ಪ್ರತಿಭಟನಾನಿರತ ರೈತರನ್ನು ತಲುಪಲು ಸಮಿತಿ ರಚಿಸಿ: ಸುಪ್ರೀಂ ಸೂಚನೆ

ಹೆದ್ದಾರಿಯನ್ನು ದಿನಗಟ್ಟಲೆ ನಿರ್ಬಂಧಿಸಲು ಸಾಧ್ಯವಿಲ್ಲ. ವಿಶ್ವಾಸದ ಕೊರತೆಯನ್ನು ನೀಗಿಸಲು ಹಾಗೂ ರೈತರ ಸಮಸ್ಯೆಗಳನ್ನು ಪರಿಹರಿಸಲು, ಕೇಂದ್ರ ಸರ್ಕಾರ ಅವರನ್ನು ತಲುಪಬೇಕು ಎಂದು ಸುಪ್ರೀಂ ಕೋರ್ಟ್ ಬುಧವಾರ (ಜುಲೈ 24) ಹೇಳಿದೆ. ಇದಕ್ಕಾಗಿ ಸಮಿತಿಯೊಂದನ್ನು ರಚಿಸಬೇಕು ಎಂದು ಸೂಚಿಸಿದೆ.;

Update: 2024-07-24 13:30 GMT

ವಿಶ್ವಾಸದ ಕೊರತೆಯನ್ನು ನೀಗಿಸಲು ಹಾಗೂ ರೈತರ ಸಮಸ್ಯೆಗಳನ್ನು ಪರಿಹರಿಸಲು, ಕೇಂದ್ರ ಸರ್ಕಾರ ಅವರನ್ನು ತಲುಪಬೇಕು ಎಂದು ಸುಪ್ರೀಂ ಕೋರ್ಟ್ ಬುಧವಾರ (ಜುಲೈ 24) ಹೇಳಿದೆ.

ಶಂಭು ಗಡಿಯಲ್ಲಿ ರೈತರ ಪ್ರತಿಭಟನೆ ಮತ್ತು ದಿಗ್ಬಂಧನಕ್ಕೆ ಸಂಬಂಧಿಸಿದ ವಿಷಯ ಕುರಿತು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.

ʻರೈತರನ್ನು ತಲುಪಲು ನೀವು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ, ಅವರು ದೆಹಲಿಗೆ ಏಕೆ ಬರುತ್ತಾರೆ? ನೀವು ಇಲ್ಲಿಂದ ಮಂತ್ರಿಗಳನ್ನು ಕಳುಹಿಸುತ್ತಿದ್ದೀರಿ; ಅವರ ಉತ್ತಮ ಉದ್ದೇಶದ ಹೊರತಾಗಿಯೂ ವಿಶ್ವಾಸದ ಕೊರತೆಯಿದೆ,ʼ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ಜಲ್ ಭೂಯಾನ್ ಅವರ ಪೀಠ ಹೇಳಿದೆ.

‌ʻನೀವು ಕೇವಲ ಸ್ವಹಿತಾಸಕ್ತಿ ಬಗ್ಗೆ ಮಾತನಾಡುತ್ತಿದ್ದೀರಿ ಮತ್ತು ಸ್ಥಳೀಯ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿದ್ದೀರಿ ಎಂದು ರೈತರು ಭಾವಿಸುತ್ತಾರೆ. ನೀವು ತಟಸ್ಥ ಅಂಪೈರ್ ಅನ್ನು ಏಕೆ ಕಳುಹಿಸಬಾರದು?,ʼ ಎಂದು ನ್ಯಾಯಾಧೀಶರು ಪ್ರಶ್ನಿಸಿದರು.

ಹರಿಯಾಣ ಸರ್ಕಾರದ ಅಭಿಪ್ರಾಯ: ಹರ್ಯಾಣ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ರೈತರು ದೆಹಲಿಗೆ ಪಾದಯಾತ್ರೆ ನಡೆಸುವುದರಿಂದ ರಾಜ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಟ್ಯಾಂಕ್‌ಗಳು, ಜೆಸಿಬಿಗಳು ಘರ್ಷಣೆಗೆ ಕಾರಣವಾಗುತ್ತವೆ,ʼ ಎಂದು ಹೇಳಿದರು.

ಒಂದು ವಾರದೊಳಗೆ ಶಂಭು ಗಡಿಯಲ್ಲಿನ ಬ್ಯಾರಿಕೇಡ್‌ಗಳನ್ನು ತೆಗೆದುಹಾಕಬೇಕೆಂಬ ಹೈಕೋರ್ಟ್ ಆದೇಶವನ್ನು ಹರಿಯಾಣ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ.

ಬ್ಯಾರಿಕೇಡ್‌ ಬಗ್ಗೆ ಚರ್ಚೆ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಹಲವು ರೈತ ಸಂಘಟನೆಗಳು ದೆಹಲಿಗೆ ಮೆರವಣಿಗೆಯನ್ನು ಘೋಷಿಸಿದ ನಂತರ ಫೆಬ್ರವರಿಯಲ್ಲಿ ಬ್ಯಾರಿಕೇಡ್‌ ಗಳನ್ನು ಅಳವಡಿಸಲಾಯಿತು. ಗಡಿ ದಾಟುತ್ತಿದ್ದ ರೈತರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆಗಳು ನಡೆದವು.

ಹೆದ್ದಾರಿಯನ್ನು ದಿನಗಟ್ಟಲೆ ತಡೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಜೆಸಿಬಿಗಳು ಮತ್ತು ಟ್ರ್ಯಾಕ್ಟರ್‌ಗಳ ಮೇಲೆ ನಿಷೇಧವಿದೆಯೇ ಎಂದು ನ್ಯಾಯಾಲಯ ಕೇಳಿದಾಗ ಪ್ರತಿಕ್ರಿಯಿಸಿದ ಮೆಹ್ತಾ, ʻಸಿಬಿಗಳನ್ನು ಯುದ್ಧದ ಟ್ಯಾಂಕ್‌ಗಳಾಗಿ ಪರಿವರ್ತಿಸಲಾಗಿದೆ. ನಮ್ಮ ಬಳಿ ಛಾಯಾಚಿತ್ರಗಳಿವೆ,ʼ ಎಂದು ಹೇಳಿದರು.

ಪಂಜಾಬ್‌ನ ಅಟಾರ್ನಿ ಜನರಲ್ ಗುರ್ಮಿಂದರ್ ಸಿಂಗ್, ಹೆದ್ದಾರಿ ತಡೆಯಿಂದ ರಾಜ್ಯದ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿದೆ ಎಂದು ಹೇಳಿದರು.

ಸಮಿತಿಯ ಪ್ರಸ್ತಾಪ: ರೈತರನ್ನು ತಲುಪಲು ಮತ್ತು ಹರಿಯಾಣ ಹಾಗೂ ಕೇಂದ್ರ ಸರ್ಕಾರಗಳ ನಡುವೆ ಒಮ್ಮತ ಮೂಡಿಸಲು ಗಣ್ಯ ವ್ಯಕ್ತಿಗಳನ್ನು ಒಳಗೊಂಡ ಸ್ವತಂತ್ರ ಸಮಿತಿಯ ರಚನೆಯನ್ನು ಸುಪ್ರೀಂ ಕೋರ್ಟ್ ಪ್ರಸ್ತಾಪಿಸಿದೆ.

ʻಸಮಿತಿ ರೈತರ ದೃಷ್ಟಿಕೋನಗಳನ್ನುಗ್ರಹಿಸಬೇಕು. ಅವರು ಎಲ್ಲಿ ಸರಿ ಮತ್ತು ತಪ್ಪು ಎಂಬುದನ್ನು ತಿಳಿದುಕೊಳ್ಳಬೇಕು ಮತ್ತು ಅವರಿಗೆ ತಿಳಿಸಬೇಕು. ನಾವು ಪಂಜಾಬ್ ಮತ್ತು ಹರಿಯಾಣ ನಡುವಿನ ಹೋರಾಟವನ್ನು ಬಯಸುವುದಿಲ್ಲ,ʼ ಎಂದು ನ್ಯಾಯಾಲಯ ಹೇಳಿತು.

‘ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಂತ ಹಂತವಾಗಿ ಬ್ಯಾರಿಕೇಡ್‌ಗಳನ್ನು ತೆಗೆಯಲು ಎರಡೂ ರಾಜ್ಯಗಳು ಚರ್ಚಿಸಿ ಕ್ರಮಕೈಗೊಳ್ಳಬೇಕು’ ಎಂದು ಆದೇಶ ತಿಳಿಸಿದೆ.

Tags:    

Similar News