ಬಿಹಾರ ಮೀಸಲು ಕಾಯಿದೆ : ಪಾಟ್ನಾ ಹೈಕೋರ್ಟ್ ತೀರ್ಪಿಗೆ ತಡೆ ನೀಡಲು ಸುಪ್ರೀಂ ನಿರಾಕರಣೆ
ಪಾಟ್ನಾ ಹೈಕೋರ್ಟ್ ತೀರ್ಪಿನ ವಿರುದ್ಧ ಬಿಹಾರ ಸರ್ಕಾರದ 10 ಅರ್ಜಿಗಳನ್ನು ಆಲಿಸಲು ದ್ವಿಸದಸ್ಯ ಪೀಠ ಒಪ್ಪಿಕೊಂಡಿದೆ. ಸೆಪ್ಟೆಂಬರ್‌ನಲ್ಲಿ ಅರ್ಜಿಗಳ ವಿಚಾರಣೆ ನಡೆಯಲಿದೆ.;
ಬಿಹಾರದ ಮೀಸಲು ತಿದ್ದುಪಡಿ ಕಾಯಿದೆಯನ್ನು ರದ್ದುಗೊಳಿಸಿದ ಪಾಟ್ನಾ ಹೈಕೋರ್ಟ್‌ನ ಜೂನ್ 20 ರ ತೀರ್ಪಿಗೆ ತಡೆಯಾಜ್ಞೆನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ಇದರಿಂದ, ನಿತೇಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದೆ. ತಿದ್ದುಪಡಿ ಕಾನೂನು ದಲಿತರು, ಬುಡಕಟ್ಟುಗಳು ಮತ್ತು ಹಿಂದುಳಿದ ವರ್ಗಗಳ ಕೋಟಾಗಳನ್ನು ಶೇ.50 ರಿಂದ ಶೇ.65ಕ್ಕೆ ಹೆಚ್ಚಿಸಲು ಅವಕಾಶ ಮಾಡಿಕೊಡುತ್ತಿತ್ತು.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠವು ಪಾಟ್ನಾ ಹೈಕೋರ್ಟ್ ತೀರ್ಪಿನ ವಿರುದ್ಧ ಬಿಹಾರ ಸರ್ಕಾರದ 10 ಅರ್ಜಿಗಳನ್ನು ಆಲಿಸಲು ಒಪ್ಪಿಕೊಂಡಿತು. ಅರ್ಜಿಗಳಿಗೆ ನೋಟಿಸ್ ಕೂಡ ನೀಡದೆ, ಮೇಲ್ಮನವಿಗೆ ಅನುಮತಿ ಕೊಟ್ಟಿದೆ; ಸೆಪ್ಟೆಂಬರ್‌ನಲ್ಲಿ ಅರ್ಜಿಗಳ ವಿಚಾರಣೆ ನಡೆಸುವುದಾಗಿ ಹೇಳಿದೆ.
ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್ ಅವರು ಹೈಕೋರ್ಟ್ ಆದೇಶಕ್ಕೆ ತಡೆ ನೀಡುವಂತೆ ಪೀಠವನ್ನು ಒತ್ತಾಯಿಸಿದರು. ಛತ್ತೀಸ್‌ಗಢದ ಇಂಥದ್ದೇ ಪ್ರಕರಣವನ್ನು ಉಲ್ಲೇಖಿಸಿ, ಸುಪ್ರೀಂ ಕೋರ್ಟ್ ಆ ಪ್ರಕರಣದಲ್ಲಿ ಹೈಕೋರ್ಟ್‌ನ ಆದೇಶಕ್ಕೆ ತಡೆ ನೀಡಿದೆ ಎಂದು ಹೇಳಿದರು.
ʻವಿಷಯವನ್ನು ಪಟ್ಟಿ ಮಾಡುತ್ತೇವೆ. ಆದರೆ, ತಡೆಯಾಜ್ಞೆ ನೀಡುವುದಿಲ್ಲ,ʼ ಎಂದು ಸಿಜೆಐ ಹೇಳಿದರು.
ಕಳೆದ ನವೆಂಬರ್‌ನಲ್ಲಿ ರಾಜ್ಯದ ಉಭಯ ಸದನಗಳು ಸರ್ವಾನುಮತದಿಂದ ಅಂಗೀಕರಿಸಿದ ತಿದ್ದುಪಡಿಗಳು ʻಸಂವಿಧಾನ ವಿರೋಧಿʼ, ʻಕೆಟ್ಟ ಕಾನೂನುʼ ಮತ್ತು ʻಸಮಾನತೆ ತತ್ವದ ಉಲ್ಲಂಘನೆʼ ಎಂದು ಹೈಕೋರ್ಟ್ ತನ್ನ ಜೂನ್ 20 ರ ತೀರ್ಪಿನಲ್ಲಿ ಹೇಳಿತ್ತು.