ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣ | ‘ಸಿಎಂ ಮನೆಯಲ್ಲಿ ಇಂಥ ಗೂಂಡಾ ಕೆಲಸ ಮಾಡಬೇಕೇ?’: ಸುಪ್ರೀಂ
ದೆಹಲಿ ಹೈಕೋರ್ಟ್ ದಾಖಲಿಸಿದ ಘಟನೆಯ ವಿವರಗಳಿಂದ ಆಘಾತಕ್ಕೊಳಗಾಗಿದ್ದೇವೆ ಎಂದು ಸುಪ್ರೀಂ ಕೋರ್ಟ್ ಪೀಠವು ಬಿಭವ್ ಕುಮಾರ್ ಪರ ವಕೀಲ ಅಭಿಷೇಕ್ ಸಿಂಘ್ವಿಗೆ ತಿಳಿಸಿದೆ.
ಎಎಪಿ ಮೇಲ್ಮನೆ ಸದಸ್ಯೆ ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣದ ವಿಚಾರಣೆ ವೇಳೆ, ʻಸಿಎಂ ನಿವಾಸದಲ್ಲಿ ಇಂಥ ಗೂಂಡಾ ಕೆಲಸ ಮಾಡಬೇಕಾ?ʼ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ವಿರುದ್ಧದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯ ಮೂ ರ್ತಿಗಳಾದ ಸೂರ್ಯಕಾಂತ್, ದೀಪಂಕರ್ ದತ್ತಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಕುಮಾರ್ ಅವರ ಜಾಮೀನು ಅರ್ಜಿಯನ್ನು ಮುಂದಿನ ಬುಧವಾರಕ್ಕೆ ಪಟ್ಟಿ ಮಾಡಿದೆ.
ದೆಹಲಿ ಹೈಕೋರ್ಟ್ ದಾಖಲಿಸಿದ ಘಟನೆಯ ವಿವರಗಳಿಂದ ನ್ಯಾಯಾಲಯ ಆಘಾತಕ್ಕೊಳಗಾಗಿದೆ ಎಂದು ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರಿಗೆ ಪೀಠ ತಿಳಿಸಿತು.
ದೆಹಲಿ ಸರ್ಕಾರಕ್ಕೆ ನೋಟಿಸ್: ಪ್ರಕರಣದಲ್ಲಿ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟಿನ ಜುಲೈ 12 ರ ಆದೇಶವನ್ನು ಕುಮಾರ್ ಪ್ರಶ್ನಿಸಿದ್ದಾರೆ. ತಮ್ಮ ವಿರುದ್ಧದ ಆರೋಪಗಳು ಸುಳ್ಳು. ತನಿಖೆ ಮುಗಿದಿರುವುದರಿಂದ ತಮ್ಮ ಕಸ್ಟಡಿ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಅವರ ಮನವಿ ಮೇರೆಗೆ ಸುಪ್ರೀಂ ಕೋರ್ಟ್, ದೆಹಲಿ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ʻಸಿಎಂ ನಿವಾಸ ಖಾಸಗಿ ಬಂಗಲೆಯೇ? ಸಿಎಂ ನಿವಾಸದಲ್ಲಿ ಈ ರೀತಿಯ ಗೂಂಡಾ ಕೆಲಸ ಮಾಡಬೇಕಾ?ʼ ಎಂದು ಪೀಠ ಪ್ರಶ್ನಿಸಿತು. ʻಗಂಭೀರವಲ್ಲದ ಗಾಯಗಳಾಗಿವೆ ಮತ್ತು ಮೇ 13 ರಂದು ಘಟನೆ ನಡೆದ ಮೂರು ದಿನಗಳ ನಂತರ ಎಫ್‌ಐಆರ್ ದಾಖಲಿಸಲಾಗಿದೆ,ʼ ಎಂದು ಸಿಂಘ್ವಿ ಹೇಳಿದರು.
ಕಟು ಟೀಕೆ: ಹಲ್ಲೆ ಸಂದರ್ಭದಲ್ಲಿ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ ಸ್ವಾತಿ ಮಲಿವಾಲ್ ಏನು ಹೇಳಿದರು ಎಂದು ಪೀಠವು ಸಿಂಘ್ವಿ ಅವರನ್ನು ಪ್ರಶ್ನಿಸಿತು.ʻನಾವು ಪ್ರತಿದಿನ ಬಾಡಿಗೆ ಹಂತಕರು, ಕೊಲೆಗಾರರು, ದರೋಡೆಕೋರರಿಗೆ ಜಾಮೀನು ನೀಡುತ್ತೇವೆ. ಆದರೆ, ಪ್ರಶ್ನೆ ಇರುವುದು ಯಾವ ರೀತಿಯ ಪ್ರಕರಣ ಎಂಬುದರಲ್ಲಿ. ಘಟನೆ ನಡೆದ ರೀತಿ ತನ್ನನ್ನು ಆತಂಕಕ್ಕೀಡು ಮಾಡಿದೆ,ʼ ಎಂದು ಹೇಳಿತು.
'ಸಿಎಂ ಅಧಿಕೃತ ನಿವಾಸದಲ್ಲಿ 'ಗೂಂಡಾ'ನಂತೆ ವರ್ತಿಸಿದ್ದಾನೆ.ಯುವತಿಯೊಂದಿಗೆ ಈ ರೀತಿ ವರ್ತಿಸಬಹುದೇ? ತನ್ನ ದೈಹಿಕ ಸ್ಥಿತಿ ಬಗ್ಗೆ ಹೇಳಿದೆ ಬಳಕವೂ ಆಕೆ ಮೇಲೆ ಹಲ್ಲೆ ನಡೆಸಿದ್ದಾನೆ,ʼ ಎಂದು ಕಟುವಾಗಿ ಹೇಳಿದೆ.
75 ದಿನ ನ್ಯಾಯಾಂಗ ಬಂಧನ: ಕುಮಾರ್ ಅವರು ಕಳೆದ 75 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಸಿಂಘ್ವಿ ತಿಳಿಸಿದರು. ಮೇ 13 ರಂದು ಮಲಿವಾಲ್ ಮೇಲೆ ಹಲ್ಲೆ ನಡೆಸಿದ್ದರು. ಮೇ 16 ರಂದು ಎಫ್‌ಐಆರ್ ದಾಖಲಿಸಲಾಗಿದೆ. ಅದೇ 18ರಂದು ಅವರನ್ನು ಬಂಧಿಸಲಾಯಿತು.