ಆರ್.‌ಎಂ.ವೀರಪ್ಪನ್: ಎಂಜಿಆರ್ ಪರಂಪರೆಯ ಶಿಲ್ಪಿ

ಎಂಜಿಆರ್ ಅವರ ರಾಜಕೀಯ ಜೀವನ, ಎಡಿಎಂಕೆ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು

Update: 2024-04-10 11:26 GMT

ಏಪ್ರಿಲ್ 9- ತಮಿಳುನಾಡು ರಾಜಕೀಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಆರ್‌.ಎಂ. ವೀರಪ್ಪನ್ ಅಥವಾ ಆರ್‌ಎಂವಿ ತಮ್ಮ 98 ನೇ ವಯಸ್ಸಿನಲ್ಲಿ ನಿಧನರಾದರು. 

ಆರ್‌.ಎಂ. ವೀರಪ್ಪನ್ ಅವರು ಎಂ.ಜಿ. ರಾಮಚಂದ್ರನ್ ಅವರ ಸಿನಿಮಾ-ರಾಜಕೀಯ ಬೆಳವಣಿಗೆಯನ್ನು ಪೋಷಿಸುವ ಮೂಲಕ ರಾಜ್ಯದ ಸಾಮಾಜಿಕ ಸಂರಚನೆ ಮೇಲೆ ಆಳವಾದ ಪ್ರಭಾವ ಬೀರಿದರು. ನಿಧನರಾದ ಮೂರು ದಶಕಗಳ ನಂತರವೂ ಎಂಜಿಆರ್‌ ಅವರ  ಮೇಲೆ ಹಿಡಿತ ತಮಿಳುನಾಡಿನ ರಾಜಕೀಯದಲ್ಲಿ ಮುಂದುವರಿದಿದೆ. ಆದರೆ, ಆರ್‌ವಿಎಂ ಅವರ ಕೊಡುಗೆಗಳನ್ನು ಎಂಜಿಆರ್‌ ವೃತ್ತಿಗಷ್ಟೇ  ಸೀಮಿತಗೊಳಿಸುವುದು ಅವರಿಗೆ ಮಾಡುವ ಅನ್ಯಾಯವಾಗಲಿದೆ. 

ಆರಂಭಿಕ ವರ್ಷ: 50ಕ್ಕೂ ಅಧಿಕ ವರ್ಷ ಸಾರ್ವಜನಿಕ ಜೀವನದಲ್ಲಿ ತೊಡಗಿಕೊಂಡಿದ್ದ ಆರ್‌ಎಂವಿ, ತಮಿಳು ಚಿತ್ರರಂಗ ಮತ್ತು ರಾಜಕೀಯದ ಮೇಲೆ ಅಳಿಸಲಾಗದ ಛಾಪು ಉಳಿಸಿದರು. ಆದರೆ, ವೃತ್ತಿಜೀವನದ ಉದ್ದಕ್ಕೂ ಸರಳವಾದ, ಸುಲಭವಾಗಿ ಸಮೀಪಿಸಬಹುದಾದ ವ್ಯಕ್ತಿಯಾಗಿ ಉಳಿದುಕೊಂಡರು. ತಮ್ಮ ಸಾಧಾರಣ ಮೂಲದ ಬಗ್ಗೆ ಅಪಾರ ಹೆಮ್ಮೆ ಹೊಂದಿದ್ದರು.

ಅವರ ಪ್ರಯಾಣ ಸವಾಲುಗಳು ಮತ್ತು ಅಡೆತಡೆಗಳಿಂದ ತುಂಬಿತ್ತು. ತಮಿಳುನಾಡಿನ ಪುದುಕೊಟ್ಟೈನಲ್ಲಿ ಜನಿಸಿದ ಅವರು, ಆರು ಮಕ್ಕಳಲ್ಲಿ ಕೊನೆಯವರು. ಅಂಬೆಗಾಲಿಡುತ್ತಿರುವಾಗ ತಂದೆಯನ್ನು ಕಳೆದುಕೊಂಡರು. ಜನನ ದುರದೃಷ್ಟವನ್ನು ತಂದಿದೆ ಎಂಬ ಆರೋಪ ಹೊರಬೇಕಾಯಿತು. ಆರ್‌ಎಂವಿ ಅವರ ಹಿರಿಯ ಸೋದರಿಯನ್ನು ವಿವಾಹವಾದ ಸೋಮು ಪಿಳ್ಳೈ, ಅವರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು.

ಬಾಲ್ಯದಿಂದಲೇ ತಂಟೆಕೋರನಾಗಿದ್ದ ಆ‌ರ್‌ಎಂವಿ , ಚಿಕ್ಕಪ್ಪನಿಂದ ಕಠಿಣ ಶಿಕ್ಷೆಗೆ ಒಳಗಾಗುತ್ತಿದ್ದ. ಆತ ಬೆಳೆಯುವ ಲಕ್ಷಣ ತೋರಿಸದೆ ಇದ್ದುದರಿಂದ, ಬರ್ಮಾ (ಈಗ ಮ್ಯಾನ್ಮಾರ್) ಅಥವಾ ಮಲೇಷ್ಯಾಕ್ಕೆ ಕಳುಹಿಸಬೇಕೆಂಬ ಪ್ರಸ್ತಾವ ಬಂದಿತು. ಆದರೆ, ರಂಗಭೂಮಿ ಮೇಲಿನ  ಪ್ರೀತಿಯಿಂದ ಜೀವನ ವಿಭಿನ್ನ ತಿರುವು ಪಡೆದುಕೊಂಡಿತು.

ಕವಲು ದಾರಿ: ಕುಂದ್ರಕುಡಿಯ ದೇವಸ್ಥಾನಕ್ಕೆ ಭೇಟಿ ನೀಡಲು, ಅವರ ಸಹೋದರಿ ಆಹ್ವಾನಿಸಿದ್ದರು. ಆದರೆ, ಆಕೆಗೆ ಜೊತೆಗೆ ನೆರೆಹೊರೆಯವರು ಸಿಕ್ಕಿದಾಗ, ಚಿಕ್ಕಪ್ಪನ ಅಂಗಡಿಗೆ ಹಿಂತಿರುಗಲು ಆಕೆ ಸೂಚಿಸಿದಳು ಎನ್ನಲಾಗಿದೆ.

ಕವಲುದಾರಿಯಲ್ಲಿ ನಿಂತ ಆರ್‌ಎಂವಿ ಎದುರು ಎರಡು ಆಯ್ಕೆಗಳು ಇದ್ದವು:- ಒಂದು ನಾಚಿಯಾರ್‌ಪುರದ ಚಿಕ್ಕಪ್ಪನ ಅಂಗಡಿಯ ಕೆಲಸ ಅಥವಾ ಇನ್ನೊಂದು- ಟಿಕೆಎಸ್ ಸಹೋದರರು ನಡೆಸುತ್ತಿದ್ದ ಹೆಸರಾಂತ ನಾಟಕ ತಂಡ ಬಾಲ ಷಣ್ಮುಗಾನಂದ ಸಭಾ ಬಿಡಾರ ಹೂಡಿದ್ದಕಾರೈಕುಡಿಗೆ ಹೋಗುವುದು. ಕಾರೈಕುಡಿಯನ್ನು ಆಯ್ದುಕೊಳ್ಳುವ ಮೂಲಕ ಅವರು ಇತಿಹಾಸದಲ್ಲಿ ತಮ್ಮ ಹೆಸರು ಬರೆಯುವ ಮಾರ್ಗವನ್ನು ಆರಿಸಿಕೊಂಡರು. ನಾಟಕ ತಂಡವನ್ನು ನಡೆಸುವ ವಿವಿಧ ಅಂಶಗಳ ಬಗೆಗಿನ ಆಸಕ್ತಿ ಮತ್ತು ಅವರರ ಅನುಭವ ಸೇರಿಕೊಂಡು ಶೀಘ್ರದಲ್ಲೇ ಅವರನ್ನು ಎತ್ತರಕ್ಕೆ ಕೊಂಡೊಯ್ದಿತು.

ಎಂಜಿಆರ್ ಭೇಟಿ: ಅಕ್ಟೋಬರ್ 1953 ರಲ್ಲಿ ಎಂಜಿಆರ್‌ ಅವರನ್ನು ಭೇಟಿಯಿಂದ ಅವರ ಜೀವನ ಮಹತ್ವದ ತಿರುವು ಪಡೆದುಕೊಂಡಿತು. ತಮ್ಮ ʻಜೀವನವನ್ನು ಬದಲಿಸಿದʼ ಭೇಟಿಯನ್ನುಅವರು ಸ್ಮರಿಸಿಕೊಳ್ಳುತ್ತಿದ್ದರು. ಈ ಭೇಟಿ ಅವರ ಜೀವನ ಮಾತ್ರವಲ್ಲದೆ, ತಮಿಳು ಚಿತ್ರರಂಗ ಮತ್ತು ತಮಿಳು ರಾಜಕೀಯವನ್ನು ಮರುರೂಪಿಸಿತು. ಎಂಜಿಆರ್‌ ತಮ್ಮ ನಾಟಕ ತಂಡದ ವ್ಯವಸ್ಥಾಪಕರಾಗಿ ಆರ್‌ಎಂವಿ ಅವರನ್ನು ನೇಮಿಸಿಕೊಂಡರು. ಎಂಜಿಆರ್‌ ಅವರ ಇಮೇಜ್ಅನ್ನು ನಿರ್ಮಿಸುವಲ್ಲಿ ಮತ್ತು ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ದೂರದೃಷ್ಟಿ ಪ್ರದರ್ಶಿಸಿದರು.

ʻಜನರ ಕವಿʼ ಎಂದು ಹೆಸರಾದ ಪಟ್ಟುಕೊಟ್ಟೈ ಕಲ್ಯಾಣಸುಂದರಂ ಅವರ ಚೊಚ್ಚಲ ಚಿತ್ರ ʻನಾಡೋಡಿ ಮನ್ನನ್ʼ ಚಿತ್ರದಲ್ಲಿ ಕಾಡು ವೆಲೈಂಥೆನ್ನ ಎಂಬ ಸಾಂಪ್ರದಾಯಿಕ ಗೀತೆಯನ್ನು ಸೇರಿಸಲು ಆರ್‌ಎಂವಿ ನಿರ್ಧರಿಸಿದ್ದರು. ಆದರೆ, ಭಾನುಮತಿ ನಿರ್ದಿಷ್ಟ ಸ್ಥಳದಲ್ಲಿ ಚಿತ್ರೀಕರಣಕ್ಕೆ ನಿರಾಕರಿಸಿದಾಗ, ಎಂಜಿಆರ್ ಹಾಡನ್ನು ಬಿಡಲು ಸಿದ್ಧರಾದರು. ಆದರೆ, ಹಾಡಿನ ಪ್ರಾಮುಖ್ಯತೆಯನ್ನು ಅರ್ಥಮಾಡಿ ಕೊಂಡಿದ್ದ ಆರ್‌ಎಂವಿ, ಭಾನುಮತಿಯೊಂದಿಗೆ ರಾಜಿ ಮಾಡಿಕೊಂಡರು. ಈ ಮೂಲಕ ತಮಿಳು ಚಿತ್ರರಂಗದಲ್ಲಿ ಪಟ್ಟುಕೊಟ್ಟೈ ಕಲ್ಯಾಣಸುಂದರಂ ನೆಲೆಯೂರಿದರು. ನಾಡೋಡಿ ಮನ್ನನ್ ತನ್ನ ಶೀರ್ಷಿಕೆ ಕಾರ್ಡ್‌ಗಳಲ್ಲಿ ಡಿಎಂಕೆ ಧ್ವಜವನ್ನು ಒಳಗೊಂಡ ಮೊದಲ ಚಲನಚಿತ್ರ.

ಎಂಜಿಆರ್‌ ತಮ್ಮ ಜೀವನದೃಷ್ಟಿಯನ್ನು ವಿವರಿಸಿದ್ದಾರೆ ಎಂಬ ಕಾರಣಕ್ಕೆ ಈ ಹಾಡು ಜನಪ್ರಿಯವಾಗಿದೆ. ದ್ರಾವಿಡ ಮತ್ತು ಮಾರ್ಕ್ಸ್‌ವಾದಿ ಸಿದ್ಧಾಂತಿಯಾದ ಕಲ್ಯಾಣಸುಂದರಂ, ಹಾಡಿನಲ್ಲಿ ಬಡವರಪರ ನಿಲುವು ತೆಗೆದುಕೊಂಡಿದ್ದಾರೆ. ನಾಡೋಡಿ ಮನ್ನನ್ ಎಂಜಿಆರ್ ಅವರ ಚಲನಚಿತ್ರ ಮತ್ತು ರಾಜಕೀಯ ಜೀವನದ ಮಹತ್ವದ ಕ್ಷಣ.

ಚಲನಚಿತ್ರ ನಿರ್ಮಾಣ: 1963 ರಲ್ಲಿ ಅವರು ಎಂಜಿಆರ್‌ ನಟಿಸಿದ ʻದೈವ ತಾಯಿʼ ಸಿನಿಮಾ ನಿರ್ಮಿಸಿದರು. ವಾಣಿಜ್ಯಿಕವಾಗಿ ಯಶಸ್ವಿಯಾಯಿತು ಮತ್ತು ಸತ್ಯ ಮೂವೀಸ್‌ನ ಆರಂಭಗೊಂಡಿತು. ಕಾಲಕ್ರಮೇಣ ಸತ್ಯ ಮೂವೀಸ್ ದಕ್ಷಿಣ ಭಾರತದ ಚಿತ್ರರಂಗದಲ್ಲಿಉನ್ನತ ಸ್ಥಾನಮಾನ ಗಳಿಸಿ, ಬಾಷಾ ಸೇರಿದಂತೆ ಹಲವಾರು ಯಶಸ್ವಿ ಚಲನಚಿತ್ರಗಳನ್ನು ನಿರ್ಮಿಸಿತು.ಎಂಜಿಆರ್‌ಗಾಗಿ ಆರ್‌ಎಂವಿ ಆರು ಚಲನಚಿತ್ರಗಳನ್ನು ನಿರ್ಮಿಸಿದರು. ಪಟ್ಟುಕೊಟ್ಟೈ ಕಲ್ಯಾಣಸುಂದರಂ ಮತ್ತು ಕೆ. ಬಾಲಚಂದರ್‌ ರಂತಹ ಐಕಾನ್‌ಗಳನ್ನು ಪರಿಚಯಿಸುವ ಮೂಲಕ ತಮಿಳು ಚಿತ್ರರಂಗವನ್ನು ಶ್ರೀಮಂತಗೊಳಿಸಿದರು.

ರಾಜಕೀಯ ಪ್ರಯಾಣ: ಪೆರಿಯಾರ್ ಮತ್ತು ಸಿಎನ್ ಅಣ್ಣಾದೊರೈ ಅವರ ಒಡನಾಟದಿಂದ ಆರ್‌ಎಂವಿ ಅವರ ರಾಜಕೀಯ ಚಿಂತನೆ ರೂಪುಗೊಂಡಿತು. ಸ್ವಾಭಿಮಾನ ಚಳವಳಿಯ ಆದರ್ಶಗಳನ್ನು ಮೈಗೂಡಿಸಿಕೊಂಡು, ಪೆರಿಯಾರ್ ಅವರ ಅನುಯಾಯಿಯಾದರು. ಮತ್ತೊಬ್ಬ ಪೆರಿಯಾರ್‌ ವಾದಿ ರಾಮಸುಬ್ಬಯ್ಯ, ಆರ್‌ಎಂವಿ ಜೊತೆಗೆ ದ್ರಾವಿಡ ಚಳುವಳಿಯ ಆದರ್ಶಗಳನ್ನು ಹರಡಿದರು. ಇಪ್ಪತ್ತರ ದಶಕದ ಆರಂಭದಲ್ಲಿ ಆರ್‌ಎಂವಿ, ಪೆರಿಯಾರ್‌ ಅವರ ಸಹಾಯಕರಾಗಿ ಸೇರಿಕೊಂಡರು. 

ರಂಗಭೂಮಿಯ ಪ್ರೀತಿ ಅವರನ್ನು ಸಿ.ಎನ್. ಅಣ್ಣಾದೊರೈ ಅವರೆಡೆಗೆ ಕರೆದೊಯ್ಯಿತು.ಅವರು ಎಂಜಿಆರ್‌ ಜೊತೆ ಇರಲು ಪ್ರೋತ್ಸಾಹಿಸಿದರು. ಎಂಜಿಆರ್ ಅವರ ರಾಜಕೀಯ ಜೀವನವನ್ನು ರೂಪಿಸುವಲ್ಲಿ, ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಡಿಎಂಕೆ) ರಚನೆಯಲ್ಲಿ ಆರ್‌ಎಂವಿ ನಿರ್ಣಾಯಕ ಪಾತ್ರ ವಹಿಸಿದರು.

ಎಂಜಿಆರ್ ನಂತರ: ಎಂಜಿಆರ್‌ ಮುಖ್ಯಮಂತ್ರಿಯಾಗಿದ್ದಾಗ, ಆರ್‌ಎಂವಿ ಪಕ್ಷದ ಪ್ರಮುಖ ವ್ಯಕ್ತಿಯಾಗಿದ್ದರು. ಹತ್ಯೆಯ ಪ್ರಯತ್ನದ ನಂತರ ಎಂಜಿಆರ್‌ ಅವರ ಅನುಪಸ್ಥಿತಿಯಲ್ಲಿ ಹಾಗೂ 1987 ರಲ್ಲಿ ಎಂಜಿಆರ್ ಅವರ ನಿಧನದ ನಂತರ ಪಕ್ಷವನ್ನು ಸ್ಥಿರಗೊಳಿಸುವಲ್ಲಿ ಮತ್ತು ಜೆ ಜಯಲಲಿತಾ ಅವರಿಗೆ ಅಧಿಕಾರ ಹಸ್ತಾಂತರವನ್ನು ಖಚಿತಪಡಿಸಿಕೊಳ್ಳುವಲ್ಲಿ ಆರ್‌ಎಂವಿ ಪ್ರಮುಖ ಪಾತ್ರ ವಹಿಸಿದರು.

ಜಯಲಲಿತಾ ಅವರೊಂದಿಗೆ ವೈಮನಸ್ಸಿನ ಬಳಿಕ ಆರ್‌ಎಂವಿ, ಎಐಎಡಿಎಂಕೆಯಿಂದ ಬೇರ್ಪಟ್ಟರು. ಮತ್ತೊಂದು ರಾಜಕೀಯ ಪಕ್ಷ ಸ್ಥಾಪಿಸುವ ಪ್ರಯತ್ನ ವಿಫಲವಾಯಿತು. ಇದು ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಅವರ ಪ್ರಾಮುಖ್ಯತೆಯನ್ನು ಕಡಿಮೆ ಮಾಡುವುದಿಲ್ಲ.

(ಆಧಾರ- ಆರ್. ಕಣ್ಣನ್ ಅವರ 'MGR: A Life' ಮತ್ತು 'Anna: The Life and Times of CN Annadurai')

Tags:    

Similar News