿಗಳು ಮತ್ತು ವೇದಿಕೆಯ ಮಾದರಿಗಳನ್ನು ರಾಸಾಯನಿಕ ವಿಶ್ಲೇಷಣೆಗೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. 

ʻಪ್ರತಿಮೆ ನಿರ್ಮಾಣಕ್ಕೆ ರಾಜ್ಯದ ಬೊಕ್ಕಸದಿಂದ 236 ಕೋಟಿ ರೂ. ತೆಗೆದುಕೊಂಡರೂ, ಕೇವಲ 1.5 ಕೋಟಿ ರೂ.ವೆಚ್ಚ ಮಾಡಲಾಗಿದೆ,ʼ ಎಂದು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಪುಣೆಯಲ್ಲಿ ದೂರಿದ್ದಾರೆ. ಪ್ರತಿಮೆ ಕುಸಿತದ ಘಟನೆಯನ್ನು ಪ್ರತಿಪಕ್ಷಗಳು ರಾಜಕೀಯಗೊಳಿಸುತ್ತಿವೆ ಎಂಬ ಮುಖ್ಯಮಂತ್ರಿ ಶಿಂಧೆ ಅವರ ಆರೋಪಕ್ಕೆ ಪಟೋಲೆ, ʻಶಿವಾಜಿ ಮಹಾರಾಜರಿಗೆ ಮಾಡಿದ ಅವಮಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದನ್ನು ರಾಜಕೀಕರಣ ಎಂದು ಹೇಳಲು ಆಗುವುದಿಲ್ಲ,ʼ ಎಂದು ಹೇಳಿದರು.

Tags:    

Similar News