ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯ ಮನೆಯಲ್ಲಿ ನಗದು ಪತ್ತೆ: ವರ್ಗಾವಣೆ ಆದೇಶ
ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ ನಂತರ, ನ್ಯಾಯಮೂರ್ತಿಯ ಕೊಠಡಿಯಲ್ಲಿ ಭಾರೀ ಪ್ರಮಾಣದ ನಗದು ಹಣ ಇರುವುದು ಅವರ ಗಮನಕ್ಕೆ ಬಂತು. ಇದು ಪ್ರಕರಣ ಬಯಲಾಗಲು ಮತ್ತು ನ್ಯಾಯಮೂರ್ತಿ ವರ್ಮಾ ವಿರುದ್ಧ ತನಿಖೆ ಆರಂಭವಾಗಲು ಕಾರಣವಾಯಿತು.;
ನ್ಯಾಯಾಂಗ ವಲಯಕ್ಕೆ ಮುಜುಗರ ತರುವಂಥ ಪ್ರಕರಣವೊಂದು ದೆಹಲಿಯಲ್ಲಿ ನಡೆದಿದ್ದು, ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಭಾರೀ ಪ್ರಮಾಣದ ನಗದು ಪತ್ತೆಯಾಗಿದೆ. ಈ ಘಟನೆಯಿಂದಾಗಿ ನ್ಯಾಯಾಂಗ ವಲಯದಲ್ಲಿ ಭಾರೀ ಸಂಚಲನ ಮೂಡಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಕೊಲೀಜಿಯಂ ಗುರುವಾರ ರಾತ್ರಿ ತುರ್ತು ಸಭೆ ನಡೆಸಿ, ನ್ಯಾಯಮೂರ್ತಿ ವರ್ಮಾ ಅವರನ್ನು ದೆಹಲಿ ಹೈಕೋರ್ಟ್ನಿಂದ ಅಲಹಾಬಾದ್ ಹೈಕೋರ್ಟ್ಗೆ ವರ್ಗಾಯಿಸುವ ತೀರ್ಮಾನ ಕೈಗೊಂಡಿದೆ.
ಘಟನೆಯ ಹಿನ್ನೆಲೆ
ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ತುಘಲಕ್ ರಸ್ತೆಯಲ್ಲಿರುವ ಅಧಿಕೃತ ನಿವಾಸದಲ್ಲಿ ಕಳೆದ ವಾರ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ಆ ಸಮಯದಲ್ಲಿ ನ್ಯಾಯಮೂರ್ತಿ ವರ್ಮಾ ಅವರು ದೆಹಲಿಯಲ್ಲಿ ಇರಲಿಲ್ಲ. ಇದರಿಂದಾಗಿ, ಅವರ ಕುಟುಂಬ ಸದಸ್ಯರು ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಸಂಪರ್ಕಿಸಿ ಬೆಂಕಿ ಅನಾಹುತದ ಬಗ್ಗೆ ಮಾಹಿತಿ ನೀಡಿದ್ದರು. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ ನಂತರ, ನ್ಯಾಯಮೂರ್ತಿಯ ಕೊಠಡಿಯಲ್ಲಿ ಭಾರೀ ಪ್ರಮಾಣದ ನಗದು ಹಣ ಇರುವುದು ಅವರ ಗಮನಕ್ಕೆ ಬಂತು. ಇದು ಪ್ರಕರಣ ಬಯಲಾಗಲು ಮತ್ತು ನ್ಯಾಯಮೂರ್ತಿ ವರ್ಮಾ ವಿರುದ್ಧ ತನಿಖೆ ಆರಂಭವಾಗಲು ಕಾರಣವಾಯಿತು.
ನಗದು ಪತ್ತೆ ಮತ್ತು ತನಿಖೆ
ಅಗ್ನಿಶಾಮಕ ಸಿಬ್ಬಂದಿಗಳು ನ್ಯಾಯಮೂರ್ತಿಯ ಕೊಠಡಿಯಲ್ಲಿ ಗರಿ ಗರಿ ನೋಟುಗಳನ್ನು ಪತ್ತೆ ಮಾಡಿದರು. ಈ ಬಗ್ಗೆ ದೆಹಲಿ ಪೊಲೀಸರು ಕೂಡಲೇ ಕೇಂದ್ರ ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಿ, ವರದಿ ಸಲ್ಲಿಸಿದ್ದರು. ಗೃಹ ಸಚಿವಾಲಯವು ಈ ವರದಿಯನ್ನು ಸುಪ್ರೀಂ ಕೋರ್ಟ್ ಕೊಲೀಜಿಯಂಗೆ ರವಾನಿಸಿತ್ತು.
ಸುಪ್ರೀಂ ಕೋರ್ಟ್ ಕೊಲೀಜಿಯಂನ ತುರ್ತು ಸಭೆ
ನ್ಯಾಯಮೂರ್ತಿ ವರ್ಮಾ ಅವರ ಮನೆಯಿಂದ ಲೆಕ್ಕವಿಲ್ಲದ ಹಣ ಪತ್ತೆಯಾದ ಬೆನ್ನಲ್ಲೇ, ಕೇಂದ್ರ ಗೃಹ ಸಚಿವಾಲಯದಿಂದಲೂ ಅವರ ಕುರಿತು ಪ್ರತಿಕೂಲ ವರದಿಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ, ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಸುಪ್ರೀಂ ಕೋರ್ಟ್ ಕೊಲೀಜಿಯಂ ಗುರುವಾರ ರಾತ್ರಿ ತುರ್ತು ಸಭೆ ನಡೆಸಿತು. ಸಭೆಯಲ್ಲಿ ನ್ಯಾಯಮೂರ್ತಿ ವರ್ಮಾ ಅವರನ್ನು ದೆಹಲಿ ಹೈಕೋರ್ಟ್ನಿಂದ ಅಲಹಾಬಾದ್ ಹೈಕೋರ್ಟ್ಗೆ ವರ್ಗಾಯಿಸಲು ನಿರ್ಧರಿಸಲಾಯಿತು.
ನಗದು ಪತ್ತೆಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ನ್ಯಾಯಮೂರ್ತಿ ವರ್ಮಾ ಅವರ ವರ್ಗಾವಣೆಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಲ್ಲದೆ, ನ್ಯಾಯಮೂರ್ತಿ ವರ್ಮಾ ವಿರುದ್ಧ ಆಂತರಿಕ ತನಿಖೆಗೆ ಆದೇಶಿಸುವ ಬಗ್ಗೆಯೂ ಕೊಲೀಜಿಯಂ ಚಿಂತನೆ ನಡೆಸಿದೆ ಎನ್ನಲಾಗಿದೆ.
ನ್ಯಾಯಮೂರ್ತಿ ವರ್ಮಾ ಅವರ ಹಿನ್ನೆಲೆ
ನ್ಯಾಯಮೂರ್ತಿ ಯಶವಂತ್ ವರ್ಮಾ ಅವರನ್ನು ಅಕ್ಟೋಬರ್ 2021 ರಲ್ಲಿ ದೆಹಲಿ ಹೈಕೋರ್ಟ್ಗೆ ವರ್ಗಾವಣೆ ಮಾಡಲಾಗಿತ್ತು. ಈಗ ಅವರನ್ನು ಮತ್ತೆ ಅಲಹಾಬಾದ್ ಹೈಕೋರ್ಟ್ಗೆ ವರ್ಗಾಯಿಸಲಾಗಿದೆ.
ನ್ಯಾಯಾಲಯಕ್ಕೆ ಹಾಜರಾಗದ ನ್ಯಾಯಮೂರ್ತಿ
ವಿವಾದದ ಹಿನ್ನೆಲೆಯಲ್ಲಿ, ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ಶುಕ್ರವಾರ ದೆಹಲಿ ಹೈಕೋರ್ಟ್ ಕಲಾಪದಲ್ಲಿ ಪಾಲ್ಗೊಳ್ಳಲಿಲ್ಲ ಎಂದು ವರದಿಯಾಗಿದೆ. ಅವರ ಸಿಬ್ಬಂದಿ ನ್ಯಾಯಾಲಯಕ್ಕೆ ಬಂದು, ನ್ಯಾಯಮೂರ್ತಿ ವರ್ಮಾ ಅವರು ಕಲಾಪದಲ್ಲಿ ಭಾಗವಹಿಸುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಜಡ್ಜ್ ವಿರುದ್ಧ ಏನು ಕ್ರಮ ಕೈಗೊಳ್ಳಬಹುದು?
ಸಾಂವಿಧಾನಿಕ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ಭ್ರಷ್ಟಾಚಾರ ಮತ್ತು ನ್ಯಾಯಾಂಗ ಅಕ್ರಮಗಳ ಆರೋಪಗಳು ಕೇಳಿಬಂದಾಗ ಕೈಗೊಳ್ಳಬೇಕಾದ ಕ್ರಮಗಳೇನು ಎಂಬ ಕುರಿತು ಸುಪ್ರೀಂ ಕೋರ್ಟ್ 1999 ರಲ್ಲಿಯೇ ಮಾರ್ಗಸೂಚಿಗಳನ್ನು ರೂಪಿಸಿದೆ.
ಆ ಮಾರ್ಗಸೂಚಿಗಳ ಪ್ರಕಾರ, ನ್ಯಾಯಾಧೀಶರು ಅಥವಾ ನ್ಯಾಯಮೂರ್ತಿಗಳ ವಿರುದ್ಧ ದೂರುಗಳು ಬಂದರೆ, ಸುಪ್ರೀ ಕೋರ್ಟ್ ಮುಖ್ಯ ನ್ಯಾಯಮೂರ್ತಿಯು ಮೊದಲು ಸಂಬಂಧಪಟ್ಟ ನ್ಯಾಯಾಧೀಶ/ನ್ಯಾಯಮೂರ್ತಿಯಿಂದ ಪ್ರತಿಕ್ರಿಯೆ ಕೇಳುತ್ತಾರೆ. ಅವರು ನೀಡಿರುವ ಪ್ರತಿಕ್ರಿಯೆಯಿಂದ ತೃಪ್ತಿಯಾಗದಿದ್ದರೆ ಅಥವಾ ಈ ವಿಚಾರದ ಬಗ್ಗೆ ಹೆಚ್ಚಿನ ತನಿಖೆಯ ಅಗತ್ಯವಿದೆ ಎಂದು ಅನಿಸಿದರೆ, ಅವರು ಆಂತರಿಕ ಸಮಿತಿಯನ್ನು ರಚಿಸುತ್ತಾರೆ. ವಿಚಾರಣೆಯ ಸಮಯದಲ್ಲಿ, ಜಡ್ಜ್ ವಿರುದ್ಧದ ಆರೋಪವು ಗಂಭೀರ ಸ್ವರೂಪದ್ದು ಹಾಗೂ ಅವರನ್ನು ಕರ್ತವ್ಯದಿಂದ ತೆಗೆದುಹಾಕುವ ಅರ್ಹತೆ ಇರುವಂಥದ್ದು ಎಂದು ಸಮಿತಿಯು ಭಾವಿಸಿದರೆ, ಅದು ನ್ಯಾಯಾಧೀಶ/ನ್ಯಾಯಮೂರ್ತಿಯನ್ನು ರಾಜೀನಾಮೆ ನೀಡುವಂತೆ ಸೂಚಿಸಬಹುದು.