ಮತದಾನದ ಅಂಕಿಅಂಶ: ಚುನಾವಣೆ ಆಯೋಗಕ್ಕೆ ಆದೇಶ ನೀಡಲು ಸುಪ್ರೀಂ ನಿರಾಕರಣೆ
ಚುನಾವಣೆ ನಡೆಯುತ್ತಿರುವಾಗ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ರಜೆ ನಂತರ ಸೂಕ್ತ ಪೀಠ ಮಧ್ಯಂತರ ಅರ್ಜಿಗೆ ಪರಿಹಾರವನ್ನು ನೀಡಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.;
ಲೋಕಸಭೆ ಚುನಾವಣೆ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಲು ಹಿಂಜರಿದಿರುವ ಸುಪ್ರೀಂ ಕೋರ್ಟ್, ಬೂತ್‌ವಾರು ಮತದಾರರ ಸಂಪೂರ್ಣ ಸಂಖ್ಯೆಯನ್ನು ಪ್ರಕಟಿಸಲು ಚುನಾವಣೆ ಆಯೋಗಕ್ಕೆ ನಿರ್ದೇಶನ ನೀಡಲು ಕೋರಿ ಸಲ್ಲಿಸಿದ್ದ ಮನವಿಯನ್ನುಶುಕ್ರವಾರ (ಮೇ 24) ಮುಂದೂಡಿದೆ.
ಬೂತ್‌ಗಳಲ್ಲಿ ಚಲಾವಣೆಯಾದ ಮತಗಳ ನಮೂನೆ 17ಸಿ ದಾಖಲೆಗಳನ್ನು ಜಾಲತಾಣದಲ್ಲಿ ಅಳವಡಿಸಲು ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು. ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಸತೀಶ್ ಚಂದ್ರ ಶರ್ಮಾ ಅವರ ರಜಾಕಾಲದ ಪೀಠವು ಚುನಾವಣೆ ನಡೆಯುತ್ತಿರುವಾಗ ತಕ್ಷಣ ಪ್ರತಿಕ್ರಿಯೆ ನೀಡಲಾಗದು ಮತ್ತು ಪ್ರಕ್ರಿಯೆಯಲ್ಲಿ ಯಾವುದೇ ಅಡಚಣೆಗಳು ಇರಬಾರದು ಎಂದು ಹೇಳಿದೆ.
ʻಚುನಾವಣೆಗಳ ನಡುವೆಯಾದಲ್ಲಿ ತಕ್ಷಣ ನಿರ್ಧಾರ ತೆಗೆದುಕೊಳ್ಳಬಹುದು. ಮುಖ್ಯ ಅರ್ಜಿಯೊಂದಿಗೆ, ಈ ಅರ್ಜಿಯನ್ನು ಆಲಿಸೋಣ. ಚುನಾವಣೆ ಪ್ರಕ್ರಿಯೆಗೆ ಅಡ್ಡಿಪಡಿಸಲು ಸಾಧ್ಯವಿಲ್ಲ. ಆಡಳಿತ ವ್ಯವಸ್ಥೆಯಲ್ಲಿ ಸ್ವಲ್ಪ ನಂಬಿಕೆ ಇಟ್ಟುಕೊಳ್ಳೋಣ,ʼ ಎಂದು ನ್ಯಾಯಮೂರ್ತಿ ದತ್ತಾ ಮೌಖಿಕವಾಗಿ ಹೇಳಿದರು.
ಅರ್ಜಿಗಳಲ್ಲಿ ಹೋಲಿಕೆ: ʻಮಧ್ಯಂತರ ಅರ್ಜಿ ಮೇಲಿನ ವಾದಗಳನ್ನು ಆಲಿಸಲಾಗಿದೆ. ಮಧ್ಯಂತರ ಅರ್ಜಿಯ ಪ್ರಾರ್ಥನೆ (ಎ) ಮತ್ತು ರಿಟ್ ಅರ್ಜಿಯ ಪ್ರಾರ್ಥನೆ (ಬಿ) ಯನ್ನು ಹೋಲುವುದರಿಂದ, ಈ ಹಂತದಲ್ಲಿ ಮಧ್ಯಂತರ ಅರ್ಜಿಗೆ ಯಾವುದೇ ಪರಿಹಾರ ನೀಡಲು ನಾವು ಒಲವು ತೋರುವುದಿಲ್ಲ. ರಜೆ ನಂತರ ಸೂಕ್ತ ಪೀಠ ಮಧ್ಯಂತರ ಅರ್ಜಿಗೆ ಪರಿಹಾರವನ್ನು ನೀಡಲಿದೆ. ನಾವು ಅರ್ಜಿಯ ಅರ್ಹತೆ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ,ʼ ಎಂದು ನ್ಯಾಯಪೀಠ ಹೇಳಿದೆ.
ಎನ್‌ಜಿಒ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) 2019 ರಲ್ಲಿ ಸಲ್ಲಿಸಿದ ರಿಟ್ ಅರ್ಜಿಯೊಟ್ಟಿಗೆ ಮಧ್ಯಂತರ ಅರ್ಜಿಯನ್ನು ಸಲ್ಲಿಸಿದೆ. 2019 ರ ಸಾರ್ವತ್ರಿಕ ಚುನಾವಣೆಯ ಮತದಾರರ ಅಂಕಿಅಂಶದಲ್ಲಿನ ವ್ಯತ್ಯಾಸ ಕುರಿತು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು 2019 ರಲ್ಲಿ ಸಲ್ಲಿಸಿದ ರಿಟ್ ಅರ್ಜಿಯನ್ನು ಇದರೊಂದಿಗೆ ಪಟ್ಟಿ ಮಾಡಲಾಗಿದೆ.
ಮೊಯಿತ್ರಾ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಎಡಿಆರ್ ಪರವಾಗಿ ಹಿರಿಯ ವಕೀಲ ದುಶ್ಯಂತ್ ದವೆ ಮತ್ತು ಚುನಾವಣೆ ಆಯೋಗದ ಪರವಾಗಿ ಹಿರಿಯ ವಕೀಲ ಮಣಿಂದರ್ ಸಿಂಗ್ ವಾದ ಮಂಡಿಸಿದರು.
ಆಧಾರರಹಿತ ಅನುಮಾನ: ʻಎಡಿಆರ್‌ನ ಅರ್ಜಿ ಆಧಾರವಿಲ್ಲದ ಅನುಮಾನ ಮತ್ತು ಸುಳ್ಳು ಆರೋಪಗಳನ್ನು ಆಧರಿಸಿದೆ ಎಂದು ಸಿಂಗ್ ವಾದಿಸಿದರು. ಮೇ 9 ರಂದು ಸಲ್ಲಿಸಿದ ಅರ್ಜಿ ಏಪ್ರಿಲ್ 26 ರಂದು ನೀಡಿದ ಇವಿಎಂ-ವಿವಿಪ್ಯಾಟ್ ಪ್ರಕರಣದ ತೀರ್ಪಿಗೆ ತಡೆಯೊಡ್ಡುತ್ತಿದೆ ಎಂದು ಅವರು ಹೇಳಿದರು. ಸಂವಿಧಾನದ 329 ನೇ ವಿಧಿಯನ್ನು ಉಲ್ಲೇಖಿಸಿದ ಸಿಂಗ್, ವಿಧಿಯು ಚುನಾವಣೆ ಪ್ರಕ್ರಿಯೆ ಚಾಲ್ತಿಯಲ್ಲಿರುವಾಗ ಮಧ್ಯದಲ್ಲಿ ನ್ಯಾಯಾಂಗ ಹಸ್ತಕ್ಷೇಪವನ್ನು ನಿರ್ಬಂಧಿಸುತ್ತದೆ ಎಂದು ಹೇಳಿದರು.
ಮತದಾನದ ಅಂಕಿಅಂಶಗಳು ದ್ವಿತೀಯ ಮೂಲಗಳನ್ನು ಆಧರಿಸಿರುವುದರಿಂದ, ತಾತ್ಕಾಲಿಕವಾಗಿವೆ ಎಂದ ಅವರು, ಪ್ರಕಟಿಸಿದ ಅಂಕಿಅಂಶಕ್ಕೆ ಹೋಲಿಸಿದರೆ ಅಂತಿಮ ದತ್ತಾಂಶದಲ್ಲಿ ಶೇ. 6 ರಷ್ಟು ವ್ಯತ್ಯಾಸವಿದೆ ಎಂಬ ಎಡಿಆರ್ ವಾದವನ್ನುಒಪ್ಪಲಿಲ್ಲ.ವ್ಯತ್ಯಾಸ ಕೇವಲ ಶೇ. 1-2 ಎಂದು ಹೇಳಿದರು.
ಪ್ರಕರಣದ ವಿವರ: ಎಡಿಆರ್ ಮತ್ತು ಕಾಮನ್ ಕಾಸ್ 2019 ರ ರಿಟ್ ಅರ್ಜಿಗೆ ಪೂರಕವಾಗಿ ಮಧ್ಯಂತರ ಅರ್ಜಿ ಸಲ್ಲಿಸಿವೆ. 2019 ರ ಸಂಸತ್ ಚುನಾವಣೆಯ ಮತದಾನದ ಅಂಕಿಅಂಶದಲ್ಲಿನ ವ್ಯತ್ಯಾಸಗಳಿವೆ ಎಂದು ದೂರಿದ್ದರು. 1) 2024 ರ ಲೋಕಸಭೆ ಚುನಾವಣೆಯಲ್ಲಿ ಪ್ರತಿ ಹಂತದ ಮತದಾನ ಮುಗಿದ ನಂತರ ಎ)ಎಲ್ಲಾ ಮತಗಟ್ಟೆಗಳ ಫಾರ್ಮ್ 17ಸಿ ಭಾಗ-I ರ ಸ್ಕ್ಯಾನ್ ಮಾಡಿದ ಸ್ಪಷ್ಟವಾದ ಪ್ರತಿಗಳನ್ನು ತಕ್ಷಣ ವೆಬ್‌ಸೈಟ್‌ನಲ್ಲಿ ಅಳವಡಿಸಬೇಕು. ಬಿ) ಪ್ರತಿ ಹಂತದ ಮತದಾನದ ನಂತರ ನಮೂನೆ 17ಸಿ ಭಾಗ-1 ರಲ್ಲಿ ದಾಖಲಾದ ಮತಗಳ ಮತಗಟ್ಟೆವಾರು ಅಂಕಿಅಂಶ ಒದಗಿಸಬೇಕು; ಸಿ) ಚುನಾವಣೆಯ ಫಲಿತಾಂಶ ಬಂದ ನಂತರ ಅಭ್ಯರ್ಥಿವಾರು ಮತಗಳ ಫಾರ್ಮ್ 17ಸಿ ಭಾಗ- II ರ ಸ್ಕ್ಯಾನ್ ಮಾಡಿದ ಸ್ಪಷ್ಟವಾದ ಪ್ರತಿಗಳನ್ನು ವೆಬ್‌ಸೈಟ್‌ನಲ್ಲಿ ಅಳವಡಿಸಬೇಕು-ಎಂದು ಚುನಾವಣೆ ಆಯೋಗಕ್ಕೆ ನಿರ್ದೇಶನ ನೀಡಬೇಕು ಎನ್ನುವುದು ಅರ್ಜಿ ಸಾರಾಂಶ.