ಮಹಾರಾಷ್ಟ್ರದಲ್ಲಿ ಮಣಿಪುರದಂತಹ ಗೊಂದಲದ ಸಾಧ್ಯತೆ: ಶರದ್‌ ಪವಾರ್

ದೇಶದ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಲು ಮತ್ತು ಬಲಪಡಿಸಲು, ಸಾಮಾಜಿಕ ಐಕ್ಯತೆ ಅತ್ಯಗತ್ಯ. ದೇಶದಲ್ಲಿರುವ ಉದ್ವಿಗ್ನತೆ ಮತ್ತು ವಿಭಜನೆ ಪರಿಸ್ಥಿತಿಯು ಆತಂಕಕಾರಿ. ಬೆಳೆಯುತ್ತಿರುವ ಅಪಶ್ರುತಿಗೆ ಜಾತಿ, ಧರ್ಮ ಮತ್ತು ಭಾಷೆ ಮೀರಿದ ಏಕತೆಯ ಅಗತ್ಯವಿದೆ ಎಂದು ಪವಾರ್‌ ಹೇಳಿದರು

Update: 2024-07-29 11:11 GMT

ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರು ಮಹಾರಾಷ್ಟ್ರದಲ್ಲಿ ಮಣಿಪುರದಂತಹ ಗೊಂದಲಗಳ ಸಂಭವನೀಯತೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ, ತಮ್ಮ ಕಳವಳಕ್ಕೆ ಏನು ಕಾರಣ ಎಂದು ಅವರು ಹೇಳಲಿಲ್ಲ. 

ಭಾನುವಾರ (ಜುಲೈ 28)ರಂದು ನವಿ ಮುಂಬೈಯ ವಾಶಿಯಲ್ಲಿ ಸಾಮಾಜಿಕ ಏಕತಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪವಾ ರ್, ಮಣಿಪುರದಲ್ಲಿ ಕಳೆದ ಮೇ ತಿಂಗಳಿನಿಂದ 200 ಕ್ಕೂ ಹೆಚ್ಚು ಜನ ಹತ್ಯೆಯಾಗಿದ್ದು, ಜನಾಂಗೀಯ ಕಲಹವನ್ನು ಕೇಂದ್ರ ನಿರ್ವಹಿಸಿದ ರೀತಿಯನ್ನು ಟೀಕಿಸಿದರು. 

ʻದೇಶದ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಲು ಮತ್ತು ಬಲಪಡಿಸಲು, ಸಾಮಾಜಿಕ ಐಕ್ಯತೆ ಅತ್ಯಗತ್ಯ. ದೇಶದಲ್ಲಿರುವ ಉದ್ವಿಗ್ನತೆ ಮತ್ತು ವಿಭಜನೆ ಪರಿಸ್ಥಿತಿಯು ಆತಂಕಕಾರಿ. ಬೆಳೆಯುತ್ತಿರುವ ಅಪಶ್ರುತಿಗೆ ಜಾತಿ, ಧರ್ಮ ಮತ್ತು ಭಾಷೆ ಮೀರಿದ ಏಕತೆಯ ಅಗತ್ಯವಿದೆ. ಸಾಮಾಜಿಕ ಐಕ್ಯತೆಯನ್ನು ಪೋಷಿಸುವ ಜವಾಬ್ದಾರಿ ಸರ್ಕಾರದ್ದು,ʼ ಎಂದು ಹೇಳಿದರು. 

ʻಆದರೆ, ಈ ಸಮಸ್ಯೆಗಳನ್ನು ಪರಿಹರಿಸಲು ಪರಿಣಾಮಕಾರಿ ಕ್ರಮ ತೆಗೆದುಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ. ಹೀಗಾಗಿ, ಸಾಮಾಜಿಕ ಸಾಮರಸ್ಯವನ್ನು ಎತ್ತಿಹಿಡಿಯುವುದು ಅನಿವಾರ್ಯವಾಗಿದೆ,ʼ ಎಂದು ಹೇಳಿದರು. 

ಮಣಿಪುರದಲ್ಲಿ 2023ರ ಮೇ ತಿಂಗಳಿನಿಂದ ಮೈಥಿ ಸಮುದಾಯ ಮತ್ತು ಕುಕಿ ಬುಡಕಟ್ಟು ಜನಾಂಗದವರ ನಡುವೆ ಹಿಂಸಾಚಾರ ನಡೆದಿದೆ. ಮೈಥಿ ಸಮುದಾಯವು ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕಾಗಿ ಬೆಟ್ಟದ ಜಿಲ್ಲೆಗಳಲ್ಲಿ 'ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ' ಆಯೋಜಿಸಿದ ನಂತರ ಹಿಂಸಾಚಾರ ಪ್ರಾರಂಭವಾಯಿತು. 

ಇದುವರೆಗೆ ಈಶಾನ್ಯ ರಾಜ್ಯಕ್ಕೆ ಭೇಟಿ ನೀಡದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪವಾರ್ ವಾಗ್ದಾಳಿ ನಡೆಸಿದರು. ಸಂತ್ರಸ್ತರ ಸಂಕಷ್ಟ ಗಳನ್ನು ಪರಿಹರಿಸಲು ಪ್ರಧಾನಿ ಅವರಿಂದ ಪ್ರಯತ್ನ ನಡೆದಿಲ್ಲ ಎಂದು ಹೇಳಿದರು.

ತಮ್ಮ ಎಕ್ಸ್ ಖಾತೆಯಲ್ಲಿ ʻರಾಜ್ಯದ ಪ್ರತಿಯೊಬ್ಬರೂ ತಮ್ಮ ಭಿನ್ನಾಭಿಪ್ರಾಯ ಮರೆತು, ಮಹಾರಾಷ್ಟ್ರದಲ್ಲಿರುವ ಪರಿಸ್ಥಿತಿಯನ್ನು ಬದಲಿಸಲು ಕೈಜೋಡಿಸಬೇಕುʼ ಎಂದು ಒತ್ತಾಯಿಸಿದರು. ʻಮಹಾರಾಷ್ಟ್ರದಲ್ಲಿರುವ ಪರಿಸ್ಥಿತಿಯನ್ನು ಬದಲಿಸಬೇಕಿದೆ. ಜಾತಿ, ಧರ್ಮ, ಭಾಷೆಯ ಭೇದಗಳನ್ನು ಮರೆತು ಒಂದೇ ಸಮಾಜ ಮತ್ತು ಅಖಂಡ ರಾಷ್ಟ್ರ ಎಂಬ ಪರಿಕಲ್ಪನೆಯೊಂದಿಗೆ ಒಟ್ಟಾಗಿ ಕೆಲಸ ಮಾಡಿದರೆ, ಬದಲಾವಣೆ ಆಗಲಿದೆ. ಸಾಮಾಜಿಕ ಏಕತಾ ಮಂಡಳಿ ಅಂಥ ಕೆಲಸ ಮಾಡಿ ದೆ ಎಂದು ನಾನು ಭಾವಿಸುತ್ತೇನೆ. ಇನ್ನೂ ನಾಲ್ಕು ಕಡೆ ಇಂತಹ ಸಮಾವೇಶ ನಡೆಯಲಿದೆ. ಈ ಪ್ರಯತ್ನವನ್ನು ನಮ್ಮೆಲ್ಲರ ಶಕ್ತಿಯಿಂದ ಬೆಂಬಲಿಸುವುದು ನಮ್ಮ ಜವಾಬ್ದಾರಿ. ಸಮಾಜ ಮತ್ತು ದೇಶ ಎದುರಿಸುತ್ತಿರುವ ಸವಾಲು ಗಳನ್ನು ಎದುರಿಸಲು ನಾವು ಸಾಮೂಹಿಕ ಪ್ರಯತ್ನ ಮಾಡುತ್ತೇವೆ,ʼ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

Tags:    

Similar News