ಈಶಾ ಫೌಂಡೇಶನ್ ವಿರುದ್ಧ ಕ್ರಮಕ್ಕೆ ಸುಪ್ರೀಂ ತಡೆ

ಕೊಯಮತ್ತೂರಿನ ಈಶಾ ಕ್ಯಾಂಪಸ್‌ನಲ್ಲಿ ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಬಂಧನದಲ್ಲಿ ಇರಿಸಲಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕರೊಬ್ಬರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ, ಸುಪ್ರೀಂಗೆ ಅರ್ಜಿ ಸಲ್ಲಿಕೆಯಾಗಿತ್ತು.

Update: 2024-10-03 10:11 GMT

ಜಗ್ಗಿ ವಾಸುದೇವ್ ಅವರ ಈಶಾ ಫೌಂಡೇಶನ್ ವಿರುದ್ಧದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಗುರುವಾರ (ಅಕ್ಟೋಬರ್ 3) ತಡೆ ನೀಡಿದೆ. 

ಪ್ರತಿಷ್ಠಾನದ ಪರ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು, ವಿಷಯವನ್ನು ತುರ್ತು ಪಟ್ಟಿಗೆ ಉಲ್ಲೇಖಿಸಬೇಕು ಎಂದು ಮನವಿ ಮಾಡಿದ ನಂತರ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ ತಡೆ ಆದೇಶ ನೀಡಿತು. 

ಪೊಲೀಸ್‌ ದಾಳಿ ನಂತರ ಸುಪ್ರೀಂಗೆ: ಇಶಾ ಫೌಂಡೇಶನ್ ತನ್ನ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಒಟ್ಟುಗೂಡಿಸಿ ಹಾಜರುಪಡಿಸುವಂತೆ ಕೊಯಮತ್ತೂರು ಪೊಲೀಸರಿಗೆ ಮದ್ರಾಸ್ ಹೈಕೋರ್ಟ್ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. 

ಕೊಯಮತ್ತೂರಿನಲ್ಲಿರುವ ಆಶ್ರಮದ ಮೇಲೆ ಅಂದಾಜು 500 ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಮತ್ತು ಪ್ರತಿಯೊಂದು ಮೂಲೆಯನ್ನು ಹುಡುಕಿದ್ದಾರೆ ಎಂದು ರೋಹಟಗಿ ಹೇಳಿದರು. 

ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠ, ಇಶಾ ಫೌಂಡೇಶನ್‌ನಲ್ಲಿ ತಮ್ಮ ಇಬ್ಬರು ಮಕ್ಕಳನ್ನು ಅಕ್ರಮವಾಗಿ ಬಂಧನದಲ್ಲಿ ಇರಿಸಲಾಗಿದೆ ಎಂಬ ತಂದೆಯ ಅರ್ಜಿ ಕುರಿತು ವಿವರ ಕೇಳಿತು. ವಿಡಿಯೋ ಕಾನ್ಫರೆನ್ಸ್ ಮೂಲಕ ಆ ಮಹಿಳೆ ಯರೊಂದಿಗೆ ಖಾಸಗಿಯಾಗಿ ಸಂವಾದ ನಡೆಸಲು ಮುಂದಾಯಿತು. ಒಬ್ಬರು ಮಹಿಳೆ, ತಾವು ಈಶಾ ಯೋಗ ಕೇಂದ್ರದಲ್ಲಿ ಸ್ವಇಚ್ಛೆಯಿಂದ ಇರುವುದಾಗಿ ನ್ಯಾಯಮೂರ್ತಿಗಳಿಗೆ ತಿಳಿಸಿದರು.

ಹೇಬಿಯಸ್ ಕಾರ್ಪಸ್ ಅರ್ಜಿ: ಈಶಾ ಫೌಂಡೇಶನ್‌ನಲ್ಲಿ ಬಂಧಿತರಾಗಿರುವ ಇಬ್ಬರು ಪುತ್ರಿಯರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿ ಡಾ.ಎಸ್.ಕಾಮರಾಜ್ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಸೆಪ್ಟೆಂಬರ್ 30ರಂದು ಮಧ್ಯಂತರ ಆದೇಶ ನೀಡಿತ್ತು.

ಅರ್ಜಿದಾರ ಕೊಯಮತ್ತೂರಿನಲ್ಲಿರುವ ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ. ಅವರಿಗೆ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ 42 ಮತ್ತು 39 ವರ್ಷ ವಯಸ್ಸಿನ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಇಬ್ಬರೂ ಈಶಾ ಫೌಂಡೇಶನ್‌ಗೆ ಸೇರಿದ್ದಾರೆ. 

ಪ್ರತಿಷ್ಠಾನವು ಆಶ್ರಮದಲ್ಲಿ ಇರುವವರನ್ನು ದುರ್ಬಳಕೆ ಮಾಡುತ್ತಿದೆ. ಸನ್ಯಾಸಿಗಳನ್ನಾಗಿ ಪರಿವರ್ತಿಸುತ್ತಿದೆ; ಪೋಷಕರು ಮತ್ತು ಸಂಬಂಧಿಕರನ್ನು ಭೇಟಿಯಾಗಲು ಸಹ ಅನುಮತಿ ನೀಡುವುದಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದರು.

ಈಶಾ ಪ್ರತಿಕ್ರಿಯೆ: ವಿಚಾರಣೆ ನಡೆಸಿದ ಹೈಕೋರ್ಟ್, ಈಶಾ ಫೌಂಡೇಶನ್ ವಿರುದ್ಧ ದಾಖಲಾಗಿರುವ ಎಲ್ಲಾ ಕ್ರಿಮಿನಲ್ ಪ್ರಕರಣಗಳ ವಿವರ ಸಲ್ಲಿಸುವಂತೆ ತಮಿಳುನಾಡು ಸರ್ಕಾರಕ್ಕೆ ಸೂಚಿಸಿತ್ತು.

ಅರ್ಜಿಗೆ ಪ್ರತಿಕ್ರಿಯಿಸಿದ್ದ ಈಶಾ ಫೌಂಡೇಶನ್,ʻ ಫೌಂಡೇಶನ್ ನ್ನು ಯೋಗ ಮತ್ತು ಅಧ್ಯಾತ್ಮಿಕ ಜ್ಞಾನ ನೀಡಲು ಸ್ಥಾಪಿಸಲಾಗಿದೆ. ವಯಸ್ಕರು ತಮ್ಮ ಮಾರ್ಗವನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ಮತ್ತು ಬುದ್ಧಿವಂತಿಕೆ ಹೊಂದಿರುತ್ತಾರೆ ಎಂದು ನಂಬುತ್ತೇವೆ,ʼ ಎಂದು ಹೇಳಿತ್ತು.

ʻಇಬ್ಬರು ಮಹಿಳೆಯರು ಸ್ವಂತ ಇಚ್ಛೆಯಿಂದ ಈಶ ಯೋಗ ಕೇಂದ್ರದಲ್ಲಿ ಉಳಿದುಕೊಂಡಿದ್ದೇವೆ ಎಂದು ಹೇಳಿದ್ದಾರೆ. ಸತ್ಯ ಮೇಲುಗೈ ಸಾಧಿಸುತ್ತದೆ ಮತ್ತು ಅನಗತ್ಯ ವಿವಾದಗಳು ಅಂತ್ಯಗೊಳ್ಳುತ್ತವೆ,ʼ ಎಂದು ಹೇಳಿತ್ತು.

ಪೊಲೀಸರ ಅಂತಿಮ ವರದಿ ಸಲ್ಲಿಕೆಗೆ ಹೈಕೋರ್ಟ್ ತಡೆ ನೀಡಿತ್ತು.

Tags:    

Similar News