ಪಂಜಾಬ್ ಗಡಿ ಜಿಲ್ಲೆಗಳಲ್ಲಿ ಇನ್ನೂ ತೆರೆಯದ ಶಾಲೆಗಳು. ಬ್ಲ್ಯಾಕ್ಔಟ್ ಮುಂದುವರಿಕೆ
ಗುರದಾಸ್‌ಪುರ, ಸಂಗ್ರೂರ್ ಮತ್ತು ಬರನಾಲಾ ಜಿಲ್ಲೆಗಳಲ್ಲಿ ಮಂಗಳವಾರ ಶಾಲೆಗಳು ಪುನರಾರಂಭಗೊಂಡಿದ್ದರೂ, ಈ ಐದು ಗಡಿ ಜಿಲ್ಲೆಗಳಲ್ಲಿ ಶಾಲೆಗಳು ಮುಚ್ಚಿರುವುದನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ.;
ಪಂಜಾಬ್‌ನ ಗಡಿ ಭಾಗದ ಐದು ಜಿಲ್ಲೆಗಳಾದ ಅಮೃತಸರ, ಪಠಾಣ್‌ಕೋಟ್, ಫಾಜಿಲ್ಕಾ, ಫಿರೋಜ್‌ಪುರ ಮತ್ತು ತಾರನ್ ತಾರನ್‌ನಲ್ಲಿ ಮಂಗಳವಾರ ಶಾಲೆಗಳನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೂ ಮುನ್ನ ಸೋಮವಾರ ರಾತ್ರಿ ಅಮೃತಸರ ಹಾಗೂ ಹೊಶಿಯಾರ್‌ಪುರದ ದಾಸೂಯಾ ಮತ್ತು ಮುಕೇರಿಯನ್ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಕಡಿತಗೊಳಿಸಲಾಗಿತ್ತು.
ಪಠಾಣ್‌ಕೋಟ್ ಮತ್ತು ಅಮೃತಸರದಲ್ಲಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಸಹ ಮುಚ್ಚಲಾಗಿದೆ. ಆದರೆ, ಅಮೃತಸರ ಜಿಲ್ಲಾಡಳಿತವು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಆನ್‌ಲೈನ್ ತರಗತಿಗಳನ್ನು ನಡೆಸಬಹುದು ಎಂದು ತಿಳಿಸಿದೆ. ಗುರದಾಸ್‌ಪುರ, ಸಂಗ್ರೂರ್ ಮತ್ತು ಬರನಾಲಾ ಜಿಲ್ಲೆಗಳಲ್ಲಿ ಮಂಗಳವಾರ ಶಾಲೆಗಳು ಪುನರಾರಂಭಗೊಂಡಿದ್ದರೂ, ಈ ಐದು ಗಡಿ ಜಿಲ್ಲೆಗಳಲ್ಲಿ ಶಾಲೆಗಳು ಮುಂದುವರೆದು ಮುಚ್ಚಿರುವುದನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಅಮೃತಸರ ಜಿಲ್ಲಾಡಳಿತವು ಮಂಗಳವಾರ ಬೆಳಿಗ್ಗೆ ಜನರು ತಮ್ಮ ದೈನಂದಿನ ಚಟುವಟಿಕೆಗಳನ್ನು ಮುಂದುವರಿಸಬಹುದು ಎಂದು ತಿಳಿಸಿದೆ.
ಡ್ರೋನ್ ಚಟುವಟಿಕೆ
ಮುಂಜಾಗ್ರತಾ ಕ್ರಮವಾಗಿ ಅಮೃತಸರ ಮತ್ತು ಹೊಶಿಯಾರ್‌ಪುರದ ದಾಸೂಯಾ ಮತ್ತು ಮುಕೇರಿಯನ್ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಗಿತ್ತು. ಅಮೃತಸರದಲ್ಲಿ ಸೋಮವಾರ ರಾತ್ರಿ 11:42 ರ ವೇಳೆಗೆ ವಿದ್ಯುತ್ ಸಂಪರ್ಕವನ್ನು ಪುನಃ ಸ್ಥಾಪಿಸಲಾಯಿತು. ವಿದ್ಯುತ್ ಕಡಿತ ಮತ್ತು ಅಮೃತಸರ ವಿಮಾನ ನಿಲ್ದಾಣವನ್ನು ಮುಚ್ಚಿದ್ದರಿಂದ, ಅಮೃತಸರಕ್ಕೆ ಹೊರಟಿದ್ದ ಇಂಡಿಗೋ ವಿಮಾನವು ದಿಲ್ಲಿಗೆ ವಾಪಸ್ಸಾಯಿತು.
ಸೋಮವಾರ ಸಂಜೆ ಜಲಂಧರ್ ಪ್ರದೇಶದಲ್ಲಿ ಡ್ರೋನ್ ಚಟುವಟಿಕೆಯನ್ನು ಗಮನಿಸಲಾಗಿದ್ದು, ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಜಲಂಧರ್‌ನ ಉಪ ಆಯುಕ್ತ ಹಿಮಾಂಶು ಅಗರವಾಲ್ ಅವರು, ಮಾಂಡ್ ಗ್ರಾಮದ ಬಳಿ ಸಂದೇಹಾಸ್ಪದ ಡ್ರೋನ್ ಒಂದನ್ನು ಸಶಸ್ತ್ರ ಪಡೆಗಳು ನಿಷ್ಕ್ರಿಯಗೊಳಿಸಿವೆ ಎಂದು ಸೋಮವಾರ ಸಂಜೆ ತಿಳಿಸಿದ್ದಾರೆ.