ಟಿ20 World Cup| ಭಾರತ ತಂಡಕ್ಕೆ 125 ಕೋಟಿ: ಯಾರಿಗೆ ಎಷ್ಟು?
ವಿಶ್ವ ಕಪ್ ಗೆದ್ದ ತಂಡಕ್ಕೆ ಬಿಸಿಸಿಐ 125 ಕೋಟಿ ರೂ. ಬಹುಮಾನ ಘೋಷಿಸಿದೆ. ಮೊತ್ತವನ್ನು 15 ಜನರ ತಂಡ, ಮೀಸಲು ಆಟಗಾರರು, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಅವರ ಸಹಾಯಕ ಸಿಬ್ಬಂದಿ, ಆಯ್ಕೆದಾರರು ಮತ್ತು ಇತರರಿಗೆ ಹಂಚಲಾಗುತ್ತದೆ.;
ಟಿ20 ವಿಶ್ವಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡಕ್ಕೆ ಬಿಸಿಸಿಐ 125 ಕೋಟಿ ರೂ. ಬಹುಮಾನ ಘೋಷಿಸಿದೆ. ಅದನ್ನು ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಹೇಗೆ ಹಂಚಲಾಗುತ್ತದೆ ಎಂಬ ವಿವರ ಬಹಿರಂಗವಾಗಿದೆ.
ಜೂನ್ 29 ರಂದು ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ನಡೆದ ICC T20 ವಿಶ್ವಕಪ್ 2024 ರ ಫೈನಲ್‌ನಲ್ಲಿ ಭಾರತವು ದಕ್ಷಿಣ ಆಫ್ರಿಕವನ್ನು ಏಳು ರನ್‌ಗಳಿಂದ ಸೋಲಿಸಿತು . ರೋಹಿತ್ ಶರ್ಮಾ ನೇತೃತ್ವದ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಂದ ಪಡೆದ ಬಹುಮಾನದ ಮೊತ್ತ 20 ಕೋಟಿ ರೂ .
17 ವರ್ಷಗಳ ನಂತರ ಟಿ20 ವಿಶ್ವಕಪ್ ಗೆದ್ದ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 125 ಕೋಟಿ ರೂ. ನೀಡುವುದಾಗಿ ಹೇಳಿದೆ. ಈ ಮೊತ್ತವನ್ನು 15 ಆಟಗಾರರು, ಮೀಸಲು ಆಟಗಾರರು, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಅವರ ಸಹಾಯಕ ಸಿಬ್ಬಂದಿ, ಆಯ್ಕೆದಾರರು ಮತ್ತು ಇನ್ನಿತರರಿಗೆ ಹಂಚಲಾಗುತ್ತದೆ.
ವರದಿಗಳ ಪ್ರಕಾರ, 15 ಆಟಗಾರರು ತಲಾ 5 ಕೋಟಿ ರೂ. ದ್ರಾವಿಡ್ ಮತ್ತು ಅವರ ಸಹಾಯಕ ಸಿಬ್ಬಂದಿಗೆ ತಲಾ 2.5 ಕೋಟಿ ರೂ. ಕೊಡಲಾಗು ತ್ತದೆ. ತಂಡದ ಮೂವರು ಸದಸ್ಯರಾದ ಯುಜುವೇಂದ್ರ ಚಹಾಲ್, ಸಂಜು ಸ್ಯಾಮ್ಸನ್ ಮತ್ತು ಯಶಸ್ವಿ ಜೈಸ್ವಾಲ್ ಒಂದೂ ಪಂದ್ಯವನ್ನು ಆಡಲಿಲ್ಲ. ಆದರೆ, ಅವರಿಗೆ ತಲಾ 5 ಕೋಟಿ ರೂ. ಸಿಗಲಿದೆ.
ಮೀಸಲು ಆಟಗಾರರಾದ ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್ ತಲಾ 1 ಕೋಟಿ ರೂ., ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಸೇರಿದಂತೆ ಐವರು ಆಯ್ಕೆದಾರರಿಗೆ ತಲಾ 1 ಕೋಟಿ ರೂ.ನೀಡಲಾಗುತ್ತದೆ.
ಟಿ20 ವಿಶ್ವಕಪ್‌ಗೆ ತೆರಳಿದ್ದ ಭಾರತೀಯ ತಂಡದಲ್ಲಿ 42 ಮಂದಿ ಇದ್ದರು. ವಿಡಿಯೋ ವಿಶ್ಲೇಷಕರು, ಮಾಧ್ಯಮ ಅಧಿಕಾರಿಗಳು, ಬಿಸಿಸಿಐ ಸಿಬ್ಬಂದಿ ಮತ್ತು ತಂಡದ ಲಾಜಿಸ್ಟಿಕ್ಸ್ ಮ್ಯಾನೇಜರ್‌ಗೂ ಬಹುಮಾನ ನೀಡಲಾಗುವುದು ಎಂದು ವರದಿ ತಿಳಿಸಿದೆ. ʻಆಟಗಾರರು ಮತ್ತು ಸಹಾ ಯಕ ಸಿಬ್ಬಂದಿಗೆ ಅವರು ಬಿಸಿಸಿಐನಿಂದ ಸ್ವೀಕರಿಸುವ ಬಹುಮಾನ ಮೊತ್ತದ ಬಗ್ಗೆ ತಿಳಿಸಲಾಗಿದೆ,ʼ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
125 ಕೋಟಿ ರೂ. ಹಂಚಿಕೆ ಹೀಗಿರಲಿದೆ:
15 ಮಂದಿಗೆ ತಲಾ 5 ಕೋಟಿ (75 ಕೋಟಿ ರೂ.): ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಜಸ್ಪ್ರೀತ್ ಬೂಮ್ರಾ, ಅರ್ಶದೀಪ್ ಸಿಂಗ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಸಂಜು ಸ್ಯಾಮ್ಸನ್, ಯುಜುವೇಂದ್ರ ಚಹಾಲ್, ಯಶಸ್ವಿ ಜೈಸ್ವಾಲ್.
4 ಮಂದಿಗೆ ತಲಾ 2.5 ಕೋಟಿ (10 ಕೋಟಿ ರೂ.): ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಫೀಲ್ಡಿಂಗ್ ಕೋಚ್ ಟಿ. ದಿಲೀಪ್, ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ.
9 ಮಂದಿಗೆ ತಲಾ 2 ಕೋಟಿ (18 ಕೋಟಿ ರೂ.): ಮೂವರು ಫಿಸಿಯೋಥೆರಪಿಸ್ಟ್‌ಗಳು (ಕಮಲೇಶ್ ಜೈನ್, ಯೋಗೇಶ್ ಪರ್ಮಾರ್ ಮತ್ತು ತುಳಸಿ ರಾಮ್ ಯುವರಾಜ್), 3 ಥ್ರೋಡೌನ್ ತಜ್ಞರು (ರಾಘವಿಂದ್ರ ಡಿವಿಗಿ (ರಘು), ನುವಾನ್ ಉದೆನೆಕೆ ಮತ್ತು ದಯಾನಂದ್ ಗರಣಿ), ಇಬ್ಬರು ಮಸಾಜುದಾರರು (ರಾಜೀವ್ ಕುಮಾರ್ ಮತ್ತು ಅರುಣ್ ಕಾನಡೆ), ಒಬ್ಬರು ಸಾಮರ್ಥ್ಯ ಮತ್ತು ಕಂಡೀಷನಿಂಗ್ ಕೋಚ್ (ಸೋಹಂ ದೇಸಾಯಿ).
9 ಮಂದಿಗೆ ತಲಾ 1 ಕೋಟಿ ರೂ. (9 ಕೋಟಿ ರೂ.): ಐವರು ಆಯ್ಕೆಗಾರರು (ಅಜಿತ್ ಅಗರ್ಕರ್, ಶಿವಸುಂದರ್ ದಾಸ್, ಸುಬ್ರತೊ ಬ್ಯಾನರ್ಜಿ, ಸಲೀಲ್ ಅಂಕೋಲಾ, ಶ್ರೀಧರನ್ ಶರತ್), 4 ಮೀಸಲು ಆಟಗಾರರು (ಶುಬ್ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್, ಅವೇಶ್ ಖಾನ್ )