ನೀಟ್-ಪಿಜಿ ಪರೀಕ್ಷೆ: ಮುಂದೂಡಿಕೆಗೆ ಸುಪ್ರೀಂ ನಿರಾಕರಣೆ

Update: 2024-08-09 12:35 GMT

ಹೊಸದಿಲ್ಲಿ: ಅಭ್ಯರ್ಥಿಗಳಿಗೆ ತಲುಪಲು ಅನನುಕೂಲವಾಗಿರುವ ನಗರಗಳನ್ನು ನಿಗದಿಪಡಿಸಲಾಗಿದೆ. ಆದ್ದರಿಂದ, ಆಗಸ್ಟ್ 11ಕ್ಕೆ ನಿಗದಿಯಾಗಿರುವ ನೀಟ್-ಪಿಜಿ ಪರೀಕ್ಷೆಯನ್ನು ಮುಂದೂಡುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. 

ಮು.ನ್ಯಾ. ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠ, ಐದು ವಿದ್ಯಾರ್ಥಿಗಳಿಗೋಸ್ಕರ ಎರಡು ಲಕ್ಷ ವಿದ್ಯಾರ್ಥಿಗಳ ವೃತ್ತಿಜೀವನವನ್ನು ಅಪಾಯಕ್ಕೆ ತಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.

ವಕೀಲರಾದ ಸಂಜಯ್ ಹೆಗ್ಡೆ ಅವರನ್ನು ಉದ್ಧೇಶಿಸಿ, ʻಇಂತಹ ಪರೀಕ್ಷೆಯನ್ನು ನಾವು ಹೇಗೆ ಮುಂದೂಡಬಹುದು? ಇತ್ತೀಚೆಗೆ ಜನರು ಪರೀಕ್ಷೆಯನ್ನು ಮುಂದೂಡಲು ಬರುತ್ತಾರೆ. ಇದು ಪರಿಪೂರ್ಣ ಜಗತ್ತಲ್ಲ. ನಾವು ಶೈಕ್ಷಣಿಕ ತಜ್ಞರಲ್ಲ. ಪರೀಕ್ಷೆಯನ್ನು ಮರುಹೊಂದಿಸುವುದಿಲ್ಲ. ಮುಂದೂಡಿದರೆ ಎರಡು ಲಕ್ಷ ವಿದ್ಯಾರ್ಥಿಗಳು ಮತ್ತು ನಾಲ್ಕು ಲಕ್ಷ ಪೋಷಕರು ಕಷ್ಟಕ್ಕೆ ಸಿಲುಕುತ್ತಾರೆ. ಈ ಅರ್ಜಿಗಳ ಹಿಂದೆ ಯಾರಿದ್ದಾರೆ?,ʼ ಎಂದು ಪ್ರಶ್ನಿಸಿತು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂಜಯ್ ಹೆಗ್ಡೆ, ನೀ‌ಟ್‌-ಪಿಜಿಯನ್ನು ಮರು ನಿಗದಿಪಡಿಸಬೇಕಿದೆ. ಬೆಳಗ್ಗೆ ಒಂದು ಮತ್ತು ಮಧ್ಯಾಹ್ನ ಒಂದು ಪರೀಕ್ಷೆ ಇದೆ. ಅಭ್ಯರ್ಥಿಗಳಿಗೆ ತಲುಪಲು ಅನನುಕೂಲವಾಗಿರುವ ನಗರಗಳನ್ನು ಹಂಚಲಾಗಿದೆ. ಜುಲೈ 31 ರಂದು ಪರೀಕ್ಷೆಗೆ ನಗರಗಳನ್ನು ನಿಗದಿಪಡಿಸಿ, ಆಗಸ್ಟ್ 8 ರಂದು ನಿರ್ದಿಷ್ಟ ಕೇಂದ್ರಗಳನ್ನು ಘೋಷಿಸಲಾಗಿದೆ,ʼ ಎಂದು ಹೇಳಿದರು.

Tags:    

Similar News